
ಬೆಂಗಳೂರು (ಮೇ 23): ರಾಜ್ಯದಾದ್ಯಂತ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷಾ ಕಾರ್ಯಗಳನ್ನು ಮಾಡದೇ ಕರ್ತವ್ಯ ಲೋಪ ಎಸಗಿದ ಬಿಬಿಎಂಪಿಯ 5 ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಠ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಪ್ರಾಯೋಗಿಕ ದತ್ತಾಂಶ (Empirical Data) ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ (ಉಪ ವರ್ಗೀಕರಣ) ಕುರಿತಾಗಿ ವರದಿ ಸಲ್ಲಿಸಲು ಮಾನ್ಯ ಉಚ್ಚ ನ್ಯಾಯಾಲಯದ ನಿವೃತ್ತಿ ನ್ಯಾಯಮೂರ್ತಿಗಳಾದ ಡಾ.ಹೆಚ್.ಎನ್. ನಾಗಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿರುತ್ತದೆ.
ಮನೆ ಮನೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಲು ಗಣತಿದಾರರು ಪ್ರತಿದಿನವೂ ತಪ್ಪದೇ ಮೊಬೈಲ್ ಆಪ್‌ನಲ್ಲಿ (Mobile App) ಲಾಗಿನ್ ಆಗಿ ಕಡ್ಡಾಯವಾಗಿ ತಮಗೆ ನಿಗಧಿಪಡಿಸಲಾದ ಸಮೀಕ್ಷಾ ಬ್ಲಾಕ್ ನಲ್ಲಿರುವ ಎಲ್ಲಾ ಮನೆಗಳಿಗೂ ತಪ್ಪದೇ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲು ನಿರ್ದೇಶನ ನೀಡಲಾಗಿರುತ್ತದೆ.
ಈ ಸಂಬಂಧ ಗೌರವಾನ್ವಿತ ನ್ಯಾಯ ಮೂರ್ತಿ ಡಾ. ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ವತಿಯಿಂದ ಕೈಗೊಳ್ಳುತ್ತಿರುವ ಪರಿಶಿಷ್ಟ ಜಾತಿ / ಮೂಲ ಜಾತಿ ಸಮಗ್ರ ಸಮೀಕ್ಷೆ-2025ಕ್ಕೆ ಸಂಬಂಧಿಸಿದಂತೆ, ನಿಗಧಿತ ಸಮಯಕ್ಕೆ ಸಮೀಕ್ಷೆಯ ಬಗ್ಗೆ ಮಾಹಿತಿ ಸಂಗ್ರಹಿಸದೇ ಯಾವುದೇ ರೀತಿ ಪ್ರಗತಿ ಸಾಧಿಸದೇ 5 ನೌಕರರುಗಳು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಲಾಗಿರುತ್ತದೆ.
ಅಮಾನತುಗೊಂಡ ಬಿಬಿಎಂಪಿ ಸಿಬ್ಬಂದಿ:
ಶ್ರೀಜೇಶ್, ಹಿರಿಯ ಆರೋಗ್ಯ ಪರಿವೀಕ್ಷಕ, ಜಯನಗರ
ವಿಜಯಕುಮಾರ್, ಕಿರಿಯ ಆರೋಗ್ಯ ಪರಿವೀಕ್ಷಕ, ಮಹಾಲಕ್ಷ್ಮೀಪುರ
ಶಿವರಾಜು ಹೆಚ್.ಸಿ., ಕಂದಾಯ ವಸೂಲಿಗಾರ, ಅಂಜನಾಪುರ
ಮಹದೇವ, ಕಂದಾಯ ವಸೂಲಿಗಾರ, ಸಿ.ವಿ. ರಾಮನ್ ನಗರ
ಶಂಕರ್, ಡಿ.ದರ್ಜೆ ನೌಕರ, ಅಂಜನಾಪುರ