ಬೆಂಗಳೂರಿನಲ್ಲಿ ಮತ್ತೊಂದು ಚುನಾವಣೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ. ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಬೆಂಗಳೂರು [ನ.14]: ಬಿಬಿಎಂಪಿಯ ಸ್ಥಾಯಿ ಸಮಿತಿ ಚುನಾವಣೆ ಗೊಂದಲ ಬಗೆಹರಿಯದ ಕಾರಣ ಎಲ್ಲಾ 12 ಸ್ಥಾಯಿ ಸಮಿತಿಗಳಿಗೂ ಅವಧಿ ಮುಗಿದ ಬಳಿಕವೇ ಅರ್ಥಾತ್ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಡೆಯುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ ಡಿ. 6 ಕ್ಕೆ ಹಾಲಿ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಆ ನಂತರವೇ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬಹುತೇಕ ಡಿ. 6 ಅಥವಾ 7 ರಂದು ಚುನಾವಣೆಗೆ ಹೊಸ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
undefined
ಕೆಎಂಸಿ ಕಾಯ್ದೆ ಅನುಸಾರ ಪ್ರತಿ ವರ್ಷ ಮೇಯರ್ ಮತ್ತು ಉಪಮೇಯರ್ ಚುನಾವಣೆಯ ದಿನವೇ ೧೨ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಬೇಕು. ಇದರಿಂದ ಒಂದು ವರ್ಷ ಅವಧಿಯ ಮೇಯರ್, ಉಪ ಮೇಯರ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಅಧಿಕಾರಾವಧಿ ಏಕ ಕಾಲಕ್ಕೆ ಪೂರ್ಣಗೊಂಡು ಎಲ್ಲ ಸ್ಥಾನಗಳಿಗೂ ಒಮ್ಮೆಯೇ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಆದರೆ, ೨೦೧೮ರಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆ ಕಾರಣಾಂತರಗಳಿಂದ ಮೇಯರ್ ಚುನಾವಣೆಯಾದ ಒಂದು ತಿಂಗಳು ತಡವಾಗಿ ನಡೆಸಲಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದರಿಂದ, ಈ ಬಾರಿ ಮೇಯರ್ ಚುನಾವಣೆ ವೇಳೆಗೆ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರ ಅಧಿಕಾರಾವಧಿ ಮುಗಿಯದ ಕಾರಣ ಚುನಾವಣೆ ನಡೆಸುವ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು.
ಸ್ಥಾಯಿ ಸಮಿತಿಗಳ ಅವಧಿ ಮುಗಿಯದಿದ್ದರೂ ಕೆಎಂಸಿ ಕಾಯ್ದೆ ಅನುಸಾರ ಮೇಯರ್ ಚುನಾವಣೆಯಂದೇ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ ಪ್ರಾದೇಶಿಕ ಆಯುಕ್ತರ ಕ್ರಮ ಪ್ರಶ್ನಿಸಿ ಒಂಬತ್ತು ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೋರ್ಟ್ ಆ ಸ್ಥಾಯಿ ಸಮಿತಿಗಳ ಚುನಾವಣೆಗೆ ತಡೆ ನೀಡಿತ್ತು. ನಂತರ ಪ್ರಾದೇಶಿಕ ಆಯುಕ್ತರು ನ್ಯಾಯಾಲಯದಲ್ಲಿ ತಡೆ ಇರುವ ಸಮಿತಿಗಳನ್ನು ಬಿಟ್ಟು ಉಳಿದ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಎರಡು ಬಾರಿ ಅಧಿಸೂಚನೆ ಹೊರಡಿಸಿದರೂ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.
ಇದರ ನಡುವೆ ಮತ್ತೊಂದು ಸ್ಥಾಯಿ ಸಮಿತಿಯವರು ಕೂಡ ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ಚುನಾವಣೆ ನಡೆಸಲು ಸಾಧ್ಯವಾಗದೆ ಗೊಂದಲ ಸೃಷ್ಟಿಯಾಗಿದೆ.
ಈ ಎಲ್ಲಾ ಕಾರಣಗಳಿಂದ ಅನಿವಾರ್ಯವಾಗಿ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರಾವಧಿ ಮುಗಿದ ಬಳಿಕವೇ ಡಿಸೆಂಬರ್‌ನಲ್ಲಿ ಚುನಾವಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅದರಂತೆ, ಡಿ. 6 ರಂದು ಅಧಿಕಾರಾವಧಿ ಮುಗಿಯಲಿದ್ದು, ಅದೇ ದಿನ ಅಥವಾ ಡಿ. 7ರಂದು ಚುನಾವಣೆ ನಡೆಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.