ಬೆಂಗಳೂರಲ್ಲಿ 1 ಕೋಟಿ ರೂ ಚಿನ್ನಾಭರಣ ಲೂಟಿ.. ನೇಪಾಳ ಗಡಿಯಲ್ಲಿ ಆರೋಪಿಗಳು ಲಾಕ್ ಆಗಿದ್ದು ಹೇಗೆ?

Published : Aug 26, 2026, 06:46 PM IST
nepal gang arrested

ಸಾರಾಂಶ

ನಂಬಿಕಸ್ಥ ಮನೆಯಾಳೇ ಕಳ್ಳತನಕ್ಕೆ ಇಳಿದ ಕೇಸ್ ಇದಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಕಿಡಿಗೇಡಿಗಳ ಗ್ಯಾಂಗ್ ಬರೋಬ್ಬರಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿತ್ತು. ಇದೀಗ ಆ ಗ್ಯಾಂಗ್ ಅರೆಸ್ಟ್ ಆಗಿದೆ.

ಬೆಂಗಳೂರು: ಮನೆಯ ಕೆಲಸಕ್ಕೆ ನಂಬಿ ಇಟ್ಟುಕೊಂಡಿದ್ದ ವ್ಯಕ್ತಿಯೇ ತನ್ನ ಸಹಚರರೊಂದಿಗೆ ಸೇರಿ ಯಜಮಾನನ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಪ್ರಕರಣದ ಬೆನ್ನತ್ತಿದ ಯಲಹಂಕ ಪೊಲೀಸರು ಉತ್ತರ ಪ್ರದೇಶ-ನೇಪಾಳ ಗಡಿಯಲ್ಲಿ ನಾಲ್ವರು ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ

ಕಟ್ಟಿಗೇನಹಳ್ಳಿಯ ಪಿಜಿ ಸ್ಟ್ರೀಟ್ ನಿವಾಸಿ, ಎಂಎನ್‌ಸಿ ಕಂಪನಿಯ ನಿವೃತ್ತ ಉದ್ಯೋಗಿ 62 ವರ್ಷದ ಜಿ.ಇ. ಚಂದ್ರಮೌಳಿ ಮನೆಯಲ್ಲಿ ಆಗಸ್ಟ್ 15 ರಂದು ಕಳವು ನಡೆದಿತ್ತು. ಚಂದ್ರಮೌಳಿ ಮತ್ತು ಅವರ ಕುಟುಂಬದ ಸದಸ್ಯರು ಕಾರ್ಯಕ್ರಮ ನಿಮಿತ್ತ ಚಿತ್ರದುರ್ಗಕ್ಕೆ ಹೋಗಿದ್ದರು. ಮರುದಿನ ಮನೆಗೆ ಮರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಮನೆಯಾಳೇ ಮಾಸ್ಟರ್ ಮೈಂಡ್

ಚಂದ್ರಮೌಳಿ ಅವರ ಮನೆಯ ಸರ್ವೆಂಟ್ ಕ್ವಾರ್ಟರ್ಸ್‌ನಲ್ಲಿ ಸಂಜಯ್ ಭರತ್ ತಟಾಲ್ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದ. ಚಂದ್ರಮೌಳಿ ಕುಟುಂಬ ಚಿತ್ರದುರ್ಗಕ್ಕೆ ಹೋಗಿದ್ದನ್ನೇ ಕಾದಿದ್ದ ಸಂಜಯ್ ಮತ್ತು ಆತನ ಸಹಚರರು, ಟೆರೇಸ್ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಸುಮಾರು 1.06 ಕೆಜಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ಕಳ್ಳತನದ ನಂತರ ಸಂಜಯ್ ಮತ್ತು ಆತನ ಕುಟುಂಬ ನಾಪತ್ತೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಯಲಹಂಕ ಪೊಲೀಸರು ತಾಂತ್ರಿಕ ಸಹಾಯದಿಂದ ಆರೋಪಿಗಳು ನೇಪಾಳಕ್ಕೆ ಪರಾರಿಯಾಗುತ್ತಿರುವುದನ್ನು ಪತ್ತೆಹಚ್ಚಿದರು. ಅರೆಸೇನಾ ಪಡೆಗಳ (Paramilitary Forces) ನೆರವಿನೊಂದಿಗೆ ಉತ್ತರ ಪ್ರದೇಶ-ನೇಪಾಳ ಗಡಿಯಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರು ಯಾರು?

ಬಂಧಿತರನ್ನು ನೇಪಾಳ ಮೂಲದ ಎನ್.ದೀಪಕ್ ಶಾಹಿ (21), ಡಿ. ಅಭಿಷೇಕ್ ತಟಾಲ್ (25), ಎಮ್. ಅನ್ಬರೆ ದಾಮಿ (66) ಮತ್ತು ಪಿ. ಧೀರೇಂದ್ರ ಪ್ರೇಮ ಪರಿಯಾರ್ (25) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿ ಸಂಜಯ್ ಭರತ್ ಇನ್ನೂ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸರು ಈವರೆಗೆ 55 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ವಿಶೇಷವೆಂದರೆ.. ಸಂಜಯ್ 2021 ರಲ್ಲಿ ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹುದೇ ಕೃತ್ಯ ಎಸಗಿ ಬಂಧಿತನಾಗಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

PREV
Read more Articles on
click me!

Recommended Stories

B Nagendra Resignation: ಬಿ ನಾಗೇಂದ್ರ ರಾಜೀನಾಮೆಗೆ ಮುಂದಾಗಿದ್ದೇಕೆ? ಸಿಎಂ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ಏನು?
KSRTC ಬಸ್‌ಗಳಿಗೆ ಬಂತು ಹೈಟೆಕ್ ಕಣ್ಗಾವಲು ವ್ಯವಸ್ಥೆ! ಕ್ಷಣಕ್ಷಣಕ್ಕೂ ಸಿಗಲಿದೆ ಮಾಹಿತಿ, ಏನಿದು VLTD ಡಿವೈಸ್?