
ಬೆಂಗಳೂರು: ರಾಜಧಾನಿಯ ಹೊರವರ್ತುಲ ರಸ್ತೆಯ ಪ್ರಮುಖ ಐಟಿ ಕಾರಿಡಾರ್ ಆದ ಮಾನ್ಯತಾ ಟೆಕ್ ಪಾರ್ಕ್ ಬಳಿ ನಡೆಯುತ್ತಿರುವ ‘ನಮ್ಮ ಮೆಟ್ರೋ’ (Namma Metro) ಕಾಮಗಾರಿಯ ಆಮೆಗತಿ ಹಾಗೂ ರಸ್ತೆಯಿಡೀ ಅಡ್ಡಾದಿಡ್ಡಿ ಬ್ಯಾರಿಕೇಡ್ ಹಾಕಿ ಟ್ರಾಫಿಕ್ ಜಾಮ್ ಸೃಷ್ಟಿಸಿರುವ ಮೆಟ್ರೋ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕೆಂಡಾಮಂಡಲರಾಗಿದ್ದಾರೆ.
ಮೆಟ್ರೋ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಬಿಎಂಆರ್‌ಸಿಎಲ್ (BMRCL) ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ನಡುರಸ್ತೆಯಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಮುಂದಿನ ಮಂಗಳವಾರದೊಳಗೆ ರಸ್ತೆಯಲ್ಲಿರುವ ಅನಗತ್ಯ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವಂತೆ ಖಡಕ್ ಗಡುವು ನೀಡಿದ್ದಾರೆ.
"ಕಾಮಗಾರಿ ವೇಗ ನೋಡಿದ್ರೆ ನೀವು ಮುಗಿಸೋದು ಯಾವಾಗ್ಲೋ?": ಸಚಿವರ ಆಕ್ರೋಶ
ಮೆಟ್ರೋ ಎಂಡಿ ಪಿ.ಸಿ. ಜಾಫರ್ ಅವರೊಂದಿಗೆ ಕಾಮಗಾರಿ ವೀಕ್ಷಣೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ಯೋಜನೆಯ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ನಿಮ್ಮ ಕಾಮಗಾರಿ ವೇಗ ಗಮನಿಸಿದರೆ ನೀವು ಮುಗಿಸೋದು ಯಾವ ಕಾಲಕ್ಕೋ? ಬೇಗ ಅಂತೂ ನೀವು ಕೆಲಸ ಮುಗಿಸಲ್ಲ. ಜನ ರಸ್ತೆಯಲ್ಲಿ ನಿತ್ಯ ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ ನೀವು ಮಾತ್ರ ಕಾಮಗಾರಿಯ ನೆಪದಲ್ಲಿ ರಸ್ತೆಯ ಸಿಕ್ಕಸಿಕ್ಕ ಜಾಗದಲ್ಲೆಲ್ಲ ಬ್ಯಾರಿಕೇಡ್ ಹಾಕಿ ಕೂತಿದ್ದೀರಿ. ನಾನು ಪದೇ ಪದೇ ಹೇಳ್ತಾನೇ ಇದ್ದೀನಿ, ಆದ್ರೆ ನಿಮ್ಮ ತಲೆಗೆ ಹೋಗ್ತಿಲ್ಲ" ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಮೆಟ್ರೋ ಸುರಂಗ ಮಾರ್ಗ ಹಾಗೂ ಎಲಿವೇಟೆಡ್ ಸ್ಟೇಷನ್ ನಿರ್ಮಾಣದ ಸಂದರ್ಭದಲ್ಲಿ ಕನಿಷ್ಠ ರಸ್ತೆ ಸುರಕ್ಷತಾ ನಿಯಮಗಳನ್ನೂ ಪಾಲಿಸದೆ ಇರುವುದನ್ನು ಗಮನಿಸಿದ ಸಚಿವರು:
ಅನಗತ್ಯ ಜಾಗ ಒತ್ತುವರಿ: ಕಾಮಗಾರಿಗೆ ಎಷ್ಟು ಜಾಗ ಬೇಕೋ ಅಷ್ಟನ್ನು ಬಿಟ್ಟು, ಹೆಚ್ಚುವರಿಯಾಗಿ ರಸ್ತೆಯ ಬಹುಭಾಗವನ್ನು ಮೆಟ್ರೋ ಬ್ಯಾರಿಕೇಡ್‌ಗಳಿಂದ ಮುಚ್ಚಲಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ರಸ್ತೆಯೇ ಇಲ್ಲದಂತಾಗಿದೆ.
ಶೂನ್ಯ ಸುರಕ್ಷತೆ: ಕಾಮಗಾರಿ ನಡೆಯುವ ಜಾಗದಲ್ಲಿ ಸಾರ್ವಜನಿಕರಿಗೆ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವಹಿಸಿಲ್ಲ.
ಕಂಟ್ರಾಕ್ಟರ್‌ಗಳ ಲಾಭ: ಗುತ್ತಿಗೆದಾರರ ಉಪಕರಣಗಳು ಮತ್ತು ವಾಹನಗಳನ್ನು ನಿಲ್ಲಿಸಲು ರಸ್ತೆಯನ್ನೇ ಬಂದ್ ಮಾಡಲಾಗಿದ್ದು, ಕಂಟ್ರಾಕ್ಟರ್‌ಗಳ ಅನುಕೂಲಕ್ಕಾಗಿ ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿ ಕೊಡಲಾಗುತ್ತಿದೆ ಎಂದು ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾನ್ಯತಾ ಟೆಕ್ ಪಾರ್ಕ್‌ನಿಂದ ಹೆಬ್ಬಾಳ ಮತ್ತು ನಾಗವಾರ ಮಾರ್ಗವಾಗಿ ನಿತ್ಯ ಲಕ್ಷಾಂತರ ಐಟಿ ಉದ್ಯೋಗಿಗಳು ಮತ್ತು ಸಾರ್ವಜನಿಕರು ಸಂಚರಿಸುತ್ತಾರೆ. ಈ ಮಾರ್ಗದಲ್ಲಿ ಮೆಟ್ರೋ ಬೇಜವಾಬ್ದಾರಿತನದಿಂದಾಗಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.
‘ಕಾಮಗಾರಿಗೆ ಅಗತ್ಯವಿರುವ ಜಾಗವನ್ನು ಮಾತ್ರ ಬಳಸಿಕೊಳ್ಳಿ. ರಸ್ತೆಯ ಮೇಲೆ ಅನಗತ್ಯವಾಗಿ ಹಾಕಿರುವ ಎಲ್ಲ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಮುಂದಿನ ಮಂಗಳವಾರದೊಳಗೆ ಯಾವುದೇ ನೆಪ ಹೇಳದೆ ತಕ್ಷಣ ತೆರವುಗೊಳಿಸಬೇಕು. ಸಾರ್ವಜನಿಕರಿಗೆ ಸುಗಮ ವಾಹನ ಸಂಚಾರಕ್ಕೆ ದಾರಿ ಮಾಡಿಕೊಡಬೇಕು’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸಚಿವರು ಅಂತಿಮ ಎಚ್ಚರಿಕೆ ನೀಡಿದ್ದಾರೆ.