ಬೆಂಗಳೂರಲ್ಲಿ ಸ್ವಿಗ್ಗಿ ಬ್ಯಾನ್ ಮಾಡಲು ನಿರ್ಧಾರ; ಹೋಟೆಲ್ ಮಾಲೀಕರ ಸಂಘದಿಂದ ಜು.28ರಂದು ತುರ್ತು ಸಭೆ!

Published : Jul 27, 2026, 09:28 AM IST
Swiggy

ಸಾರಾಂಶ

ಬೆಂಗಳೂರು ಹೋಟೆಲ್ ಮಾಲೀಕರ ಸಂಘವು 'ಸ್ವಿಗ್ಗಿ' ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆ್ಯಪ್‌ನಿಂದಾಗಿ ಹೋಟೆಲ್‌ಗಳಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಆರೋಪಿಸಿದೆ. ಅನಧಿಕೃತ ಆಫರ್‌ಗಳು, ಕ್ಯಾನ್ಸಲ್ ಆದ ಆರ್ಡರ್‌ಗಳ ನಷ್ಟ ಮತ್ತು ಪಾವತಿ ಸಮಸ್ಯೆಗಳಿಂದ ಬೇಸತ್ತಿರುವ ಸಂಘ, ಸ್ವಿಗ್ಗಿ ಸೇವೆಗಳನ್ನು ಬಹಿಷ್ಕರಿಸುವ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆದಿದೆ.

ಬೆಂಗಳೂರು (ಜು.27): ಆನ್‌ಲೈನ್ ಫುಡ್ ಡೆಲಿವರಿ ದೈತ್ಯ 'ಸ್ವಿಗ್ಗಿ' (Swiggy) ಇ ಕಾಮರ್ಸ್ ಆ್ಯಪ್ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಗರದಲ್ಲಿ ಸ್ವಿಗ್ಗಿ ಸೇವೆಗಳನ್ನು ಬಹಿಷ್ಕರಿಸುವ ಅಥವಾ ಆ್ಯಪ್ ಬಂದ್ ಮಾಡಿಸುವ ಗಂಭೀರ ಎಚ್ಚರಿಕೆ ನೀಡಿದೆ. ಹೋಟೆಲ್ ಮಾಲೀಕರ ಹೊಟ್ಟೆಯ ಮೇಲೆ ಹೊಡೆದು ಸ್ವಿಗ್ಗಿ ಸಂಸ್ಥೆಯು ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದೆ ಎಂದು ಆರೋಪಿಸಿರುವ ಸಂಘವು, ಈ ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಸ್ವಿಗ್ಗಿ ಆ್ಯಪ್‌ನಿಂದಾಗಿ ಬೆಂಗಳೂರಿನ ಸಣ್ಣ ಹಾಗೂ ದೊಡ್ಡ ಹೋಟೆಲ್‌ಗಳಿಗೆ ಪ್ರತಿದಿನ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹಾಗೂ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮಂಗಳವಾರ (ಜು.28) ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಮಹತ್ವದ ತುರ್ತು ಸಭೆಯನ್ನು ಕರೆಯಲಾಗಿದೆ.

ಅಷ್ಟಕ್ಕೂ ಸ್ವಿಗ್ಗಿ ಆ್ಯಪ್‌ನಿಂದ ಹೋಟೆಲ್‌ಗಳಿಗೆ ನಷ್ಟವಾಗುತ್ತಿರುವುದು ಹೇಗೆ?

ಹೋಟೆಲ್ ಮಾಲೀಕರ ಸಂಘವು ಸ್ವಿಗ್ಗಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಹೋಟೆಲ್‌ಗಳು ಅನುಭವಿಸುತ್ತಿರುವ ಪ್ರಮುಖ ನಷ್ಟಗಳ ಪಟ್ಟಿ ಇಲ್ಲಿದೆ:

ಮಾಹಿತಿ ನೀಡದೆ ನೀಡುವ ಆಫರ್‌ಗಳು: ಹೋಟೆಲ್ ಮಾಲೀಕರ ಯಾವುದೇ ಗಮನಕ್ಕೆ ತರದೆ ಸ್ವಿಗ್ಗಿ ಆ್ಯಪ್‌ನಲ್ಲಿ ಆಫರ್‌ಗಳ ಮೇಲೆ ಆಫರ್ ಘೋಷಿಸಲಾಗುತ್ತಿದೆ. ಉದಾಹರಣೆಗೆ, ಗ್ರಾಹಕರಿಗೆ 'ಒಂದು ಪ್ಲೇಟ್ ಇಡ್ಲಿ ಖರೀದಿಸಿದರೆ ಮತ್ತೊಂದು ಪ್ಲೇಟ್ ಫ್ರೀ' ಎಂಬ ಆಫರ್ ನೀಡಲಾಗುತ್ತದೆ. ಆದರೆ, ಸ್ವಿಗ್ಗಿ ಸಂಸ್ಥೆಯು ಹೋಟೆಲ್ ಮಾಲೀಕರಿಗೆ ಕೇವಲ ಒಂದು ಪ್ಲೇಟ್ ಊಟದ ಹಣವನ್ನು ಮಾತ್ರ ಪಾವತಿಸುತ್ತದೆ. ಇದರಿಂದ ಇನ್ನೊಂದು ಪ್ಲೇಟ್‌ನ ನಷ್ಟವನ್ನು ಹೋಟೆಲ್‌ನವರೇ ಭರಿಸಬೇಕಾಗುತ್ತದೆ.

ಕ್ಯಾನ್ಸಲ್ ಆದ ಆರ್ಡರ್‌ಗಳ ಹಣ ಸಿಗುತ್ತಿಲ್ಲ: ಗ್ರಾಹಕರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ನಂತರ, ಹೋಟೆಲ್‌ನಿಂದ ಆಹಾರ ಸಿದ್ಧವಾಗಿ ಡೆಲಿವರಿ ಬಾಯ್ ಕೈಗೆ ತಲುಪಿದ ಮೇಲೆ ಕೆಲವು ಸಂದರ್ಭಗಳಲ್ಲಿ ಗ್ರಾಹಕರು ಆರ್ಡರ್ ಕ್ಯಾನ್ಸಲ್ ಮಾಡುತ್ತಾರೆ. ಹೀಗೆ ಕ್ಯಾನ್ಸಲ್ ಆದ ಊಟ ಮತ್ತೆ ಹೋಟೆಲ್‌ಗೆ ವಾಪಸ್ ಬರುವುದಿಲ್ಲ. ಬದಲಿಗೆ, ಆ ಊಟವನ್ನು ಡೆಲಿವರಿ ಬಾಯ್ಸ್‌ಗಳೇ ತಿನ್ನುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಆಹಾರ ಮತ್ತು ಹಣ ಎರಡೂ ಹೋಟೆಲ್‌ಗೆ ನಷ್ಟವಾಗುತ್ತಿದೆ.

ಸರಿಯಾಗಿ ಸಿಗದ ಪಾವತಿ (Payment Issues): ಹೋಟೆಲ್‌ಗಳು ಕಷ್ಟಪಟ್ಟು ಆರ್ಡರ್ ಆಕ್ಸೆಪ್ಟ್ ಮಾಡಿ, ಗುಣಮಟ್ಟದ ಆಹಾರವನ್ನು ಸಿದ್ಧಪಡಿಸಿ ಕಳುಹಿಸಿಕೊಟ್ಟರೂ, ಅದಕ್ಕೆ ಸಂಬಂಧಿಸಿದ ಹಣ ಹೋಟೆಲ್ ಮಾಲೀಕರ ಖಾತೆಗೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಬಿಲ್ ಮೊತ್ತದಲ್ಲಿ ಅನಗತ್ಯ ಕಮಿಷನ್ ಕಡಿತಗೊಳಿಸಲಾಗುತ್ತಿದೆ.

ಈ ಎಲ್ಲಾ ಕಿರುಕುಳಗಳಿಂದ ಬೇಸತ್ತಿರುವ ಬೆಂಗಳೂರಿನ ಹೋಟೆಲ್ ಮಾಲೀಕರು ಮಂಗಳವಾರದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ಸ್ವಿಗ್ಗಿ ಸಂಸ್ಥೆಯು ತನ್ನ ನೀತಿಗಳನ್ನು ತಿದ್ದುಪಡಿ ಮಾಡಿಕೊಳ್ಳದಿದ್ದರೆ, ಬೆಂಗಳೂರಿನಾದ್ಯಂತ ಸ್ವಿಗ್ಗಿ ಮೂಲಕ ಫುಡ್ ಡೆಲಿವರಿ ನೀಡುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಹೋಟೆಲ್ ಸಂಘ ಸಜ್ಜಾಗಿದೆ.

PREV
Read more Articles on
click me!

Recommended Stories

ಗ್ರೇಟರ್ ಬೆಂಗಳೂರು ಸಾಧನೆ: ಕೋಟಿ ಲೂಟಿ ಮಾಡುವ ಭ್ರಷ್ಟರ ಬಿಟ್ಟು, ಕಸ ಎಸೆದ ಜನರ ವಿರುದ್ಧ ಎಫ್‌ಐಆರ್ ದಾಖಲು!
ರಾಜ್ಯ ಗೃಹ ಸಚಿವರಿಗೆ ಅನಾಮಧೇಯ ಪತ್ರ, ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಪೊಲೀಸ್ ಲೆಟರ್