ಯಡಿಯೂರು ವಾರ್ಡ್ ನಲ್ಲಿ ಡಾ.ರಾಜ್‌ ಕುಮಾರ್ ರಂಗಮಂದಿರ ಲೋಕಾರ್ಪಣೆ

By Sathish Kumar KHFirst Published Nov 28, 2022, 5:32 PM IST
Highlights

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯ ವತಿಯಿಂದ 4 ಕೋಟಿ ರೂ. ವೆಚ್ಛದಲ್ಲಿ 'ಡಾ. ರಾಜ್‍ ಕುಮಾರ್ ರಂಗಮಂದಿರ'  ಮತ್ತು 3 ಕೋಟಿ ರೂ. ವೆಚ್ಛದಲ್ಲಿ 'ಶಾರದಾ ದೇವಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರ'ದ ಕಟ್ಟಡವನ್ನು ನಿರ್ಮಿಸಲಾಗಿದೆ.

ಬೆಂಗಳೂರು (ನ.28) : ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯ ವತಿಯಿಂದ 4 ಕೋಟಿ ರೂ. ವೆಚ್ಛದಲ್ಲಿ 3 ಮಹಡಿಗಳ 'ಡಾ. ರಾಜ್‍ ಕುಮಾರ್ ರಂಗಮಂದಿರ'ವನ್ನು ಮತ್ತು 3 ಕೋಟಿ ರೂ. ವೆಚ್ಛದಲ್ಲಿ 'ಶಾರದಾ ದೇವಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರ'ದ ಕಟ್ಟಡವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ.

ರಾಜಧಾನಿಯ ಯಡಿಯೂರು ವಾರ್ಡ್ ನ ಶಾಸ್ತ್ರಿನಗರ ಮತ್ತು ತ್ಯಾಗರಾಜನಗರ ಬಡಾವಣೆಗೆ ಹೊಂದಿಕೊಂಡಂತಿರುವ 'ಡಾ.ರಾಜ್‍ ಕುಮಾರ್ ರಂಗಮಂದಿರ'ದ ಎರಡನೇ ಮಹಡಿಯಲ್ಲಿ ಸುಮಾರು 1.50 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಆಧುನಿಕ ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗಿದೆ. ಡಾ.ರಾಜ್‍ ಕುಮಾರ್ ವ್ಯಾಯಾಮ ಮಂದಿರದ ಒಂದನೇ ಮಹಡಿಯಲ್ಲಿ ಒಂದು ಬಾರಿಗೆ 150 ಕ್ಕೂ ಹೆಚ್ಚು ಜನ ಯೋಗ ತರಬೇತಿಯನ್ನು ಪಡೆದುಕೊಳ್ಳಬಹುದು. ಜೊತೆಗೆ ರಂಗಭೂಮಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನೆಲ ಮಹಡಿಯಲ್ಲಿ ಡಾ. ರಾಜ್‍ ಕುಮಾರ್ ರಂಗಮಂದಿರ ನಿರ್ಮಿಸಲಾಗಿದೆ.

ಮತದಾರರ ಪಟ್ಟಿ ಅಕ್ರಮ: ಬಿಬಿಎಂಪಿ ಸಿಬ್ಬಂದಿಗೆ ನಡುಕ..!

ಡಾ. ರಾಜ್‍ ಕುಮಾರ್ ರಂಗಮಂದಿರದ ಮುಂಭಾಗದಲ್ಲಿ 10X12 ಅಡಿಗಳ ಬೃಹತ್  ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 10 ಗಂಟೆಯ ವರೆಗೆ ಕರ್ನಾಟಕ ರತ್ನ  ಡಾ.ರಾಜ್‍ ಕುಮಾರ್ ಅವರು ನಟಿಸಿರುವ ಎಲ್ಲ 206 ಚಲನಚಿತ್ರಗಳ ತುಣುಕುಗಳು ಆಯಾ ಚಲನಚಿತ್ರಗಳ ಪಾತ್ರವರ್ಗ, ನಿರ್ದೇಶಕರು, ನಿರ್ಮಾಪಕರು ಮತ್ತು ಇತರೆ ತಾಂತ್ರಿಕವರ್ಗದವರ ಸಂಪೂರ್ಣ ಮಾಹಿತಿ ಮತ್ತು ಅವರ ಸಾರ್ವಜನಿಕ ಕಾರ್ಯಕ್ರಮಗಳ ವಿಡಿಯೋ ತುಣುಕುಗಳು ಬಿತ್ತರವಾಗುವಂತೆ ಮಾಡಲಾಗಿದೆ.

ಯಡಿಯೂರು ವಾರ್ಡ್ ನ ಶಾಸ್ತ್ರಿನಗರ ಬಡಾವಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ 'ಶಾರದಾ ದೇವಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರ'ವನ್ನು ನಿರ್ಮಿಸಲಾಗಿದೆ. ಇಲ್ಲಿ ಬಡ ಮತ್ತು ಕೆಳ ಮಧ್ಯಮ ವರ್ಗದ ಮಹಿಳೆಯರಿಗೆ ಉಚಿತವಾಗಿ ಕೇವಲ ಹೊಲಿಗೆ ತರಬೇತಿಯಲ್ಲದೇ ಎಂಬ್ರಾಯಿಡರಿ (Embroidery) ಮತ್ತು ನಿಟ್ಟಿಂಗ್ (Knitting) ತರಬೇತಿಗಳನ್ನೂ ನೀಡಲಾಗುತ್ತದೆ. ರಾಮಕೃಷ್ಣ ಪರಮಹಂಸರ ಪತ್ನಿ ಶಾರದಾ ದೇವಿಯವರ ನೆನಪಿನಾರ್ಥ ಸರಿ ಹೊಲಿಗೆ ತರಬೇತಿ ಕೇಂದ್ರಕ್ಕೆ 'ಶಾರದಾ ದೇವಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರ' ಎಂದು ನಾಮಕರಣ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯದ ಕಂದಾಯ ಸಚಿವ ಆರ್. ಅಶೋಕ್, ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಉಪಸ್ಥಿತರಿದ್ದರು.

click me!