ಸೈಕಲ್‌ಗೂ ಟೋಲ್‌ ಕಟ್ಟಬೇಕಾ? ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸವಾರನಿಗೆ ಟೋಲ್‌ ಶಾಕ್!

Published : Apr 22, 2026, 03:38 PM IST
Bengaluru Electronic Flyover

ಸಾರಾಂಶ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ 'ಆಲ್ ಇಂಡಿಯಾ ಟೂರ್'ನಲ್ಲಿದ್ದ ಸೈಕಲ್ ಸವಾರನೊಬ್ಬನಿಗೆ ಟೋಲ್ ಸಿಬ್ಬಂದಿ 25 ರೂಪಾಯಿ ಕೇಳಿ ಪೀಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು (ಏ.22): ಟೋಲ್ ಪ್ಲಾಜಾಗಳಲ್ಲಿ ಕಾರು, ಬಸ್ ಅಥವಾ ಲಾರಿಗಳಿಂದ ಹಣ ವಸೂಲಿ ಮಾಡುವುದು ಸಾಮಾನ್ಯ. ಆದರೆ ಸೈಕಲ್ ಸವಾರನೊಬ್ಬನಿಗೆ ಟೋಲ್ ಕಟ್ಟುವಂತೆ ಪೀಡಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಟೋಲ್ ಸಿಬ್ಬಂದಿಯೊಬ್ಬ ಸೈಕಲ್ ಸವಾರನನ್ನು ತಡೆದು 25 ರೂಪಾಯಿ ಟೋಲ್ ನೀಡುವಂತೆ ಧಮ್ಕಿ ಹಾಕಿರುವ ದೃಶ್ಯ ವಿಡಿಯೋದಲ್ಲಿದೆ.

'ಆಲ್ ಇಂಡಿಯಾ ಟೂರ್' ಹಮ್ಮಿಕೊಂಡಿರುವ ಸೈಕಲ್ ಸವಾರನೊಬ್ಬ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯ (Flyover) ಟೋಲ್ ಹತ್ತಿರ ಬಂದಾಗ ಈ ಘಟನೆ ಸಂಭವಿಸಿದೆ. ಟೋಲ್ ಸಿಬ್ಬಂದಿ ಆತನನ್ನು ತಡೆದು 25 ರೂಪಾಯಿ ಪಾವತಿಸುವಂತೆ ಕೇಳಿದ್ದಾನೆ. ಇದಕ್ಕೆ ಸವಾರನು, "ಸೈಕಲ್ ಸವಾರರಿಗೂ ಟೋಲ್ ಇದೆ ಎಂದು ಯಾವ ನಿಯಮದ ಪುಸ್ತಕದಲ್ಲಿ ಬರೆಯಲಾಗಿದೆ? ಅಧಿಕೃತ ಮಾರ್ಗಸೂಚಿ ತೋರಿಸಿ" ಎಂದು ಪ್ರಶ್ನಿಸಿದಾಗ, ಸಿಬ್ಬಂದಿಯ ಬಳಿ ಯಾವುದೇ ಉತ್ತರವಿರಲಿಲ್ಲ. ಬದಲಿಗೆ, ಸವಾರನನ್ನು ಬೆದರಿಸುವ ಧಾಟಿಯಲ್ಲಿ "ಸೈಕಲ್ ಬದಿಗೆ ತಗೋ" ಎಂದು ಉದ್ಧಟತನ ತೋರಿದ್ದಾನೆ.

ದರ ಪಟ್ಟಿಯಲ್ಲಿ ಏನಿದೆ?

ಟೋಲ್ ಪ್ಲಾಜಾದ ಪಕ್ಕದಲ್ಲೇ ಇದ್ದ 'ಬೈಕ್ ಸವಾರರ ಶುಲ್ಕ'ದ ಬೋರ್ಡ್‌ನಲ್ಲಿ 25 ರೂಪಾಯಿ ಟೋಲ್‌ ಮತ್ತು ದಿನದ ಪಾಸ್‌ಗೆ 40 ರೂಪಾಯಿ ಎಂದು ಬರೆಯಲಾಗಿತ್ತು. ಆದರೆ ಸೈಕಲ್‌ಗಳ ಬಗ್ಗೆ ಆ ಫಲಕದಲ್ಲಿ ಯಾವುದೇ ಉಲ್ಲೇಖವಿರಲಿಲ್ಲ. ಆದರೂ ಸಿಬ್ಬಂದಿ ಮಾತ್ರ ಹಣಕ್ಕಾಗಿ ಪಟ್ಟು ಹಿಡಿದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ

ಸೂರಜ್ ಕುಮಾರ್ ಬೌಧ್ ಎಂಬುವವರು ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದು, "ಸೈಕಲ್‌ಗಳ ಮೇಲೂ ಟೋಲ್ ದರೋಡೆ ನಡೆಯುತ್ತಿದೆ. ನಿತಿನ್ ಗಡ್ಕರಿಯವರು ದ್ವಿಚಕ್ರ ವಾಹನಗಳಿಗೆ ಟೋಲ್ ಇಲ್ಲ ಎನ್ನುತ್ತಾರೆ, ಆದರೆ ಇಲ್ಲಿ ಸೈಕಲ್ ಸವಾರರಿಂದಲೂ ಹಣ ವಸೂಲಿ ಮಾಡಲಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಎರಡು ರೀತಿಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ಈ ರಸ್ತೆಯಲ್ಲಿ ಸೈಕಲ್ ಚಲಾಯಿಸುವುದೇ ತಪ್ಪು. ವಾಹನಗಳು ಗಂಟೆಗೆ 80-120 ಕಿಮೀ ವೇಗದಲ್ಲಿ ಚಲಿಸುವ ಎಕ್ಸ್‌ಪ್ರೆಸ್‌ವೇನಲ್ಲಿ ಸೈಕಲ್ ತರುವುದು ಪ್ರಾಣಕ್ಕೆ ಅಪಾಯಕಾರಿ. ಟೋಲ್ ಕಟ್ಟುವುದಕ್ಕಿಂತ ದೊಡ್ಡ ಮೂರ್ಖತನ ಎಂದರೆ ಇಲ್ಲಿ ಸೈಕಲ್ ಚಲಾಯಿಸುವುದು" ಎಂದಿದ್ದಾರೆ. ಮತ್ತೊಂದೆಡೆ, ನಿಯಮವಿಲ್ಲದಿದ್ದರೂ ಹಣ ಕೇಳುವ ಟೋಲ್ ಸಿಬ್ಬಂದಿಯ ದರ್ಪದ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದಾರೆ.

ಎಕ್ಸ್‌ಪ್ರೆಸ್‌ವೇನಲ್ಲಿ ಸೈಕಲ್ ನಿಷೇಧ

ಸಾಮಾನ್ಯವಾಗಿ ಅತಿವೇಗದ ವಾಹನ ಸಂಚಾರವಿರುವ ಮೇಲ್ಸೇತುವೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈಕಲ್ ಮತ್ತು ದ್ವಿಚಕ್ರ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಕೂಡ ಹೈ-ಸ್ಪೀಡ್ ವಾಹನಗಳಿಗಾಗಿಯೇ ನಿರ್ಮಿಸಲ್ಪಟ್ಟಿದ್ದು, ಇಲ್ಲಿ ಸೈಕಲ್ ಚಲಾಯಿಸುವುದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

 

 

 

PREV
Read more Articles on
click me!

Recommended Stories

ಬೆಂಗಳೂರು ಆಸ್ಪತ್ರೆಯಲ್ಲಿ ಮರ್ಮಾಂಗಕ್ಕೆ ಸ್ಟಿಚಿಂಗ್ ಹಾಕದೆ ಡಿಶ್ಚಾರ್ಜ್ ಮಾಡಿದ ವೈದ್ಯರು; ನರಳಿ ಪ್ರಾಣಬಿಟ್ಟ ಯುವಕ!
ಕಟ್ಟಿಂಗ್ ಶಾಪ್‌ನವನ ಜೊತೆ ಓಡಿದ ವಿವಾಹಿತ ಮಹಿಳೆ: ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್