Election; ವಿದ್ಯಾರ್ಥಿ ಚುನಾವಣೆ ಬಂದ್: ಇದು ಗಲಾಟೆ ತಡೆಯುವ ತಂತ್ರವೋ, ಹೊಸ ಧ್ವನಿ ಅಡಗಿಸುವ ಸೈಲೆಂಟ್ ಆಪರೇಷನ್?

Published : Oct 04, 2026, 05:53 PM IST
College Election

ಸಾರಾಂಶ

ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ಹೊಸ ನಾಯಕರನ್ನು ಸೃಷ್ಟಿಸುತ್ತವೆ ಎಂಬ ಭಯ ಆಡಳಿತ ವ್ಯವಸ್ಥೆಗಿದೆ. ಆದರೆ ಚುನಾವಣೆ ರದ್ದುಪಡಿಸುವುದರಿಂದ ಪ್ರಜಾಪ್ರಭುತ್ವದ ಭವಿಷ್ಯದ ನಾಯಕರ ಬೆಳವಣಿಗೆ ಕುಂಠಿತವಾಗುತ್ತದೆ. ಗಲಾಟೆಗಳ ನೆಪವೊಡ್ಡಿ ಎಲೆಕ್ಷನ್ ನಿಲ್ಲಿಸುವ ಬದಲು, ಐಐಟಿ ಮಾದರಿಯಲ್ಲಿ ನಿಯಮಬದ್ಧವಾಗಿ ಚುನಾವಣೆ ನಡೆಸುವುದು ಸೂಕ್ತ.

ಒಂದು ಕಾಲವಿತ್ತು, ಕಾಲೇಜು ಕ್ಯಾಂಪಸ್‌ಗಳು ಬರೀ ಪುಸ್ತಕಗಳ ಪುಟಗಳಿಗೆ ಅಥವಾ ಚಹಾ ಕುಡಿಯುತ್ತಾ ಮಾಡುವ ಹರಟೆಗೆ ಮಾತ್ರ ಸೀಮಿತವಾಗಿರಲಿಲ್ಲ. ಕೈಯಲ್ಲಿ ಪುಸ್ತಕ, ಮನಸ್ಸಿನಲ್ಲಿ ಕನಸುಗಳನ್ನು ಇಟ್ಟುಕೊಂಡ ಹುಡುಗ-ಹುಡುಗಿಯರು ದೇಶದ ಭವಿಷ್ಯದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಿದ್ದರು. ಆದರೆ ಇವತ್ತು? ಎಷ್ಟೋ ರಾಜ್ಯಗಳಲ್ಲಿ ಈ ಕ್ಯಾಂಪಸ್‌ಗಳ 'ಚುನಾವಣೆ' ಎಂದರೆ ಆಡಳಿತ ನಡೆಸುವ ಇಡೀ ವ್ಯವಸ್ಥೆಗೆ ಹೊಟ್ಟೆಯೊಳಗೆ ದೇವಸ್ಥಾನದ ಗಂಟೆ ಬಾರಿಸಿದಂತಾಗುತ್ತದೆ. ಇದರ ನಡುವೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶದಲ್ಲಿ ಇಲೆಕ್ಷನ್‌ ನಡೆಸೋ ವಿಚಾರವೆದ್ದಿದೆ. ಅನುಷ್ಠಾನವಾಗುತ್ತಾ? ಎನ್ನುವುದನ್ನು ನೋಡಬೇಕಿದೆ. ಆದರೆ 'ಅಯ್ಯೋ ಸಾಹೇಬ್ರೇ, ವಿದ್ಯಾರ್ಥಿ ಸಂಘದ ಎಲೆಕ್ಷನ್ ಬೇಡವೇ ಬೇಡ, ಗಲಾಟೆ ಆಗುತ್ತೆ' ಅಂತ ಅಧಿಕಾರಿಗಳು ಕಿವಿಯಲ್ಲಿ ಊದಿ ಎಲೆಕ್ಷನ್‌ಗೆ ಮಂಗಳಾರತಿ ಮಾಡಿಸಿಬಿಡುತ್ತಾರೆ. ಅಷ್ಟಕ್ಕೂ, ಈ ಆಡಳಿತ ವ್ಯವಸ್ಥೆಗೆ ವಿದ್ಯಾರ್ಥಿ ಎಲೆಕ್ಷನ್ ಕಂಡರೆ ಯಾಕೆ ಅಷ್ಟೊಂದು ಭಯ? ಚುನಾವಣೆ ಬಂದ್ ಮಾಡಿದರೆ ಏನಾಗುತ್ತೆ, ನಡೆಸಿದರೆ ಏನೆಲ್ಲಾ ಸವಾಲುಗಳಿವೆ? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ರಾಜಕೀಯ ನಾಯಕರಿಗೆ ಕಾಡುವ ಪ್ರಶ್ನೆ ಏನು?

ಮೊದಲನೆಯದಾಗಿ, ಈ ಆಡಳಿತ ವ್ಯವಸ್ಥೆಗೆ ತನಗೆ ಎದುರಾಗಿ ಹೊಸ ಮತ್ತು ಸ್ವತಂತ್ರ ನಾಯಕತ್ವ ಬೆಳೆಯುವುದು ಸುಲಭವಾಗಿ ಬೇಕಾಗಿಲ್ಲ. ಕ್ಯಾಂಪಸ್‌ನಿಂದ ಪ್ರಶ್ನೆ ಮಾಡುವ ಯುವ ನಾಯಕ ಹುಟ್ಟಿಕೊಂಡರೆ, ನಾಳೆ ದಿನ ತಮಗೆ ಸವಾಲಾಗಬಹುದು ಎಂಬ ಅಭದ್ರತೆ ಇರುತ್ತದೆ. ಒಂದು ವೇಳೆ ವ್ಯವಸ್ಥೆಯು ವಿದ್ಯಾರ್ಥಿ ಚುನಾವಣೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದರೆ ಅಥವಾ ಬಹಿಷ್ಕರಿಸಿದರೆ, ದೇಶಕ್ಕೆ ಮುಂದಿನ ದಿನಗಳಲ್ಲಿ ಬರಬೇಕಾದ ಪ್ರಜಾರಾಜಕೀಯದ ನಾಯಕರು ರೂಪುಗೊಳ್ಳುವುದೇ ನಿಂತುಹೋಗುತ್ತದೆ. ಫೀಸ್ ಹೆಚ್ಚಳ ಅಥವಾ ಆಡಳಿತ ಮಂಡಳಿಯ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಲು ಯಾರೂ ಇರುವುದಿಲ್ಲ. ಪ್ರಜಾಸತ್ತಾತ್ಮಕವಾಗಿ ಎಲೆಕ್ಷನ್ ಮಾಡೋಕೆ ಬಿಡದಿದ್ದಾಗ, ವಿದ್ಯಾರ್ಥಿಗಳು ತೀವ್ರಗಾಮಿ ಆಲೋಚನೆಗಳತ್ತ ವಾಲುವು ಅಪಾಯವೂ ಇರುತ್ತದೆ.

ಈಗ ಇದರ ಇನ್ನೊಂದು ಮುಖ ಏನು?

ಒಂದು ವೇಳೆ ಚುನಾವಣೆ ನಡೆಸಿದರೆ ಈ ವ್ಯವಸ್ಥೆಗೆ ಏನೆಲ್ಲಾ ಸವಾಲುಗಳು ಬರುತ್ತವೆ? ಎಷ್ಟೋ ಕಾಲೇಜುಗಳಲ್ಲಿ ಎಲೆಕ್ಷನ್ ನೆಪದಲ್ಲಿ ಹಣ, ಮದ್ಯ ಮತ್ತು ಬಾಹುಬಲ ಹೆಚ್ಚುತ್ತದೆ. ರೌಡಿ ಶೀಟರ್‌‌ಗಳು, ಹೊರಗಿನ ಗೂಂಡಾಗಳು ಕ್ಯಾಂಪಸ್‌ಗೆ ನುಗ್ಗಿ ಕೊಲೆ-ಗಲಾಟೆ ಮಾಡುವ ಮಟ್ಟಕ್ಕೆ ಹೋದ ಉದಾಹರಣೆಗಳಿವೆ. ವರ್ಷವಿಡೀ ರಾಜಕೀಯದಲ್ಲೇ ಸಮಯ ಕಳೆದುಹೋದರೆ ಸಾಮಾನ್ಯ ವಿದ್ಯಾರ್ಥಿಗಳ ಓದು ಹಾಳಾಗುತ್ತದೆ. ಜೊತೆಗೆ, ದೆಹಲಿ ಯುನಿವರ್ಸಿಟಿಯಲ್ಲಿ ಯಾವುದೋ ಪಕ್ಷದ ವಿದ್ಯಾರ್ಥಿ ವಿಭಾಗ ಸೋತರೆ, 'ಇಡೀ ಆಡಳಿತ ವ್ಯವಸ್ಥೆಯೇ ಫ್ಲಾಪ್' ಅಂತ ಸಾಮಾಜಿಕ ಮಾಧ್ಯಮಗಳು ಬಿಂಬಿಸಿಬಿಡುತ್ತವೆ. ಈ ಅನಗತ್ಯ ರಾಜಕೀಯ ಒತ್ತಡಕ್ಕೆ ಹೆದರಿ ಆಡಳಿತ ಯಂತ್ರ ಎಲೆಕ್ಷನ್‌ನಿಂದ ಓಡಿಹೋಗುತ್ತದೆ.

ಇವೇ 3 ಮಾದರಿಗಳು!

ಕ್ಯಾಂಪಸ್ ರಾಜಕೀಯದಲ್ಲಿ ಮುಖ್ಯವಾಗಿ ಮೂರು ಮಾದರಿಗಳಿವೆ. ಒಂದು ಜೆಎನ್‌ಯು, ಜಾದವ್‌ಪುರ ತರಹದ ವೈಚಾರಿಕ ಕ್ಯಾಂಪಸ್‌ಗಳು. ಎರಡನೆಯದ್ದು ಹಣ ಮತ್ತು ತೋಳುಬಲ ನಡೆಯುವ ಜಾಗಗಳು. ಮೂರನೆಯದ್ದು ಸಾಕಷ್ಟು ಆಸಕ್ತಿಕರವಾದ ಐಐಟಿ ಮಾದರಿ! ಐಐಟಿಗಳಲ್ಲಿ ನೇರ ಪಕ್ಷಗಳ ರಾಜಕೀಯ ಇರಲ್ಲ, ಆದರೆ 'ಸ್ಟೂಡೆಂಟ್ ಕೌನ್ಸಿಲ್' ಇರುತ್ತೆ. ಅಶ್ವಿನಿ ವೈಷ್ಣವ್, ಅರವಿಂದ್ ಕೇಜ್ರಿವಾಲ್, ದಿವಂಗತ ಮನೋಹರ್ ಪರಿಕ್ಕರ್, ಜೈರಾಮ್ ರಮೇಶ್, ಗೂಗಲ್ ಸಿಇಒ ಸುಂದರ್ ಪಿಚೈ... ಇವರೆಲ್ಲಾ ಐಐಟಿಯಿಂದ ಬಂದವರೇ! ಅಲ್ಲಿ ಎಲೆಕ್ಷನ್ ನಿಂತು ಗೆದ್ದರೆ, ಪ್ಲೇಸ್‌ಮೆಂಟ್‌ನಲ್ಲಿ ಲೀಡರ್‌ಷಿಪ್ ಅನುಭವ ನೋಡಿ ಒಳ್ಳೆ ಜಾಬ್ ಸಿಗುತ್ತೆ ಅಂತ ಹುಡುಗರು ಸ್ಪರ್ಧಿಸುತ್ತಾರೆ.

ಯಾಕಿಷ್ಟು ವೈರತ್ವ?

ಈ ಜೆಎನ್‌ಯು ತರಹದ ಕ್ಯಾಂಪಸ್‌‌ಗಳಿಗೂ ಮತ್ತು ಆಡಳಿತ ವ್ಯವಸ್ಥೆಗೂ ಯಾಕಿಷ್ಟೊಂದು ವೈರತ್ವ? ಇದರ ಬೇರು ಇರುವುದು 1969ರಲ್ಲಿದೆ. ಇಂದಿರಾ ಗಾಂಧಿಯವರ ಸರ್ಕಾರ ಮೆಜಾರಿಟಿ ಕಳೆದುಕೊಂಡಾಗ ಕಮ್ಯುನಿಸ್ಟ್ ಪಾರ್ಟಿ ಬೆಂಬಲ ಕೊಟ್ಟು, ಜೆಎನ್‌ಯು ಹುಟ್ಟಿಕೊಂಡಿತು. ಅಂದಿನಿಂದ ಅಲ್ಲಿ ಎಡಪಂಥೀಯ ಆಲೋಚನೆಯಿದ್ದ ವಿದ್ಯಾರ್ಥಿಗಳು ಗಟ್ಟಿಯಾಗಿ ನೆಲೆಯೂರಿದರು. 1992ರ ಬಾಬರಿ ಮಸೀದಿ ಘಟನೆಯ ನಂತರವೂ ಅವರು ಆಡಳಿತದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಯಾವಾಗ 2014ರಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂತೋ, 'ಈ ಎಡಪಂಥೀಯರು ನಮ್ಮ ಸಿದ್ಧಾಂತದ ಮೂಲ ವೈರಿಗಳು' ಎಂಬ ಭಾವನೆ ಬೆಳೆದು, ವ್ಯವಸ್ಥೆಗೂ ಕ್ಯಾಂಪಸ್‌‌ಗೂ ನೇರ ಘರ್ಷಣೆ ಶುರವಾಯಿತು.

ಹಾಗಾದರೆ ಅಂತಿಮವಾಗಿ ಪರಿಹಾರ ಏನು?

ಎಲೆಕ್ಷನ್ ಅನ್ನು ಸಂಪೂರ್ಣ ಬಂದ್ ಮಾಡುವುದು, ಇಲ್ಲವೇ ಗಲಾಟೆಗಳಿಗೆ ಬಿಟ್ಟುಕೊಡುವುದು, ಎರಡೂ ಸರಿಯಾದ ಮಾರ್ಗವಲ್ಲ. ವಾಜಪೇಯಿ ಕಾಲದಲ್ಲೂ ವಿದ್ಯಾರ್ಥಿ ನಾಯಕರು ಜೈಲಿಗೆ ಹೋಗಿದ್ದಾರೆ. ಆದರೆ ಎಬಿವಿಪಿ ಮತ್ತು ಲೆಫ್ಟ್ ಹುಡುಗರು ಒಟ್ಟಿಗೆ ಕುಳಿತು ಚರ್ಚೆ ಮಾಡುವ ಆರೋಗ್ಯಕರ ಸಂವಾದವಿತ್ತು. ಗಲಾಟೆಗಳಾಗುತ್ತವೆ ಎನ್ನುವ ಭಯಕ್ಕೆ ಚುನಾವಣೆಯನ್ನೇ ರದ್ದು ಮಾಡಿದರೆ, ಅದು ಪ್ರಜಾಪ್ರಭುತ್ವದ ಧ್ವನಿಯನ್ನೇ ಅಡಗಿಸಿದಂತೆ, ಐಐಟಿಗಳಂತೆ ಅಥವಾ ನಿಗದಿತ ನೀತಿ-ನಿಯಮಗಳ ಚೌಕಟ್ಟಿನಲ್ಲಿ ಸ್ಪಷ್ಟ ನಿಯಮಗಳನ್ನು ತಂದು ಚುನಾವಣೆ ನಡೆಸುವ ಹೊಣೆ ಸರ್ಕಾರಕ್ಕಿದೆ. ಕ್ಯಾಂಪಸ್‌ಗಳು ನಾಯಕರನ್ನು ಬೆಳೆಸುವ ಕಾರ್ಖಾನೆಗಳು, ಆ ಕಾರ್ಖಾನೆಗೆ ಬೀಗ ಹಾಕುವ ಬದಲು, ಅಕ್ರಮಗಳನ್ನು ತಡೆದು ಪ್ರಜಾಪ್ರಭುತ್ವವನ್ನು ಉಳಿಸಬೇಕಾದ ಅನನಿವಾರ್ಯತೆ ಇದೆ.

PREV
Read more Articles on
click me!

Recommended Stories

Rain Alert; ರಾಜ್ಯದಲ್ಲಿ ಆರ್ಭಟಿಸಲಿದೆ ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆ; 12ಕ್ಕೂ ಹೆಚ್ಚು ರಾಜ್ಯಗಳಿಗೆ ಸೈಕ್ಲೋನ್ ಅಲರ್ಟ್!
‘ಬೆಂಗಳೂರು ಗೆದ್ದೇ ಬಿಟ್ಟಿದೆ ಅಂದುಕೊಂಡಿದ್ದೆ’... 19 ಕಿ.ಮೀ ಪ್ರಯಾಣಕ್ಕೆ 3 ಗಂಟೆ ತೆಗೆದುಕೊಂಡ ಮಹಿಳೆ