ನಮ್ಮ ಮೆಟ್ರೋ ಪಿಂಕ್ ಲೈನ್ ಎಸ್‌ಜಿ ಪಾಳ್ಯದಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಟ್ರಯಲ್ ರನ್‌ಗೆ ಸಿದ್ದತೆ!

Published : Nov 21, 2026, 05:49 PM IST
namma Metro Pink Line

ಸಾರಾಂಶ

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಭೂಗತ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಿದ್ಧತೆ ಮಾಡಿಕೊಂಡಿದೆ. 13.76 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಟ್ರಯಲ್ ರನ್ ಆರಂಭಿಸಲು ಅನುಮತಿ ಮಾತ್ರ ಬಾಕಿ ಉಳಿದಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ..

ಬೆಂಗಳೂರು: ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ‘ನಮ್ಮ ಮೆಟ್ರೋ’ ಪಿಂಕ್ ಲೈನ್‌ನ (ಗುಲಾಬಿ ಮಾರ್ಗ) ಎತ್ತರಿಸಿದ ಮಾರ್ಗ ಉದ್ಘಾಟನೆಯಾದ ಒಂದು ವಾರದಲ್ಲೇ, ಇದೀಗ 13.76 ಕಿಲೋಮೀಟರ್ ಉದ್ದದ ಸುರಂಗ ಮಾರ್ಗದಲ್ಲೂ ಪ್ರಾಯೋಗಿಕ ರೈಲು ಸಂಚಾರ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸಕಲ ಸಿದ್ಧತೆ ನಡೆಸಿದೆ. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರಿಂದ (ಸಿಎಂಆರ್‌ಎಸ್‌) ಸಣ್ಣ ತಾಂತ್ರಿಕ ಅನುಮತಿ ಸಿಕ್ಕ ತಕ್ಷಣ ಭೂಗತ ಮಾರ್ಗದಲ್ಲಿ ಟ್ರಯಲ್ ರನ್ ಶುರುವಾಗಲಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಎಸ್‌ಜಿ ಪಾಳ್ಯದಿಂದ ಶಿವಾಜಿನಗರದವರೆಗೆ ಮೊದಲ ಟ್ರಯಲ್ ರನ್

ಈ ಕುರಿತು ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್, ಎತ್ತರಿಸಿದ ಮಾರ್ಗದ ಕೊನೆಯ ಸ್ಟೇಷನ್ ಎಸ್‌ಜಿ ಪಾಳ್ಯ ನಿಲ್ದಾಣದಲ್ಲಿರುವ ಬಫರ್ ತಡೆಗೋಡೆಯನ್ನು ತೆರವುಗೊಳಿಸಲು ನಾವು ಸಿಎಂಆರ್‌ಎಸ್‌ನಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಅನುಮತಿ ದೊರೆತ ತಕ್ಷಣ ಭೂಗತ ಸುರಂಗ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸುತ್ತೇವೆ. ಸದ್ಯಕ್ಕೆ ಎಸ್‌ಜಿ ಪಾಳ್ಯದಿಂದ ಶಿವಾಜಿನಗರ ನಿಲ್ದಾಣದವರೆಗೆ ಯಾವುದೇ ಕ್ಷಣದಲ್ಲಾದರೂ ರೈಲು ಓಡಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಭೂಗತ ಮಾರ್ಗದ ಕಾಮಗಾರಿ ಎಲ್ಲಿದೆ?

ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ 13.76 ಕಿ.ಮೀ ಭೂಗತ ಮಾರ್ಗವು ಎಂ.ಜಿ. ರಸ್ತೆ, ಶಿವಾಜಿನಗರ ಮತ್ತು ಕಂಟೋನ್ಮೆಂಟ್ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ಒಳಗೊಂಡಿದೆ. 12 ಭೂಗತ ನಿಲ್ದಾಣಗಳ ಪೈಕಿ 10 ನಿಲ್ದಾಣಗಳಿಗೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ಅಳವಡಿಸಲು ಸಾಮಗ್ರಿಗಳು ಈಗಾಗಲೇ ತಲುಪಿವೆ. ಮೂರು ನಿಲ್ದಾಣಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಗಾಜಿನ ಫಲಕಗಳನ್ನು ಅಳವಡಿಸುವ ಕೆಲಸ ಮಾತ್ರ ಬಾಕಿಯಿದೆ. 2027ರ ಮೇ ತಿಂಗಳ ವೇಳೆಗೆ ಇಡೀ ಸುರಂಗ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮತ್ತು ತಡರಾತ್ರಿ ಪ್ರಯಾಣದ ಸಲಹೆ

ಕಳೆದ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಲೇನ ಅಗ್ರಹಾರದಿಂದ ಎಸ್‌ಜಿ ಪಾಳ್ಯವರೆಗಿನ 7.5 ಕಿ.ಮೀ ಎತ್ತರದ ಮಾರ್ಗವನ್ನು ಉದ್ಘಾಟಿಸಿದ್ದರು. ಮೊದಲ ದಿನವೇ 33,409 ಪ್ರಯಾಣಿಕರು ಸಂಚರಿಸಿದ್ದು, ಪ್ರಸ್ತುತ ಪ್ರತಿದಿನ ಸರಾಸರಿ 33,000 ಮಂದಿ ಈ ಮಾರ್ಗವನ್ನು ಬಳಸುತ್ತಿದ್ದಾರೆ.

ಇದೇ ವೇಳೆ ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿರುವ ಬಿಎಂಆರ್‌ಸಿಎಲ್, ಜಯದೇವ ಇಂಟರ್‌ಚೇಂಜ್ ನಿಲ್ದಾಣದಲ್ಲಿ ರಾತ್ರಿ 10.45ರ ನಂತರ ಸಂಪರ್ಕ ರೈಲುಗಳು ಲಭ್ಯವಿರುವುದಿಲ್ಲ. ಹೀಗಾಗಿ ರಾತ್ರಿ 10.45ರ ಬಳಿಕ ಪಿಂಕ್ ಲೈನ್‌ಗೆ ವರ್ಗಾವಣೆ ಅಗತ್ಯವಿರುವ ಕ್ಯೂಆರ್ (QR) ಟಿಕೆಟ್‌ಗಳನ್ನು ಬುಕ್ ಮಾಡಬಾರದು ಎಂದು ಮನವಿ ಮಾಡಿದೆ. ಪಿಂಕ್ ಲೈನ್‌ನ ಕೊನೆಯ ರೈಲುಗಳು ಕಾಳೇನ ಅಗ್ರಹಾರದಿಂದ ರಾತ್ರಿ 10.50ಕ್ಕೆ ಹಾಗೂ ಎಸ್‌ಜಿ ಪಾಳ್ಯದಿಂದ ರಾತ್ರಿ 10.54ಕ್ಕೆ ಹೊರಡಲಿವೆ.

ಬ್ಲೂ ಲೈನ್ ಮತ್ತು ಗ್ರೀನ್ ಲೈನ್ ಇತ್ತೀಚಿನ ಅಪ್‌ಡೇಟ್ಸ್:

ಬ್ಲೂ ಲೈನ್ (ORR ಮಾರ್ಗ): ಬೈಯಪ್ಪನಹಳ್ಳಿ ಡಿಪೋದಿಂದ ದೊಡ್ಡನೆಕುಂಡಿವರೆಗೆ ಪ್ರಾಯೋಗಿಕ ರೈಲು ಸಂಚಾರ ನಡೆಯುತ್ತಿದೆ. ವಿದ್ಯುತ್ ಮತ್ತು ಥರ್ಡ್ ರೈಲ್ ಕಾಮಗಾರಿ ಮುಗಿದ ಬಳಿಕ ಎಚ್‌ಎಸ್‌ಆರ್ ಲೇಔಟ್‌ವರೆಗೆ ಟ್ರಯಲ್ ರನ್ ವಿಸ್ತರಿಸಲಾಗುವುದು. 13 ನಿಲ್ದಾಣಗಳ ಒಆರ್‌ಆರ್ ಮಾರ್ಗವನ್ನು 2027ರ ಮೇ ತಿಂಗಳೊಳಗೆ ಪೂರ್ಣಗೊಳಿಸುವ ಗುರಿಯಿದೆ.

ಗ್ರೀನ್ ಲೈನ್: 21 ಸಿಆರ್‌ಆರ್‌ಸಿ-ತಿಟಾಘರ್ ರೈಲುಗಳ ಪೈಕಿ ಈಗಾಗಲೇ 10 ರೈಲುಗಳು ಬೆಂಗಳೂರಿಗೆ ಬಂದಿದ್ದು, 3 ರೈಲುಗಳು ಸೇವೆಗೆ ಸೇರ್ಪಡೆಯಾಗಿವೆ. ಡಿಸೆಂಬರ್ ಎರಡನೇ ವಾರದಲ್ಲಿ 4 ಹಾಗೂ 2027ರ ಜನವರಿ ಮೊದಲ ವಾರದಲ್ಲಿ 3 ರೈಲುಗಳು ಸೇರ್ಪಡೆಯಾಗಲಿವೆ.

ಸಿಗ್ನಲಿಂಗ್ ವ್ಯವಸ್ಥೆ: ಪಿಂಕ್ ಲೈನ್ ಮತ್ತು ವಿಮಾನ ನಿಲ್ದಾಣದವರೆಗಿನ ಸಂಪೂರ್ಣ ಬ್ಲೂ ಲೈನ್‌ನಲ್ಲಿ ಆಧುನಿಕ CBTC ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಲು ರೈಲ್ವೆ ಮಂಡಳಿ ತಾತ್ವಿಕ ಅನುಮೋದನೆ ನೀಡಿದೆ.

ಪಿಂಕ್ ಲೈನ್ ಏಕೆ ಇಷ್ಟು ಮಹತ್ವದ್ದು?

ಭೂಗತ ಮಾರ್ಗ ಪೂರ್ಣಗೊಂಡರೆ ಪಿಂಕ್ ಲೈನ್ ಕೇವಲ ಬನ್ನೇರುಘಟ್ಟ ರಸ್ತೆಗೆ ಸೀಮಿತವಾಗದೆ, ದಕ್ಷಿಣ ಬೆಂಗಳೂರನ್ನು ನಗರದ ಹೃದಯಭಾಗದ (ಎಂ.ಜಿ. ರಸ್ತೆ, ಶಿವಾಜಿನಗರ) ಮೂಲಕ ಉತ್ತರ ಬೆಂಗಳೂರಿನ ನಾಗವಾರಕ್ಕೆ ಬೆಸೆಯಲಿದೆ.

ಪಿಂಕ್ ಲೈನ್‌ನ 18 ನಿಲ್ದಾಣಗಳು: ಯಾವ ಮಾರ್ಗದಲ್ಲಿ ಸಂಪರ್ಕ?

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 18 ನಿಲ್ದಾಣಗಳನ್ನು ಒಳಗೊಂಡಿರುವ ಪಿಂಕ್ ಲೈನ್‌ನಲ್ಲಿ ಆರು ನಿಲ್ದಾಣಗಳು ಎತ್ತರಿಸಿದ ಮಾರ್ಗದಲ್ಲಿದ್ದರೆ, ಉಳಿದ 12 ನಿಲ್ದಾಣಗಳು ಭೂಗತ ವಿಭಾಗದಲ್ಲಿವೆ.

ಎತ್ತರಿಸಿದ ಮಾರ್ಗದ ಆರು ನಿಲ್ದಾಣಗಳು:

  • ಕಾಳೇನ ಅಗ್ರಹಾರ
  • ಹುಳಿಮಾವು
  • ಬಿಳೇಕಹಳ್ಳಿ-ಐಐಎಂಬಿ
  • ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತ
  • ಜಯದೇವ ಆಸ್ಪತ್ರೆ - ಹಳದಿ ಮಾರ್ಗ ಇಂಟರ್ ಚೇಂಜ್
  • ಎಸ್‌ಜಿ ಪಾಳ್ಯ

ಸುರಂಗ ಮಾರ್ಗದ 12 ನಿಲ್ದಾಣಗಳು:

  • ಡೈರಿ ಸರ್ಕಲ್
  • ಲಕ್ಕಸಂದ್ರ
  • ಲ್ಯಾಂಗ್‌ಫೋರ್ಡ್ ಟೌನ್
  • ರಾಷ್ಟ್ರೀಯ ಮಿಲಿಟರಿ ಶಾಲೆ
  • ಎಂ.ಜಿ. ರಸ್ತೆ - ನೇರಳೆ ಮಾರ್ಗ ಇಂಟರ್ ಚೇಂಜ್
  • ಶಿವಾಜಿನಗರ
  • ಕಂಟೋನ್ಮೆಂಟ್- ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ
  • ಪಾಟರಿ ಟೌನ್
  • ಟ್ಯಾನರಿ ರಸ್ತೆ
  • ವೆಂಕಟೇಶಪುರ
  • ಕಾಡುಗೊಂಡನಹಳ್ಳಿ
  • ನಾಗವಾರ - ಇಂಟರ್ ಚೇಂಜ್ ಬ್ಲೂ ಲೈನ್ ನಿರ್ಮಾಣ ಹಂತದಲ್ಲಿದೆ

PREV
Read more Articles on
click me!

Recommended Stories

ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಮಂಜುನಾಥ್ ಭಂಡಾರಿ ನೇಮಕ, ಅಧಿಕೃತ ಆದೇಶ ಪ್ರಕಟ
ಪಿಯು ಪರೀಕ್ಷೆಯಲ್ಲಿ ಭಾರಿ ಬದಲಾವಣೆ, ರಾಜ್ಯಾದ್ಯಂತ ಏಕರೂಪದ ವಾರ್ಷಿಕ ಪರೀಕ್ಷಾ ವ್ಯವಸ್ಥೆ