ಬೀದರ್‌: ಸಿಎಂ ಜೊತೆ ಸಂತ್ರಸ್ಥರ ಸಭೆ ಕರೆಯಲು ಆಗ್ರಹ

By Web DeskFirst Published Oct 26, 2019, 12:18 PM IST
Highlights

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ಗೆ ಕಾರಂಜಾ ಸಂತ್ರಸ್ತರು ಮನವಿ| ಕಷ್ಟಗಳನ್ನು ಎದುರಿಸಲಾಗದೇ ಇಂದು ಕಾರಂಜಾ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಬಾಕಿ ಇದೆ ಎಂದ ರೈತರು| ವೈಜ್ಞಾನಿಕ ದರ 1 ಎಕರೆಗೆ ಸುಮಾರು 20 ಲಕ್ಷ ಪರಿಹಾರಧನ ನೀಡಬೇಕು| 

ಬೀದರ್‌(ಅ.26): ತಮ್ಮ ಕಷ್ಟಗಳನ್ನು ಎದುರಿಸಲಾಗದೇ ಇಂದು ಕಾರಂಜಾ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಬಾಕಿ ಇದೆ. ಹೀಗಾಗಿ ಕೂಡಲೇ ತಾವು ಮುಖ್ಯಮಂತ್ರಿಗಳೊಂದಿಗೆ ಸಂತ್ರಸ್ತರ ಸಭೆ ಕರೆಯಬೇಕೆಂದು ಕಾರಂಜಾ ಸಂತ್ರಸ್ಥರು ಸಚಿವ ಪ್ರಭು ಚವ್ಹಾಣ್ ಅವರಿಗೆ ಆಗ್ರಹಿಸಿದ್ದಾರೆ.

ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡವರಿಗೆ ವೈಜ್ಞಾನಿಕ ದರ 1 ಎಕರೆಗೆ ಸುಮಾರು 20 ಲಕ್ಷ ಪರಿಹಾರಧನ ನೀಡಬೇಕು. ಒನ್‌ಟೈಮ್‌ ಸೆಟಲ್‌ಮೆಂಟ್‌ ಮೂಲಕ ಕಾರಂಜಾ ಸಂತ್ರಸ್ತರ ಬೇಡಿಕೆಯನ್ನು ಶೀಘ್ರ ಇತ್ಯರ್ಥಗೊಳಿಸಬೇಕು. ಕರ್ನಾಟಕ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಹಿಡಕಲ್‌ ಜಲಾಶಯದಲ್ಲಿ ಮುಳುಗಡೆಯಾದ ಸಂತ್ರಸ್ಥ ರೈತರಿಗೆ 4 ಎಕರೆ ಜಮೀನು ಹಾಗೂ ಜಮೀನು ಕಬ್ಜಾ ಇದ್ದ ರೈತರಿಗೆ 2 ಎಕರೆ ಭೂಮಿ ಸರ್ಕಾರದಿಂದ ಉಚಿತವಾಗಿ ನೀಡಲಾಗಿದೆ. ಅದೇ ರೀತಿ ಹೇಮಾವತಿ ಜಲಾಶಯದಲ್ಲಿ ಪ್ಯಾಕೇಜ್‌ ಪ್ರಕಾರ 1 ರಿಂದ 2 ಎಕರೆ ಜಮೀನು ರೈತರಿಗೆ ಉಚಿತವಾಗಿ ನೀಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅದೇ ರೀತಿಯಾಗಿ ಕಾರಂಜಾ ಜಲಾಶಯದಲ್ಲಿ ಮುಳುಗಡೆಯಾಗಿ ಭೂಮಿ ಕಳೆದುಕೊಂಡ ಪ್ರತಿಯೊಬ್ಬ ಸಂತ್ರಸ್ತ ರೈತರಿಗೂ 4 ಎಕರೆ 20 ಗುಂಟೆ ಜಮಿನು ಸರ್ಕಾರದಿಂದ ಉಚಿತವಾಗಿ ನೀಡಬೇಕು. ಕುಟುಂಬದ ಎಲ್ಲಾ ಸದಸ್ಯರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ದೊರೆಯುವಂತೆ ಸ್ಮಾರ್ಟ್‌ಕಾರ್ಡ್‌ ನೀಡಬೇಕು ಎಂದರು.

ಕುಟುಂಬದ ಒಬ್ಬ ಸದಸ್ಯನಿಗೆ ಅರ್ಹತೆಯ ಆಧಾರದ ಮೇಲೆ ಕಡ್ಡಾಯವಾಗಿ ಸರ್ಕಾರಿ ಹುದ್ದೆ ನೀಡಬೇಕು. ರೈತರಿಗೆ ಗೃಹೋಪಯೋಗಿ ಉಚಿತ ವಿದ್ಯುತ್‌ ನೀಡಬೇಕು ಹಾಗೂ ಅಂತ್ಯೋದಯ ಪಡಿತರ ಚೀಟಿಯನ್ನು ನೀಡಬೇಕು. ರೈತರ ಮಕ್ಕಳಿಗೆ ಎಲ್ಲಾ ಹಂತಗಳಲ್ಲಿ ಉಚಿತ ಶಿಕ್ಷಣ ನೀಡಬೇಕು. ಸರ್ಕಾರಿ ಸೌಲಭ್ಯಗಳಲ್ಲಿ ಸಂತ್ರಸ್ತರಿಗೆ ವಿಶೇಷ ಮೀಸಲಾತಿ ಕಲ್ಪಿಸಬೇಕು. ಕಾರಂಜಾ ಸಂತ್ರಸ್ತರಿಗಾಗಿಯೇ ಬೃಹತ ಕೈಗಾರಿಕೆ ಸ್ಥಾಪಿಸಿ ಅದರಲ್ಲಿ ಉದ್ಯೋಗ ಕೊಡಬೇಕೆಂದು ಆಗ್ರಹಿಸಲಾಯಿತು.

ಸಂತ್ರಸ್ಥರು ಹಾಗೂ ಮುಖ್ಯಮಂತ್ರಿಗಳ ಸಭೆಯ ವ್ಯವಸ್ಥೆ ಮಾಡಬೇಕು ಅದರಲ್ಲಿ ಕಾರಂಜಾ ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧ್ಯಕ್ಷ ಚಂದ್ರಶೇಖರ ಪಾಟೀಲ್‌, ಪ್ರಧಾನ ಕಾರ್ಯದರ್ಶಿ ನಾಗಶೇಟ್ಟಪ್ಪ ಅಚ್ಚಿ, ವೀರಭದ್ರಪ್ಪ ಉಪ್ಪಿನ, ದತ್ತಾತ್ರೆಯರಾವ ಕುಲಕರ್ಣಿ, ರಾಜಪ್ಪಾ ಕೋಸಮ, ವೈಜಿನಾಥ ಭತ್ತಮುರ್ಗೆ, ಕಮಳಾಬಾಯಿ, ಶಂಕರರಾವ್‌ ದೇವಣ್ಣನೋರ, ಮಲ್ಲಿಕಾರ್ಜುನ ಸ್ವಾಮಿ, ಭೀಮರೆಡ್ಡಿ, ಸೂರ್ಯಕಾಂತ, ವಿಜಯಕುಮಾರ ಕುಲಕರ್ಣಿ, ಕಾಶಿನಾಥ ಕೋರಿ, ಪ್ಯಾರು ಪಟೇಲ್‌, ಮೋಹನರಾವ ಮಾಸ್ಟರ್‌, ಸುಭಾಷ ಪಾಟೀಲ್‌, ಶಿವಕುಮಾರ ಸ್ವಾಮಿ, ಅನೀಲ ಹಜ್ಜರ್ಗಿ ಮುಂತಾದವರು ಭಾಗವಹಿಸಿದರು.
 

click me!