ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಮೆಟ್ರೋ ಹಳಿಗೆ ಹಾರಿದ್ದು, ತಕ್ಷಣ ಕ್ರಮ ಕೈಗೊಂಡ ಅಧಿಕಾರಿಗಳು ರೈಲು ಸಂಚಾರವನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯವಾಯಿತು.
ಬೆಂಗಳೂರು (ಸೆ.17): ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮಧ್ಯಾಹ್ನ 2.13 ಗಂಟೆಗೆ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ರೈಲು ಸಮೀಪಿಸುತ್ತಿರುವಾಗ ಸುಮಾರು 30 ವರ್ಷ ವಯಸ್ಸಿನ ಬಿಹಾರ ಮೂಲದ ಸಿದ್ದಾರ್ಥ್ ಎಂಬ ವ್ಯಕ್ತಿ ಟ್ರ್ಯಾಕ್ ಮೇಲೆ ಹಾರಿದ್ದಾರೆ. ಘಟನೆಯ ನಂತರ ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಇಟಿಎಸ್ ಅನ್ನು ಸ್ಟೇಷನ್ ಕಂಟ್ರೋಲರ್ ಮತ್ತು ತಂಡವು ಬಳಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ರಕ್ಷಿಸಲಾಯಿತು. ಪ್ರಾಥಮಿಕ ಮಾಹಿತಿಯ ಪ್ರಕಾರ ಯಾವುದೇ ಗಾಯಗಳು ವರದಿಯಾಗಿಲ್ಲ.
ಸಂಪೂರ್ಣ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳು 14.31 ಗಂಟೆಗೆ ಪುನರಾರಂಭಿಸಲಾಯಿತು. 2.13 ಗಂಟೆಯಿಂದ 2.30ಗಂಟೆಯವರೆಗೆ ಚಲ್ಲಘಟ್ಟ ಮೆಟ್ರೊ ನಿಲ್ದಾಣದ ಬದಲು ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ವರೆಗೆ 2 ರೈಲುಗಳು ಶಾರ್ಟ್ ಲೂಪ್‌ನಲ್ಲಿ ಕಾರ್ಯನಿರ್ವಹಿಸಿದವು ಎಂದು ಬೆಂಗಳೂರು ಮೆಟ್ರೋ ರೈಲ್ವೆ ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿಯ ರಕ್ಷಣೆಗೆ ಸಿಬ್ಬಂದಿ ಕೆಲ ಕಾಲ ತುಂಬಾ ಹರಸಾಹಸ ಮಾಡುವಂತಾಗಿತ್ತು. ಇನ್ನು ವ್ಯಕ್ತಿಯನ್ನು ಮೆಟ್ರೋ ಹಳಿಯಿಂದ ಹೊರಗೆ ಬರುವಂತೆ ಕರೆದರೂ ಆತ ಬರಲು ಒಪ್ಪದೇ ಕೆಲ ಕಾಲ ಸಿಬ್ಬಂದಿಯನ್ನು ಗೊಂದಲಕ್ಕೆ ಸಿಲುಕಿಸಿದ್ದನು. ಇದಾದ ನಂತರ ಆತನನ್ನು ರಕ್ಷಣೆ ಮಾಡಿ, ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು ಏರ್ಪೋರ್ಟ್ ರಸ್ತೆಯ ಜನರಿಗೆ ಮೆಟ್ರೋ ಕನಸು ನುಚ್ಚುನೂರು!
ಇನ್ನು ಬೆಂಗಳೂರಿನ ನಮ್ಮ ಮೆಟ್ರೋ ರೈಲು ಹಳಿಯಲ್ಲಿ 440ರಿಂದ 720 ವೊಲ್ಟ್‌ನ ವಿದ್ಯುತ್ ಸಾಮರ್ಥ್ಯದ ವಿದ್ಯುತ್ ಹರಿವು ಇರುತ್ತದೆ. ಈ ಹಳಿಗೆ ಬಿದ್ದರೆ ಅಥವಾ ಮೆಟ್ರೋ ರೈಲು ಇವರ ಮೇಲೆ ಹರಿದರೆ ಸಾವು ಖಚಿತವಾಗುತ್ತದೆ. ಆದ್ದರಿಂದ ಕೆಲವು ಕಿಡಿಗೇಡಿಗಳು ಮನೆಯಲ್ಲಿ ಅಥವಾ ಬೇರಾವುದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗದೇ ತಮ್ಮ ಸಾವಿನ ವಿಚಾರ ರಾಜ್ಯ ಹಾಗೂ ದೇಶದ ಜನರಿಗೆಲ್ಲಾ ಪ್ರಸಾರ ಆಗಬೇಕೆಂಬ ದುರುದ್ದೇಶದಿಂದ ಮೆಟ್ರೋ ಹಳಿಗೆ ಬಿದ್ದು ಸಾಯಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.