Bengaluru: ವಿ.ವಿ. ಪುರಂ ಫುಡ್‌ ಸ್ಟ್ರೀಟ್‌ಗೆ ಹೈಟೆಕ್‌ ಸ್ಪರ್ಶ : ಜಯರಾಮ ರಾಯಪುರ

By Sathish Kumar KHFirst Published Dec 12, 2022, 4:16 PM IST
Highlights

ಬೆಂಗಳೂರಿನ ಹಳೆಯ ಪ್ರದೇಶವಾಗಿರುವ ವಿ.ವಿ.ಪುರ ಫುಡ್‌ ಸ್ಟ್ರೀಟ್‌ಗೆ ಹೈಟೆಕ್‌ ಸ್ಪರ್ಶ
ಒಟ್ಟು 6 ಕೋಟಿ ರೂ. ವೆಚ್ಚದಲ್ಲಿ ಕಮರ್ಷಿಯಲ್‌ ಸ್ಟ್ರೀಟ್‌ ಮಾದರಿಯಲ್ಲಿ ಅಭಿವೃದ್ಧಿ
ರಸ್ತೆಯನ್ನು ಕಿರಿದು ಮಾಡಿ, ಪಾದಚಾರಿಗಳಿಗೆ ಹೆಚ್ಚಿನ ಜಾಗ ಕೊಡಲು ತೀರ್ಮಾನ

ಬೆಂಗಳೂರು (ಡಿ.12): ರಾಜಧಾನಿಯ ಪ್ರಮುಖ ಬೀದಿಗಳಲ್ಲಿ ಒಂದಾಗಿರುವ ವಿ.ವಿ. ಪುರಂ ಫುಡ್ ಸ್ಟ್ರೀಟ್ ಅನ್ನು ಪಾದಚಾರಿಗಳು ಹಾಗೂ ರಸ್ತೆ ಬದಿಯಲ್ಲಿ ನಿಂತು ಆಹಾರ ತಿನ್ನಲು ಅನುಕೂಲ ಆಗುವ ರೀತಿ ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹಾಗೂ ಪಶ್ಚಿಮ ವಲಯದ ಆಯುಕ್ತ ಜಯರಾಮ ರಾಯಪುರ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಪುರಂನಲ್ಲಿ 200 ಮೀಟರ್ ನಲ್ಲಿ 37ಕ್ಕೂ ಹೆಚ್ಚು ಮಳಿಗೆಗಳಿವೆ. ಪಾದಚಾರಿಗಳನ್ನ,ಆಹಾರ ಪ್ರಿಯರನ್ನ ಗಮನದಲ್ಲಿಟ್ಟುಕೊಂಡು ರಸ್ತೆಯನ್ನು ಪರಿವರ್ತನೆ ಮಾಡುತ್ತೇವೆ. ನಾಳೆ‌ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ. ಇನ್ನು ಈ ಫುಡ್‌ ಸ್ಟ್ರೀಟ್‌ ಅನ್ನು ವ್ಯವಸ್ಥಿತವಾಗಿ ತಿಂಡಿ ಬೀದಿಯನ್ನಾಗಿ ನಿರ್ಮಾಣ ಮಾಡುತ್ತೇವೆ. ಈವರೆಗೆ ಅಡ್ಡಾದಿಡ್ಡಿಯಾಗಿ ವಿವೇಚನೆಯಿಲ್ಲದೆ ನಿಲ್ಲಿಸಲಾಗುತ್ತಿದ್ದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸಲಾಗುತ್ತದೆ. ನಗರದಲ್ಲಿ ಇದು ಅತ್ಯಂತ ಹಳೆಯ ಬೀದಿಯಾಗಿದ್ದು, ಹಲವು ದಶಕಗಳ ಹಿಂದೆ ಇಲ್ಲಿ ಕೊಳಚೆ ನೀರು ಹರಿಯಲು ಕೊಳವೆ ಅಳವಡಿಸಲಾಗಿದೆ. ಇಲ್ಲಿ ಹಾದು ಹೋಗಿರುವ ಸ್ಟಾರ್ಮ್ ವಾಟರ್ ಡ್ರೈಬ್, ಸೀವೇಜ್ ಪೈಪ್ ರೀಡಿಸೈಜನ್ ಮಾಡಲಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು ನಗರದ ಇತಿಹಾಸಕ್ಕೆ ಮೆರಗು ನೀಡಿದ ವಿ.ವಿ.ಪುರಂ ಹಬ್ಬ

ರಸ್ತೆಯ ವಿಸ್ತೀರ್ಣ ಮತ್ತಷ್ಟು ಕಡಿಮೆ:  ಪ್ರಸ್ತುತ ವಿವಿ ಪುರಂ ತಿಂಡಿ ಬೀದಿಯಲ್ಲಿನ ರಸ್ತೆಯ ವಿಸ್ತೀರ್ಣ 7 ಮೀಟರ್ ಇದೆ. ಅದನ್ನು ಅಭಿವೃದ್ಧಿಪಡಿಸುವ ವೇಳೆ ಮತ್ತಷ್ಟು ಕಡಿಮೆ ಮಾಡಲಾಗುವುದು. ರಸ್ತೆಯನ್ನು 5 ಮೀಟರ್‌ಗೆ ತಗ್ಗಿಸಲು ಚಿಂತನೆ ಮಾಡಲಾಗಿದೆ. ಜೊತೆಗೆ ಪಾದಚಾರಿ ಮಾರ್ಗವನ್ನು (ತಿಂಡಿ ತಿನ್ನುವವರಿಗೂ ಅನುಕೂಲ ಆಗುವಂತೆ-ಪುಟ್ಪಾತ್) ವ್ಯವಸ್ಥೆ ಮಾಡುತ್ತಿದ್ದೇವೆ. ವಯಸ್ಸಾದವರಿಗೆ ನಿಂತು, ಕುಳಿತು ತಿಂಡಿ ತಿನ್ನುವ ವ್ಯವಸ್ಥೆ ಮಾಡುತ್ತಿದ್ದೇವೆ. ಅಲ್ಲಲ್ಲಿ ಕೈತೊಳೆಯುವ ಸೌಲಭ್ಯವನ್ನೂ ಮಾಡಲಾಗುವುದು. ಇನ್ನು ಬೀದಿ ಪೀಠೋಪಕರಣಗಳ ವ್ಯವಸ್ಥೆ, ಪ್ರತಿ ಔಟ್ಲೆಟ್ ಗೆ ಗ್ರೀಸ್ ಮತ್ತು ಎಣ್ಣೆ ಬಲೆಗಳ ವ್ಯವಸ್ಥೆ, ಸ್ಥಿರ ಡಸ್ಟ್ ಬಿನ್ ಗಳ ಮೂಲಕ ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಆರಂಭ: ವಿ.ವಿ. ಪುರಂ ತಿಂಡಿ ಬೀದಿಯ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆದಿದ್ದು, ಟೆಂಡರ್‌ ಪ್ರಕ್ರಿಯೆ ಚಾಲನೆಯಲ್ಲಿದೆ. ನಾಳೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ. ಮುಂದಿನ ಮೂರ್ನಾಲ್ಕು ತಿಂಗಳ‌ ಒಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು. ಈಗಾಗಲೇ ರಸ್ತೆಯ ಇಕ್ಕೆಲಗಳಲ್ಲಿನ ವ್ಯಾಪಾರಸ್ಥರೊಂದಿಗೆ ಚರ್ಚೆಯನ್ನೂ ಮಾಡಲಾಗಿದೆ ಕಾಮಗಾರಿಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈ ಕಾಮಗಾರಿಗೆ ಒಟ್ಟಾರೆ 6 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕದ ಈ ಫುಡ್‌ ದೇಶಾದ್ಯಂತ ಫೇಮಸ್, ನೀವು ಟೇಸ್ಟ್ ಮಾಡಿದ್ದೀರಾ ?

ಕಮರ್ಷಿಯಲ್ ಸ್ಟ್ರೀಟ್‌ನಂತೆ ಅಭಿವೃದ್ಧಿ: ಈ ರಸ್ತೆಯು ವಿಶೇಷವಾಗಿ ಸಂಜೆ 6 ಗಂಟೆಯ ನಂತರ ಜನಸಂದಣಿಯಿಂದ ತುಂಬಿರುತ್ತದೆ. ಆದ್ದರಿಂದ ಇದು ಭಾರೀ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ. ಆಧುನಿಕ ಸೌಕರ್ಯಗಳ ಕೊರತೆಯೂ ಇದೆ. ವಿವಿ ಪುರಂನಲ್ಲಿ ಯಾವಾಗಲೂ ಜನಸಂದಣಿಯಿಂದ ಕೂಡಿರುವ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಬೀದಿಯನ್ನು ಆಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಬೇಕು ಎಂದು ಮಾರಾಟಗಾರರು ಮನವಿ ಮಾಡಿದರು. ನಗರದಲ್ಲಿ ಇತ್ತೀಚೆಗೆ ನವೀಕರಿಸಿದ ಕಮರ್ಷಿಯಲ್ ಸ್ಟ್ರೀಟ್‌ನಂತೆಯೇ ಇಡೀ ರಸ್ತೆಯನ್ನು ಪುನರಾಭಿವೃದ್ಧಿ ಮಾಡಲು ಬಿಬಿಎಂಪಿ ಯೋಜಿಸಿದೆ ಎಂದು ಬಿಬಿಎಂಪಿ ದಕ್ಷಿಣ ವಲಯದ ವಲಯ ಆಯುಕ್ತ ಜಯರಾಮ್ ರಾಯಪುರ ಹೇಳಿದರು.

click me!