
ಬೆಂಗಳೂರು (ಅ.18): ಶಾಲೆ..ಬಗೆದಷ್ಟು ನೆನಪುಗಳ ಆಗರ. ಶಾಲೆಯ ಆವರಣ, ಕನ್ನಡ ಕಲಿಸುವ ಮೇಷ್ಟ್ರು, ಗಣಿತ ಕಲಿಸುವ ಮುಗೋಂಪಿ ಶಿಕ್ಷಕ. ಇದೆಲ್ಲದರ ನಡುವೆ ಅಲ್ಲೊಂದು ಇಲ್ಲೊಂದು ಸ್ನೇಹ. ಭಾರವಾದ ಬ್ಯಾಗು.. ಇದೆಲ್ಲದರ ನಡುವೆ ನಮಗೆ ಅತ್ಯಾಪ್ತವಾಗಿ ಕಾಣುವವನು ಶಾಲೆಯ ಗಂಟೆ ಬಾರಿಸುವ ವ್ಯಕ್ತಿ. ಪ್ರತಿದಿನವೂ ವಿದ್ಯಾರ್ಥಿಗಳಿಂದ ಸಿಟ್ಟು ಹಾಗೂ ಖುಷಿ ಎರಡನ್ನೂ ಪಡೆದುಕೊಳ್ಳುವ ಏಕೈಕ ವ್ಯಕ್ತಿ. ಗಂಟೆ ಬಾರಿಸುವ ಅಂಕಲ್. ಬೆಳಗ್ಗೆ ಆತ ಗಂಟೆ ಬಾರಿಸಿದಾಗ ಸಿಟ್ಟಾಗುವ ವಿದ್ಯಾರ್ಥಿಗಳು, ಸಂಜೆ ಆತ ಗಂಟೆ ಬಾರಿಸೋದನ್ನೇ ಖುಷಿಯಿಂದ ಕಾಯುತ್ತಿರುತ್ತಾರೆ. ಗಂಟೆಯ ಶಬ್ದ ಕಿವಿಗೆ ಬೀಳುತ್ತಿದ್ದಂತೆ, ಗಂಟೆ ಬಾರಿಸಿದ ಅಂಕಲ್‌ಗೆ ಮನಸ್ಸಲ್ಲೇ ಥ್ಯಾಂಕ್‌ಯು ಹೇಳಿ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಮನೆಯ ದಾರಿ ಹಿಡಿಯೋದೇ ಅದ್ಭುತ ಅನುಭವ.
ಬೆಂಗಳೂರಿನ ಅತ್ಯಂತ ಹೈಪ್ರೊಫೈಲ್ ಶಾಲೆ ಎನಿಸಿಕೊಂಡಿರುವ ಬಿಷನ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ ಕಳೆದ 38 ವರ್ಷಗಳಿಂದ ಗಂಟೆ ಬಾರಿಸುವ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಇತ್ತೀಚೆಗೆ ಶಾಲೆಯೆ ಹುಡುಗಿಯರು ಭಾವುಕ ವಿದಾಯ ನೀಡಿದ್ದಾರೆ. ದಾಸ್ ಅಂಕಲ್ ಎಂದೇ ಶಾಲೆಯಲ್ಲಿ ಫೇಮಸ್ ಆಗಿದ್ದ ವ್ಯಕ್ತಿ ಶುಕ್ರವಾರ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಈ ವೇಳೆ ಶಾಲೆಯ ಹುಡುಗಿಯರು ಗಂಟೆಯ ಸುತ್ತ ನಿಂತು ಕೌಂಟ್‌ಡೌನ್ ಮಾಡಿ ಅವರಿಗೆ ಬೀಳ್ಕೊಡುಗೆ ನೀಡಿದ್ದಾರೆ.
ಗಂಟೆಯ ಸುತ್ತ ನಿಂತು ವಿದ್ಯಾರ್ಥಿಗಳು ಕೌಂಟ್‌ಡೌನ್ ಮಾಡುತ್ತಿದ್ದರೆ, ದಾಸ್ ಅಂಕಲ್ ಭಾವುಕರಾಗಿದ್ದರು. ಕಣ್ಣಾಲಿಗಳು ತೇವವಾಗಿದ್ದು ಕಾಣುತ್ತಿತ್ತು. ಎಂದಿನಂತೆ ಶಾಲೆ ಮುಗಿಯುವ ಗಂಟೆಯನ್ನು ದಾಸ್ ಬಾರಿಸುತ್ತಿದ್ದಂತೆ ವಿದ್ಯಾರ್ಥಿನಿಯರು ಕರತಾಡನ ಮಾಡಿ ಅವರನ್ನು ಬೀಳ್ಕೊಟ್ಟರು.
ಈ 38 ವರ್ಷಗಳ ಕಾಲ ದಾಸ್ ಅಂಕಲ್ ಇಡೀ ಶಾಲೆಯ ಒಂದು ಲಯದ ರೀತಿ ಇದ್ದಂತವರು. ಹಾಗಂತ ಅವರು ಯಾವುದೇ ಪಾಠ-ಉಪನ್ಯಾಸ ಮಾಡುತ್ತಿರಲಿಲ್ಲ. ಆದರೆ, ಸಾವಿರಾರರು ವಿದ್ಯಾರ್ಥಿಗಳ ಪಾಠ ಯಾವಾಗ ಆರಂಭ ಆಗಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು, ಯಾವಾಗ ಕನಸು ಕಾಣಬೇಕು ಎಂದು ಹೇಳುವ ಗಂಟೆಯನ್ನು ಬಾರಿಸುತ್ತಿದ್ದ ವ್ಯಕ್ತಿ. ಇಂದು ಅವರ ನಿವೃತ್ತಿ ಕೇಳಿ ಬೇಸರವಾಗಿದೆ. ಮುಂದಿನ ದಿನಗಳು ಒಳ್ಳೆಯದಾಗಿರಲಿ ಎಂದಿ ಮಾಜಿ ವಿದ್ಯಾರ್ಥಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕಾಮೆಂಟ್‌ಗಳು ಬಂದಿವೆ. ಹೆಚ್ಚಿನವರು ಶಾಲೆಯ ಆಡಳಿತ ಮಂಡಳಿಯನ್ನು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಶಾಲೆಯಲ್ಲಿ ಇಂಥ ವ್ಯಕ್ತಿಗಳು ನಿವೃತ್ತರಾದಾಗ ಸುದ್ದಿಯಾಗೋದೇ ಇಲ್ಲ. ಆದರೆ, ಆಡಳುತ ಮಂಡಳಿ ಅದನ್ನು ಶಾಲೆಯ ಮಕ್ಕಳಿಗೆ ತಿಳಿಸಿ ಅವರಿಂದಲೇ ಈ ರೀತಿಯ ಬೀಳ್ಕೊಡುಗೆ ನೀಡುವಂತೆ ಮಾಡಿರುವುದು ಮೆಚ್ಚತಕ್ಕ ವಿಷಯ ಎಂದಿದ್ದಾರೆ.
'ಕಳೆದ 38 ವರ್ಷ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೊನೆಯ ಬಾರಿಗೆ ಬೆಲ್ ಬಾರಿಸಿದ್ದಾರೆ. ನಮ್ಮ ಪ್ರತಿ ಬೆಳಗ್ಗೆಯನ್ನೂ ಅವರು ಮಾರ್ಕ್ ಮಾಡಿದ್ದಾರೆ. ಪ್ರತಿ ನೆನಪುಗಳು ಇವೆ. ಇವರು ಟೀಚರ್ ಅಲ್ಲ. ಆದರೆ, ಶಾಲೆಯ ಹೃದಯ. ಕೆಲವು ಗುಡ್‌ಬೈಗಳು ಬೆಲ್‌ನ ಶಬ್ದಕ್ಕಿಂತ ಹೆಚ್ಚು ಮನಸ್ಸಿಗೆ ತಾಕುತ್ತದೆ' ಎಂದು ವಿಡಿಯೋ ಹಂಚಿಕೊಂಡಿರುವ ವಿದ್ಯಾರ್ಥಿನಿ ಬರೆದುಕೊಂಡಿದ್ದಾರೆ.
'ಶಾಲೆಯ ಬೆಲ್‌ಅನ್ನು ಕೊನೆಯ ಬಾರಿಗೆ ಬಾರಿಸಲು ಬಂದ ವ್ಯಕ್ತಿಗೆ ಶಾಲೆ ಹಾಗೂ ವಿದ್ಯಾರ್ಥಿಗಳ ನೀಡಿದ ಫೇರ್‌ವೆಲ್ ನೋಡಿ ಖುಷಿಯಾಗಿದೆ' ಎಂದು ಮತ್ತೊಬ್ಬರು ಬರೆದಿದ್ದಾರೆ.
'38 ವರ್ಷದ ನಂತರ, ದಾಸ್ ಅಂಕಲ್ ಕೊನೆಯ ಬಾರಿಗೆ ತಮ್ಮ ಬೆಲ್ ಬಾರಿಸಿದರು. ಇದು ಕಾಟನ್ಸ್‌ನ ಎಲ್ಲರ ನೆನಪಿಲ್ಲಿ ಉಳಿಯುವ ಬೆಲ್. ಅವರ ನಗು, ಶಾಂತವಾಗಿದ್ದ ಅವರ ಬದ್ಧತೆ, ಸ್ಕೂಲ್‌ನ ಪ್ರತಿ ಅಂಚಿನಲ್ಲೂ ಅವರು ಇರುತ್ತಿದ್ದ ರೀತಿಯೇ ಇಲ್ಲಿನ ಹಾರ್ಟ್‌ಬೀಟ್. ಇಂದು ಅವರು ತಮ್ಮ ಕೊನೆಯ ಬೆಲ್ ಬಾರಿಸಿದ್ದಾರೆ. ನಾವು ಅವರನ್ನು ಸಂಭ್ರಮಿಸಿದ್ದೇವೆ' ಎಂದು ವಿದ್ಯಾರ್ಥಿನಿ ಬರೆದಿದ್ದಾರೆ.