ಬೆಂಗಳೂರಿನಲ್ಲಿವೆ 40 ಮೋಸ್ಟ್ ಡೇಂಜರಸ್ ಸ್ಪಾಟ್ : ಎಚ್ಚರ !

By Web DeskFirst Published Feb 5, 2019, 9:25 AM IST
Highlights

ಬೆಂಗಳೂರು ನಗರದಲ್ಲಿ 40 ಡೇಂಜರಸ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ 40 ಸ್ಥಳಗಳಲ್ಲಿ ಸಂಚಾರ ನಿಯಂತ್ರಣ ಮಾಡಲು ಪೊಲೀಸ್  ಇಲಾಖೆ ಕ್ರಮ ಕೈಗೊಂಡಿದೆ. 

ಬೆಂಗಳೂರು :  ಕಳೆದ ವರ್ಷ ನಗರದಲ್ಲಿ ಅತಿ ಹೆಚ್ಚು ಅಪಘಾತ ಸಂಭವಿಸಿದ್ದ 40 ಸ್ಥಳಗಳನ್ನು ಗುರುತಿಸಿ ಸಂಚಾರ ನಿಯಂತ್ರಿಸಲು ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು.

ಸಾರಿಗೆ ಇಲಾಖೆ ಸೋಮವಾರ ಅಶೋಕನಗರದ ಸೈಲೈವಾನ್‌ ಆಟದ ಮೈದಾನದಲ್ಲಿ ಅಯೋಜಿಸಿದ್ದ 30ನೇ ‘ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2018ರಲ್ಲಿ ಬೆಂಗಳೂರಿನಲ್ಲಿ 611 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ರಸ್ತೆ ಅಪಘಾತವನ್ನು ಪೊಲೀಸರೊಬ್ಬರಿಂದ ಮಾತ್ರ ತಡೆಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕರು ಸಹ ವಾಹನ ಸವಾರಿ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದರು.

ರಾಜ್ಯ ಸಂಚಾರಿ ಪೊಲೀಸ್‌ ಇಲಾಖೆಯು ರಸ್ತೆ ಅಪಘಾತ ತಡೆಟ್ಟಲು ಬೇಕಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸಾರಿಗೆ ಇಲಾಖೆ ಈ ವರ್ಷ ‘ರಸ್ತೆ ಸುರಕ್ಷತೆ-ಜೀವದ ರಕ್ಷೆ’ ಎಂಬ ಥೀಮ್‌ನಲ್ಲಿ ಅಭಿಯಾನ ಆರಂಭಿಸಿದೆ. ಮಕ್ಕಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ. ಪೊಲೀಸರೊಂದಿಗೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ರಸ್ತೆ ಅಪಘಾತ ತಡೆಗಟ್ಟಲು ಸಾಧ್ಯ ಎಂದರು.

ಶಾಸಕ ಎನ್‌.ಎ.ಹ್ಯಾರಿಸ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ (ಅಪರಾಧ) ಅಲೋಕ್‌ ಕುಮಾರ್‌ ಮಾತ​ನಾ​ಡಿ​ದರು. ಇದೇ ವೇಳೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಂಚಾರಿ ಪೊಲೀಸರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ 16 ಶಾಲೆಗಳ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಆರ್‌.ಟಿ. ನಗರದ ಫ್ಲಾರೆನ್ಸ್‌ ಶಾಲಾ ವಿದ್ಯಾರ್ಥಿಗಳು ಮೊದಲ ಬಹುಮಾನ ಪಡೆದರು.

ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಕೆ. ಗೋವಿಂದ ರಾಜು, ರಮೇಶ್‌ ಗೌಡ, ಸಂಚಾರ ಪೊಲೀಸ್‌ ವಿಭಾಗದ ಐಜಿಪಿ ಹರಿಶೇಖರನ್‌, ಕೇಂದ್ರ ವಿಭಾಗದ ಡಿಸಿಪಿ ಡಿ. ದೇವರಾಜು ಉಪಸ್ಥಿತರಿದ್ದರು.

click me!