
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ‘ಓಝೋನ್ ಅರ್ಬಾನಾ’ ಟೌನ್‌ಶಿಪ್ ಅಭಿವೃದ್ಧಿಪಡಿಸುವುದಾಗಿ ಹೇಳಿ ಬಹುಕೋಟಿ ಮೊತ್ತದ ಹಣ ಸಂಗ್ರಹಿಸಿ ವಂಚಿಸಿದ ಆರೋಪ ಸಂಬಂಧ ‘ಓಝೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಾಸುದೇವನ್ ಸತ್ಯಮೂರ್ತಿ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿ ನ್ಯಾ। ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ. ಆದರೆ, ಕಂಪನಿ ವಿರುದ್ಧ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004ರ (ಕೆಪಿಐಡಿ) ಅಡಿಯಲ್ಲಿ ಪ್ರಕರಣವನ್ನು ಮುಂದುವರಿಸುವ ಪ್ರಕ್ರಿಯೆಯನ್ನು ರದ್ದುಪಡಿಸಿದೆ.
‘ಓಝೋನ್ ಅರ್ಬಾನಾ’ ಟೌನ್‌ಶಿಪ್ ಅಭಿವೃದ್ಧಿಪಡಿಸಿ ಕಂಪನಿಯು ನಮಗೆ 2015-16ರಲ್ಲೇ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಬೇಕಿತ್ತು. ಆದರೆ, ಕಂಪನಿ ತನ್ನ ಯೋಜನೆ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡಿದೆ ಎಂದು 180ಕ್ಕೂ ಹೆಚ್ಚು ಖರೀದಿದಾರರು ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2019ರಲ್ಲೇ ದೂರು ದಾಖಲಿಸಿದ್ದರು. ಈ ಮಧ್ಯೆ 2025ರ ಅ.4ರಂದು ಪಿಎಂಎಲ್‌ಎ ಅಡಿ ಇ.ಡಿ. ಪ್ರಕರಣ ದಾಖಲಿಸಿತ್ತು. ಅದನ್ನು ರದ್ದುಪಡಿಸಲು ಕೋರಿ ಕಂಪನಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ತಿರಸ್ಕರಿಸಿರುವ ಪೀಠ, ಹಣ ಡೆವಲಪರ್‌ಗೆ ತಲುಪಿದರೂ, ಖರೀದಿದಾರ ಪಾಲಿಗೆ ಮನೆಯ ಬಾಗಿಲು ಇನ್ನೂ ತೆರೆದೇ ಇಲ್ಲ. ದೂರುದಾರರ ಬಳಿ ಈಗ ಕೇವಲ ಇಎಂಐ ಹೊರೆ ಮಾತ್ರವೇ ಉಳಿದಿದೆ. ತನಿಖೆಯ ವೇಳೆ ಇ.ಡಿ., ಕಂಪನಿಗೆ ಸೇರಿದ 423.38 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಿದೆ. ದೊಡ್ಡ ಪ್ರಮಾಣದ ಹಣಕಾಸು ವ್ಯವಹಾರಗಳು ಮತ್ತು ಮನೆ ಖರೀದಿದಾರರ ಹಕ್ಕುಗಳಿಗೆ ಸಂಬಂಧಿಸಿದ ಆರೋಪಗಳಿರುವ ಸಂದರ್ಭದಲ್ಲಿ ತನಿಖೆಯನ್ನು ಪ್ರಾರಂಭಿಕ ಹಂತದಲ್ಲಿಯೇ ತಡೆಯುವುದು ಸೂಕ್ತವಲ್ಲ ಎಂದಿದೆ.
ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಒಪ್ಪಂದದಂತೆ 2015-16ರ ವೇಳೆಗೆ ಯೋಜನೆಯನ್ನು ಸಂಪೂರ್ಣವಾಗಿ ಮುಗಿಸಿ ಫ್ಲ್ಯಾಟ್‌ಗಳನ್ನು ಖರೀದಿದಾರರಿಗೆ ಹಸ್ತಾಂತರಿಸಬೇಕಿತ್ತು. ಆದರೆ, ಕಂಪನಿಯು ಉದ್ದೇಶಪೂರ್ವಕವಾಗಿ ಯೋಜನೆಯನ್ನು ವಿಳಂಬಗೊಳಿಸಿ ಫ್ಲ್ಯಾಟ್‌ಗಳ ಸ್ವಾಧೀನ ನೀಡದೆ ಮೋಸ ಮಾಡಿದೆ ಎಂದು ಆರೋಪಿಸಿ 180ಕ್ಕೂ ಹೆಚ್ಚು ನೊಂದ ಖರೀದಿದಾರರು 2019ರಲ್ಲೇ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದರು.
ಸಂತ್ರಸ್ತ ಖರೀದಿದಾರರ ದೂರುಗಳನ್ನಾಧರಿಸಿ, ಭಾರತೀಯ ದಂಡ ಸಂಹಿತೆ–1860ರ (IPC) ಕಲಂ 419 (ಆಳುಮಾರಾಟ/ವಂಚನೆ), 420 (ನಂಬಿಕೆದ್ರೋಹ ಹಾಗೂ ವಂಚನೆ) ಮತ್ತು 120ಬಿ (ಅಪರಾಧಿಕ ಸಂಚು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಕಂಪನಿಯ ಸಿಇಒ ಶ್ರೀನಿವಾಸ ಗೋಪಾಲನ್, ನಿರ್ದೇಶಕರುಗಳಾದ ವಾಸುದೇವನ್ ಸತ್ಯಮೂರ್ತಿ, ಪ್ರಿಯಾ ವಾಸುದೇವನ್, ರಾಜೀವ್ ಭಂಡಾರಿ, ಶಿವುಸಾಗರ್ ನೇಮಿಚನ್, ದರ್ಬುಕುಲ ವಂಶಿ, ಎಸ್. ಭಾಸ್ಕರನ್, ಗ್ರೇಟಾ ಹಾಗೂ ಹೆಚ್ಡಿಎಫ್ಸಿ (HDFC) ಬ್ಯಾಂಕ್‌ನ ಅಧಿಕಾರಿಗಳ ವಿರುದ್ಧ ಪೊಲೀಸ್ ಎಫ್‌ಐಆರ್ ದಾಖಲಾಗಿದೆ.
ಖರೀದಿದಾರರಿಂದ ಸಂಗ್ರಹಿಸಿದ ಹಣದ ದುರ್ಬಳಕೆ ಹಾಗೂ ಅಕ್ರಮ ಹಣ ವರ್ಗಾವಣೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಜಾರಿ ನಿರ್ದೇಶನಾಲಯವು (ED) ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದೆ. 2025ರ ಅಕ್ಟೋಬರ್ 4ರಂದು 'ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ–2002'ರ (PMLA) ಅಡಿಯಲ್ಲಿ ಇಸಿಐಆರ್ (ECIR) ದಾಖಲಿಸಿಕೊಂಡು ಇ.ಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.