
ಬೆಂಗಳೂರು [ಅ.13]: ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯದಲ್ಲಿರುವ ಮೆಡಿಕಲ್ ಕಾಲೇಜುಗಳ ಗ್ರಂಥಿ ವಿಭಾಗಗಳ ವಿದ್ಯಾರ್ಥಿಗಳು ಗ್ರಾಮೀಣ ಭಾಗಗಳಲ್ಲಿ ಶಿಬಿರ ಹಮ್ಮಿಕೊಂಡು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸುವುದಾಗಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಹೇಳಿದರು.
ಅಸೋಸಿಯೇಷನ್ ಆಫ್ ಗೈನಕಾಲಜಿಕ್ ಆಂಕಲಾಜಿಸ್ಟ್ ಆಫ್ ಇಂಡಿಯಾ ಕರ್ನಾಟಕ ಚಾಪ್ಟರ್ ವತಿಯಿಂದ ಶನಿವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಎಂಟನೇ ವಾರ್ಷಿಕ ಸಮ್ಮೇಳನ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ದೇಶದಲ್ಲಿ ಕ್ಯಾನ್ಸರ್ ಪ್ರಮುಖ ಸಮಸ್ಯೆಯಾಗಿದೆ. ಅದರಲ್ಲೂ ಮಹಿಳೆಯರು ಸ್ತನ, ಬಾಯಿ, ಯೋನಿ ಸೇರಿದಂತೆ ನಾನಾ ಬಗೆಯ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪ್ರತಿ ಏಳು ನಿಮಿಷಕ್ಕೆ ಓರ್ವ ಕ್ಯಾನ್ಸರ್ ಪೀಡಿತ ವ್ಯಕ್ತಿ ಮೃತಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕ್ಯಾನ್ಸರ್ ಚಿಕಿತ್ಸೆಗೆ ದುಬಾರಿ ಹಣ ಖರ್ಚಾಗುತ್ತದೆ. ಹಾಗಾಗಿ ಆರಂಭಿಕ ಹಂತದಲ್ಲೇ ಈ ಕಾಯಿಲೆ ಪತ್ತೆ ಮಾಡಿ ಅಗತ್ಯ ಚಿಕಿತ್ಸೆ ನೀಡುವ ಅಗತ್ಯವಿದೆ. ದೇಶದಲ್ಲಿ ಕ್ಯಾನ್ಸರ್ ಕಾಯಿಲೆ ಪತ್ತೆಗೆ ಅತ್ಯಾಧುನಿಕ ಪರೀಕ್ಷಾ ಉಪಕರಣಗಳು ಬಂದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳನ್ನು ನೀಡುತ್ತಿವೆ. ಇವುಗಳನ್ನು ಬಳಸಿಕೊಂಡು ಬೇರು ಮಟ್ಟದಲ್ಲೇ ಕ್ಯಾನ್ಸರ್ ನಿರ್ಮೂಲನೆಗೆ ಪಣ ತೊಡುವ ಅಗತ್ಯವಿದೆ. ಪ್ರಮುಖವಾಗಿ ಗ್ರಾಮೀಣ ಭಾಗದ ಜನರಿಗೆ ಕ್ಯಾನ್ಸರ್ ಹಾಗೂ ಕ್ಯಾನ್ಸರ್ ಪತ್ತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಸೋಸಿಯೇಷನ್ ಆಫ್ ಗೈನಕಾಲಜಿಕ್ ಆಂಕಲಾಜಿಸ್ಟ್ ಆಫ್ ಇಂಡಿಯಾದ ಅಧ್ಯಕ್ಷೆ ಡಾ.ಶಾಲಿನಿ ರಾಜಾರಾಂ ಮಾತನಾಡಿ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅದರಲ್ಲೂ ಮಹಿಳೆಯರ ಯೋನಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಲಿವೆ ಎಚ್ಚರಿಸಿದೆ. ಹಾಗಾಗಿ ಆರಂಭಿಕ ಹಂತದಲ್ಲೇ ಈ ಕ್ಯಾನ್ಸರ್ ಪತ್ತೆ ಹಚ್ಚಿ ಅಗತ್ಯ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಮೊದಲಿಗೆ ಈ ರೋಗದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ತುರ್ತಾಗಿದೆ ಎಂದರು.
ರಾಜೀವ್ ಗಾಂಧಿ ಆರೋಗ್ಯ ವಿವಿಯ ಕುಲಸಚಿವ ಶಿವಾನಂದ ಕಾಪಸಿ, ಅಸೋಸಿಯೇಷನ್ ಕರ್ನಾಟಕ ಚಾಪ್ಟರ್ ಅಧ್ಯಕ್ಷೆ ಡಾ.ಎಸ್.ಇಂದುಕಲಾ, ಗೌರವ ಕಾರ್ಯದರ್ಶಿ ಡಾ.ಟಿ.ಎಸ್.ಪ್ರೇಮಲತಾ ಮತ್ತಿತರರು ಉಪಸ್ಥಿತರಿದ್ದರು.