ಬಿಬಿಎಂಪಿಯಿಂದ ಚುನಾವಣೆಗೆ ಸರ್ಕಸ್‌!

By Kannadaprabha NewsFirst Published Oct 20, 2019, 8:30 AM IST
Highlights

ಒಂಬತ್ತು ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್‌ ತಡೆ ನೀಡಿರುವ ನಡುವೆಯೇ ಉಳಿದ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಬಿಬಿಎಂಪಿ ಮತ್ತೊಮ್ಮೆ ಮುಂದಾಗಿದೆ. 

ಬೆಂಗಳೂರು [ಅ.20]:  ಒಂಬತ್ತು ಸ್ಥಾಯಿ ಸಮಿತಿಗಳ ಚುನಾವಣೆಗೆ ಹೈಕೋರ್ಟ್‌ ತಡೆ ನೀಡಿರುವ ನಡುವೆಯೇ ಉಳಿದ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಬಿಬಿಎಂಪಿ ಮತ್ತೊಮ್ಮೆ ಮುಂದಾಗಿದ್ದು, ಚುನಾವಣೆಗೆ ದಿನಾಂಕ ನಿಗದಿಪಡಿಸದೆ ಕೇವಲ ನಾಮಪತ್ರ ಸಲ್ಲಿಸಲು ಸಮಯ ನಿಗದಿಪಡಿಸಿದೆ.

ಅವಧಿಗೆ ಮೊದಲೇ ಚುನಾವಣೆ ನಡೆಸುವುದನ್ನು ಪ್ರಶ್ನಿಸದ ಆರೋಗ್ಯ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ ಮತ್ತು ಮಾರುಕಟ್ಟೆಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಅ.21ರಿಂದ 30ರವರೆಗೆ (ರಜಾದಿನ ಹೊರತುಪಡಿಸಿ) ನಾಮಪತ್ರ ಸಲ್ಲಿಸಬಹುದು ಎಂದು ಬಿಬಿಎಂಪಿ ಕೌನ್ಸಿಲ್‌ ಕಾರ್ಯದರ್ಶಿ ಶನಿವಾರ ಪ್ರಕಟಿಸಿದ್ದಾರೆ. ಆದರೆ ಅದರಲ್ಲಿ ನಾಮಪತ್ರ ಹಿಂಪಡೆಯುವ ದಿನ ಅಥವಾ ಸಮಯ, ಪರಿಶೀಲನೆ ಮತ್ತಿತರ ವಿಷಯಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. (ಚುನಾವಣೆ ನಡೆಯುವ ದಿನವೇ ಎಲ್ಲ ಕಾರ‍್ಯವೂ ಪೂರ್ಣಗೊಳಿಸಲಾಗುತ್ತಿತ್ತು).

ಕೆಎಂಸಿ ಕಾಯ್ದೆ ಅನುಸಾರ ಪ್ರತಿ ವರ್ಷ ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಯ ದಿನವೇ 12 ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಬೇಕು. ಇದರಿಂದ ಒಂದು ವರ್ಷ ಅವಧಿಯ ಮೇಯರ್‌, ಉಪಮೇಯರ್‌ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಅಧಿಕಾರಾವಧಿ ಏಕ ಕಾಲಕ್ಕೆ ಪೂರ್ಣಗೊಂಡು ಒಂದೇ ಬಾರಿ ಎಲ್ಲ ಸ್ಥಾನಗಳಿಗೂ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ. ಆದರೆ, 2018ರಲ್ಲಿ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮೇಯರ್‌ ಚುನಾವಣೆಯಾದ ನಂತರ ತಡವಾಗಿ ನಡೆಸಲಾಗಿತ್ತು. ಇದರಿಂದ, ಈ ಬಾರಿ ಮೇಯರ್‌ ಚುನಾವಣೆ ವೇಳೆಗೆ ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಮುಗಿಯದ ಕಾರಣ ಚುನಾವಣೆ ನಡೆಸುವ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು.

ಆದರೂ, ಪ್ರಾದೇಶಿಕ ಆಯುಕ್ತರು ನಿಯಮಾನುಸಾರ ಮೇಯರ್‌ ಚುನಾವಣೆ ಜತೆ ಸ್ಥಾಯಿ ಸಮಿತಿಗಳ ಚುನಾವಣೆಗೂ ಅಧಿಸೂಚನೆ ಪ್ರಕಟಿಸಿದ್ದರು. ಇದನ್ನು ಒಂಬತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರಿಂದ ಆ ಎಂಟು ಸಮಿತಿಗಳ ಚುನಾವಣೆಗೆ ತಡೆ ನೀಡಿತ್ತು. ಆದರೂ, ಅ.1ರ ಮೇಯರ್‌ ಚುನಾವಣೆ ವೇಳೆ ತಡೆ ಇಲ್ಲದ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಬಿಬಿಎಂಪಿ ಅಧಿಸೂಚನೆ ಹೊರಡಿಸಿತ್ತು. ಅಂದು ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣೆ ಮುಂದೂಡಲ್ಪಟ್ಟಿತ್ತು. ಇದರ ನಡುವೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರೂ ಚುನಾವಣೆಗೆ ತಡೆ ತಂದಿದ್ದಾರೆ. ಇದೀಗ ಉಳಿದ ಮೂರು ಸ್ಥಾಯಿ ಸಮಿತಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವಂತೆ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ

click me!