ಸಿರ್ಸಿ ಫ್ಲೈಓವರ್‌ ಅರ್ಧ ಬಂದ್‌!

By Web DeskFirst Published Nov 21, 2019, 11:15 AM IST
Highlights

ಸಿರ್ಸಿ ಫ್ಲೈಓವರ್‌ ಮತ್ತೊಂದು ಬದಿ ದುರಸ್ತಿಗೆ ಸಂಚಾರ ಬಂದ್‌| ಪೊಲೀಸರ ಅನುಮತಿ ಸಿಕ್ಕರೆ ನಾಲ್ಕೈದು ದಿನದಲ್ಲಿ ಕಾಮಗಾರಿ| ಬರೊಬ್ಬರಿ 8 ತಿಂಗಳ ಬಳಿಕ ಕಾಮಗಾರಿಗೆ ಮುಂದಾದ ಪಾಲಿಕೆ

ಬೆಂಗಳೂರು[ನ.21]: ಕಳೆದ ಮಾಚ್‌ರ್‍ ತಿಂಗಳಲ್ಲಿ ಮೈಸೂರು ರಸ್ತೆಯ ಬಾಲಗಂಗಾಧರ ನಾಥ ಸ್ವಾಮೀಜಿ ಮೇಲ್ಸೇತುವೆಯ (ಸಿರ್ಸಿ ಫ್ಲೈಓವರ್‌) ಒಂದು ಮಾರ್ಗದ ರಸ್ತೆಯನ್ನು ಮಾತ್ರ ದುರಸ್ತಿಗೊಳಿಸಿ ಸುಮ್ಮನಾಗಿದ್ದ ಬಿಬಿಎಂಪಿ ಇದೀಗ ಬರೋಬ್ಬರಿ ಎಂಟು ತಿಂಗಳ ಬಳಿಕ ಮತ್ತೊಂದು ಮಾರ್ಗದ ದುರಸ್ತಿಗೆ ಮುಂದಾಗಿದೆ.

ಪೊಲೀಸರ ಅನುಮತಿ ಸಿಕ್ಕರೆ ಇನ್ನು ನಾಲ್ಕೈದು ದಿನಗಳಲ್ಲಿ ದುರಸ್ತಿ ಕಾರ್ಯ ಆರಂಭಿಸಲಾಗುವುದು, ಇದಕ್ಕಾಗಿ ಸುಮಾರು 40 ದಿನಗಳ ಕಾಲ ಮೈಸೂರು ರಸ್ತೆಯಿಂದ ಕೆ.ಆರ್‌.ಮಾರುಕಟ್ಟೆ, ಪುರಭವನ ಕಡೆಗೆ ಸಾಗುವ ಮೇಲ್ಸೇತುವೆ ಮಾರ್ಗವನ್ನು ಬಂದ್‌ ಮಾಡಲಾಗುವುದು ಎಂದು ಬಿಬಿಎಂಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ಏಕಾಏಕಿ ಸಿರ್ಸಿ ಫ್ಲೈಓವರ್‌ನ ಮತ್ತೊಂದು ಬದಿಯ ಮಾರ್ಗ ದುರಸ್ತಿಗೆ ಮುಂದಾಗಿದ್ದರು. ಇದಕ್ಕೆ ಪೊಲೀಸರು ಅನುಮತಿ ನೀಡದ ಕಾರಣ ದುರಸ್ತಿ ಕಾರ್ಯ ಮುಂದೂಡಿದ್ದರು. ಇದೀಗ, ದುರಸ್ತಿ ಕಾಮಗಾರಿ ಆರಂಭಿಸಲು ಪಾಲಿಕೆ ಪೊಲೀಸರ ಅನುಮತಿ ಕೋರಿ ಪತ್ರ ಬರೆದಿದೆ.

ಸಿರ್ಸಿ ಸರ್ಕಲ್‌ ಮೇಲ್ಸೇತುವೆ ದುರಸ್ತಿಗೆ .4.30 ಕೋಟಿ ಟೆಂಡರ್‌ ನೀಡಿದ್ದ ಬಿಬಿಎಂಪಿ, 2018ರ ಡಿಸೆಂಬರ್‌ನಲ್ಲಿ ಪುರಭವನದ ಮುಂಭಾಗದಿಂದ ರಾಯಣ್ಣ ವೃತ್ತ ಮತ್ತು ಮೈಸೂರು ರಸ್ತೆ ಕಡೆಗೆ ಹೋಗುವ ಮಾರ್ಗದ ದುರಸ್ತಿ ಆರಂಭಿಸಿ ಮಾಚ್‌ರ್‍ ವೇಳೆಗೆ ಮುಗಿಸಿತ್ತು. ಆ ನಂತರ ಮೈಸೂರು ರಸ್ತೆಯಿಂದ ಕೆ.ಆರ್‌.ಮಾರುಕಟ್ಟೆ, ಪುರಭವನ ಕಡೆಗೆ ಹಾದು ಹೋಗುವ ಮತ್ತೊಂದು ಮಾರ್ಗದ ದುರಸ್ತಿ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ, ಮೈಸೂರು ರಸ್ತೆಯಲ್ಲಿ ನಡೆಯುತ್ತಿದ್ದ ವೈಟ್‌ ಟಾಪಿಂಗ್‌ ಕಾಮಗಾರಿ ನೆಪದಲ್ಲಿ ಮೇಲ್ಸೇತುವೆಯ ಮತ್ತೊಂದು ಮಾರ್ಗದ ದುರಸ್ತಿ ಮಾಡಿರಲಿಲ್ಲ.

ಮೇಲ್ಸೇತುವೆಗೆ ಅಳವಡಿಸಿರುವ ನಟ್‌ ಬೋಲ್ಟುಗಳು ಕೆಲವೆಡೆ ಕಿತ್ತು ಹೋದರೆ, ಇನ್ನು ಕೆಲವೆಡೆ ವಾಹನಗಳ ಟೈರ್‌ಗಳನ್ನು ಪಂಕ್ಚರ್‌ ಆಗಿ ಅಪಘಾತ, ಅಪಾಯ ಸೃಷ್ಟಿಸುವ ಸ್ಥಿತಿ ತಲುಪಿವೆ. ಇದರಿಂದ ನಿತ್ಯ ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದರು. ಇದೀಗ ಕೊನೆಗೂ ಎಚ್ಚೆತ್ತ ಪಾಲಿಕೆ ಮತ್ತೊಂದು ಮಾರ್ಗದ ದುರಸ್ತಿಗೆ ಮುಂದಾಗಿದೆ.

click me!