ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ 'ಸಾಹಸ್' ಜೊತೆಗೆ ಒಪ್ಪಂದ ಮಾಡಿಕೊಂಡ ದಕ್ಷಿಣ ನಗರ ಪಾಲಿಕೆ!

Published : Nov 20, 2026, 06:34 PM IST
Bengaluru Garbage Clean Sahas MoU

ಸಾರಾಂಶ

ಬೆಂಗಳೂರನ್ನು ಸ್ವಚ್ಛ ಮತ್ತು ಸುಸ್ಥಿರ ನಗರವನ್ನಾಗಿ ಮಾಡಲು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಸಾಹಸ್ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿದೆ. ಇದು ತ್ಯಾಜ್ಯ ನಿರ್ವಹಣೆ ಮತ್ತು ವಾರ್ಡ್ ಮಟ್ಟದ ಯೋಜನೆಗಳಿಗೆ ಸಹಾಯ ಮಾಡಲಿದೆ.

ಬೆಂಗಳೂರು: (ನ.20): ಬೆಂಗಳೂರನ್ನು ಮತ್ತಷ್ಟು ಸ್ವಚ್ಛ, ಸುಸ್ಥಿರ ಹಾಗೂ ಸಂಪನ್ಮೂಲ-ಸಮರ್ಥ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ (BSCC) ಮಹತ್ವದ ಹೆಜ್ಜೆಯಿಟ್ಟಿದೆ. ನಗರದ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಬಲಪಡಿಸುವ ಉದ್ದೇಶದಿಂದ ಪಾಲಿಕೆ ಹಾಗೂ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆ ‘ಸಾಹಸ್’ (Saahas) ನಡುವೆ ಇಂದು ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ಮತ್ತು ಸಾಹಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಶ್ರೀಮತಿ ಅರ್ಚನಾ ತ್ರಿಪಾಠಿ ಅವರು ಅಧಿಕೃತವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದರು. ನಗರದಾದ್ಯಂತ ಪಾಲಿಕೆಯ ತ್ಯಾಜ್ಯ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಸುಸ್ಥಿರ ತ್ಯಾಜ್ಯ ವಿಲೇವಾರಿ ಪದ್ಧತಿಗಳನ್ನು ಉತ್ತೇಜಿಸಲು ಈ ಸಹಭಾಗಿತ್ವ ಸಹಕಾರಿಯಾಗಲಿದೆ ಎಂದು ಆಯುಕ್ತ ಕೆ. ಎನ್. ರಮೇಶ್ ತಿಳಿಸಿದರು.

ಸಹಭಾಗಿತ್ವದ ಪ್ರಮುಖ ಕ್ಷೇತ್ರಗಳು ಯಾವುವು?

ಈ ಒಪ್ಪಂದದ ಅಡಿಯಲ್ಲಿ, ‘ಸಾಹಸ್’ ಸಂಸ್ಥೆಯು ಬೆಂಗಳೂರು ದಕ್ಷಿಣ ನಗರ ಪಾಲಿಕೆಗೆ ತಾಂತ್ರಿಕ ಸಲಹಾ ಮತ್ತು ಸಹಾಯಕ ಪಾಲುದಾರನಾಗಿ (Technical Advisory Partner) ಕಾರ್ಯನಿರ್ವಹಿಸಲಿದೆ. ಪ್ರಮುಖವಾಗಿ ಈ ಕೆಳಗಿನ ಕ್ಷೇತ್ರಗಳಲ್ಲಿ ತಾಂತ್ರಿಕ ಮಾರ್ಗದರ್ಶನ ಹಾಗೂ ಸಾಮರ್ಥ್ಯ ವೃದ್ಧಿಗೆ ಸಂಸ್ಥೆ ಬೆಂಬಲ ನೀಡಲಿದೆ:

- ಘನತ್ಯಾಜ್ಯ ನಿರ್ವಹಣೆ ಬಲವರ್ಧನೆ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA), ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (BSWML), ಗುತ್ತಿಗೆದಾರರು ಮತ್ತು ಇತರ ಪಾಲುದಾರರ ನಡುವೆ ಉತ್ತಮ ಸಮನ್ವಯ ಸಾಧಿಸುವ ಮೂಲಕ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ವ್ಯವಸ್ಥೆಯನ್ನು ಸುಧಾರಿಸಲಾಗುವುದು.

- ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ: ನಾಗರಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಜಿಬಿಎ (GBA) ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಕ್ಷೇತ್ರಮಟ್ಟದ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯ ಜ್ಞಾನ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ವಿಶೇಷ ತರಬೇತಿ ನೀಡಲಾಗುವುದು.

- ವಾರ್ಡ್ ಮಟ್ಟದ ಸೂಕ್ಷ್ಮ ಯೋಜನೆ: ಪರಿಣಾಮಕಾರಿ ಸೇವಾ ವಿತರಣೆಗಾಗಿ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ಗಳ ತ್ಯಾಜ್ಯ ನಿರ್ವಹಣಾ ಸೂಕ್ಷ್ಮ ಯೋಜನೆಗಳ (Micro-plans) ಪರಿಶೀಲನೆ ಮತ್ತು ಬಲವರ್ಧನೆ ಮಾಡಲಾಗುವುದು.

- ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP): ಕಾರ್ಯಾಚರಣೆಯ ಮಾರ್ಗಸೂಚಿಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (SOPs) ಅಭಿವೃದ್ಧಿಗೆ ಸಾಹಸ್ ಸಂಸ್ಥೆಯು ತಾಂತ್ರಿಕ ಬೆಂಬಲ ನೀಡಲಿದೆ.

- ನಾಗರಿಕರ ಸಹಭಾಗಿತ್ವ ಮತ್ತು ತಂತ್ರಜ್ಞಾನ: ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಉಪಕ್ರಮಗಳ ಮೂಲಕ ಮೂಲದಲ್ಲೇ ತ್ಯಾಜ್ಯ ವಿಂಗಡಣೆ ಮತ್ತು ಜವಾಬ್ದಾರಿಯುತ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸಲಾಗುವುದು. ಇದರೊಂದಿಗೆ ಜಿಪಿಎಸ್ (GPS) ಆಧಾರಿತ ವಾಹನ ಟ್ರ್ಯಾಕಿಂಗ್, ಡಿಜಿಟಲ್ ಮೇಲ್ವಿಚಾರಣೆ ಮತ್ತು ಗುತ್ತಿಗೆದಾರರ ಕಾರ್ಯಕ್ಷಮತೆಯ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳಲು ಯೋಜಿಸಲಾಗಿದೆ.

- ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ: ಸೇವಾ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಲು ಸೂಕ್ತ ಕಾರ್ಯಕ್ಷಮತೆ ಸೂಚಕಗಳು (KPIs), ವರದಿಗಾರಿಕೆ ಮತ್ತು ಪರಿಶೀಲನಾ ಚೌಕಟ್ಟುಗಳನ್ನು ಅಭಿವೃದ್ಧಿಪಡಿಸಲಾಗುವುದು.

ಸಂಪೂರ್ಣ ಶುಲ್ಕರಹಿತ ಸೇವೆ

ಈ ಒಪ್ಪಂದದ ವಿಶೇಷತೆಯೆಂದರೆ, ಇದೊಂದು ಸಂಪೂರ್ಣವಾಗಿ ಹಣಕಾಸು-ರಹಿತ ಮತ್ತು ಸಂಭಾವನೆ-ರಹಿತ (Non-financial & Non-remunerative) ಸಹಭಾಗಿತ್ವವಾಗಿದೆ. ಇದರ ಅಡಿಯಲ್ಲಿ ಸಾಹಸ್ ಸಂಸ್ಥೆಯು ಪಾಲಿಕೆಯಿಂದ ಯಾವುದೇ ವೃತ್ತಿಪರ ಶುಲ್ಕ, ಸಲಹಾ ಶುಲ್ಕ ಅಥವಾ ಮರುಪಾವತಿಯ ನಿರೀಕ್ಷೆಯಿಲ್ಲದೆ ಸ್ವಯಂಪ್ರೇರಿತವಾಗಿ ತಾಂತ್ರಿಕ ಸಲಹೆ ಮತ್ತು ಸಾಮರ್ಥ್ಯ ವೃದ್ಧಿ ಬೆಂಬಲವನ್ನು ನೀಡಲಿದೆ.

‘ಸಾಹಸ್’ ಸಂಸ್ಥೆಯ ಹಿನ್ನೆಲೆ ಮತ್ತು ಸಾಧನೆ ಏನು?2001ರಲ್ಲಿ ಸ್ಥಾಪನೆಯಾದ ‘ಸಾಹಸ್’ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ದೇಶದ 11 ರಾಜ್ಯಗಳು, 12 ನಗರಗಳು ಮತ್ತು 528 ಗ್ರಾಮ ಪಂಚಾಯಿತಿಗಳಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆ ಹಾಗೂ ವೃತ್ತಾಕಾರದ ಆರ್ಥಿಕತೆಯ (Circular Economy) ಪರಿಹಾರಗಳನ್ನು ಮುನ್ನಡೆಸುತ್ತಿದೆ. ಈಗಾಗಲೇ ಬೆಂಗಳೂರಿನ 21 ವಾರ್ಡ್‌ಗಳಲ್ಲಿ ಹಲವು ಯಶಸ್ವಿ ಯೋಜನೆಗಳನ್ನು ಸಂಸ್ಥೆಯು ಅನುಷ್ಠಾನಗೊಳಿಸಿದೆ. ವಿಶೇಷವಾಗಿ ಕೋರಮಂಗಲದಲ್ಲಿ ವಿಶೇಷ ತ್ಯಾಜ್ಯ ಸಂಗ್ರಹಣಾ ಕೇಂದ್ರವಾದ ‘ಕಸ ರಸ’ ಸ್ಥಾಪನೆ, ‘ಕಸ ಕಿಯೋಸ್ಕ್’ (Kasa Kiosk) ಮಾದರಿ ಪರಿಚಯ, ಕೋರಮಂಗಲದ ಬಯೋಮೆಥನೈಸೇಶನ್ ಘಟಕದ ಸಾಮರ್ಥ್ಯವನ್ನು ದಿನಕ್ಕೆ 4 ಟನ್‌ಗಳಿಂದ 8 ಟನ್‌ಗಳಿಗೆ ವಿಸ್ತರಿಸಿರುವುದು ಹಾಗೂ ಇ-ತ್ಯಾಜ್ಯ ಮತ್ತು ಬೃಹತ್ ತ್ಯಾಜ್ಯ ಸಂಗ್ರಹಣೆಯಲ್ಲಿ ಸಾಹಸ್ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ.

PREV
Read more Articles on
click me!

Recommended Stories

ಬೆಂಗಳೂರಿಗರೇ ಗಮನಿಸಿ: ನವೆಂಬರ್ 25ರಂದು ಇಡೀ ನಗರದಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ!
ಗಂಗಾ ಆಯ್ತು ಈಗ ಸಂಗಮ! ವಿಧಾನ ಸೌಧದ 3ನೇ ಮಹಡಿಯ 'ಸಮ್ಮೇಳನ ಸಭಾಂಗಣ' ಐತಿಹಾಸಿಕ ಹಿನ್ನೆಲೆ