
ವೆಂಕಟೇಶ್ ಕಲಿಪಿ
ಬೆಂಗಳೂರು: ಒಂದೇ ಪ್ರಕರಣ ಸಂಬಂಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸುವಂತಿಲ್ಲ ಎಂಬುದಾಗಿ ಹಲವು ತೀರ್ಪುಗಳು ಹೊಂದಿರುವ ನಡುವೆಯೇ ಕೆರೆ ಏರಿಯ ಪ್ರದೇಶವೊಂದಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಕುರಿತು ಕಂದಾಯ ಇಲಾಖೆ ನೌಕರರ ವಿರುದ್ಧ ಒಂಭತ್ತು ವರ್ಷಗಳ ಹಿಂದೆ ಯಲಹಂಕ ಠಾಣಾ ಪೊಲೀಸರು ಮತ್ತು ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳ ಬಗ್ಗೆ ತನಿಖೆ ಮುಂದುವರಿಸಲು ಹೈಕೋರ್ಟ್ ಇದೀಗ ಹಸಿರು ನಿಶಾನೆ ತೋರಿದೆ.
ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ (ಪಿಸಿ) ಅಡಿ ಲೋಕಾಯುಕ್ತ ಪೊಲೀಸರು ಮತ್ತು ಭಾರತೀಯ ದಂಡ ಸಂಹಿತೆ ಅಡಿ (ಐಪಿಸಿ) ಬೆಂಗಳೂರಿನ ಯಲಹಂಕ ಠಾಣಾ ಪೊಲೀಸರು 2017ರಲ್ಲಿ ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಬೆಂಗಳೂರು ಉತ್ತರ ತಾಲೂಕಿನ ಹೆಚ್ಚುವರಿ ಕಚೇರಿಯಲ್ಲಿ ಕ್ರಮವಾಗಿ ಸರ್ವೆಯರ್, ತಹಸೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದ ಎಂ.ರಾಮಮೂರ್ತಿ, ಬಿ.ಆರ್. ಮಂಜುನಾಥ್ ಮತ್ತು ಸಂದೀಪ್ ಸಿಂಗ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ನ್ಯಾ। ಎಚ್.ಪಿ. ಸಂದೇಶ್ ಅವರ ಪೀಠ ಆದೇಶಿಸಿದೆ.
ಒಂದೇ ಪ್ರಕರಣ ಸಂಬಂಧ ಯಲಹಂಕ ಠಾಣಾ ಪೊಲೀಸರು ಮತ್ತು ಹಿಂದಿನ ಎಸಿಬಿ ಪೊಲೀಸರು (ಸದ್ಯದ ಲೋಕಾಯುಕ್ತ) ಎಫ್‌ಐಆರ್ ದಾಖಲಿಸಿರುವುದು ಕಾನೂನು ಬಾಹಿರ ಎಂಬ ಅರ್ಜಿದಾರರ ವಾದವನ್ನು ಪೀಠ ತಿರಸ್ಕರಿಸಿದೆ.
ನಕಲಿ ದಾಖಲೆ ಸೃಷ್ಟಿಸಿ ನವರತ್ನ ಅಗ್ರಹಾರ ಗ್ರಾಮದ ಸರ್ವೇ ನಂ.75ಕ್ಕೆ (ಕೆರೆಯ ಏರಿಯ ಪ್ರದೇಶವನ್ನೂ ಒಳಗೊಂಡಂತೆ) ಹೊಸ ನಂಬರ್ (ಅಂದರೆ ಸಂಖ್ಯೆ 163) ನೀಡಿದ ಆರೋಪದ ಮೇರೆಗೆ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ವಿರುದ್ಧ ಕೆಲವು ಸಾಕ್ಷ್ಯಾಧಾರ ಕಂಡುಬಂದಿರುವುದು ನಿಜ. 2008-2012ರ ಅವಧಿಯಲ್ಲಿ ಯಲಹಂಕ ಹೆಚ್ಚುವರಿ ತಾಲೂಕು ಕಚೇರಿಯಲ್ಲಿ ತಾವು ಕೆಲಸ ಮಾಡಿದ್ದೇವೆ. ಆ ವೇಳೆ ಯಾವುದೇ ಸರ್ವೇ ನಂಬರ್ ಮಾರ್ಪಾಡಾಗಿಲ್ಲ ಎಂಬ ಅರ್ಜಿದಾರರ ವಾದವನ್ನು ಈ ಹಂತದಲ್ಲಿ ಒಪ್ಪಲಾಗದು ತಿಳಿಸಿದೆ. ಅಲ್ಲದೆ, ಸರ್ವೇ ನಂಬರ್ ಮಾರ್ಪಡಿಸಿದ ಹಾಗೂ ಸರ್ವೇ ಹಾಗೂ ಕಂದಾಯ ಅಧಿಕಾರಿ, ಸಿಬ್ಬಂದಿ ವರ್ಗದ ಸಹಿ ನಕಲು ಮಾಡಿದ ಬಗ್ಗೆ ನಿರ್ದಿಷ್ಟ ಆರೋಪ ಕೇಳಿ ಬಂದಿದೆ. ಹಾಗಾಗಿ, ಪ್ರಕರಣ ಅರ್ಜಿದಾರರ ಅವಧಿಯಲ್ಲಿ ನಡೆದಿದೆಯೇ ಅಥವಾ ತದನಂತರ ನಡೆದಿದೆಯೇ ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕಾಗುತ್ತದೆ.
ಪಿಸಿ ಕಾಯ್ದೆಯಡಿ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅಧಿಕಾರವಿದೆ. ಯಲಹಂಕ ಪೊಲೀಸರು ಮತ್ತು ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರೂ, ನಿರ್ದಿಷ್ಟ ತನಿಖಾ ಸಂಸ್ಥೆಯ ತನಿಖಾಧಿಕಾರಿಯ ತನಿಖಾ ಕರ್ತವ್ಯವನ್ನು ಮೊಟಕಗೊಳಿಸಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ ಈ ಅರ್ಜಿದಾರರು ತಮ್ಮ ಅವಧಿಯಲ್ಲಿ ಅಂತಹ ಯಾವುದೇ ಅಪರಾಧಗಳನ್ನು ಎಸಗದಿದ್ದರೆ, ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸುವಾಗ ಅವರನ್ನು ಬಿಡುಗಡೆ ಮಾಡಲಾಗುವುದು. ಆದರೆ, ರಾಜ್ಯಕ್ಕೆ ಸೇರಿದ ಕೆರೆಯ ಏರಿಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕಂದಾಯ ಹಾಗೂ ಸರ್ವೇ ದಾಖಲೆ ಸೃಷ್ಟಿಸಿ ರಾಜ್ಯಕ್ಕೆ ನಷ್ಟ ಉಂಟು ಮಾಡಿರುವುದು ಗಂಭೀರ ಆರೋಪವಾಗಿದ್ದು, ಸತ್ಯಾಂಶ ಹೊರತರಲು ತನಿಖೆ ನಡೆಸಬೇಕಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ನವರತ್ನ ಅಗ್ರಹಾರ ಗ್ರಾಮದ ಸರ್ವೇ ನಂ.75ರಲ್ಲಿನ 25 ಎಕರೆ 11 ಗುಂಟೆ ವಿಸ್ತೀರ್ಣದ ಕೆರೆಯ ಪ್ರದೇಶದ ಪೈಕಿ 5 ಎಕರೆ ಕೆರೆ ಏರಿ ಜಾಗಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಪೋಡಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೊಸ ಸರ್ವೇ ನಂ.163 ಅನ್ನು ನೀಡಲಾಗಿದೆ. ಆ ಮೂಲಕ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂಬ ಆರೋಪದ ಮೇಲೆ 2017ರಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಎಸಿಬಿ (ಇಂದಿನ ಲೋಕಾಯುಕ್ತ) ಮತ್ತು ಯಲಹಂಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.
ಇದರಿಂದ ಅರ್ಜಿದಾರರ ಮೇಲೆ ಲೋಕಾಯುಕ್ತ ಪೊಲೀಸರು, ಪಿಸಿ ಕಾಯ್ದೆ ಸೆಕ್ಷನ್ 13(1)(ಸಿ), 13(1)(ಡಿ) ಮತ್ತು 13(2) ಅಡಿ ಅಧಿಕಾರ ದುರುಪಯೋಗ ಮತ್ತು ಕ್ರಿಮಿನಲ್ ದುರ್ನಡತೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಮತ್ತೊಂದೆಡೆ ಯಲಹಂಕ ಠಾಣಾ ಪೊಲೀಸರು ಐಪಿಸಿ ಸೆಕ್ಷನ್ 409, 465, 468, 471 ಅಡಿ ಫೋರ್ಜರಿ ಹಾಗೂ ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದರು.