
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಹುಕೋಟಿ ಮೊತ್ತದ ಬಿಟ್‌ಕಾಯಿನ್ ಹಗರಣದಲ್ಲಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಆತನ ಸಹಚರ ರಾಬಿನ್ ಖಂಡೇವಾಲಾಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಆರೋಪಿಗಳಿಗೆ ಜಾಮೀನು ನೀಡಿ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಕಳೆದ ಮೇ 8ರಂದು ಕುಖ್ಯಾತ ಹ್ಯಾಕರ್ ಶ್ರೀಕಿ, ಆತನ ಸಹಚರ ರಾಬಿನ್ ಖಂಡೇವಾಲಾ ಮತ್ತು ಉದ್ಯಮಿ ಸುನೀಶ್ ಹೆಗ್ಡೆಯನ್ನು ಬಂಧಿಸಿದ್ದರು. ಬಂಧನಕ್ಕೊಳಗಾದ ಮೂವರೂ ಆರೋಪಿಗಳು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದರು. ಇವರ ಪೈಕಿ ಶ್ರೀಕಿ ಹಾಗೂ ಕ್ರಿಪ್ಟೋಕರೆನ್ಸಿ ವ್ಯಾಪಾರಿ ರಾಬಿನ್ ಖಂಡೇವಾಲಾ ತಮ್ಮ ಪರವಾಗಿ ಜಾಮೀನು ಕೋರಿ ಇಡಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿದ್ದರು. ಕೊನೆಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕಳೆದ ಜುಲೈ 6ರಂದು ನಗರದ ಇ.ಡಿ. ವಿಶೇಷ ನ್ಯಾಯಾಲಯಕ್ಕೆ ಅಧಿಕಾರಿಗಳು ಬರೋಬ್ಬರಿ 3,500 ಪುಟಗಳ ಬೃಹತ್ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಈ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ಉನ್ನತ ಮಟ್ಟದ ಹ್ಯಾಕಿಂಗ್ ಕಾರ್ಯಾಚರಣೆ, ಡಾರ್ಕ್‌ನೆಟ್ ಮೂಲಕ ನೆರವೇರಿಸಿದ ಸೈಬರ್ ಸುಲಿಗೆ, ಬಹುಕೋಟಿ ಕ್ರಿಪ್ಟೋಕರೆನ್ಸಿ ವರ್ಗಾವಣೆ ಹಾಗೂ ಅಕ್ರಮ ಹಣದಿಂದ ನಡೆಸಿದ ಐಷಾರಾಮಿ ಜೀವನದ ವಿವರಗಳನ್ನು ಉಲ್ಲೇಖಿಸಲಾಗಿತ್ತು. ಜತೆಗೆ, ಈ ಅಪರಾಧದಲ್ಲಿ ಸಾಥ್ ನೀಡಿದ ಖಾಸಗಿ ಕಂಪನಿ ಹಾಗೂ ಇಬ್ಬರು ವ್ಯಕ್ತಿಗಳ ಹೆಸರನ್ನೂ ಸೇರಿಸಲಾಗಿತ್ತು.
ಪ್ರಮುಖ ಆರೋಪಿ ಶ್ರೀಕಿ ಈ ಹಗರಣದ ಮಾಸ್ಟರ್ ಮೈಂಡ್ ಆಗಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳು, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಪ್ರಮುಖ ಕಾರ್ಪೊರೇಟ್ ಸರ್ವರ್‌ಗಳ ಭದ್ರತಾ ಲೋಪಗಳನ್ನು ಬಳಸಿಕೊಂಡು ಹ್ಯಾಕ್ ಮಾಡಿದ್ದಾನೆ. ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ ₹11.50 ಕೋಟಿ ಕಬಳಿಸಿದ ಗಂಭೀರ ಆರೋಪ ಈತನ ಮೇಲಿದೆ. ಹ್ಯಾಕ್ ಮಾಡಿ ಸಂಗ್ರಹಿಸಿದ ಅಕ್ರಮ ಹಣವನ್ನು ಡಾರ್ಕ್ ವೆಬ್ ಮೂಲಕ ವರ್ಗಾಯಿಸಿ, ಐಷಾರಾಮಿ ಜೀವನಕ್ಕಾಗಿ ಬಳಸಿಕೊಳ್ಳಲಾಗಿರುವ ಆರೋಪ ಈತನ ಮೇಲಿದೆ.
ಇ.ಡಿ ಸಲ್ಲಿಸಿರುವ ದೋಷಾರೋಪಪಟ್ಟಿಯ ಪ್ರಕಾರ, ಶ್ರೀಕಿ ದೇಶ-ವಿದೇಶಗಳ ಪ್ರಮುಖ ಯೂನಿಕಾರ್ನ್ ಕ್ರಿಪ್ಟೋ ವಿನಿಮಯ ಕೇಂದ್ರಗಳು ಹಾಗೂ ಆನ್‌ಲೈನ್ ಪೋಕರ್ ಅಪ್ಲಿಕೇಶನ್‌ಗಳನ್ನು ಹ್ಯಾಕ್ ಮಾಡಿದ್ದ. ಸರ್ವರ್‌ಗಳ ಕೋಡಿಂಗ್‌ನಲ್ಲಿರುವ ದುರ್ಬಲತೆಗಳನ್ನು (Vulnerabilities) ಗುರುತಿಸಿ ಅಕ್ರಮವಾಗಿ ಹ್ಯಾಕ್ ಮಾಡುವುದು ಈತನ ಶೈಲಿಯಾಗಿತ್ತು.
ಇ.ಡಿ ಪರ ವಾದ ಮಂಡಿಸಿದ ವಕೀಲ ಮಧು ಎನ್. ರಾವ್ ವಾದ ಮಂಡಿದಿದ್ದರು. ಆರೋಪಿಗಳ ಪರವಾಗಿ ಜ್ಯೇಷ್ಠ ವಕೀಲರಾದ ಬಿಪಿನ್ ಹೆಗ್ಡೆ ಮತ್ತು ಸಂದೇಶ್ ಚೌಟ ವಾದ ಮಂಡಿಸಿದರು.
ಉಭಯ ಪಕ್ಷಗಳ ಸುದೀರ್ಘ ವಾದ ಆಲಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಪೀಠವು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಪ್ರಕರಣದ ಮುಂದಿನ ವಿಚಾರಣೆ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಮುಂದುವರಿಯಲಿದೆ.