ಕೇಂದ್ರದ ನೀತಿ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ

By Web DeskFirst Published Nov 4, 2019, 7:51 AM IST
Highlights

ಆರ್‌ಸಿಇಪಿ ವಿರುದ್ಧ ಇಂದಿನಿಂದ ಕಾಂಗ್ರೆಸ್‌ ಹೋರಾಟ: ದಿನೇಶ್‌| ಇಂದು ಮುಂಡಗೋಡಲ್ಲಿ, 11ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ| ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಕೇಂದ್ರದ ತೀರ್ಮಾನದ ವಿರುದ್ಧ ಪ್ರತಿಭಟನೆ|

ಬೆಂಗಳೂರು[ನ.4]: ಹೈನೋದ್ಯಮ ಸೇರಿದಂತೆ ದೇಶದ ಬೆನ್ನೆಲುಬಾದ ವಿವಿಧ ಕ್ಷೇತ್ರಗಳನ್ನು ವಿದೇಶಿ ಖಾಸಗಿ ಸಂಸ್ಥೆಗಳಿಗೆ ತೆರೆಯುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಕೇಂದ್ರದ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ತಿಳಿಸಿದ್ದಾರೆ. 

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಕೇಂದ್ರದ ತೀರ್ಮಾನದ ವಿರುದ್ಧ ನ.4 ರಿಂದ ನ.15 ರವರೆಗೂ ಪ್ರತಿಭಟನೆಗಳನ್ನು ರಾಜ್ಯದ ವಿವಿಧೆಡೆ ನಡೆಸಲಾಗುವುದು. ನ.4 ರಂದು ಮುಂಡಗೋಡ, 5ಕ್ಕೆ ಶಿವಮೊಗ್ಗ, 6ಕ್ಕೆ ವಿಜಯಪುರದಲ್ಲಿ ಪ್ರತಿಭಟನೆ ನಡೆಸಲಾಗುವುದು. ನ.9 ರಂದು ರಾಜ್ಯಾದ್ಯಂತ ಹೋರಾಟ ಆಯೋಜಿಸಲಾಗಿದೆ. ನ.11ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು. ಅನಂತರ ನ.14ರಂದು ರಾಯಚೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೇಶದ ಆರ್ಥಿಕತೆ ಅಧೋಗತಿಯಲ್ಲಿದ್ದು, ಉದ್ಯೋಗ ಸೃಷ್ಟಿ ಕೋಮಾವಸ್ಥೆಯಲ್ಲಿದೆ. ಉದ್ಯೋಗ ಸೃಷ್ಟಿಯಿರಲಿ, ಇರುವ ಉದ್ಯೋಗ ಉಳಿಸಿಕೊಳ್ಳಲು ಆಗುತ್ತಿಲ್ಲ. ದೇಶ ಅರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಇರುವಂತೆ ಕಾಣುತ್ತಿದೆ. ಐದೂವರೆ ವರ್ಷದ ಹಿಂದೆ ನರೇಂದ್ರ ಮೋದಿ ಪ್ರಧಾನಿ ಆದಾಗ ಜನರಲ್ಲಿ ಸಾಕಷ್ಟು ಆಸೆ, ಭರವಸೆ ಹುಟ್ಟಿಸಿದ್ದರು. ಇಂದು ಆರ್‌ಸಿಎಇಪಿ (ಎಫ್‌ಟಿಎ) ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕತೆಗೆ ದೊಡ್ಡ ಸಮಸ್ಯೆಯುಂಟಾಗಿತ್ತು. ಜಿಎಸ್‌ಟಿ ತಂದರೂ ದೇಶದ ಜಿಡಿಪಿ ಕುಸಿದಿದೆ. ಯಾವುದೇ ಯೋಜನೆ, ಕಾನೂನು ರೂಪಿಸುವಾಗಲೂ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ಪಡೆಯುವ, ಚರ್ಚಿಸುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡುತ್ತಿಲ್ಲ. ರಾಷ್ಟ್ರದ ಕೋಟ್ಯಂತರ ರೈತರಿಗೆ ಸಮಸ್ಯೆಯೊಡ್ಡಲಿರುವ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ವಿರೋಧಿ ನೀತಿ ಖಂಡಿಸಿ ಪಕ್ಷದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಶೇ.8.19ರಷ್ಟು ನಿರುದ್ಯೋಗ ಇದೆ. ಸ್ವಾಂತ್ರ್ಯಾನಂತರ ಇಷ್ಟು ನಿರುದ್ಯೋಗ ಯಾವತ್ತೂ ಇರಲಿಲ್ಲ. ಜಿಡಿಪಿ ಕೇಂದ್ರ ಸರ್ಕಾರದ ಪ್ರಕಾರವೇ ಶೇ.5ಕ್ಕೆ ಇಳಿದಿದೆ. 16 ವರ್ಷದಲ್ಲೇ ಖಾಸಗಿ ಬಂಡವಾಳ ಅತಿ ಕಡಿಮೆ ಹೂಡಿಕೆಯಾಗಿದೆ. ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್‌ ಜಿಎಸ್‌ಟಿ ಜಾರಿಗೆ ಮುಂದಾಗಿತ್ತು. ಆಗ ಅದನ್ನು ಅವರು ವಿರೋಧಿಸಿದ್ದರು. ಆದರೆ, ಅವರು ಪ್ರಧಾನಿಯಾದಾಗ ಏನೂ ತಯಾರಿ ಮಾಡಿಕೊಳ್ಳದೆ ಏಕಾಏಕಿ ಜಿಎಸ್‌ಟಿ ಜಾರಿಗೆ ತಂದರು. ದೇಶದ ಪ್ರಗತಿಗೆ ಪೂರಕವಾಗಬೇಕಿದ್ದ ಜಿಎಸ್‌ಟಿ ಈಗ ದೇಶದ ಆರ್ಥಿಕಾಭಿವೃದ್ಧಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

click me!