ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆ ಶಾಕ್: ವಿಜಯದಶಮಿ, ದೀಪಾವಳಿ ತಿಂಗಳ ಬಿಲ್‌ನಲ್ಲಿ ಯುನಿಟ್‌ಗೆ 40-50 ಪೈಸೆ ಹೆಚ್ಚಳ

Published : Oct 20, 2026, 06:46 PM IST
electricity bill

ಸಾರಾಂಶ

ಸೆಪ್ಟೆಂಬರ್ ತಿಂಗಳ ವಿದ್ಯುತ್ ಕ್ಷಾಮದ ವೇಳೆ ದುಬಾರಿ ದರದಲ್ಲಿ ವಿದ್ಯುತ್ ಖರೀದಿಸಿದ ಕಾರಣ, ರಾಜ್ಯದ ಗ್ರಾಹಕರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಲಿದೆ. ಅಕ್ಟೋಬರ್-ನವೆಂಬರ್ ತಿಂಗಳ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ 40-50 ಪೈಸೆ ಹೆಚ್ಚಳವಾಗುವ ಸಾಧ್ಯತೆಯಿದೆ.

ಬೆಂಗಳೂರು (ಅ.20): ರಾಜ್ಯದ ವಿದ್ಯುತ್ ಗ್ರಾಹಕರಿಗೆ ಮತ್ತೆ ದರ ಏರಿಕೆಯ ಬಿಸಿ ತಟ್ಟಲಿದ್ದು, ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳ ವಿದ್ಯುತ್ ಬಿಲ್ಲಿಂಗ್ ಸೈಕಲ್‌ನಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವು 40 ರಿಂದ 50 ಪೈಸೆಯವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ ತಿಂಗಳ ತೀವ್ರ ವಿದ್ಯುತ್ ಕ್ಷಾಮದ ಸಮಯದಲ್ಲಿ, ರಾಜ್ಯದ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ಮುಕ್ತ ಮಾರುಕಟ್ಟೆಯಿಂದ (Open Market) ದುಬಾರಿ ದರದಲ್ಲಿ ವಿದ್ಯುತ್ ಖರೀದಿ ಮಾಡಲಾಗಿತ್ತು. ಈ ವೇಳೆ ಮಾಡಲಾದ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಿಕೊಳ್ಳಲು ರಾಜ್ಯ ಸರ್ಕಾರ ಹಾಗೂ ಇಂಧನ ಇಲಾಖೆ ಪ್ರತಿ ಯೂನಿಟ್‌ಗೆ 40 ರಿಂದ 50 ಪೈಸೆ ಹೆಚ್ಚಿಸಲು ಯೋಜನೆ ರೂಪಿಸಿದೆ.

ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಈ ದರ ಏರಿಕೆಯನ್ನು 'ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ' (FPPCA - Fuel and Power Purchase Cost Adjustment) ಶೀರ್ಷಿಕೆಯಡಿಯಲ್ಲಿ ಗ್ರಾಹಕರ ಮಾಸಿಕ ವಿದ್ಯುತ್ ಬಿಲ್‌ನಲ್ಲಿ ಸೇರಿಸಿ ವಸೂಲಿ ಮಾಡಲಾಗುತ್ತದೆ. ಸರ್ಕಾರದ ಉಚಿತ 'ಗೃಹ ಜ್ಯೋತಿ' ಯೋಜನೆಯಡಿ ಬಾರದ ಹಾಗೂ ನಿಗದಿತ ಮಿತಿಗಿಂತ ಹೆಚ್ಚಿನ ವಿದ್ಯುತ್ ಬಳಸುವ ಗ್ರಾಹಕರು ಈ ಹೆಚ್ಚುವರಿ ಹಣವನ್ನು ತಮ್ಮ ಜೇಬಿನಿಂದಲೇ ಪಾವತಿಸಬೇಕಾಗುತ್ತದೆ.

ಸೆಪ್ಟೆಂಬರ್ ತಿಂಗಳಲ್ಲಿ ದಾಖಲೆಯ 20,000 ಮೆಗಾವ್ಯಾಟ್‌ಗೆ ಏರಿದ ಬೇಡಿಕೆ

ದರ ಹೆಚ್ಚಳದ ನಿರ್ಧಾರವನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಅಂತಿಮ ಅನುಮೋದನೆಯೊಂದಿಗೆ ಜಾರಿಗೆ ತರಲಾಗುತ್ತದೆ. ಈ ವಿಶೇಷ ದರ ಪರಿಷ್ಕರಣೆಯು ಕೇವಲ ಮುಂಬರುವ ಒಂದು ತಿಂಗಳ ಬಿಲ್ ಅವಧಿಗೆ ಮಾತ್ರ ಅನ್ವಯಿಸಲಿದೆ.

ಸಾಮಾನ್ಯವಾಗಿ ಕರ್ನಾಟಕವು ವಾರ್ಷಿಕ ದರ ಪರಿಷ್ಕರಣೆಯಿಂದ ಹೊರಬಂದು 3 ವರ್ಷಗಳ 'ಬಹುವಾರ್ಷಿಕ ದರ ವ್ಯವಸ್ಥೆ'ಗೆ (Multi-Year Tariff System) ಕಾಲಿಟ್ಟಿದೆ. 2025 ರಲ್ಲಿ ಜಾರಿಗೆ ಬಂದಿದ್ದ ದರ ಪರಿಷ್ಕರಣೆಯು 2028 ರವರೆಗೆ ಜಾರಿಯಲ್ಲಿರಲಿದೆ. ಆದರೆ ತುರ್ತು ಪರಿಸ್ಥಿತಿಯಲ್ಲಿ ವೆಚ್ಚ ಭರಿಸಲು ಎಫ್‌ಪಿಪಿಸಿಎ (FPPCA) ನಿಯಮಾವಳಿಯಂತೆ ಕೆಇಆರ್‌ಸಿ ಅನುಮತಿಯೊಂದಿಗೆ ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಇಂತಹ ವಿಶೇಷ ಶುಲ್ಕ ವಿಧಿಸಲು ಅವಕಾಶವಿದೆ.

ಕಳೆದ ನೈಋತ್ಯ ಮಾನ್ಸೂನ್ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರಿಂದ ಹಾಗೂ ದಕ್ಷಿಣ ಭಾರತದಾದ್ಯಂತ ಭಾರಿ ಬಿಸಿಲು ಆವರಿಸಿದ್ದರಿಂದ, ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿದ್ಯುತ್ ಬೇಡಿಕೆಯು ಸಾರ್ವಕಾಲಿಕ ದಾಖಲೆಯಾದ 20,000 ಮೆಗಾವ್ಯಾಟ್‌ಗೆ (20,000 MW) ಏರಿಕೆಯಾಗಿತ್ತು.

ಪ್ರತಿ ಯೂನಿಟ್‌ಗೆ ಬರೋಬ್ಬರಿ ₹25 ರಿಂದ ₹30 ಕೊಟ್ಟು ವಿದ್ಯುತ್ ಖರೀದಿ!:

ಈ ಕುರಿತು ಇಂಧನ ಇಲಾಖೆಯ ಹಿರಿಯ ಎಂಜಿನಿಯರ್‌ ಒಬ್ಬರು ಮಾತನಾಡಿ, "ಸಾಮಾನ್ಯ ದಿನಗಳಲ್ಲಿ ನಾವು ಮುಕ್ತ ಮಾರುಕಟ್ಟೆಯಿಂದ ಪ್ರತಿ ಯೂನಿಟ್‌ಗೆ ಸರಾಸರಿ ₹6 ದರದಲ್ಲಿ ವಿದ್ಯುತ್ ಖರೀದಿಸುತ್ತಿದ್ದೆವು. ಆದರೆ ಸೆಪ್ಟೆಂಬರ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಕರ್ನಾಟಕ ಮಾತ್ರವಲ್ಲದೆ ನೆರೆಯ ಇತರ ದಕ್ಷಿಣ ಭಾರತದ ರಾಜ್ಯಗಳಲ್ಲೂ ತೀವ್ರ ವಿದ್ಯುತ್ ಅಭಾವ ಎದುರಾಗಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ಸೃಷ್ಟಿಯಾಗಿತ್ತು" ಎಂದಿದ್ದಾರೆ.

"ಹಗಲಿನ ವೇಳೆಯಲ್ಲಿ ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಕೆಲವು ರಾಜ್ಯಗಳು ಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್‌ಗೆ ₹25 ರಿಂದ ₹30 ರವರೆಗೆ ಭಾರಿ ಬೆಲೆ ತೆತ್ತು ವಿದ್ಯುತ್ ಖರೀದಿಸಿದವು. ನಮ್ಮ ರಾಜ್ಯದಲ್ಲೂ ಕೊರತೆ ಸರಿದೂಗಿಸಲು ಹೊರರಾಜ್ಯಗಳಿಂದ ಹೆಚ್ಚಿನ ಬೆಲೆಗೆ ವಿದ್ಯುತ್ ತರಬೇಕಾಯಿತು. ಈ ಸನ್ನಿವೇಶದಿಂದಾಗಿ ಉಂಟಾದ ಹೆಚ್ಚುವರಿ ಆರ್ಥಿಕ ಹೊೆಯನ್ನು ಸರಿದೂಗಿಸಲು ಈ ತಾತ್ಕಾಲಿಕ ದರ ಏರಿಕೆ ಅನಿವಾರ್ಯವಾಗಿದೆ" ಎಂದು ಅಧಿಕಾರಿ ವಿವರಿಸಿದ್ದಾರೆ.

PREV
Read more Articles on
click me!

Recommended Stories

Namma Metro: ಮೇಟ್ರೋಗೆ 15ರ ಸಂಭ್ರಮ; ಲಾಂಗರೂಟ್ಸ್‌ , ಬ್ಯುಸಿ ಸ್ಟೇಷನ್ಸ್‌; ಶೀಘ್ರದಲ್ಲೇ ಏರ್‌ಪೋರ್ಟ್ ಲಿಂಕ್‌
ಮದುವೆಯಾದ 10 ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಮಾಕಳಿಯಲ್ಲಿ ಟವರ್ ಏರಿ ಹುಚ್ಚಾಟ ಮಾಡಿದ ಪಾವಗಡದ ಸಿಂಧು!