
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣ ಸೇರಿದಂತೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ವೈಯಕ್ತಿಕ, ಖಾಸಗಿ, ಹಣಕಾಸು ಮತ್ತು ನಿಭಾಯಿಸುತ್ತಿರುವ ಕಾನೂನು ಸಮಸ್ಯೆಗಳ ಬಗ್ಗೆ ಯಾವುದೇ ಸುಳ್ಳು ಹಾಗೂ ಮಾನಹಾನಿಕಾರ ಹೇಳಿಕೆಗಳನ್ನು ನೀಡದಂತೆ ನಟ ಧನ್ವೀರ್ ವಿರುದ್ಧ ಪ್ರತಿಬಂಧಕ ಆದೇಶ ಹೊರಡಿಸಬೇಕು ಎಂದು ಕೋರಿ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅಕ್ಟೋಬರ್ 29ರಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ವಿಜಯಲಕ್ಷ್ಮಿ ಮತ್ತು ಅವರ ಕುಟುಂಬದ ವಿರುದ್ದ ಯಾವುದೇ ಹೇಳಿಕೆ ನೀಡಬಾರದು ಎಂದು ನಟ ಧನ್ವೀರ್ ವಿರುದ್ಧ ಪ್ರತಿಬಂಧಕಾಜ್ಞೆ ನೀಡಿದೆ. 12ನೇ ಸಿಸಿಹೆಚ್ ಸಿಸಿಹೆಚ್ ಕೋರ್ಟ್ ನಿಂದ ಆದೇಶ ಹೊರಬಿದ್ದಿದ್ದು, ರೇಣುಕಾಸ್ವಾಮಿ ಪ್ರಕರಣದ ಸಂಬಂದವೂ ಯಾವುದೇ ಹೇಳಿಕೆ ನೀಡುವಂತಿಲ್ಲ. ಮಾಧ್ಯಮ ಸೇರಿದಂತೆ ಎಲ್ಲಿಯೂ ವಿವಾದಾತ್ಮಕ ಹೇಳಿಕೆ ನೀಡದಂತೆ ಆದೇಶ ಹೊರಡಿಸಿದೆ. ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ಅರ್ಜಿ ಸಲ್ಲಿಸಿ ವಾದಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದ ನಂತರ ದರ್ಶನ್ ಎದುರಿಸುತ್ತಿರುವ ಕಾನೂನು ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದ್ದರು. ಅದನ್ನು ನಂಬಿ ಆರಂಭದಲ್ಲಿ ಧನ್ವೀರ್ ಮೇಲೆ ದರ್ಶನ್ ದಂಪತಿ ವಿಶ್ವಾಸ ಇಟ್ಟಿದ್ದರು. ಆದರೆ, ವಿಶ್ವಾಸ ಬೆಳೆಸಿಕೊಂಡ ನಂತರ ಧನ್ವೀರ್ ತಮ್ಮ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ವಂಚನೆ ಮತ್ತು ಬೆನ್ನಿಗೆ ಚೂರಿ ಹಾಕಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಅವರು ದರ್ಶನ್ ಎದುರಿಸುತ್ತಿರುವ ಕಾನೂನು ಸಮಸ್ಯೆಗಳನ್ನು ನೋಡಿಕೊಂಡರು ಎಂದು ದಾವೆಯಲ್ಲಿ ವಿವರಿಸಲಾಗಿತ್ತು.
ನಂತರ 2026ರ ಅ.10 ಅಥವಾ ಆ ದಿನ ಆಸುಪಾಸಿನಲ್ಲಿ ವಿವಿಧ ಸುದ್ದಿವಾಹಿನಿ, ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಧನ್ವೀರ್ ಹೇಳಿಕೆ ನೀಡಿ, ದರ್ಶನ್ ಅವರನ್ನು ಜೈಲಿನಿಂದ ಹೊರ ಕರೆತರಲು ವಿಜಯಲಕ್ಷ್ಮೀ ಅವರಿಗೆ ಇಷ್ಟವಿಲ್ಲ. ದರ್ಶನ್ ಶಾಶ್ವತವಾಗಿ ಜೈಲಿನಲ್ಲಿ ಸೊರಗಬೇಕು ಎಂದು ಬಯಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಪ್ರದೂಷ್ ರಾವ್ ಅವರನ್ನು ವಿಜಯಲಕ್ಷ್ಮೀ ಮನವೊಲಿಸಿದ್ದಾರೆ ಮತ್ತು ಆತನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ದ್ವೇಷಪೂರಿತ, ಮಾನಹಾನಿಕಾರಕ, ಆಧಾರರಹಿತ ಮತ್ತು ಸುಳ್ಳು ಹೇಳಿಕೆ ನೀಡಿದ್ದಾರೆ. ಇದು ಆಘಾತ ತರಿಸಿದೆ. ದರ್ಶನ್ ಮತ್ತು ಅವರ ಕುಟುಂಬದಲ್ಲಿ ಅವಿಶ್ವಾಸ ಮತ್ತು ಭಿನ್ನಾಭಿಪ್ರಾಯ ಮೂಡಿಸಬೇಕು ಎಂಬ ದುರುದ್ದೇಶದಿಂದಲೇ ಧನ್ವೀರ್ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ತಮ್ಮ ಮಾನಹಾನಿಯಾಗುತ್ತಿದೆ ಎಂದು ದರ್ಶನ್ ಮತ್ತು ವಿಜಯಲಕ್ಷ್ಮೀ ದಾವೆಯಲ್ಲಿ ಆಕ್ಷೇಪಿಸಿದ್ದರು.
ಇದರಿಂದ ಧನ್ವೀರ್, ಅವರ ಏಜೆಂಟ್, ಪ್ರತಿನಿಧಿಗಳು, ಕೆಲಸಗಾರರು, ಬೆಂಬಲಿಗರು ಅಥವಾ ಅವರ ಮೂಲಕ ಇಲ್ಲವೇ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುವ ಅಥವಾ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಯಾಗಲಿ, ಪತ್ರಿಕೆ, ಟಿವಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಮೂಲಕ ತಮ್ಮ ಹಾಗೂ ತಮ್ಮ ವೈಯಕ್ತಿಕ, ಖಾಸಗಿ, ವೈವಾಹಿಕ, ಕುಟುಂಬ ಸದಸ್ಯರು, ಹಣಕಾಸು ಮತ್ತು ಕಾನೂನು ಅಥವಾ ರೇಣುಕಾಸ್ವಾಮಿ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಬಾರದು. ಆ ಹೇಳಿಕೆಗಳನ್ನು ಪ್ರಸಾರ ಮಾಡಬಾರದು ಹಾಗೂ ಸಂದರ್ಶನ ನೀಡಬಾರದು ಎಂಬುದಾಗಿ ಪ್ರತಿಬಂಧಕ ಆದೇಶ ಮಾಡಬೇಕು ಎಂದು ದರ್ಶನ್ ಮತ್ತು ವಿಜಯಲಕ್ಷ್ಮೀ ದಾವೆಯಲ್ಲಿ ಕೋರಿದ್ದರು. ಇದಕ್ಕೆ ಬುಧವಾರ ಅಂದರೆ ಅಕ್ಟೋಬರ್ 30 ರಂದು ಕೋರ್ಟ್ ನಿಷೇಧ ತಂದಿದೆ.