ಕುಮಾರ ಕೃಪಾ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್; ಕೊಠಡಿ ಕಾಯ್ದಿರಿಸುವ ಸಾರ್ವಜನಿಕರಿಗೆ ಲಕ್ಷಾಂತರ ವಂಚನೆ!

Published : Jul 28, 2026, 10:00 PM IST
Kumara Krupa Guest House

ಸಾರಾಂಶ

ಬೆಂಗಳೂರಿನ ಪ್ರಸಿದ್ಧ ಕುಮಾರ ಕೃಪಾ ಸ್ಟೇಟ್ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಆನ್‌ಲೈನ್‌ನಲ್ಲಿ ಕೊಠಡಿ ಕಾಯ್ದಿರಿಸುವ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಜಾಲವೊಂದು ಬೆಳಕಿಗೆ ಬಂದಿದೆ.

ಬೆಂಗಳೂರು (ಜು.28): ರಾಜಧಾನಿ ಬೆಂಗಳೂರಿನ ಪ್ರಸಿದ್ಧ ಸರ್ಕಾರಿ ನಿವಾಸ 'ನ್ಯೂ ಕುಮಾರ ಕೃಪಾ ಸ್ಟೇಟ್ ಗೇಸ್ಟ್ ಹೌಸ್' (New Kumara Krupa State Guest House) ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ವೆಬ್‌ಸೈಟ್ ಸೃಷ್ಟಿಸಿರುವ ಸೈಬರ್ ಖದೀಮರು, ಆನ್‌ಲೈನ್‌ನಲ್ಲಿ ಕೊಠಡಿ (ರೂಮ್) ಕಾಯ್ದಿರಿಸುವ ಗ್ರಾಹಕರಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಜಾಲ ಬೆಳಕಿಗೆ ಬಂದಿದೆ.

ಗೆಸ್ಟ್ ಹೌಸ್‌ನ ಹಿರಿಯ ವ್ಯವಸ್ಥಾಪಕ ಕಾರ್ತಿಕ್ ಸಂತೋಷ್ ಅವರು ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಮಾರ ಕೃಪಾ ಗೆಸ್ಟ್ ಹೌಸ್ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ನಿಂದ ಬುಕಿಂಗ್ ದೃಢೀಕರಣ (Booking Confirmations) ಮತ್ತು ರಶೀದಿಗಳನ್ನು (Invoices) ಸ್ವೀಕರಿಸಿದ್ದಾಗಿ ಹಲವು ಗ್ರಾಹಕರು ನಿರ್ವಹಣಾ ಮಂಡಳಿಗೆ ಮಾಹಿತಿ ನೀಡಿದ ಬಳಿಕ ಈ ಬೃಹತ್ ಸೈಬರ್ ವಂಚನೆ ಬಯಲಾಗಿದೆ.

kumarkrupaguesthouse.in ಹೆಸರಿನಲ್ಲಿ ವೆಬ್‌ಸೈಟ್ ಸೃಷ್ಟಿ

ಸೈಬರ್ ಖದೀಮರು kumarkrupaguesthouse.in ಎಂಬ ನಕಲಿ ವೆಬ್ ವಿಳಾಸವನ್ನು (Website Domain) ಸೃಷ್ಟಿಸಿ, ಅಧಿಕೃತ ಸರ್ಕಾರಿ ಗೆಸ್ಟ್ ಹೌಸ್‌ನ ಹೆಸರು ಹಾಗೂ ಗುರುತನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಈ ನಕಲಿ ವೆಬ್‌ಸೈಟ್ ಮೂಲಕ ರೂಮ್ ಬುಕಿಂಗ್ ಮಾಡುವ ಗ್ರಾಹಕರಿಗೆ ನಕಲಿ ಬಿಲ್ ಹಾಗೂ ರಶೀದಿಗಳನ್ನು ನೀಡಿ ನಂಬಿಸಲಾಗುತ್ತಿತ್ತು. ಇದು ನಿಜವಾದ ಸರ್ಕಾರಿ ಗೆಸ್ಟ್ ಹೌಸ್‌ನ ವೆಬ್‌ಸೈಟ್ ಎಂದೇ ಭಾವಿಸಿದ ಸಾರ್ವಜನಿಕರು ಆನ್‌ಲೈನ್ ಮೂಲಕ ಹಣ ಪಾವತಿಸಿ ಮೋಸ ಹೋಗಿದ್ದಾರೆ.

ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕುಮಾರ ಕೃಪಾ ಗೆಸ್ಟ್ ಹೌಸ್ ಆಡಳಿತ ಮಂಡಳಿಯು, ಈ ನಕಲಿ ವೆಬ್‌ಸೈಟ್‌ಗೂ ನಮ್ಮ ಸರ್ಕಾರಿ ಗೆಸ್ಟ್ ಹೌಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಾರ್ವಜನಿಕರು ಅಥವಾ ಅತಿಥಿಗಳು ಆನ್‌ಲೈನ್‌ನಲ್ಲಿ ಕೊಠಡಿಗಳನ್ನು ಕಾಯ್ದಿರಿಸುವಾಗ ಹಾಗೂ ಹಣ ಪಾವತಿಸುವ ಮುನ್ನ ಅಧಿಕೃತ ಪ್ಲಾಟ್‌ಫಾರ್ಮ್‌ಗಳನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಿದೆ. ಪ್ರಕರಣ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಕ್ರೈಂ (CEN) ಪೊಲೀಸರು ನಕಲಿ ವೆಬ್‌ಸೈಟ್ ರೂಪಿಸಿದ ಖದೀಮರಿಗಾಗಿ ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಸೇರಿ ಮೆಟ್ರೋ ಸಿಟಿಗಳನ್ನು ಹಿಂದಿಕ್ಕಿದ ಸಣ್ಣ ಪಟ್ಟಣಗಳು: ಹೆಚ್ಚು ವೇತನ ನೀಡುವುದರಲ್ಲಿ ಈ ನಗರವೇ ಟಾಪ್!
ಬೆಂಗಳೂರಿನ ಬಾನಂಗಳದಲ್ಲಿ ಅಪರೂಪದ ಅತಿಥಿಯ ಆಗಮನ! 1873ರಲ್ಲಿ ಪತ್ತೆಯಾಗಿದ್ದ ಧೂಮಕೇತು ಭೂಮಿಗೆ ಅತ್ಯಂತ ಸಮೀಪ!