ಇಂದಿರಾ ಕ್ಯಾಂಟೀನ್‌ ಹೆಸರು ಬದಲು : ಹೊಸ ಹೆಸರೇನು ?

By Kannadaprabha NewsFirst Published Nov 15, 2019, 8:02 AM IST
Highlights

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಬಿಬಿಎಂಪಿ ಆಡಳಿತಾರೂಡ ಬಿಜೆಪಿ ಚಿಂತನೆ ನಡೆಸಿದೆ. ಹಾಗಾದ್ರೆ ಕ್ಯಾಂಟೀನ್ ಹೊಸ ಹೆಸರೇನು ? 

ಬೆಂಗಳೂರು [ನ.15]:  ಉಪ ಚುನಾವಣೆಯ ಬಳಿಕ ‘ಇಂದಿರಾ ಕ್ಯಾಂಟೀನ್‌’ ಹೆಸರು ಬದಲಾಯಿಸಿ ‘ಕೆಂಪೇಗೌಡ ಕ್ಯಾಂಟೀನ್‌’ ಎಂದು ಮರು ನಾಮಕರಣಕ್ಕೆ ಬಿಬಿಎಂಪಿ ಆಡಳಿತಾರೂಢ ಬಿಜೆಪಿ ಚಿಂತನೆ ನಡೆಸಿದೆ.

ಕಾಂಗ್ರೆಸ್‌ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2017ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಈ ಹಿಂದಿನ ಸಮ್ಮಿಶ್ರ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರ ಈವರೆಗೆ ಒಂದೇ ಒಂದು ರುಪಾಯಿ ಅನುದಾನ ನೀಡಿಲ್ಲ. ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಈ ಯೋಜನೆಯಿದೆ ಎಂಬ ಕಾರಣಕ್ಕೆ ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್‌ ಯೋಜನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ಆದರೆ, ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್‌ ನಿರ್ವಹಣೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ, ಪಾಲಿಕೆ ಆಡಳಿತರೂಢ ಬಿಜೆಪಿ ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ ಮಾಡಿ ಬಡವರಿಗೆ ಆಹಾರ ನೀಡುವ ಯೋಜನೆ ಮುಂದುವರಿಸುವುದಕ್ಕೆ ತೀರ್ಮಾನಿಸಿದ್ದಾರೆ.

ಉಪಚುನಾವಣೆ ಬಳಿಕ ಪ್ರಕ್ರಿಯೆ:

ಈ ಕುರಿತು ಮಾತನಾಡಿದ ಉಪ ಮೇಯರ್‌ ರಾಮ್‌ ಮೋಹನ್‌ ರಾಜು, ರಾಜ್ಯ ಸರ್ಕಾರದ ಪೂರ್ಣ ಮೊತ್ತದ ಅನುದಾನದಡಿಯಲ್ಲಿ 2017ರ ಕಾಂಗ್ರೆಸ್‌ ಸರ್ಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಕಳೆದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಅನುದಾನ ಮೀಸಲಿಡಲಿಲ್ಲ. ಆದರೂ ಬಡವರಿಗೆ ಅನ್ನ ನೀಡುವ ಯೋಜನೆ ಎಂಬ ಕಾರಣಕ್ಕೆ ಪಾಲಿಕೆ ತನ್ನ ಹಣದಲ್ಲಿ ಕ್ಯಾಂಟೀನ್‌ ನಿರ್ವಹಣೆ ಮಾಡುತ್ತಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರ್ಥಿಕ ಇಲಾಖೆ ಇಂದಿರಾ ಕ್ಯಾಂಟೀನ್‌ಗೆ ನಿರ್ವಹಣೆಗೆ ಶೇ.25ರಷ್ಟುಅನುದಾನ ನೀಡುವುದಕ್ಕೆ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದೆ. ಅದರಂತೆ ಸರ್ಕಾರದಿಂದ ಶೇ.25ರಷ್ಟುಅನುದಾನ ಪಡೆದು ಕ್ಯಾಂಟೀನ್‌ ನಿರ್ವಹಣೆ ಅಸಾಧ್ಯ. ಹಾಗಾಗಿ, ಇಂದಿರಾ ಕ್ಯಾಂಟೀನ್‌ಗೆ ‘ಕೆಂಪೇಗೌಡ ಕ್ಯಾಂಟೀನ್‌’ ಎಂದು ಮರು ನಾಮಕರಣ ಮಾಡಿ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಉಪ ಚುನಾವಣೆಯ ಬಳಿಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

 90 ಕೋಟಿ ಬಾಕಿ

2017-18ನೇ ಸಾಲಿನಿಂದ 2019ರ ಈವರೆಗೆ ಬಿಬಿಎಂಪಿ ಹೆಚ್ಚುವರಿಯಾಗಿ ವೆಚ್ಚ ಮಾಡಿರುವ ಒಟ್ಟು 90 ಕೋಟಿ ರು. ರಾಜ್ಯ ಸರ್ಕಾರದಿಂದ ಬರಬೇಕಾಗಿದೆ. 2017-18ರಲ್ಲಿ ರಾಜ್ಯ ಸರ್ಕಾರ ಅನುದಾನ ಘೋಷಿಸಿ ಬಿಡುಗಡೆ ಮಾಡಿದ್ದು, 100 ಕೋಟಿ ರು., ಆ ಸಾಲಿನಲ್ಲಿ ವೆಚ್ಚವಾಗಿದ್ದು 124.37 ಕೋಟಿ ರು. 2018-19ನೇ ಸಾಲಿನಲ್ಲಿ ಸರ್ಕಾರ ಘೋಷಿಸಿದ್ದು 145 ಕೋಟಿ ರು. ಬಿಡುಗಡೆ ಮಾಡಿದ್ದು ಕೇವಲ 115.38 ಕೋಟಿ ರು. ಇನ್ನು 2019-20ನೇ ಸಾಲಿನಲ್ಲಿ ಸರ್ಕಾರ ಯಾವುದೇ ಅನುದಾನ ಘೋಷಿಸಿಲ್ಲ ಮತ್ತು ಬಿಡುಗಡೆಯೂ ಮಾಡಿಲ್ಲ. ಪಾಲಿಕೆ ಕಳೆದ ಏಪ್ರಿಲ್‌ನಿಂದ ಈವರೆಗೆ ಒಟ್ಟು  44.9 ಕೋಟಿ ರು.ಗಳನ್ನು ಇಂದಿರಾ ಕ್ಯಾಂಟೀನ್‌ ಆಹಾರ ವಿತರಣೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದೆ.

click me!