
ಬೆಂಗಳೂರು: ಪಡಿತರ ಚೀಟಿದಾರರೊಬ್ಬರಿಂದ ಇ-ಕೆವೈಸಿ ಮಾಡಿಸಲು 500 ರು. ಪಡೆದ ಆರೋಪ ಹಾಗೂ ನ್ಯಾಯಬೆಲೆ ಅಂಗಡಿಯ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಲಯದ ಚಂದ್ರಪ್ಪನಗರ ಆರ್‌ಸಿಎಚ್‌ಎಸ್‌ನ ನ್ಯಾಯಬೆಲೆ ಅಂಗಡಿಯ (ಬಿಎಲ್‌ಎಸ್-272) ಪರವಾನಗಿಯನ್ನು ಆಹಾರ ಇಲಾಖೆ ರದ್ದುಗೊಳಿಸಿದೆ.
ಸದರಿ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿಯು ಪಡಿತರ ಚೀಟಿದಾರರಾದ ಬಸವರಾಜಸ್ವಾಮಿ ಎಂಬುವವರ ಇ-ಕೆವೈಸಿ ಮಾಡಲು 500 ರು.ಗಳನ್ನು ಫೋನ್- ಪೇ ಮೂಲಕ ಪಡೆದುಕೊಂಡಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಣ ಪಡೆದಿರುವ ಆರೋಪ ದೃಢಪಟ್ಟಿತ್ತು.
ಪರಿಶೀಲನೆ ವೇಳೆ ದರಪಟ್ಟಿ, ದಾಸ್ತಾನು ಫಲಕ ಆಹಾರ ಧಾನ್ಯಗಳ ಮಾದರಿಗಳನ್ನು ಪ್ರದರ್ಶಿಸಿರಲಿಲ್ಲ. ತನಿಖಾ ಪುಸ್ತಕ ಇಟ್ಟಿರಲಿಲ್ಲ. ಅಂಗಡಿ ಮಳಿಗೆಯಲ್ಲಿ ಸ್ವಚ್ಛತೆ ಕಾಪಾಡಿರಲಿಲ್ಲ. ಸುಮಾರು 3.75 ಕ್ವಿಂಟಲ್ ರಾಗಿ ದಾಸ್ತಾನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿರಲಿಲ್ಲ. ಅಂಗಡಿಯ ಸೀಲ್ ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸಿರಲಿಲ್ಲ ಎಂಬುದು ಪತ್ತೆಯಾಗಿತ್ತು.
ಈ ಕುರಿತು ಕಾರಣ ಕೇಳಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಆದರೆ, ನ್ಯಾಯಬೆಲೆ ಅಂಗಡಿಯಿಂದ ಸಮರ್ಪಕ ಲಿಖಿತ ಸಮಜಾಯಿಷಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ, ನಿಯಮಗಳಡಿ ವಿಚಾರಣೆ ಕಾಯ್ದಿರಿಸಿ, ನ್ಯಾಯಬೆಲೆ ಅಂಗಡಿ ಪರವಾನಿಗೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.
ಇ- ಕೆವೈಸಿ ಮಾಡಿಕೊಡಲು ಪಡಿತರ ಚೀಟಿದಾರರಿಂದ ನ್ಯಾಯಬೆಲೆ ಅಂಗಡಿಯವರು ಹಣ ಪಡೆಯುತ್ತಿರುವ ಆರೋಪಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಇಂತಹ ದೂರುಗಳು ಬಂದರೆ ತಕ್ಣಣವೇ ಅಂತಹ ಅಂಗಡಿಗಳ ಪರವಾನಿಗೆ ರದುಪಡಿಸಲಾಗುವುದು. ಜೊತೆಗೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.