ಡಿ ಬಾಸ್ ಗ್ಯಾಂಗ್‌ನಲ್ಲಿ ಮತ್ತೆ ಬಿರುಕು, ದರ್ಶನ್‌ ನಿಂದ ದೂರವಾಗಲು ನಿರ್ಧರಿಸಿದ A-6 ಮತ್ತು A-7 ಆರೋಪಿಗಳು!

Published : Sep 03, 2026, 01:08 PM IST
anukumar and jagadeesh

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಬಂಧಿತರಾಗಿರುವ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್, ತಮ್ಮನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದು ದರ್ಶನ್ ಬಳಗದಿಂದ ದೂರ ಸರಿಯುವ ಯತ್ನ ಎನ್ನಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಪ್ರಕರಣದಲ್ಲಿ ನಟ ದರ್ಶನ್ ಅವರೊಂದಿಗೆ ಬಂಧಿತರಾಗಿರುವ ಎ-5 ಜಗದೀಶ್ ಮತ್ತು ಎ-6 ಅನುಕುಮಾರ್ ಅವರು ನಟ ದರ್ಶನ್ ಪಡೆಯಿಂದ ದೂರ ಸರಿಯುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ತಮ್ಮನ್ನು ಚಿತ್ರದುರ್ಗದ ಜಿಲ್ಲಾ ಜೈಲಿಗೆ ವರ್ಗಾಯಿಸುವಂತೆ ಕೋರಿ ಇಬ್ಬರೂ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜೈಲು ಅಧಿಕಾರಿಗಳ ಮೌನ, ಕೋರ್ಟ್ ಮೆಟ್ಟಿಲೇರಿದ ಆರೋಪಿಗಳು

ಚಿತ್ರದುರ್ಗ ಮೂಲದವರಾದ ಆರೋಪಿ ಜಗದೀಶ್ (A-6) ಹಾಗೂ ಅನುಕುಮಾರ್ (A-7), ತಮ್ಮನ್ನು ಸ್ವಂತ ಜಿಲ್ಲೆಯಾದ ಚಿತ್ರದುರ್ಗದ ಕಾರಾಗೃಹಕ್ಕೆ ವರ್ಗಾಯಿಸುವಂತೆ ಈ ಹಿಂದೆಯೂ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಆರೋಪಿಗಳು ಸಲ್ಲಿಸಿದ್ದ ಅರ್ಜಿಗೆ ಜೈಲು ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮ ತೆಗೆದುಕೊಂಡಿರಲಿಲ್ಲ. ಇದರಿಂದಾಗಿ, ತಮ್ಮ ವರ್ಗಾವಣೆ ಅರ್ಜಿಯನ್ನು ಪುರಸ್ಕರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

59ನೇ ಸಿಸಿಎಚ್ ನ್ಯಾಯಾಲಯದ ಮಹತ್ವದ ಆದೇಶ

ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಎಚ್ (CCH) ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆರೋಪಿಗಳು ಸಲ್ಲಿಸಿರುವ ಅರ್ಜಿಯ ಅನ್ವಯ ನಿಯಮಾನುಸಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಮತ್ತು ಈ ಮನವಿಯನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು ಎಂದು ಆದೇಶಿಸಿದೆ. ಅಷ್ಟೇ ಅಲ್ಲದೆ, ಅರ್ಜಿಯನ್ನು ಇತ್ಯರ್ಥಪಡಿಸಿದ ಬಳಿಕ ಆ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಜೈಲು ಆಡಳಿತಕ್ಕೆ ನಿರ್ದೇಶಿಸಿದೆ.

ದರ್ಶನ್ ಜಾಲದಿಂದ ದೂರವಾಗುವ ಯತ್ನ?

ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಅವರಿಂದ ತಮ್ಮನ್ನು ಕಾಯ್ದುಕೊಳ್ಳಲು ಹಾಗೂ ವಿಚಾರಣೆಯ ಅವಧಿಯಲ್ಲಿ ತಮ್ಮ ತವರು ಜಿಲ್ಲೆಯಲ್ಲೇ ಇರಲು ಈ ಇಬ್ಬರೂ ಆರೋಪಿಗಳು ಬಯಸುತ್ತಿದ್ದಾರೆ ಎಂಬುದು ಈ ನಡೆಯಿಂದ ವ್ಯಕ್ತವಾಗುತ್ತಿದೆ. ನ್ಯಾಯಾಲಯದ ಪ್ರಸ್ತುತ ಆದೇಶದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದು, A-6 ಮತ್ತು A-7 ಆರೋಪಿಗಳು ಚಿತ್ರದುರ್ಗ ಜೈಲಿಗೆ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಪ್ರದೂಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ್ದ ದರ್ಶನ್‌ ಅರ್ಜಿ: 7ಕ್ಕೆ ಹೈ ತೀರ್ಪು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಸಾಕ್ಷಿಯಾಗಿದ್ದ ಪ್ರದೂಷ್‌ ಎಸ್‌.ರಾವ್‌ ಅನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ನಗರದ 59ನೇ ಸಿಟಿ ಸಿವಿಲ್‌ ತಮ್ಮ ಸೆಷನ್ಸ್ ಕೋರ್ಟ್‌ ಆದೇಶ ರದ್ದು ಕೋರಿ ನಟ ದರ್ಶನ್‌ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಸೆ.7ರಂದು ಪ್ರಕಟಿಸುವುದಾಗಿ ಹೈಕೋರ್ಟ್‌ ತಿಳಿಸಿದೆ. ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯವು ಪ್ರದೂಷ್‌ ಸಾಕ್ಷ್ಯವನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡಿದೆ.

ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್‌ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಬುಧವಾರ ಬೆಳಗ್ಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ಬುಧವಾರ ಕಲಾಪ ಆರಂಭವಾದ ನಂತರ, ‘ಇಂದು ಸಾಕಷ್ಟು ಅರ್ಜಿಗಳ ವಿಚಾರಣೆ ನಿಗದಿಯಾಗಿವೆ. ಇದರಿಂದ ದಿನದ ಕಲಾಪದ ಕೊನೆಯಲ್ಲಿ ಅರ್ಜಿಯ ಕುರಿತ ಆದೇಶದ ಉಕ್ತಲೇಖನ ನೀಡುತ್ತೇನೆ’ ಎಂದು ದರ್ಶನ್‌ ಪರ ವಕೀಲರಿಗೆ ನ್ಯಾಯಮೂರ್ತಿಗಳು ತಿಳಿಸಿದರು.

ಆದರೆ, ರಾತ್ರಿ 8 ಗಂಟೆಗೆ ದಿನದ ಕಲಾಪ ಮುಕ್ತಾಯವಾಯಿತು. ಆಗ ನ್ಯಾಯಮೂರ್ತಿಗಳು, ‘ಈಗಾಗಲೇ 8 ಗಂಟೆಯಾಗಿದೆ. ಆದೇಶದ ಉಕ್ತಲೇಖನ ನೀಡಲು ಸಾಧ್ಯವೇ?’ ಎಂದು ದರ್ಶನ್‌ ಪರ ವಕೀಲರನ್ನು ಕೇಳಿದರು.

ದರ್ಶನ್‌ ಪರ ವಕೀಲರು, ‘ಬೇರೊಂದು ದಿನ ಆದೇಶ ನೀಡಬೇಕು’ ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, ‘ಸೆ.7ರಂದು ಅರ್ಜಿ ಕುರಿತ ಆದೇಶ ಪ್ರಕಟಿಸುತ್ತೇನೆ’ ಎಂದು ತಿಳಿಸಿದರು. ಅಲ್ಲದೆ, ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯವು ಪ್ರದೂಷ್‌ ಸಾಕ್ಷ್ಯವನ್ನು ದಾಖಲಿಸುವ ಪ್ರಕ್ರಿಯೆ ಮುಂದೂಡಿ, ರಾತ್ರಿ 8 ಗಂಟೆ 7 ನಿಮಿಷಕ್ಕೆ ದಿನದ ಕಲಾಪ ಮುಕ್ತಾಯಗೊಳಿಸಿದರು.

PREV
Read more Articles on
click me!

Recommended Stories

Indian Railways: ಕಡಿಮೆ ದರದಲ್ಲಿ ಎಸಿ ಕೋಚ್‌ಗಳು! ಗರೀಬ್ ರಥ್ ಇಷ್ಟೊಂದು ಜನಪ್ರಿಯವಾಗಲು ಕಾರಣವೇನು? ರೈಲ್ವೆಯ ಮಾಸ್ಟರ್ ಪ್ಲಾನ್ ಇಲ್ಲಿದೆ!
ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಬಗ್ಗೆ ಹೊರಬಿತ್ತು ಅಚ್ಚರಿಯ ಸುದ್ದಿ