
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ಹಾಗೂ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಯ ಹಿನ್ನೆಲೆಯಲ್ಲಿ, ಮೆಟ್ರೋ ಯೋಜನೆಯ ಅನುದಾನ ಹಂಚಿಕೆ ಮತ್ತು ಕ್ರೆಡಿಟ್ ಕುರಿತು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಸರ್ಕಾರದ ವಿರುದ್ಧ ನೀಡಿರುವ ಆರೋಪಗಳಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದು, ರಾಜ್ಯ ಸರ್ಕಾರಕ್ಕೆ ಅಂಕಿ ಅಂಶದ ವಿವರಣೆ ನೀಡಿದ್ದಾರೆ.
ಮೂರ್ನಾಲ್ಕು ದಿನದಿಂದ ಸಿಎಂ ಡಿಕೆಶಿ, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಾ ಬೈರೇಗೌಡ ಅವರು ಬೆಂಗಳೂರು ಮೆಟ್ರೋ ವಿಚಾರವಾಗಿ ಆರೋಪ ಮಾಡಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿ ಈ ಸುದ್ದಿಗೋಷ್ಟಿ. ಕೇಂದ್ರ ಸರ್ಕಾರ 60% 40% ಎಷ್ಟು ಕೊಡ್ತಿದೆ ಅನ್ನೋದು ಮುಖ್ಯ ಅಲ್ಲ. ಸಿಎಂ ಡಿಕೆಶಿ ಅವರಾಗಲಿ, ಕೃಷ್ಣಾ ಬೈರೇಗೌಡ ಆಗಲಿ ಅವರ ಜೇಬಿಂದ ಕೊಡಲ್ಲ. ಜನಸಾಮಾನ್ಯರ ತೆರಿಗೆಯಿಂದ ಅಭಿವೃದ್ಧಿ ಯೋಜನೆ ಅಗುವುದು. ತೆರಿಗೆ ಯಾವ ರೀತಿ ಬಳಕೆ ಆಗ್ತಿದೆ ಅಂತ ತಿಳಿದುಕೊಳ್ಳುವ ಹಕ್ಕು ಜನರಿಗಿದೆ. BMRCL, ಕೇಂದ್ರ ಮತ್ತು ರಾಜ್ಯದ ಸರ್ಕಾರದ 50- 50 ಪಾಲುದಾರಿಕೆ ಇದೆ. ಇಂಟರ್ನ್ಯಾಷನಲ್ ಲೋನ್ ಗಳ ಮೂಲಕ ಕೂಡ BMRCL ಯೋಜನೆ ಆಗುತ್ತೆ. ಲೋನ್ ಗಳ ಮೂಲಕ ಮೆಟ್ರೋ ಯೋಜನೆ ಮಾಡ್ತಾರೆ ಎಂದು ಈ ಹಿಂದೆ ಕೃಷ್ಣಬೈರೇಗೌಡ ಮಾತನಾಡಿದ ವಿಡಿಯೋ ಪ್ಲೇ ಮಾಡಿದ ತೇಜಸ್ವಿ ಸೂರ್ಯ ಬಳಿಕ ವಿವರಣೆ ನೀಡಿದರು.
ಎರಡು ಕ್ಲೈಮ್ ಬಗ್ಗೆಯೂ ನಾನು ಹೇಳ್ತಿನಿ. 84% ರಾಜ್ಯ ಸರ್ಕಾರ ಕೊಡ್ತಿದೆ. 16% ಕೇಂದ್ರ ಕೊಡ್ತಿದೆ ಅಂತ ಹೇಳಿದ್ದಾರೆ. ಕೇಂದ್ರ ಸರ್ಕಾರ ಕೊಡಿಸ್ತಿರೋ ಲೋನ್ ಕೇಂದ್ರ ಕಾಲಮ್ ನಲ್ಲಿ ಹಾಕೋ ಬದಲು ರಾಜ್ಯ ಸರ್ಕಾರ ಕಾಲಂನಲ್ಲಿ ಹಾಕಿದ್ದಾರೆ. ಸಾಲ ತೀರಿಸೋದು BMRCL. ಲೋನ್ಗೆ ಗ್ಯಾರಂಟಿ ಕೊಟ್ಟಿರೋದು ಕೇಂದ್ರ ಸರ್ಕಾರ. ಇದರಲ್ಲಿ ರಾಜ್ಯದ ಪಾಲು ಎಲ್ಲಿದೆ. ಸಿಎಂ ಮತ್ತು ಸಚಿವರು ಮಿಸ್ ಗೈಡ್ ಮಾಡಿ ರಾಜ್ಯದ ಜನತೆ ಸುಳ್ಳು ಹೇಳಿದ್ದಾರೆ. ಸಂವಿಧಾನ ಮೇಲೆ ಪ್ರಮಾಣ ಮಾಡಿ ಈ ರೀತಿ ಸುಳ್ಳು ಹೇಳೋದು ಸರಿಯಲ್ಲ. 28,958ಕೋಟಿ ವಿದೇಶ ಬ್ಯಾಂಕ್ಗಳಿಂದ ಸಾಲ ಬಂದಿರೋದು. ಈ ಹಣ ನೇರವಾಗಿ BMRCLಗೆ ಹೋಗುತ್ತೆ. ಈ ಪ್ರಕಾರ ಕೇಂದ್ರದ್ದು 54%, ರಾಜ್ಯ ಸರ್ಕಾರರದ್ದು 46% ಆಗುತ್ತೆ. 77,891 ಕೋಟಿ ಒಟ್ಟು ಪ್ರಾಜೆಕ್ಟ್ ಕಾಸ್ಟ್. ಕೇಂದ್ರ ಸರ್ಕಾರದ ಒಟ್ಟು ಅನುದಾನ ಸಾಲ ಸೇರಿಸಿ 41,558 ಕೋಟಿ. ರಾಜ್ಯ ಸರ್ಕಾರದ್ದು 36,333 ಕೋಟಿ. ಇಷ್ಟು ಇದ್ದರೂ ರಾಜ್ಯದ ಜನತೆ ಮುಂದೆ ಸುಳ್ಳು ಹೇಳೋ ಕೆಲಸ ಮಾಡ್ತಿದ್ದಾರೆ. ಗೃಹ ಸಚಿವರು RSS ಬಗ್ಗೆ ಸುಳ್ಳು ಹೇಳ್ತಾರೆ. ರಿಜ್ವಾನ್ ಅರ್ಷದ್ ಎಥನಲ್ ಬಗ್ಗೆ ಸುಳ್ಳು ಹೇಳ್ತಾರೆ. ಫೇಕ್ ನ್ಯೂಸ್ಗಳ ಮೇಲೆ ನಿಂತಿರುವ ಸರ್ಕಾರದ ರೀತಿ ಮಾತನಾಡ್ತಾರೆ ಸಚಿವರು ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಅನೋನ್ಸ್ ಮಾಡಲಿ ನಮಗೆ ಕೇಂದ್ರ ಅನುದಾನ ಬೇಡ ಅಂತ. ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರಿಗೆ ಸಂಬಳ ಕೊಡಲು ಹಣ ಇಲ್ಲ. ಇದು ದಿವಾಳಿ ಸರ್ಕಾರ ಇದಕ್ಕೆ ವಿದೇಶಿ ಬ್ಯಾಂಕ್ಗಳಿಂದ ಲೋನ್ ಕೊಡ್ತಾರಾ? ಲ್ಯಾಂಡ್ ಅಕ್ವಿಜೇಷನ್ ಯಾರ್ ಮಾಡ್ತಾರೆ ರಾಜ್ಯ ಸರ್ಕಾರ. ಯೋಜನೆಗೆ ಲೋನ್ ಕೊಡಿಸೋದು ಕೇಂದ್ರ ಸರ್ಕಾರ. ಲೋನ್ ಆಗಿರೋದನ್ನ ಪೇ ಮಾಡ್ತಿರೋದು BMRCL. ಆರೆಂಜ್ ಮತ್ತು ರೆಡ್ ಲೈನ್ ಡಿಲೇ ಆಗಿದೆ ಅಂತ ಸಚಿವರು ಹೇಳಿದ್ದಾರೆ. ಕೇಂದ್ರ ಸರ್ಕಾರ 2024ರಲ್ಲಿ ಆರೆಂಜ್ ಲೈನ್ ಗೆ ಅಪ್ರೋವಲ್ ಕೊಟ್ಟಿದೆ. ಇಲ್ಲಿವರೆಗೂ ಕೆಲಸ ಆರಂಭ ಆಗಿಲ್ಲ. ಮೂರು ಬಾರಿ ಡಿಸೈನ್ ಚೇಂಜ್ ಮಾಡಿರೋದಿಂದ್ರ ಈ ಪ್ರಾಜೆಕ್ಟ್ ಡಿಲೇ ಆಗ್ತಿದೆ. ಈ ರೀತಿ ಆದ್ರೆ ಯಾವುದಕ್ಕೂ ಅಪ್ರೋವಲ್ ಮಾಡಬೇಕು? ಈ ಲೈನ್ ಬಗ್ಗೆ ಅಧಿಕಾರಿಗಳ ಬಳಿ ಸರಿಯಾದ ಮಾಹಿತಿನೇ ಇಲ್ಲ.
ಪಿಂಕ್ ಲೈನ್ ಉದ್ಘಾಟನೆಯ ವಿಳಂಬದ ಕುರಿತು ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, 2014ರಲ್ಲಿಯೇ ಪಿಂಕ್ ಲೈನ್ಗೆ ಅನುಮೋದನೆ ದೊರೆತಿದ್ದರೂ ಆರಂಭಿಕ ಮೂರು ವರ್ಷಗಳ ಕಾಲ ಕಾಮಗಾರಿ ಶುರುವಾಗಲಿಲ್ಲ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಕರೆದು ರದ್ದುಪಡಿಸಲಾಗಿತ್ತು. ನಂತರ ಕೋವಿಡ್ ಸಂಕಷ್ಟದ ನಡುವೆಯೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುರಂಗ ಮಾರ್ಗದ ಕಾಮಗಾರಿಗೆ ವೇಗ ನೀಡಿ ಶೇ. 72ರಷ್ಟು ಕೆಲಸ ಪೂರ್ಣಗೊಳಿಸಲಾಗಿತ್ತು. ಕಳೆದ 12 ವರ್ಷಗಳಲ್ಲಿ 9 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದು, ವರ್ಷಕ್ಕೆ ಸರಾಸರಿ 700 ಮೀಟರ್ನಂತೆ ಕೇವಲ 7.5 ಕಿ.ಮೀ ಮಾರ್ಗವನ್ನಷ್ಟೇ ನಿರ್ಮಿಸಲಾಗಿದೆ. ಈಗ 12 ವರ್ಷಗಳ ಬಳಿಕ ಉದ್ಘಾಟನೆಯಾಗುತ್ತಿದ್ದು, ವಿಳಂಬಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು.
ಮೆಟ್ರೋ ಫೇಸ್-3ಎ ರೆಡ್ ಲೈನ್ ಯೋಜನೆಯಲ್ಲಿ ಸುರಂಗ ನಿರ್ಮಾಣ ವೆಚ್ಚವನ್ನು ಪ್ರತಿ ಕಿಲೋಮೀಟರ್ಗೆ ₹300 ಕೋಟಿಯಂತೆ ಅಂದಾಜಿಸಿ ಒಟ್ಟು ₹28,405 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಸೂರ್ಯ ತಿಳಿಸಿದರು. ದೇಶಾದ್ಯಂತ ಸುರಂಗ ನಿರ್ಮಾಣದ ಮಾನದಂಡ ವೆಚ್ಚ ಪ್ರತಿ ಕಿ.ಮೀ.ಗೆ ₹175 ಕೋಟಿ ಇದೆ. ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ಮರುಪರಿಶೀಲಿಸಿ, ವಿನ್ಯಾಸ ಮತ್ತು ವೆಚ್ಚವನ್ನು ₹25,999 ಕೋಟಿಗೆ ಇಳಿಸುವ ಮೂಲಕ ಸಾರ್ವಜನಿಕರ ₹2,406 ಕೋಟಿ ತೆರಿಗೆ ಹಣವನ್ನು ಉಳಿಸಿದೆ. ಇದೇ ವೇಳೆ, 2024ರಲ್ಲಿ ಅನುಮೋದನೆಗೊಂಡಿರುವ ಆರೆಂಜ್ ಲೈನ್ ವಿನ್ಯಾಸವನ್ನು ರಾಜ್ಯ ಸರ್ಕಾರ ಮೂರು ಬಾರಿ ಬದಲಿಸಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರು ಮೆಟ್ರೋ ಪ್ರಯಾಣ ದರ ಪ್ರತಿ ಕಿ.ಮೀ.ಗೆ ₹3.97 ರಷ್ಟಿದ್ದು, ಇದು ಮುಂಬೈ ₹3.20 , ದೆಹಲಿ ₹2.72 ಮತ್ತು ಕೋಲ್ಕತ್ತಾ ₹0.90 ಮೆಟ್ರೋಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ ಎಂದು ತೇಜಸ್ವಿ ಸೂರ್ಯ ಗಮನ ಸೆಳೆದರು. ಮೆಟ್ರೋ ನಿಲ್ದಾಣಗಳಲ್ಲಿ ಸುಮಾರು 2 ಲಕ್ಷ ಚದರ ಅಡಿ ವಾಣಿಜ್ಯ ಜಾಗ ಖಾಲಿ ಉಳಿದಿದ್ದು, ಇತರ ರಾಜ್ಯಗಳ ಮಾದರಿಯಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸಿ ಆದಾಯ ಗಳಿಸಿದ್ದರೆ ಪ್ರಯಾಣಿಕರ ಮೇಲಿನ ದರ ಹೊರೆಯನ್ನು ತಗ್ಗಿಸಬಹುದಿತ್ತು ಎಂದು ಸಲಹೆ ನೀಡಿದರು.
ತಮ್ಮ ಭಾಷಣಕ್ಕೆ ಕತ್ತರಿ ಹಾಕಲಾಗಿದೆ ಎಂಬ ಸಚಿವ ಕೃಷ್ಣ ಬೈರೇಗೌಡ ಅವರ ಟ್ವೀಟ್ ಕುರಿತು ಪ್ರತಿಕ್ರಿಯಿಸಿದ ಸಂಸದರು, ಕಾರ್ಯಕ್ರಮವನ್ನು ಬಿಎಂಆರ್ಸಿಎಲ್ ಆಯೋಜಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಕಾರ್ಯಕ್ರಮವಾಗಿರುವುದರಿಂದ ಎಸ್ಪಿವಿ ಶಿಷ್ಟಾಚಾರದ ಪ್ರಕಾರವೇ ವೇದಿಕೆ ಮತ್ತು ಭಾಷಣದ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮೆಟ್ರೋ ಅಧಿಕಾರಿಗಳೇ ನೀಡಬೇಕು ಎಂದರು.
ನಾಳೆ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಾವರೆಕೆರೆ ಅಗ್ನಿಶಾಮಕ ಠಾಣೆಯ ಹೆಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ಬಿಳೇಕಹಳ್ಳಿ ಮೆಟ್ರೋ ನಿಲ್ದಾಣಕ್ಕೆ ತೆರಳಿ, ಐಐಎಂ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಪ್ರಧಾನಿ ಅವರನ್ನು ಸ್ವಾಗತಿಸಲು ವೇಗಾ ಸಿಟಿ ಮಾಲ್ ಬಳಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಿದ್ಧತೆ ನಡೆಸಿದ್ದಾರೆ ಎಂದು ತೇಜಸ್ವಿ ಸೂರ್ಯ ಮಾಹಿತಿ ನೀಡಿದರು.