
ಬೆಂಗಳೂರು (ಅ.28): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ತೂಗುದೀಪ ಪರಪ್ಪನ ಅಗ್ರಹಾರ ಜೈಲಲ್ಲಿ ದಿನಗಳನ್ನು ದೂಡುತ್ತಿದ್ದರೆ, ಇತ್ತ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹಾಗೂ ನಟ ಧನ್ವೀರ್ ಗೌಡ ನಡುವಿನ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ದರ್ಶನ್ ವಿಚಾರವಾಗಿ ಇವರಿಬ್ಬರ ನಡುವೆ ಮನಸ್ತಾಪ ಎನ್ನುವ ರೀತಿ ಲಕ್ಷಣ ಕಂಡಿತ್ತಾದರೂ, ಈಗ ಇದು ಸಂಪೂರ್ಣವಾಗಿ ಹಣಕಾಸಿನ ವಿಚಾರದ ವಿವಾದ ಎನ್ನುವುದು ಸ್ಪಷ್ಟವಾಗಿದೆ. ಈಗಾಗಲೇ ಧನ್ವೀರ್ ಗೌಡ ವಿರುದ್ಧ ಮೂರು ಕಡೆ ಎಫ್ಐಆರ್ ದಾಖಲಾಗಿದ್ದರೆ, ಇನ್ನು ವಿಜಯಲಕ್ಷ್ಮೀ ದರ್ಶನ್ ಹಾಗೂ ಅವರ ಮ್ಯಾನೇಜರ್ ನಾಗರಾಜ್ ವಿರುದ್ಧವೂ ಧನ್ವೀರ್ ಗೌಡ ಕಡೆಯಿಂದ ಪೊಲೀಸ್ ದೂರು ದಾಖಲಾಗಿದೆ.
ಇನ್ನು ವಿಜಯಲಕ್ಷ್ಮೀ ದರ್ಶನ್ ಹಾಗೂ ನಾಗರಾಜ್ ಅವರು ಮನೆಗೆ ಬಂದು ಬೆದರಿಕೆ ಹಾಕಿದ್ದಾಗಿ ಧನ್ವೀರ್ ಗೌಡ ಅವರ ತಂದೆ ತಿಮ್ಮೇಗೌಡ ಪೊಲೀಸ್ ದೂರು ಕೊಟ್ಟಿದ್ದಾರೆ. ಹಣಕಾಸಿನ ವಿಚಾರವಾಗಿ ವಿಜಯಲಕ್ಷ್ಮೀ, ಧನ್ವೀರ್ ಮನೆಗೆ ಹೋಗಿದ್ದರು ಎನ್ನುವ ಮಾತು ಈಗ ಕೇಳಿಬಂದಿದೆ. ದರ್ಶನ್ ಅವರ ಆಪ್ತರಾಗಿರುವ ವೇಲು ನಾಯ್ಕರ್ ಮಾತನಾಡಿದ್ದು, ಇದು ಹಣಕಾಸಿನ ವಿಚಾರವಾಗಿ ನಡೆದ ಘಟನೆ. ಹಣ ವಾಪಾಸ್ ಕೊಡುವಂತೆ ಧನ್ವೀರ್ಗೆ ಕೇಳಿದ್ದಾರೆ. ಆತ ಎಷ್ಟೇ ಕರೆ ಮಾಡಿದರೂ ಕಾಲ್ ಪಿಕ್ ಮಾಡದೇ ಅಂತರ ಕಾಯ್ದುಕೊಳ್ಳುತ್ತಿದ್ದರು. ಹೀಗಾಗಿ ನನಗೆ ಒಂದು ದಿನ ಧನ್ವೀರ್ ಜೊತೆ ಮಾತನಾಡುವಂತೆ ಹೇಳಿದ್ದರು. ನಾನು ಧನ್ವೀರ್ ಅವರ ತಂದೆಯ ಜೊತೆ ಮಾತನಾಡಿದ್ದೆ. ಅವರು ವಿಚಾರವನ್ನು ಮಗನಿಗೆ ತಿಳಿಸೋದಾಗಿ ಹೇಳಿದ್ದರು ಎಂದು ತಿಳಿಸಿದ್ದಾರೆ.
ಇದರ ನಡುವೆ ವಿಜಯಲಕ್ಷ್ಮೀ ದರ್ಶನ್ ಅವರು ಧನ್ವೀರ್ ಗೌಡ ಅವರ ಮನೆಗೆ ಹೋಗಿದ್ದ ದಿನದ ಕ್ಷಣವನ್ನು ವೇಲು ನಾಯ್ಕರ್ ಹೇಳಿದ್ದಾರೆ. ಪದೇ ಪದೇ ಕಾಲ್ ಮಾಡಿದ್ರೂ ಪಿಕ್ ಮಾಡದೇ ಇದ್ದಾಗ, ಇಂಥವನ ಹತ್ರ ನಾನ್ಯಾಕೆ ಹಣವನ್ನು ಹಾಗೇ ಬಿಡಬೇಕು ಎನ್ನುವ ಹಠ ವಿಜಯಲಕ್ಷ್ಮೀ ಅವರಿಗೆ ಬಂದಿತ್ತು.
ಅದಕ್ಕಾಗಿಯೇ ವಿಜಯದಶಮಿ ಹಬ್ಬದ ದಿನ ಧನ್ವೀರ್ ಅವರ ತಂದೆಗೆ 10ಕ್ಕೂ ಅಧಿಕ ಕಾಲ್ ಮಾಡಿದ್ದಾರೆ. ಆದರೆ, ಅವರ ತಂದೆ ಒಂದೂ ಕಾಲ್ ಪಿಕ್ ಮಾಡಲ್ಲ. 'ಅಂಕಲ್ ನೀವು ಫೋನ್ ಪಿಕ್ ಮಾಡ್ತಾ ಇಲ್ಲ. ಸಾಯಂಕಾಲ ,ಮನೆ ಬಳಿ ಬಂದು ಮಾತನಾಡಿಕೊಂಡು ಹೋಗ್ತೇನೆ' ಅಂತಾ ಮೆಸೇಜ್ ಕೂಡ ಮಾಡಿದ್ದರು. ಆ ಮೆಸೇಜ್ ನನ್ನ ಬಳಿಯೂ ಇದೆ. ಅದನ್ನ ಬಳಿಕ ಎಲ್ಲರಿಗೂ ನೀಡ್ತೇನೆ. ಮೆಸೇಜ್ ಹಾಕಿದ ಬಳಿಕ ತಮ್ಮ ಡ್ರೈವರ್ ಹಾಗೂ ಮ್ಯಾನೇಜರ್ ಕೂಡ ಆಗಿರುವ ನಾಗರಾಜ್ ಎನ್ನುವವರನ್ನು ಕರೆದುಕೊಂಡು ಧನ್ವೀರ್ ಮನೆಗೆ ಹೋಗಿದ್ದಾರೆ. ಮನೆಗೆ ಹೋದ ಬಳಿಕ ಅವರ ಮನೆಗೆ ಹೊಕ್ಕಿದ್ದಾರೆ. ಅಲ್ಲಿ ಧನ್ವೀರ್ ಅವರ ತಾಯಿ ಹಾಗೂ ತಂಗಿ ಮೊದಲಿಗೆ ಸಿಕ್ತಾರೆ. ಅವರ ಬಳಿ ಮಾತನಾಡಿಕೊಂಡು ಕುಳಿತಿರ್ತಾರೆ. ಆಗ ವಿಜಯಲಕ್ಷ್ಮೀ ಒಬ್ಬರೇ ಹೋಗಿದ್ದರು. ನಾಗರಾಜ್ ಹೊರಗೆ ನಿಲ್ಲಿದ್ದ ಕಾರ್ನಲ್ಲೇ ಕೂತಿದ್ದ. ಐದು ನಿಮಿಷ ಆದ ಬಳಿಕ ಅವರ ಮನೆಗೆ 2-3 ಜನ ಹುಡುಗರು ಬರುತ್ತಾರೆ. ಮೇಡಮ್ ಅವರನ್ನು ನೋಡುವ ಶೈಲಿ ವಿಚಿತ್ರವಾಗಿದ್ದಾಗ ಇವರು ಯಾರು ಎಂದು ಕೇಳಿದ್ದಾರೆ. ಆಗ ಇವರು ನಮ್ಮ ಸಂಬಂಧಿಗಳು, ಅಣ್ಣನ ಮಗ, ತಮ್ಮನ ಮಗ ಅಂತೇನೋ ಹೇಳಿದ್ದಾರೆ. ಅದೇನೋ ಇರಬಹುದು. ಅವರ ಮನೆ ಅವರಿಷ್ಟ. ಇವರು ಬಂದ ನಂತರವೇ ಧನ್ವೀರ್ ಗೌಡ ಅವರ ತಂದೆ ಮೇಲಿನಿಂದ ಕೆಳಗೆ ಇಳಿದು ಬಂದಿದ್ದಾರೆ ಎಂದು ವೇಲು ನಾಯ್ಕರ್ ಅಂದಿನ ದಿನದ ಕ್ಷಣ ನೆನೆಸಿಕೊಂಡಿದ್ದಾರೆ.
ಏನಮ್ಮ ನೀನು, ಹಾಗೆ, ಹೀಗೆ ಅಂತಾ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಆಗ ವಿಜಯಲಕ್ಷ್ಮೀ ಕೂಡ ಯಾಕಣ್ಣ ಹೀಗೆ ಮಾತನಾಡ್ತಿದ್ದೀರಾ ಅಂತಾ ಪ್ರಶ್ನೆ ಮಾಡಿದ್ದಾರೆ. ಇಬ್ಬರ ನಡುವೆ ಮಾತುಕತೆಗಳು ದೊಡ್ಡದಾಗಿ ಗಲಾಟೆ ಆಗುವ ಶಬ್ದ ಕೇಳಿಸಿಕೊಂಡ ಮ್ಯಾನೇಜರ್ ನಾಗರಾಜ್ ಮನೆಯ ಒಳಗಡೆ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಧನ್ವೀರ್ ಮನೆಗೆ ಹೊರಗಡೆಯಿಂದ ಬಂದಿದ್ದ ಜನರು ಕತ್ತಿನ ಪಟ್ಟಿ ಹಿಡಿದು ನೂಕಿದ್ದಾರೆ. 'ಯಾರೋ ನೀನು, ರೌಡಿನೇನೋ ನೀನು?' ಅಂತೆಲ್ಲಾ ಮಾತನಾಡಿದ್ದಾರೆ. ಆಗ ಒಳಗಿದ್ದ ಮೇಡಮ್ಗೆ ಆತಂಕ ಆಗಿದೆ. ಅಲ್ಲಿಂದಲೇ ಅವರು 'ನಾಗು, ವೇಲು ಅಣ್ಣನಿಗೆ ಫೋನ್ ಮಾಡು' ಎಂದು ಹೇಳಿದ್ದಾರೆ. ನಾಗರಾಜ್ಗೆ ಹೇಳೋದರೊಂದಿಗೆ ಅವರು ಕೂಡ ನನಗೆ ಫೋನ್ ಮಾಡ್ತಾರೆ. ಆದರೆ, ನಾನು ದೇವರ ಮೆರವಣಿಗೆಯಲ್ಲಿದ್ದೆ. ಆ ಸೌಂಡ್ನಲ್ಲಿ ಏನೂ ವಿಚಾರ ಕೇಳಿಸಲಿಲ್ಲ. ಅದಾದ ಬಳಿಕ ವೇಲು ಅಣ್ಣ ಫೋನ್ ಪಿಕ್ ಮಾಡ್ತಾ ಇಲ್ಲ. ಭೋಜರಾಜ್ ಅನ್ನೋರಿಗೆ ಕಾಲ್ ಮಾಡು ಎಂದು ಮೇಡಮ್, ನಾಗರಾಜ್ಗೆ ಹೇಳಿದ್ದಾರೆ.
ಈ ಭೋಜರಾಜ್ ಏನೂ ರೌಡಿ ಅಲ್ಲ. ಸಿನಿಮಾ ಪ್ರೊಡ್ಯೂಸರ್. ಧನ್ವೀರ್ ಮನೆಯಿಂದ ಎರಡು ರಸ್ತೆ ಆಚೆ ಇದ್ದಾರೆ. ಅವರಿಗೆ ಫೋನ್ ಮಾಡಿ, 'ಅಣ್ಣ ಈ ರೀತಿ ಬಂದಿದ್ದೆ ಸಮಸ್ಯೆ ಆಗಿದೆ' ಎಂದು ಹೇಳಿದ್ದಾರೆ. ಅಷ್ಟರಲ್ಲಿ ಧನ್ವೀರ್ ಮನೆಯ ರೂಮ್ನಲ್ಲಿದ್ದ ವಿಜಯಲಕ್ಷ್ಮೀ ಅವರನ್ನು ಹೊರಗಡೆಯಿಂದ ಲಾಕ್ ಮಾಡಿದ್ದಾರೆ. ರೂಮ್ನ ಚಿಲಕ ಹಾಕಿದ್ದಾರೆ ಅಂದ್ರೆ ಕೂಡು ಹಾಕಿದ್ದಂತೆ ಅರ್ಥ. ಕೂಡು ಹಾಕಿದ ಬಳಿಕವೇ ನನಗೆ ಹಾಗೂ ಭೋಜರಾಜ್ ಅವರಿಗೆ ಕಾಲ್ ಮಾಡಿದ್ದರು. ಭೋಜರಾಜ್ ಅವರು, ತಕ್ಷಣವೇ ಅಲ್ಲಿಗೆ ಹೋಗಿ ಮಾತುಕತೆ ಮಾಡಿ, ಚಚಿಲಕ ತೆಗೆದು ಅವರನ್ನು ಹೊರಗಡೆ ಕಳಿಸಿದ್ದಾರೆ ಎಂದು ವೇಲು ನಾಯ್ಕರ್ ಹೇಳಿದ್ದಾರೆ.