ಸ್ವಿಗ್ಗಿ, ಜೊಮ್ಯಾಟೊಗೆ ಶಾಕ್? ಫುಡ್ ಡೆಲಿವರಿಗೆ ಹೊಸ ದೈತ್ಯನ ಎಂಟ್ರಿ! ಬೆಂಗಳೂರಿನಲ್ಲಿ ಈಗಾಗಲೇ ಫುಡ್ ಡೆಲಿವರಿ ಟೆಸ್ಟ್ ಆರಂಭ..!

Published : Oct 21, 2026, 05:52 PM IST
Flipkart

ಸಾರಾಂಶ

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ 'ಈಟ್-ಇನ್ ಬೈ ಮಿನಿಟ್ಸ್' ಹೆಸರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ಸೇವೆ ಆರಂಭಿಸಲು ಸಜ್ಜಾಗಿದೆ. ಸದ್ಯ ಬೆಂಗಳೂರಿನಲ್ಲಿ ತನ್ನ 8,000 ಉದ್ಯೋಗಿಗಳಿಗೆ ಈ ಸೇವೆಯನ್ನು ಪರೀಕ್ಷಿಸುತ್ತಿದ್ದು, ಶೀಘ್ರದಲ್ಲೇ ಸ್ವಿಗ್ಗಿ ಮತ್ತು ಜೊಮ್ಯಾಟೊಗೆ ನೇರ ಪೈಪೋಟಿ ನೀಡಲಿದೆ. ಡೆಲಿವರಿಗಾಗಿ ಇ-ಕಾರ್ಟ್ ಮತ್ತು ONDC ನೆಟ್‌ವರ್ಕ್ ಬಳಸಿಕೊಳ್ಳಲಾಗುತ್ತಿದೆ.

Flipkart Food Delivery: Eat-In by Minutes ಭಾರತದ ಆನ್‌ಲೈನ್ ಫುಡ್ ಡೆಲಿವರಿ ಮಾರುಕಟ್ಟೆಗೆ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಎಂಟ್ರಿ ಕೊಡುತ್ತಿದೆ. ಸ್ವಿಗ್ಗಿ ಮತ್ತು ಜೊಮ್ಯಾಟೊಗೆ ನೇರ ಪೈಪೋಟಿ ನೀಡಲಿರುವ ಈ ಹೊಸ ಸೇವೆಯನ್ನು ಕಂಪನಿ ಇದೇ ತಿಂಗಳಾಂತ್ಯಕ್ಕೆ ಲಾಂಚ್ ಮಾಡುವ ಸಾಧ್ಯತೆಯಿದೆ. ಫುಡ್ ಆರ್ಡರ್ ಮತ್ತು ಡೆಲಿವರಿ ಸೇವೆಯ ಟೆಸ್ಟಿಂಗ್ ಅನ್ನು ಕಂಪನಿ ಈಗಾಗಲೇ ಶುರು ಮಾಡಿದೆ.

'ಈಟ್-ಇನ್ ಬೈ ಮಿನಿಟ್ಸ್' ಟೆಸ್ಟಿಂಗ್ ಹಂತದಲ್ಲಿದೆ

'ಈಟ್-ಇನ್ ಬೈ ಮಿನಿಟ್ಸ್' (Eat-in by Minutes) ಹೆಸರಿನಲ್ಲಿ ಫ್ಲಿಪ್‌ಕಾರ್ಟ್ ತನ್ನ ಹೊಸ ಫುಡ್ ಡೆಲಿವರಿ ಸೇವೆಯನ್ನು ಪರೀಕ್ಷಿಸುತ್ತಿದೆ ಎಂದು ಟೆಕ್‌ಕ್ರಂಚ್ ವರದಿಯನ್ನು ಉಲ್ಲೇಖಿಸಿ ಇಂಡಿಯಾ ಟುಡೇ ಟೆಕ್ ವರದಿ ಮಾಡಿದೆ. ಬೆಂಗಳೂರಿನಲ್ಲಿ ಮೊದಲ ಹಂತದ ಟೆಸ್ಟಿಂಗ್ ನಡೆಯುತ್ತಿದೆ. ಫ್ಲಿಪ್‌ಕಾರ್ಟ್‌ನ ಕ್ವಿಕ್ ಕಾಮರ್ಸ್ ಸೇವೆಯಾದ 'ಫ್ಲಿಪ್‌ಕಾರ್ಟ್ ಮಿನಿಟ್ಸ್'ಗೆ ಲಿಂಕ್ ಮಾಡಿ ಈ ಹೊಸ ಹೆಸರನ್ನು ಇಡಲಾಗಿದೆ. ಇದೇ ತಿಂಗಳ ಕೊನೆಯಲ್ಲಿ ಸೇವೆ ಶುರುವಾಗುವ ನಿರೀಕ್ಷೆಯಿದೆ. ಆದರೆ, ಆರಂಭದಲ್ಲಿ ಯಾವೆಲ್ಲಾ ನಗರಗಳಲ್ಲಿ ಇದು ಸಿಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ಈ ಬಗ್ಗೆ ಫ್ಲಿಪ್‌ಕಾರ್ಟ್ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಈ ವರ್ಷದ ಜುಲೈನಲ್ಲಿ ಫ್ಲಿಪ್‌ಕಾರ್ಟ್ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಫುಡ್ ಡೆಲಿವರಿ ಸೇವೆ ಆರಂಭಿಸುವ ಪ್ಲಾನ್ ಬಗ್ಗೆ ಖಚಿತಪಡಿಸಿದ್ದರು.

8,000 ಉದ್ಯೋಗಿಗಳಿಗೆ ಟೆಸ್ಟಿಂಗ್ ಸೇವೆ

ಸದ್ಯಕ್ಕೆ ಕಂಪನಿ ತನ್ನ ಉದ್ಯೋಗಿಗಳಿಗೆ ಮಾತ್ರ ಈ ಟೆಸ್ಟಿಂಗ್ ಸೀಮಿತಗೊಳಿಸಿದೆ. ಆರಂಭದಲ್ಲಿ ಕೆಲವೇ ನೂರು ಉದ್ಯೋಗಿಗಳಿಗೆ ಮಾತ್ರ ಇದ್ದ ಈ ಟೆಸ್ಟಿಂಗ್ ಅನ್ನು ಈಗ ಸುಮಾರು 8,000 ಉದ್ಯೋಗಿಗಳಿಗೆ ವಿಸ್ತರಿಸಲಾಗಿದೆ. ಫ್ಲಿಪ್‌ಕಾರ್ಟ್ ಶಾಪಿಂಗ್ ಆ್ಯಪ್‌ನಲ್ಲಿ ಈ ಹೊಸ ಸೇವೆಗಾಗಿ ಪ್ರತ್ಯೇಕ ಟ್ಯಾಬ್ ಕೂಡ ಸೇರಿಸಲಾಗಿದೆ. ಫ್ಲಿಪ್‌ಕಾರ್ಟ್ ಮಿನಿಟ್ಸ್, ಟ್ರಾವೆಲ್ ಬುಕ್ಕಿಂಗ್ ಸೇವೆಗಳ ಜೊತೆಯಲ್ಲೇ ಫುಡ್ ಡೆಲಿವರಿ ವಿಭಾಗವೂ ಗ್ರಾಹಕರಿಗೆ ಸಿಗಲಿದೆ.

ಫುಡ್ ಡೆಲಿವರಿಗೆ ಇ-ಕಾರ್ಟ್ (eKart) ಬಳಕೆ

ಸರ್ಕಾರದ ಬೆಂಬಲಿತ ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಮೂಲಕ ಲಿಸ್ಟ್ ಆಗಿರುವ ಹೋಟೆಲ್‌ಗಳು ಮತ್ತು ಫ್ಲಿಪ್‌ಕಾರ್ಟ್ ಜೊತೆ ನೇರ ಒಪ್ಪಂದ ಮಾಡಿಕೊಂಡಿರುವ ರೆಸ್ಟೋರೆಂಟ್‌ಗಳು ಈ ಹೊಸ ಸೇವೆಯಲ್ಲಿ ಲಭ್ಯವಿರಲಿವೆ. ಗ್ರಾಹಕರಿಗೆ ಊಟ ತಲುಪಿಸಲು ಫ್ಲಿಪ್‌ಕಾರ್ಟ್ ತನ್ನ ಲಾಜಿಸ್ಟಿಕ್ಸ್ ವಿಭಾಗವಾದ ಇ-ಕಾರ್ಟ್‌ನ (eKart) ಪ್ರತ್ಯೇಕ ಡೆಲಿವರಿ ನೆಟ್‌ವರ್ಕ್ ಅನ್ನು ಬಳಸಲಿದೆ. ಕ್ವಿಕ್ ಕಾಮರ್ಸ್ ಡೆಲಿವರಿ ಮಾಡುವವರಿಗಿಂತ ಫುಡ್ ಡೆಲಿವರಿ ಮಾಡುವ ಸಿಬ್ಬಂದಿ ಬೇರೆಯೇ ಇರುತ್ತಾರೆ. ಬೆಂಗಳೂರಿನಲ್ಲಿ 'ಈಟ್-ಇನ್ ಬೈ ಮಿನಿಟ್ಸ್' ಎಂದು ಬರೆದಿರುವ ಟಿ-ಶರ್ಟ್ ಧರಿಸಿದ ಡೆಲಿವರಿ ಬಾಯ್‌ಗಳು ಈಗಾಗಲೇ ಕಾಣಿಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಜೊಮ್ಯಾಟೊ ಮತ್ತು ಸ್ವಿಗ್ಗಿಗೆ ಟಫ್ ಫೈಟ್

ಸದ್ಯ ಭಾರತದ ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ಜೊಮ್ಯಾಟೊ ಮತ್ತು ಸ್ವಿಗ್ಗಿ ಪಾರುಪತ್ಯ ಮೆರೆಯುತ್ತಿವೆ. ಕೆನ್ ರಿಸರ್ಚ್ (Ken Research) ಅಂಕಿಅಂಶಗಳ ಪ್ರಕಾರ, 2024ರಲ್ಲಿ ಜೊಮ್ಯಾಟೊ ಶೇ. 58ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಸ್ವಿಗ್ಗಿ ಸುಮಾರು ಶೇ. 34ರಷ್ಟು ಪಾಲು ಹೊಂದಿದೆ. ರ್ಯಾಪಿಡೊ (Rapido) ಕೂಡ 'ಒನ್ಲಿ' (Only) ಹೆಸರಿನಲ್ಲಿ ಫುಡ್ ಡೆಲಿವರಿ ಸೇವೆ ಶುರು ಮಾಡಿದ್ದರೂ, ಅದು ಕೆಲವೇ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ಈ ಹಿಂದೆ ಉಬರ್, ಅಮೆಜಾನ್, ಗೂಗಲ್‌ನಂತಹ ದೊಡ್ಡ ಕಂಪನಿಗಳು ಕೂಡ ಈ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಪ್ರಯತ್ನಿಸಿದ್ದವು. ಆದರೆ, ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಲು ಅವುಗಳಿಗೆ ಸಾಧ್ಯವಾಗಲಿಲ್ಲ. 2020ರಲ್ಲಿ ಉಬರ್ ಭಾರತದಲ್ಲಿ ತನ್ನ ಉಬರ್ ಈಟ್ಸ್ (Uber Eats) ವ್ಯವಹಾರವನ್ನು ಜೊಮ್ಯಾಟೊಗೆ ಮಾರಾಟ ಮಾಡಿತ್ತು.

ಬೆಳೆಯುತ್ತಿರುವ ಆನ್‌ಲೈನ್ ಫುಡ್ ಮಾರುಕಟ್ಟೆ

ಪೈಪೋಟಿ ಜೋರಾಗಿದ್ದರೂ, ಭಾರತದ ಆನ್‌ಲೈನ್ ಫುಡ್ ಡೆಲಿವರಿ ಮಾರುಕಟ್ಟೆಯಲ್ಲಿ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಬ್ರೋಕರೇಜ್ ಸಂಸ್ಥೆ ಬರ್ನ್‌ಸ್ಟೈನ್ (Bernstein) ವರದಿ ಪ್ರಕಾರ, ಒಟ್ಟು ಆಹಾರ ಸೇವಾ ಮಾರುಕಟ್ಟೆಯಲ್ಲಿ ಆನ್‌ಲೈನ್ ಡೆಲಿವರಿಯ ಪಾಲು ಕೇವಲ ಶೇ. 15ಕ್ಕಿಂತ ಸ್ವಲ್ಪ ಹೆಚ್ಚಿದೆ. ಈ ಮಾರುಕಟ್ಟೆ ಪ್ರತಿ ವರ್ಷ ಶೇ. 18 ರಿಂದ ಶೇ. 20ರಷ್ಟು ಬೆಳೆಯುತ್ತಿದೆ ಎಂದು ಅಂಕಿಅಂಶಗಳು ತೋರಿಸುತ್ತಿವೆ. ಈ ಹೊತ್ತಿನಲ್ಲಿ ಫ್ಲಿಪ್‌ಕಾರ್ಟ್ ಎಂಟ್ರಿ ಕೊಟ್ಟಿರುವುದು ಭಾರತದ ಫುಡ್ ಡೆಲಿವರಿ ವಲಯದಲ್ಲಿ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

PREV
Read more Articles on
click me!

Recommended Stories

ಬೆಂಗಳೂರು ಕೆರೆಗಳ ಸ್ವಚ್ಛತೆ ಅಭಿಯಾನ; ಪಾಲಿಕೆ, ಪೌರ ಕಾರ್ಮಿಕರ ಜೊತೆಗೆ ಜನರೂ ಕೈಜೋಡಿಸುವಂತೆ ಮನವಿ!
ಬೆಂಗಳೂರಿನ ಕನ್ನಡ ಭವನದಲ್ಲಿ ಶ್ರೀ ಮಧ್ವ ಜಯಂತಿ ಉತ್ಸವ: ಗಣ್ಯರಿಂದ ಶ್ರೀಮಧ್ವಾಚಾರ್ಯರಿಗೆ ನಮನ