ಪತ್ನಿ ಚೆನ್ನಮ್ಮ ಸಾವು, ಆಸ್ಪತ್ರೆ ಎದುರಲ್ಲೇ ಕಣ್ಣೀರಿಟ್ಟು ಮೌನವಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ

Published : Jul 18, 2026, 09:39 PM IST
HD Devegowda On Chennamma

ಸಾರಾಂಶ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. 72 ವರ್ಷಗಳ ಕಾಲ ದೇವೇಗೌಡರ ನೆರಳಾಗಿದ್ದ ಪತ್ನಿಯ ಅಗಲಿಕೆಯಿಂದ ದೇವೇಗೌಡರು ಮೂಕವಿಸ್ಮಿತರಾಗಿ ಕಣ್ಣೀರು ಹಾಕಿದರು. ಕುಟುಂಬದ ಸದಸ್ಯರು ಕೂಡ ದುಃಖದಲ್ಲಿ ಮುಳುಗಿದ್ದರು.

ಬೆಂಗಳೂರು (ಜು.18): ಎಲ್ಲೇ ಹೋಗಲಿ ದೇವೇಗೌಡರ ನೆರಳಿನಂತೆ ಅವರೊಂದಿಗೆ ಹೋಗುತ್ತಿದ್ದ ಚೆನ್ನಮ್ಮ ಶನಿವಾರ ವಿಧಿವಶರಾಗಿದ್ದಾರೆ. 72 ವರ್ಷಗಳ ಕಾಲ ಸಂಸಾರದ ನೊಗ ಹೊತ್ತುಕೊಂಡು, ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಆಡಿ ಬೆಳೆಸಿದ್ದ ಚೆನ್ನಮ್ಮ ಶನಿವಾರ ಸಂಜೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಸ್ವತಃ ಎಚ್‌ಡಿ ಕುಮಾರಸ್ವಾಮಿ ಹೇಳಿರುವಂತೆ, ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರಿಗೆ ಅನಾರೋಗ್ಯ ಬಾಧಿಸುತ್ತಿತ್ತು. ಆಸ್ಪತ್ರೆಗೆ ಹೋಗುವುದು ಬರುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಆಸ್ಪತ್ರೆಗೆ ಹೋದವರು ಬರಲೇ ಇಲ್ಲ. ತಾಯಿ ಚೇತರಿಕೆ ಕಂಡು ವಾಪಾಸ್ಸು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ, ಪತ್ನಿ ವಾಪಾಸ್ಸು ಬರ್ತಾಳೆ ಅಂತಾ ಕಾದಿಡ್ಡ ದೊಡ್ಡಗೌಡರಿಗೆ ಸಂಜೆಯ ವೇಳೆಗೆ ಆಘಾತ ಎದುರಾಗಿತ್ತು.

ಇಳಿವಯಸ್ಸಲ್ಲಿ ಪತ್ನಿಯನ್ನು ಕಳೆದುಕೊಂಡು ದೇವೇಗೌಡರ ದೊಡ್ಡ ದುಃಖ ಹೇಗಿರಬಹುದು ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ಸಂಜೆಯ ವೇಳೆಗೆ ಆಸ್ಪತ್ರೆಯ ಎಲ್ಲಾ ಕಾರ್ಯಗಳನ್ನು ಮುಗಿಸಿಕೊಂಡು ಪಾರ್ಥಿವ ಶರೀರವನ್ನು ಆಂಬುಲೆನ್ಸ್‌ನಲ್ಲಿ ಇಡುವ ಮುನ್ನ ದೇವೇಗೌಡರು ಆಸ್ಪತ್ರೆಯ ಮುಂಭಾಗದಿಂದ ವೀಲ್‌ಚೇರ್‌ನಲ್ಲಿ ಹೊರಬಂದರು. ಈ ವೇಳೆಗಾಗಲೇ ಪೊಲೀಸರು, ಕಾರ್ಯಕರ್ತರು ಹಾಗೂ ಮಾಧ್ಯಮದವರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ದೇವೇಗೌಡರ ಮುಖವನ್ನು ಸೆರೆ ಹಿಡಿಯುವ ಇರಾದೆಯಲ್ಲಿ ಎಲ್ಲರೂ ಇದ್ದರು.

ಆರಂಭದಲ್ಲಿ ಮಾಧ್ಯಮದ ಕ್ಯಾಮೆರಾವನ್ನು ಆರಾಮವಾಗಿಯೇ ಎದುರಿಸಿದ ದೇವೇಗೌಡರ ಮುಖದಲ್ಲಿ ದುಃಖ ಇರುವುದು ಕಾಣುತ್ತಿತ್ತು. ಆದಷ್ಟು ದುಃಖವನ್ನು ತಡೆಹಿಡಿದು ನಗುವ ಪ್ರಯತ್ನ ಮಾಡಿದರಾದರೂ, ಸಾಧ್ಯವಾಗಲಿಲ್ಲ. ಕ್ಯಾಮೆರಾ ಲೆನ್ಸ್‌ಗಳು ದೇವೇಗೌಡರ ಮುಖವನ್ನು ಜೂಮ್‌ ಮಾಡುತ್ತಿದ್ದಂತೆ ದೊಡ್ಡಗೌಡರ ಕಣ್ಣಾಲಿಗಳು ತೇವವಾಗಿದ್ದು ಕಂಡಿತ್ತು.

ಅದಾದ ಕೆಲವೇ ಹೊತ್ತಲ್ಲಿ ಪತ್ನಿ ನೆನಪು ಉಮ್ಮಳಿಸಿ ಬಂದಂತಾಗಿ ಕಣ್ಣಂಚಲ್ಲಿ ತುಂಬಿದ್ದ ನೀರು ಹೊರಬಂದಿತು. ಅದನ್ನು ಒರೆಸಿಕೊಳ್ಳುವ ಕೆಲಸಕ್ಕೂ ದೇವೇಗೌಡರು ಇಳಿಯಲಿಲ್ಲ. ಕೊನೆಗೆ ಅವರು ಹೊರಡುವ ಕಾರ್‌ ಬಂದಾಗ, ಬಲಗೈಯಿಂದ ಕಣ್ಣೀರು ಒರೆಸಿಕೊಂಡು ಕಾರ್‌ ಹತ್ತಿದರು. ಎಲ್ಲಿಯೂ ಅವರು ಒಂದಕ್ಷರ ಕೂಡ ಮಾತನಾಡದೇ ಮೌನವಾಗಿದ್ದರು.

ರೇವಣ್ಣ, ನಿಖಿಲ್ ಕುಮಾರಸ್ವಾಮಿ ಕಣ್ಣೀರು

ಆಸ್ಪತ್ರೆಯಿಂದ ಎಚ್‌ಡಿ ರೇವಣ್ಣ ಹಾಗೂ ನಿಖಿಲ್‌ ಕುಮಾರಸ್ವಾಮಿ ಹೊರಬರುವ ವೇಳೆಗೆ ಕಣ್ಣೀರು ಹಾಕುತ್ತಿದ್ದರು. ತಾಯಿಯ ಪಾರ್ಥೀವವನ್ನು ಕಂಡು ರೇವಣ್ಣ ಅತೀವ ಭಾವುಕರಾಗಿದ್ದರು. ಭಾವನಿ ರೇವಣ್ಣ ಸೇರಿದಂತೆ ಕುಟುಂಬದವರು ಮೃತದೇಹ ಶಿಫ್ಟ್‌ ಮಾಡಿದ ಆಂಬುಲೆನ್ಸ್‌ನಲ್ಲಿಯೇ ಪ್ರಯಾಣ ಮಾಡಿದರೆ, ದೇವೇಗೌಡರು ಕಾರ್‌ನಲ್ಲಿ ಇದನ್ನು ಹಿಂಬಾಲಿಸಿದರು.

ಪ್ರಧಾನಿ ಮೋದಿ ಕರೆ

ದೇವೇಗೌಡರ ಪತ್ನಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

PREV
Read more Articles on
click me!

Recommended Stories

Chennamma: HD ದೇವೇಗೌಡ್ರು ಜೈಲಿಗೆ ಹೋದಾಗಲೂ ಗಟ್ಟಿಯಾಗಿ ನಿಂತು ಮನೆ ನಡೆಸಿದ್ದ ಚೆನ್ನಮ್ಮ; 72 ವರ್ಷದ ದಾಂಪತ್ಯ!
ಸೋನಮ್ ವಾಂಗ್ಚುಕ್‌ ಬೆಂಬಲಿಸಿ ಬೆಂವಿವಿ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ