
ಬೆಂಗಳೂರು(ಜೂ.20) ಉದ್ಯೋಗದ ಒತ್ತಡ, ಹೆಚ್ಚುವರಿ ಕೆಲಸ, ಮ್ಯಾನೇಜರ್ ಸೇರಿದಂತೆ ಹಿರಿಯ ಅಧಿಕಾರಿಗ ಬೈಗುಳ ಸೇರಿದಂತೆ ಟಾಕ್ಸಿಕ್ ಆಫೀಸ್ ವಾತಾವರಣ ಕುರಿತು ಹಲವು ದೂರುಗಳು, ಘಟನೆಗಳು ವರದಿಯಾಗಿದೆ. ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರ ಆಘಾತಕಾರಿ ಘಟನೆ ಬಹಿರಂಗವಾಗಿದೆ. ಸಿಇಒ ನೀಡುತ್ತಿದ್ದ ಕಿರುಕುಳ, ಕೆಲಸದ ಅತೀವ ಒತ್ತಡ, ಮೀಟಿಂಗ್‌ನಲ್ಲಿ ಕಿರುಚಾಟ, ಬೈಗುಳದಿಂದ ಅಸ್ವಸ್ಥಗೊಂಡ ಬೆಂಗಳೂರಿನ ಟೆಕ್ಕಿ, ಆನ್‌ಲೈನ್ ಮೀಟಿಂಗ್‌ನಲ್ಲೇ ಕುಸಿದು ಬಿದ್ದ ಆಸ್ಪತ್ರೆ ದಾಖಲಾದ ಘಟನೆ ನಡೆದಿದೆ. ಈ ಕುರಿತು ಟೆಕ್ಕಿ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ತಾನು ಅನುಭವಿಸಿದ ನೋವು, ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.
ರಾಜೀನಾಮೆ ನೀಡಿದರೂ ಬಿಡದ ಸಿಇಒ
ಬೆಂಗಳೂರಿನ ಸ್ಟಾರ್ಟ್ಅಪ್ ಕಂಪನಿಯಲ್ಲಿ ಜ್ಯೂನಿಯರ್ ಡೇಟಾ ಸೈಂಟಿಸ್ಟ್ ಆಗಿ ಟೆಕ್ಕಿ ಕೆಲಸ ಮಾಡುತ್ತಿದ್ದರು. ಆದರೆ ಪ್ರತಿ ದಿನ ಕೆಲಸದ ವಾತಾವರಣ ಅತ್ಯಂತ ಗಂಭೀರವಾಗುತ್ತಿತ್ತು. ವೃತ್ತಿ ಮುಂದುವರಿಸಲು ಸಾಧ್ಯವಾಗದಂತ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಟೆಕ್ಕಿಯನ್ನು ಮತ್ತೆ ಟಾರ್ಗೆಟ್ ಮಾಡಿದ್ದ ಸಿಇಒ, ಸಿಕ್ಕ ಸಿಕ್ಕ ಮೀಟಿಂಗ್‌ನಲ್ಲಿ ಟೆಕ್ಕಿ ವಿರುದ್ದ ಕಿರುಚಾಡಲು ಶುರುಮಾಡಿದ್ದಾರೆ. ಅಸಾಧ್ಯ ಡೆಡ್‌ಲೈನ್ ನೀಡಿ ಕೆಲಸ ಮುಗಿಸಿಕೊಡುವಂತೆ ಸೂಚಿಸಿದ್ದಾರೆ. ಇದರ ನಡುವೆ ಮತ್ತೆ ಟೀಂ ಮೀಟಿಂಗ್ ಕರೆದು ಮೀಟಿಂಗ್‌ನಲ್ಲಿ ಕಿರುಚಾಡಿದ್ದಾರೆ. ಈ ವೇಳೆ ತೀವ್ರ ಉಸಿರಾಟದ ಸಮಸ್ಯೆ ಎದುರಿಸಿದ ಟೆಕ್ಕಿ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ಅಸ್ವಸ್ಥಗೊಂಡ ಟೆಕ್ಕಿಯನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಟೆಕ್ಕಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಮೈಕ್ರೋಮ್ಯಾನೇಜ್ಮೆಂಟ್, ಬೈಗುಳ, ಅಸಾಧ್ಯ ಡೆಡ್‌ಲೈನ್, ಒಂದು ಕ್ಷಣ ನೆಮ್ಮದಿ ಇಲ್ಲದಂತೆ ಕೆಲಸ ಮಾಡುವ ಕೆಟ್ಟ ವಾತಾವರಣದಿಂದ ಆರೋಗ್ಯ ಹದಗೆಟ್ಟಿತ್ತು. ಗೂಗಲ್ ಮೀಟ್‌ನಲ್ಲಿ ಎಲ್ಲರ ಮುಂದೆ ಸಿಇಒ ಮತ್ತೆ ಬೈಗುಳು ಶುರುಮಾಡಿದ್ದಾರೆ. ಕೆಲಸವೇ ಗೊತ್ತಿಲ್ಲ, ಪ್ರತಿಭೆ ಇಲ್ಲ, ಹೇಳಿದ ಕೆಲಸ ಮುಗಿದಿಲ್ಲ ಸೇರಿದಂತೆ ಅವಾಚ್ಯ ಶಬ್ದಗಳಿಂದ ಬೈಗುಳ ಶುರುಮಾಡಿದ್ದಾರೆ. ಈ ವೇಳೆ ಟೆಕ್ಕಿ ಬಿಪಿ ಏರಿಳಿತವಾಗಿದೆ. ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅಷ್ಟರಲ್ಲೇ ಟೆಕ್ಕಿ ಕುಸಿದು ಬಿದ್ದಿದ್ದಾರೆ ಎಂದು ರೆಡ್ಡಿಟ್ ಪೋಸ್ಟ್ ಹೇಳಿದೆ.
ಕೆಲಸ ಬಿಟ್ಟರೂ ಕಿರುಕುಳ ಬಿಟ್ಟಿಲ್ಲ
ಟೆಕ್ಕಿ ರಾಜೀನಾಮೆ ನೀಡಿದ ಬಳಿಕ ನೋಟಿಸ್ ಪಿರೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಸ್ಪತ್ರೆ ದಾಖಲಾಗಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಟೆಕ್ಕಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಇತ್ತ ನೋಟಿಸ್ ಪಿರೆಡ್ ಮುಗಿದಿದೆ. ಇದೀಗ ಕಂಪನಿ ಫೈನಲ್ ಸೆಟ್ಲಮೆಂಟ್ ಮಾಡದೆ ಸತಾಯಿಸುತ್ತಿದೆ ಎಂದು ಟೆಕ್ಕಿ ಹೇಳಿದ್ದಾರೆ. ಇಷ್ಟೇ ಅಲ್ಲ ಎಕ್ಸ್‌ಪರಿಯನ್ಸೆ ಲೆಟರ್ ನೀಡುತ್ತಿಲ್ಲ. ಪ್ರತಿ ದಿನ ಕಚೇರಿ ಮನೆ ಎಂದು ಅಲೆದಾಡಿಸುತ್ತಿದ್ದಾರೆ ಎಂದು ಟೆಕ್ಕಿ ಹೇಳಿಕೊಂಡಿದ್ದಾರೆ.
ಕಂಪನಿ ವಿರುದ್ಧ ಹಲವರ ಆಕ್ರೋಶ
ಉದ್ಯೋಗಿಗಳ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಕಂಪನಿ ಜವಾಬ್ದಾರಿಯಾಗಿದೆ. ಅತಿಯಾದ ಕಿರುಕುಳ, ಕೆಟ್ಟ ಕೆಲಸದ ವಾತಾವರಣ ಉದ್ಯೋಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಈ ರೀತಿಯ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.