SIR: ಗೆಲುವಿನ ಮಾರ್ಜಿನ್‌ ಅನ್ನೇ ಮೀರಿಸಿದ ಮತಗಳ ಕಡಿತ! ಬೆಂಗಳೂರು 11 ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ವ್ಯತ್ಯಾಸ!

Published : Sep 21, 2026, 04:02 PM IST
sir Karnataka

ಸಾರಾಂಶ

ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದು, 2023ರ ಗೆಲುವಿನ ಅಂತರಕ್ಕಿಂತ 10 ಪಟ್ಟು ಹೆಚ್ಚು ಮತಗಳನ್ನು ಕೈಬಿಡಲಾಗಿದೆ. ಬೊಮ್ಮನಹಳ್ಳಿ, ದಾಸರಹಳ್ಳಿ, ಜಯನಗರ ಸೇರಿದಂತೆ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಗೈರುಹಾಜರಿ ಮತ್ತು ಸ್ಥಳಾಂತರದ ಕಾರಣ ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಎಡವಟ್ಟು ನಡೆದಿರುವುದು ಪತ್ರಿಕಾ ವರದಿಯೊಂದರಿಂದ ಬಹಿರಂಗವಾಗಿದೆ. ಕಳೆದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ನಗರದ ಪ್ರಮುಖ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿದ ಗೆಲುವಿನ ಅಂತರಕ್ಕಿಂತಲೂ (Winning Margin) ಅಲ್ಲಿನ ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾದ (Deleted) ಮತಗಳ ಸಂಖ್ಯೆ ಬರೋಬ್ಬರಿ 10 ಪಟ್ಟು ಹೆಚ್ಚಾಗಿದೆ. ಬೆಂಗಳೂರಿನ ಒಟ್ಟು ೨೮ ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 12 ಕ್ಷೇತ್ರಗಳಲ್ಲಿ ಈ ನಿಗೂಢ ಹಾಗೂ ಅಚ್ಚರಿಯ ವಿದ್ಯಮಾನ ಪತ್ತೆಯಾಗಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಏನು ಹೇಳುತ್ತೆ ದತ್ತಾಂಶ?

ಚುನಾವಣಾ ಅಕ್ರಮಗಳ ಕುರಿತು ಸಂಶೋಧನೆ ನಡೆಸುವ ಸ್ವತಂತ್ರ ಸಂಸ್ಥೆಯಾದ ‘ಮ್ಯಾಂಡೇಟ್ ಅನಾಲಿಟಿಕ್ಸ್ ಅಂಡ್ ಕನ್ಸಲ್ಟಿಂಗ್’ (MAC) ಸಂಗ್ರಹಿಸಿರುವ ಬೂತ್ ಮಟ್ಟದ ದತ್ತಾಂಶಗಳು ಈ ಆಘಾತಕಾರಿ ಸತ್ಯವನ್ನು ಹೊರಹಾಕಿವೆ. ವರದಿಯ ಪ್ರಕಾರ, ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಟ್ಟಿರುವುದರ ಹಿಂದೆ ಒಂದು ನಿಗೂಢ ಮಾದರಿಯಿದ್ದು, ಶೇಕಡಾ ೯೦ ಕ್ಕಿಂತ ಹೆಚ್ಚು ಹೆಸರುಗಳನ್ನು ಕೇವಲ 'ಗೈರುಹಾಜರಿ' (Absent) ಅಥವಾ 'ಸ್ಥಳಾಂತರ' (Shifted) ಎಂಬ ಕಾರಣಗಳನ್ನು ನೀಡಿ ಪಟ್ಟಿಯಿಂದ ಮುಲಾಜಿಲ್ಲದೆ ತೆಗೆದುಹಾಕಲಾಗಿದೆ.

ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಕಡಿತ!

ದಿ ಹಿಂದೂ ವರದಿ ಪ್ರಕಾರ, ನಗರದಲ್ಲೇ ಅತಿ ಹೆಚ್ಚು ಹೆಸರುಗಳನ್ನು ಕೈಬಿಟ್ಟ ದಾಖಲೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ್ದಾಗಿದೆ. ಇಲ್ಲಿ ಕರಡು ಪರಿಷ್ಕರಣೆ ಹಂತದಲ್ಲಿ 'ಗೈರುಹಾಜರಿ, ಸ್ಥಳಾಂತರ, ನಕಲಿ, ಮರಣ ಹಾಗೂ ಇತರೆ' (ASDDO) ವರ್ಗಗಳ ಅಡಿಯಲ್ಲಿ ಬರೋಬ್ಬರಿ 2 ಲಕ್ಷದ 65 ಸಾವಿರಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ವಿಶೇಷವೆಂದರೆ, ಕಳೆದ ಚುನಾವಣೆಯಲ್ಲಿ ಇಲ್ಲಿನ ಗೆಲುವಿನ ಅಂತರ ಕೇವಲ 24 ಸಾವಿರದ 215 ಮತಗಳಾಗಿತ್ತು. ಅಂದರೆ ಗೆಲುವಿನ ಮಾರ್ಜಿನ್‌ಗಿಂತ 11ಪಟ್ಟು ಹೆಚ್ಚು ಮತಗಳನ್ನು ಇಲ್ಲಿ ಕಡಿತಗೊಳಿಸಲಾಗಿದೆ! ಈ ಕಡಿತದಲ್ಲಿ ಶೇಕಡಾ 50.34 ರಷ್ಟು ಸ್ಥಳಾಂತರ ಮತ್ತು ಶೇಕಡಾ 45.38 ರಷ್ಟು ಗೈರುಹಾಜರಿ ಕಾರಣಗಳನ್ನು ನೀಡಲಾಗಿದ್ದು, ಇವೆರಡೂ ಸೇರಿ ಒಟ್ಟು ಕಡಿತದ ಶೇಕಡಾ 95 ರಷ್ಟಾಗುತ್ತವೆ.

ಗೆಲುವಿನ ಮಾರ್ಜಿನ್‌ಗಿಂತ 26 ಪಟ್ಟು ಹೆಚ್ಚು!

ಇನ್ನು ದಾಸರಹಳ್ಳಿ ಕ್ಷೇತ್ರದ ಕಥೆಯಂತೂ ಮತ್ತಷ್ಟು ಆಘಾತಕಾರಿಯಾಗಿದೆ. ಇಲ್ಲಿ ಕಳೆದ ಚುನಾವಣೆಯ ಗೆಲುವಿನ ಅಂತರ ಕೇವಲ 9 ಸಾವಿರದ 194 ಮತಗಳಾಗಿದ್ದರೆ, ಪಟ್ಟಿಯಿಂದ ತೆಗೆದುಹಾಕಲಾದ ಹೆಸರುಗಳ ಸಂಖ್ಯೆ ಬರೋಬ್ಬರಿ 2 ಲಕ್ಷದ 45 ಸಾವಿರಕ್ಕೂ ಹೆಚ್ಚಿದೆ. ಅಂದರೆ ಇದು ಗೆಲುವಿನ ಅಂತರಕ್ಕಿಂತ 26 ಪಟ್ಟು ಹೆಚ್ಚಾಗಿದ್ದು, ಆ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆಯ ಶೇಕಡಾ 52 ರಷ್ಟಾಗಿದೆ. ಇಲ್ಲಿಯೂ ಸಹ ಶೇಕಡಾ 73 ಕ್ಕಿಂತ ಹೆಚ್ಚು ಜನರನ್ನು ಸ್ಥಳಾಂತರ ಮತ್ತು ಗೈರುಹಾಜರಿ ಎಂದು ಪಟ್ಟಿಯಿಂದ ಹೊರದಬ್ಬಲಾಗಿದೆ.

ಇನ್ನು ಕೆಲ ಕ್ಷೇತ್ರದಲ್ಲಿ ಇದೇ ಸ್ಥಿತಿ!

ಇದೇ ಪ್ರವೃತ್ತಿ ಉಳಿದ ಕ್ಷೇತ್ರಗಳಲ್ಲೂ ಮುಂದುವರಿದಿದೆ. ರಾಜರಾಜೇಶ್ವರಿ ನಗರದಲ್ಲಿ 11 ಸಾವಿರದ 842 ಮತಗಳ ಗೆಲುವಿನ ಅಂತರವಿದ್ದರೆ, ಅಲ್ಲಿ 2 ಲಕ್ಷದ 45 ಸಾವಿರ ಮತಗಳನ್ನು (20 ಪಟ್ಟು ಹೆಚ್ಚು) ಕಡಿತಗೊಳಿಸಲಾಗಿದೆ. ವಿಜಯನಗರದಲ್ಲಿ 7 ಸಾವಿರದ 324 ಗೆಲುವಿನ ಅಂತರಕ್ಕೆ ಪ್ರತಿಯಾಗಿ 1 ಲಕ್ಷದ 64 ಸಾವಿರ ಮತಗಳನ್ನು (22 ಪಟ್ಟು ಹೆಚ್ಚು) ಹಾಗೂ ಯಶವಂತಪುರದಲ್ಲಿ 15 ಸಾವಿರದ 118 ಗೆಲುವಿನ ಅಂತರಕ್ಕೆ ಪ್ರತಿಯಾಗಿ 2 ಲಕ್ಷದ 40 ಸಾವಿರ ಮತಗಳನ್ನು (15 ಪಟ್ಟು ಹೆಚ್ಚು) ಡಿಲೀಟ್ ಮಾಡಲಾಗಿದೆ. ಬಿಟಿಎಂ ಲೇಔಟ್‌ನಲ್ಲಿ 1 ಲಕ್ಷದ 45 ಸಾವಿರ (15 ಪಟ್ಟು), ಶಾಂತಿನಗರದಲ್ಲಿ 1 ಲಕ್ಷದ 8 ಸಾವಿರ (15 ಪಟ್ಟು) ಹಾಗೂ ಗೋವಿಂದರಾಜನಗರದಲ್ಲಿ 1 ಲಕ್ಷದ 48 ಸಾವಿರ (11 ಪಟ್ಟು) ಮತಗಳನ್ನು ಕೈಬಿಡಲಾಗಿದೆ.

ನೂರರ ಅಂಕಿಗಳ ಗೆಲುವಿಗೆ ಲಕ್ಷಗಳ ಕಡಿತದ ಶಾಕ್!

ಅತ್ಯಂತ ಕನಿಷ್ಠ ಗೆಲುವಿನ ಅಂತರವಿದ್ದ ಕ್ಷೇತ್ರಗಳಲ್ಲಂತೂ ಈ ಕಡಿತದ ಪ್ರಮಾಣ ಊಹೆಗೂ ನಿಲುಕದಂತಿದೆ. ಕೇವಲ 105 ಮತಗಳ ಗೆಲುವಿನ ಅಂತರವಿದ್ದ ಗಾಂಧಿನಗರ ಕ್ಷೇತ್ರದಲ್ಲಿ 1 ಲಕ್ಷದ 12 ಸಾವಿರ ಹೆಸರುಗಳನ್ನು (1,074 ಪಟ್ಟು ಹೆಚ್ಚು) ಕೈಬಿಡಲಾಗಿದೆ. ಇನ್ನು ಕೇವಲ 16 ಮತಗಳ ಅತಿ ಕನಿಷ್ಠ ಮಾರ್ಜಿನ್ ಹೊಂದಿದ್ದ ಜಯನಗರ ಕ್ಷೇತ್ರದಲ್ಲಿ ಬರೋಬ್ಬರಿ 93 ಸಾವಿರದ 656 ಮತದಾರರ ಹೆಸರುಗಳನ್ನು (5,853 ಪಟ್ಟು ಹೆಚ್ಚು) ಡಿಲೀಟ್ ಮಾಡಲಾಗಿದೆ! ರಾಜಾಜಿನಗರದಲ್ಲಿ 8 ಸಾವಿರದ 60 ಮತಗಳ ಅಂತರವಿದ್ದರೆ 1 ಲಕ್ಷದ 762 ಹೆಸರುಗಳನ್ನು ಹಾಗೂ ಕೆ.ಆರ್. ಪುರದಲ್ಲಿ 24 ಸಾವಿರದ 301 ಮತಗಳ ಅಂತರವಿದ್ದರೆ 2 ಲಕ್ಷದ 58 ಸಾವಿರ ಹೆಸರುಗಳನ್ನು ಕೈಬಿಡಲಾಗಿದೆ. ಸಿ.ವಿ. ರಾಮನ್ ನಗರದಲ್ಲಿ ಗೆಲುವಿನ ಅಂತರವಾದ 16 ಸಾವಿರದ 395 ಮತಗಳಿಗಿಂತ 8.5 ಪಟ್ಟು ಹೆಚ್ಚು ಅಂದರೆ 1 ಲಕ್ಷದ 40 ಸಾವಿರಕ್ಕೂ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದೆ.

ಬೆಂಗಳೂರಿಗೇ ಶಾಕ್ ಕೊಟ್ಟ ವಿಶೇಷ ಪರಿಷ್ಕರಣೆ!

ಮಾಹಿತಿಗಳ ಪ್ರಕಾರ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳು ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದಾಗಿ ಅಸಮಾನವಾಗಿ ಬಾಧಿತವಾಗಿವೆ. ಇಡೀ ಕರ್ನಾಟಕದ ಒಟ್ಟು ಮತದಾರರಲ್ಲಿ ಬೆಂಗಳೂರು ಶೇಕಡಾ 20 ಕ್ಕಿಂತ ಕಡಿಮೆ ಪಾಲನ್ನು ಹೊಂದಿದ್ದರೂ, ರಾಜ್ಯದ ಒಟ್ಟು ಮತಗಳ ಕಡಿತದ ಪ್ರಮಾಣದಲ್ಲಿ ಬೆಂಗಳೂರಿನ ಪಾಲೇ ಶೇಕಡಾ 4 ಮುಕ್ಕಾಲು (ಶೇಕಡಾ 45) ರಷ್ಟಿದೆ. ಆದರೆ ರಾಜ್ಯದ ಉಳಿದ ಭಾಗಗಳಲ್ಲಿ ಈ ಪ್ರಮಾಣ ಕೇವಲ ಶೇಕಡಾ 13.5ರಷ್ಟಿದೆ. ಹಾಗೆಯೇ ಬೆಂಗಳೂರಿನಲ್ಲಿ ನೋಟಿಸ್ ಜಾರಿ ಮಾಡುವ ದರವು ರಾಜ್ಯದ ಇತರ ಭಾಗಗಳಿಗಿಂತ ಎಂಟು ಪಟ್ಟು ಹೆಚ್ಚಾಗಿದೆ.

ಬಿಬಿಎಂಪಿ ಉತ್ತರವಲಯದ ಸ್ಥಿತಿ ಹೇಗಿದೆ?

ಬಿಬಿಎಂಪಿ ಉತ್ತರ ವಲಯದ ಪಾರ್ಟ್ 301ರಲ್ಲಿ, ಕರಡು ಪಟ್ಟಿಯಲ್ಲಿದ್ದ 1,129 ಮತದಾರರ ಪೈಕಿ ಶೇಕಡಾ 93ಕ್ಕಿಂತ ಹೆಚ್ಚು ಅಂದರೆ 1,053 ಹೆಸರುಗಳನ್ನು ಸಾಮೂಹಿಕವಾಗಿ ಕೈಬಿಡಲಾಗಿದೆ. ಮಲ್ಲೇಶ್ವರಂನ ಪಾರ್ಟ್ 53 ಮತ್ತು ಕೆ.ಆರ್. ಪುರದ ಪಾರ್ಟ್ 311ರಲ್ಲಿ ಕ್ರಮವಾಗಿ ಶೇಕಡಾ 8 ಮತ್ತು ಶೇಕಡಾ 83 ರಷ್ಟು ಸಾಮೂಹಿಕ ಹೆಸರು ಕಡಿತ ದಾಖಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕನಿಷ್ಠ ಆರು ಬೂತ್‌ಗಳಲ್ಲಿ ಶೇಕಡಾ 80ಕ್ಕಿಂತ ಹೆಚ್ಚು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಒಟ್ಟಾರೆಯಾಗಿ, ಈ ಬೃಹತ್ ಪ್ರಮಾಣದ ಮತಗಳ ಕಡಿತವು ಬೆಂಗಳೂರಿನಲ್ಲಿ ಪ್ರಜಾಪ್ರಭುತ್ವದ ಅಸಲಿ ಆಶಯಕ್ಕೇ ಧಕ್ಕೆ ತರುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

PREV
Read more Articles on
click me!

Recommended Stories

ರೇಣುಕಾಸ್ವಾಮಿ ಕೇಸ್: ಪವಿತ್ರಾ ಗೌಡ ಬ್ಯಾರಕ್ ಬದಲಾವಣೆ, ಇಂದು ಜಾಮೀನು ಅರ್ಜಿ ವಿಚಾರಣೆ
Bengaluru Weather: ಮಳೆಯ ನಡುವೆಯೂ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ; ಮುಂದಿನ ನಾಲ್ಕು ದಿನ ಮಳೆ ಅಲರ್ಟ್