
ಬೆಂಗಳೂರು: ಬೆಂಗಳೂರು ನಗರ ನಿರ್ಮಾಣವಾಗಿ 2027ರಲ್ಲಿ 500 ವರ್ಷಗಳು ತುಂಬಲಿದೆ. ಈ ಹಿನ್ನೆಲೆ ಮುಂದಿನ 10 ವರ್ಷಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಲಾಗಿದೆ. ಹೊಸ ಯೋಜನೆಗಳಿಗೆ ಸುಮಾರು 1 ಲಕ್ಷ ಕೋಟಿ ಬೇಕು. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಇವತ್ತು ಮುಖ್ಯಮಂತ್ರಿಗಳು ಬೆಂಗಳೂರು ನಗರ ಶಾಸಕರ ಸಭೆ ನಡೆಸಿದರು. ಸಭೆಯಲ್ಲಿ ಮಾತನ್ನಾಡಿರುವ ಸಿಎಂ, ಬೆಂಗಳೂರಲ್ಲಿ ಮುಂದಿನ 10 ವರ್ಷಗಳ ಯೋಜನೆ ಪ್ಲಾನ್ ಮಾಡಿದ್ದೇವೆ. ಬೆಂಗಳೂರು ನಗರದ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಉದ್ದೇಶ. ಈ ಆದ್ಯತೆ ಮೇರೆಗೆ ಯೋಜನೆಗಳಿಗೆ ಅನುದಾನ ಒದಗಿಸಲಾಗುವುದು. ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ರಸ್ತೆ ನಿರ್ಮಾಣ ಮಾತ್ರ ಪರಿಹಾರವಲ್ಲ. ಸಾರ್ವಜನಿಕ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.
ಬಿಎಂಟಿಸಿ, ಮೆಟ್ರೋ, ಸಬ್ ಅರ್ಬನ್ ರೈಲ್ವೇ ಸಂಪರ್ಕ ಹೆಚ್ಚಿಸಲು ಆದ್ಯತೆ ನೀಡಿದ್ದೇವೆ. ಪ್ರಸ್ತುತ 96 ಕಿಮೀ ಮೆಟ್ರೋ ಸಂಪರ್ಕ ಇದ್ದು, 2027ರ ಅವಧಿಗೆ ಇದನ್ನು 170 ಕಿಮೀ ಹೆಚ್ಚಿಸುವ ಗುರಿ ಹೊಂದಿದ್ದೇವೆ. ಪ್ರಸ್ತುತ 7000 ಬಸ್ಗಳಿವೆ. ಇದಕ್ಕೆ ಇನ್ನೂ 4500 ಹೊಸ ಬಸ್ ಸೇರ್ಪಡೆಗೊಳಿಸಲಿದ್ದೇವೆ. ಸಬ್ ಅರ್ಬನ್ ರೈಲು ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದೆ. 2030ರ ವೇಳೆಗೆ 150 ಕಿಮೀ ಸಂಪರ್ಕ ಸಾಧಿಸುವ ಗುರಿ ಇದೆ. ಬೆಂಗಳೂರು ನಗರಕ್ಕೆ ಹೆಚ್ಚುವರಿ ನೀರನ್ನು ಪೂರೈಸಲು ಕಾವೇರಿ 6ನೇ ಹಂತ ಯೋಜನೆ ಕೈಗೆತ್ತಿಕೊಳ್ಳಲಾಗುವುದು.
ಜಿಬಿಎ ಹೊರಗಡೆ 65 ಗ್ರಾಮ ಪಂಚಾಯತ್ ಈಗಾಗಲೇ ನಗರೀಕರಣವಾಗಿದೆ. ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಅವುಗಳನ್ನು ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಹಂತ ಹಂತವಾಗಿ ಈ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಯೋಜನೆ ರೂಪಿಸಿದ್ದೇವೆ. ರಸ್ತೆ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಿದ್ಧಪಡಿಸಲು ಸೂಚಿಸಲಾಗಿದೆ. ಕಸ ವಿಲೇವಾರಿ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರು ನಗರದ ಕಸ ನಿರ್ವಹಣೆ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಒಟ್ಟು 27 ಕ್ಷೇತ್ರಗಳಲ್ಲಿ ಕಸ ನಿರ್ವಹಣೆಗೆ 33 ಪ್ಯಾಕೇಜ್ ಮಾಡಲಾಗಿತ್ತು. ಈಗ 21 ಪ್ಯಾಕೇಜ್ಗೆ ಟೆಂಡರ್ ಕರೆಯಲಾಗಿದೆ. ಎಲ್ಲಾ ಅರ್ಹ ಟೆಂಡರ್ದಾರರಿಗೆ ಸದ್ಯದಲ್ಲಿಯೇ ಕಾರ್ಯಾದೇಶ ನೀಡಲಾಗುವುದು. ಹೊಸ ಟೆಂಡರ್ನಲ್ಲಿ ವಾಹನ ಸಾಮರ್ಥ್ಯದ ಆಧಾರದಲ್ಲಿ 9 ಸಾವಿರ ಟನ್ ವರೆಗೆ ಕಸ ಸಂಗ್ರಹಿಸಲು ಸಾಧ್ಯವಾಗಲಿದೆ. ಎಲ್ಲಾ ಕಸ ಸಂಗ್ರಹ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುವುದು. ಹೊಸ ವಾಹನವನ್ನು ಬಳಸಬೇಕಾಗಿದ್ದು, ಹಳೆಯ ವಾಹನ ಬಳಸುವಂತಿಲ್ಲ. ಕಸ ನಿರ್ವಹಣೆಯಲ್ಲಿ ನಿರ್ಲಕ್ಷ ತೋರುವ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.