ಪಟಾಕಿ ಉತ್ಪಾದನೆ ಕುಸಿತ, ವ್ಯಾಪಾರ ಖೋತಾ?

Published : Oct 24, 2019, 07:52 AM IST
ಪಟಾಕಿ ಉತ್ಪಾದನೆ ಕುಸಿತ, ವ್ಯಾಪಾರ ಖೋತಾ?

ಸಾರಾಂಶ

ಈ ಬಾರಿ ನಗರದಲ್ಲಿ ಪಟಾಕಿ ಖರೀದಿ ಕಳೆದ ಸಾಲಿಗೆ ಹೋಲಿಸಿದಾಗ ಶೇಕಡ 40ರಷ್ಟುಕುಸಿಯುವ ಸಂಭವವಿದೆ. ಇಂತಹದೊಂದು ಬೆಳವಣಿಗೆಗೆ ಪಟಾಕಿ ಹೊಡೆಯಬಾರದು ಎಂಬ ಜಾಗೃತಿ ಮಾತ್ರ ಕಾರಣವಲ್ಲ. ಬದಲಾಗಿ ಪಟಾಕಿ ಪೂರೈಕೆಯೇ ಕುಸಿದು ಹೋಗಿದೆ.

ಕಾವೇರಿ ಎಸ್‌.ಎಸ್‌.

ಬೆಂಗಳೂರು [ಅ.24]:  ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪರಿಸರ ಪ್ರೇಮಿಗಳಿಗೆ ಒಂದು ಸಹಿ ಸುದ್ದಿ. ಆದರೆ, ಇದು ಪಟಾಕಿ ಮಾರಾಟಗಾರರ ಪಾಲಿನ ಕಹಿ ಸುದ್ದಿಯೂ ಹೌದು!

ಅದು ಏನೆಂದರೆ- ಈ ಬಾರಿ ನಗರದಲ್ಲಿ ಪಟಾಕಿ ಮಾರಾಟ ಗಣನೀಯವಾಗಿ ಕುಸಿಯಲಿದೆ.

ಹೌದು, ಒಂದು ಮೂಲದ ಪ್ರಕಾರ ಈ ಬಾರಿ ನಗರದಲ್ಲಿ ಪಟಾಕಿ ಖರೀದಿ ಕಳೆದ ಸಾಲಿಗೆ ಹೋಲಿಸಿದಾಗ ಶೇಕಡ 40ರಷ್ಟುಕುಸಿಯುವ ಸಂಭವವಿದೆ. ಇಂತಹದೊಂದು ಬೆಳವಣಿಗೆಗೆ ಪಟಾಕಿ ಹೊಡೆಯಬಾರದು ಎಂಬ ಜಾಗೃತಿ ಮಾತ್ರ ಕಾರಣವಲ್ಲ. ಬದಲಾಗಿ ಪಟಾಕಿ ಪೂರೈಕೆಯೇ ಕುಸಿದು ಹೋಗಿದೆ.

ಇದಕ್ಕೆ ಮೂಲ ಕಾರಣ ಸುಪ್ರೀಂ ಕೋರ್ಟ್‌ ಪರಿಸರಕ್ಕೆ ಹಾನಿಕಾರಕ ಪಟಾಕಿಗಳ ಬಳಕೆ ಕುರಿತು ವಿಧಿಸಿದ ನಿರ್ಬಂಧ. ಈ ನಿರ್ಬಂಧದ ವಿರುದ್ಧ ಪಟಾಕಿ ಉತ್ಪಾದಕರು ಅದರಲ್ಲೂ ವಿಶೇಷವಾಗಿ ನಗರಕ್ಕೆ ಅತಿ ಹೆಚ್ಚಿನ ಪಟಾಕಿ ಪೂರೈಸುವ ತಮಿಳುನಾಡಿನ ಶಿವಕಾಶಿಯ ಪಟಾಕಿ ಉತ್ಪಾದಕರು ಆರು ತಿಂಗಳು ಮುಷ್ಕರಕ್ಕೆ ಇಳಿದ ಪರಿಣಾಮ ಈ ಬಾರಿ ಪಟಾಕಿ ಉತ್ಪಾದನೆಯೇ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ನಗರದ ಬೇಡಿಕೆಗೆ ತಕ್ಕಷ್ಟುಪಟಾಕಿ ಪೂರೈಕೆಯಾಗಿಲ್ಲ.

ಇದಿಷ್ಟೆಅಲ್ಲ, ಸಾಮಾನ್ಯ ಪಟಾಕಿಗೆ ಬದಲಾಗಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿರುವ ಹಸಿರು ಪಟಾಕಿ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಅಷ್ಟೇ ಅಲ್ಲದೆ, ಹಸಿರು ಪಟಾಕಿ ದುಬಾರಿ ಕೂಡ. ಇದರೊಟ್ಟಿಗೆ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ ಪಟಾಕಿ ಉದ್ಯಮವನ್ನು ಕಂಗೆಡಿಸಿಟ್ಟಿದೆ. ಬೇಡಿಕೆಯು ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ. 40ರಷ್ಟುಕುಸಿದಿದೆ.

ಸಾಮಾನ್ಯವಾಗಿ ಸುಮಾರು 50ರಿಂದ 60 ಕೋಟಿ ರು. ವ್ಯಾಪಾರ ಮಾಡುತ್ತಿದ್ದ ಬೆಂಗಳೂರು ಪಟಾಕಿ ಮಾರಾಟಗಾರರು ಈ ಬಾರಿ 30ರಿಂದ 35 ಕೋಟಿ ರು. ವ್ಯಾಪಾರವಾದರೆ ಹೆಚ್ಚು ಎಂದು ಅಂದಾಜಿಸಿದ್ದಾರೆ.

ರಾಜ್ಯದಲ್ಲಿ 4-6 ವರ್ಷಗಳ ಹಿಂದೆ .100 ಕೋಟಿ ವರೆಗೆ ವ್ಯಾಪಾರವಾಗುತ್ತಿತ್ತು. 2016ರಲ್ಲಿ .60 ಕೋಟಿ, 2017ರಲ್ಲಿ .50 ಕೋಟಿ, 2018ರಲ್ಲಿ .45 ಕೋಟಿ ವಹಿವಾಟು ನಡೆದಿತ್ತು. ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನಲ್ಲೇ .40-50 ಕೋಟಿ ವಹಿವಾಟು ನಡೆಯುತ್ತಿತ್ತು. ಈ ಬಾರಿ 30ರಿಂದ 35 ಕೋಟಿ ವ್ಯವಹಾರ ಆಗುವುದು ಕಷ್ಟವಿದೆ. ಮಾರುಕಟ್ಟೆಗೆ ಹೊಸ ರೀತಿಯ ಪಟಾಕಿಗಳು ಬಂದಿಲ್ಲ. ದೀಪಾವಳಿ ಹಬ್ಬಕ್ಕೆ ಮೂರು ತಿಂಗಳ ಹಿಂದೆಯೇ ವ್ಯಾಪಾರವಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಖರೀದಿಸುವವರು ಶೇ.60ರಷ್ಟುಕಡಿಮೆಯಾಗಿದ್ದಾರೆ. .1000 ದಿಂದ .2000 ದೊಡ್ಡಮಟ್ಟದ ಪಟಾಕಿಗಳನ್ನು ಯಾರೂ ಖರೀದಿಸುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಶಿವಕಾಶಿ, ಹೊಸೂರುಗಳಿಗೆ ಹೋಗಿ ಪಟಾಕಿ ಖರೀದಿಸುತ್ತಿರುವುದರಿಂದ ವಹಿವಾಟಿನ ಲೆಕ್ಕವೂ ಸಿಗುತ್ತಿಲ್ಲ ಎಂದು ಬೆಂಗಳೂರು ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪರಂಜ್ಯೋತಿ ಅವರು ಮಾಹಿತಿ ನೀಡಿದರು.

ಮುಷ್ಕರದಲ್ಲಿ ಅನೇಕ ಕಾರ್ಮಿಕರು ಬೇರೆಡೆಗೆ ವಲಸೆ ಬಂದಿದ್ದರಿಂದ ಕಾರ್ಖಾನೆಗಳಿಗೆ ಕಾರ್ಮಿಕರ ಕೊರತೆಯೂ ಉಂಟಾಯಿತು. ಇಂದಿಗೂ ಶೇ.30ರಿಂದ 40ರಷ್ಟುಕಾರ್ಮಿಕರ ಕೊರತೆಯನ್ನು ಪಟಾಕಿ ಉತ್ಪಾದನಾ ಘಟಕಗಳು ಎದುರಿಸುತ್ತಿವೆ. ಕಾರ್ಮಿಕರ ಸಮಸ್ಯೆ, ಸಾಗಾಣೆ ವೆಚ್ಚ, ಕೂಲಿ ಹೆಚ್ಚಾಗಿದ್ದು, ಪಟಾಕಿ ಬೆಲೆಯಲ್ಲಿ ಶೇ.32- 40ರಷ್ಟುಹೆಚ್ಚಾಗಿದೆ. ಹಸಿರು ಪಟಾಕಿ ಸಾಂಪ್ರದಾಯಿಕ ಪಟಾಕಿಗಳಿಗಿಂತ ಶೇ.30-50ರಷ್ಟುದುಬಾರಿಯಾಗಿದೆ. ಜತೆಗೆ ಜನಸಾಮಾನ್ಯರು ಪಟಾಕಿ ಖರೀದಿಗೆ ನಿರುತ್ಸಾಹ ತೋರುತ್ತಿದ್ದಾರೆ. ಇದರಿಂದ ವಹಿವಾಟು ಶೇ.40ರಷ್ಟುಕುಸಿದಿದೆ. ಸುರಸುರಬತ್ತಿ, ಹೂಕುಂಡ, ಸ್ಪಾಕ್ಲ​ರ್‍ಸ್, ವಿಷ್ಣುಚಕ್ರ, ರಾಕೆಟ್‌, ಸ್ಕೈ ಶಾಟ್‌, ಮಕ್ಕಳ ಪಟಾಕಿಗಳಿಗೆ ಹೆಚ್ಚು ಬೇಡಿಕೆ ಇದೆ. ಈ ಹಿಂದೆ 200ಕ್ಕೂ ಹೆಚ್ಚು ಪ್ರಭೇದಗಳ ಸಾಂಪ್ರದಾಯಿಕ ಪಟಾಕಿಗಳನ್ನು ತರಿಸಲಾಗುತ್ತಿತ್ತು. ಈಗ 120-150 ಪ್ರಭೇದಗಳಿಗೆ ಸೀಮಿತವಾಗಿದ್ದೇವೆ ಎಂದು ಅವರು ತಿಳಿಸಿದರು.

120 ಡೆಸಿಬೆಲ್‌ಗಳಿಂದ ಪಟಾಕಿ ಶಬ್ದಮಟ್ಟವನ್ನು 90 ಡೆಸಿಬಲ್‌ಗಳಿಗೆ ಸೀಮಿತಗೊಳಿಸಲಾಗಿದೆ. ಪ್ರತಿ ವರ್ಷ ಜನರು ತಮಗೆ ಇಂತಿಷ್ಟುಪಟಾಕಿ ಬೇಕೆಂದು ಮುಂಗಡ ಬುಕ್ಕಿಂಗ್‌ ಮಾಡುತ್ತಿದ್ದರು. ಆದರೆ, ಈ ವರ್ಷ ಪಟಾಕಿ ಕಡೆಗೆ ಜನರು ಮುಖಮಾಡುತ್ತಿಲ್ಲ. ಶಬ್ದ ಮಾಡುವ ಪಟಾಕಿಗಳಿಗೆ ಬೇಡಿಕೆ ಇಲ್ಲ. ಪಟಾಕಿ ವರ್ತಕರು ದೊಡ್ಡ ಮಟ್ಟದಲ್ಲಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಪಟಾಕಿ ಅನಾಹುತಗಳು, ಆರೋಗ್ಯ ಕಾಳಜಿ, ಮಾಲಿನ್ಯ ನೆಪ ನೀಡಿ ಪಟಾಕಿಗಳಿಂದ ವಿಮುಕ್ತರಾಗುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.

ವ್ಯಾಪಾರಕ್ಕೆ ಮಳೆ ಹಿನ್ನಡೆ

ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಪಟಾಕಿ ವ್ಯಾಪಾರಕ್ಕೆ ತಡೆಯೊಡ್ಡಿದೆ. ಕೆಲ ನಿರ್ದಿಷ್ಟಪ್ರದೇಶಗಳು, ಮೈದಾನಗಳಲ್ಲಿ ಪಟಾಕಿ ಮಾರಾಟ ಮಾಡುವವರೂ ಕಡಿಮೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲೂ ಪಟಾಕಿ ಮಾರಾಟಕ್ಕೆ ಕುತ್ತುಂಟಾಗಿದೆ. ಪಟಾಕಿ ಮಾರಾಟಕ್ಕೆ ಪರವಾನಗಿ ಇಲ್ಲದಿರುವುದರಿಂದ ಹಲವರು ವ್ಯಾಪಾರದಿಂದ ಹಿಂದೆ ಸರಿದಿದ್ದಾರೆ. ಮೈದಾನಗಳಲ್ಲಿ ಮಳಿಗೆಗಳನ್ನು ಹಾಕಿ ಮಾರಾಟ ಮಾಡುವವರೂ ಕಡಿಮೆಯಾಗಿದ್ದಾರೆ. ಉತ್ಪಾದನೆ ಇಳಿಕೆಯಾಗಿದ್ದರೂ ಬೇಡಿಕೆ ಇಲ್ಲವಾಗಿದೆ.

ಪಟಾಕಿಯಿಂದಲೇ ಮಾಲಿನ್ಯವೇ?

ರಾಜಧಾನಿಯಲ್ಲಿ ದಿನನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ. ವಾಹನಗಳ ಇಂಧನ, ಕಾರ್ಖಾನೆಗಳ ಕೊಳವೆಗಳಿಂದ ಹೊರಹೊಮ್ಮುವ ವಿಷಾನಿಲ, ಕಟ್ಟಡ ನಿರ್ಮಾಣಗಳ ಧೂಳು, ಹೊಲಗಳಲ್ಲಿ ಸುಡುವ ಕೊಯ್ದ ಪೈರಿನ ಕೂಳೆ ಇವೆಲ್ಲ ನೈಸರ್ಗಿಕ ಪ್ರಕ್ರಿಯೆಗೆ ಮತ್ತಷ್ಟುವೇಗ ಹಾಗೂ ಹಾಸನ್ನು ಒದಗಿಸಿ ಮಾಲಿನ್ಯದ ಪ್ರಮಾಣ ಏರುವಂತೆ ಮಾಡುತ್ತವೆ. ಆದರೆ, ಪಟಾಕಿ ಸುಡುವುದರಿಂದಲೇ ಶಬ್ದಮಾಲಿನ್ಯ, ವಾಯು ಮಾಲಿನ್ಯವಾಗುವುದಿಲ್ಲ. ಇವು ಮಲಿನಗೊಂಡಿರುವ ಪರಿಸರದಲ್ಲಿ ಮತ್ತಷ್ಟುಮಾಲಿನ್ಯವನ್ನು ತುಂಬುತ್ತವೆ ಎಂಬುದು ಪರಿಸರವಾದಿಗಳ ವಾದ.

ಅಲಂಕಾರಿ ವಸ್ತುಗಳಿಗೆ ಬೇಡಿಕೆ

ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿಗಳದ್ದೇ ಕಾರುಬಾರು. ಈ ಬಾರಿ ದೀಪಾವಳಿಯನ್ನು ತ್ಯಾಜ್ಯ ಹಾಗೂ ಹೊಗೆ ಮುಕ್ತಗೊಳಿಸಿ ಪರಿಸರ ಸ್ನೇಹಿಯಾಗಿ ಆಚರಿಸಲು ಜನತೆ ಮನಸ್ಸು ಮಾಡಿದ್ದಾರೆ. ಪರಿಸರ ಮಾಲಿನ್ಯದಿಂದ ಕಂಗೆಟ್ಟಿರುವ ಜನತೆ ಪಟಾಕಿ ಬದಲಿಗೆ ದೀಪಗಳು, ಆಕರ್ಷಕ ಆಕಾಶ ಬುಟ್ಟಿಗಳಿಂದ ಮನೆಯನ್ನು ಅಲಂಕರಿಸಿ ದೀಪದ ಹಬ್ಬ ಆಚರಣೆಗೆ ಸಜ್ಜಾಗಿದ್ದಾರೆ. ಮಣ್ಣಿನ ಹಣತೆಗಳು, ಬಟ್ಟೆಹಾಗೂ ಪೇಪರ್‌ನಿಂದ ತಯಾರಿಸಿದ ಆಕಾಶ ಬುಟ್ಟಿಗಳು, ಕಲರ್‌ಫುಲ್‌ ಕ್ಯಾಂಡಲ್‌ಗಳು ಬೇಡಿಕೆ ಕುದುರಿದೆ. ಇಂದು ಮಕ್ಕಳು, ಮಹಿಳೆಯರು ಪಟಾಕಿ ಖರೀದಿಗೆ ಹೆಚ್ಚು ಉತ್ಸುಕರಾಗಿಲ್ಲ. ಅಲಂಕಾರಿಕ ವಸ್ತುಗಳು, ದೀಪಗಳನ್ನು ಖರೀದಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಜನಜಾಗೃತಿ ವಿಫಲದ ನಡುವೆಯೂ ಪರಿಸರಕ್ಕೆ ಹಾನಿಕಾರಕ ಪಟಾಕಿಗಳನ್ನು ನಿಷೇಧಿಸಿರುವ ಸುಪ್ರೀಂ ಕೋರ್ಟ್‌ ಆದೇಶ ಜನರಲ್ಲಿ ಬದಲಾವಣೆಗೆ ಕಾರಣವಾಗಿದೆ.

ಒಣಗಿದ ವಾತಾವರಣ ಇದ್ದಾಗ ಪಟಾಕಿ ಸಿಡಿತದ ಹೊಗೆ, ಧೂಳಿನ ಕಣಗಳು ಗಾಳಿಯಲ್ಲಿ ಹರಡುತ್ತದೆ. ಆದರೆ, ತೇವಾಂಶವಿದ್ದಾಗ ಪಟಾಕಿಯಿಂದ ಹೊರಹೊಮ್ಮುವ ಹೊಗೆ ಸಿಡಿಸುವವರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹಿಂದೆ 50 ಜಾತಿಯ ಎಣ್ಣೆ ಹಾಕಿ ದೀಪ ಉರಿಸುತ್ತಿದ್ದರು. ಈ ಎಣ್ಣೆಗಳಲ್ಲಿನ ಔಷಧಿ ಗುಣಗಳಿಂದ ರೋಗರುಜಿನಗಳು ಕಡಿಮೆಯಾಗುತ್ತಿತ್ತು. ಆದರೆ, ಇಂದು ಕಿ.ಲೋ. ಮೀಟರ್‌ಗಟ್ಟಲೆ ಪಟಾಕಿ ಹಚ್ಚಲಾಗುತ್ತದೆ. ಶಬ್ದಮಾಲಿನ್ಯ ಸೈಲೆಂಟ್‌ ಕಿಲ್ಲರ್‌. ಮಳೆಗಾಲದಿಂದ ಚಳಿಗಾಲಕ್ಕೆ ಬದಲಾವಣೆ ಕಾಲವಾದ್ದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

-ಡಾ.ಎ.ಎನ್‌.ಯಲ್ಲಪ್ಪ ರೆಡ್ಡಿ, ಪರಿಸರ ತಜ್ಞ.

ಮಳೆಯಿಂದ ವ್ಯಾಪಾರ ಕಡಿಮೆಯಾಗಿತ್ತು. ಆದರೆ, ಇದೀಗ ಸುಧಾರಿಸಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಉತ್ತಮ ವ್ಯಾಪಾರ ನಿರೀಕ್ಷೆ ಇದೆ. ಚಿಲ್ಲರೆ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

-ಸುಂದರ್‌ರಾಜ್‌, ಸಗಟು ಪಟಾಕಿ ಮಾರಾಟಗಾರರು, ಹೊಸೂರು.

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!