
ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬದ ಆಪ್ತರಾಗಿದ್ದ ನಟ ಧನ್ವೀರ್ ಗೌಡ ನಡುವಿನ ಗಲಾಟೆ ಈಗ ಬೀದಿಗೆ ಬಿದ್ದಿದ್ದು, ಕಾನೂನು ಸಮರಕ್ಕೆ ತಿರುಗಿವೆ. ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಹಾಗೂ ಕಿರುಕುಳ ನೀಡಿದ್ದಾರೆ ಎಂಬ ಆರೋಪದಡಿ ನಟ ಧನ್ವೀರ್ ವಿರುದ್ಧ ಬೆಂಗಳೂರಿನ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿ ನಟ ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ. ಧನ್ವೀರ್ ತಮಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನನ್ವಯ ಪೊಲೀಸರು ಗಂಭೀರ ಸ್ವರೂಪದ್ದಲ್ಲದ ಅಪರಾಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಆರ್. ಆರ್. ನಗರ ಠಾಣೆಯಷ್ಟೇ ಅಲ್ಲದೆ, ನಗರದ ಇನ್ನೆರಡು ಠಾಣೆಗಳಲ್ಲೂ ಧನ್ವೀರ್ ವಿರುದ್ಧ ದೂರುಗಳು ಸಲ್ಲಿಕೆಯಾಗಿವೆ. ಬೋಜರಾಜ ರೈ ಎಂಬುವವರು ಧನ್ವೀರ್ ಅವರಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪಿಸಿ ದೂರು ನೀಡಿದ್ದು,ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
ಗೌರವ್ ಎಂಬುವವರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಧನ್ವೀರ್ ಅವರಿಗೆ ವಿಮಾನ ಟಿಕೆಟ್ ಬುಕ್ ಮಾಡಿಸಿಕೊಟ್ಟರೂ ಹಣ ನೀಡದೆ ವಂಚಿಸಿದ್ದಾರೆ ಹಾಗೂ ಶಶಿ ಎಂಬುವವರ ಕಾರನ್ನು ಪಡೆದು ವಾಪಸ್ ನೀಡದೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ
ಪೊಲೀಸರು ಸದ್ಯ ಈ ಮೂರೂ ದೂರುಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಎನ್‌ಸಿಆರ್ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇವು ಗಂಭೀರ ಸ್ವರೂಪದ ಅಪರಾಧ ವಿಭಾಗಕ್ಕೆ ಬಾರದಿರುವುದರಿಂದ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲ.
ದೂರುದಾರರು ಜನಪ್ರತಿನಿಧಿಗಳ ಅಥವಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಬೇಕಾಗುತ್ತದೆ. ನ್ಯಾಯಾಲಯವು ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಎಫ್‌ಐಆರ್ ಮಾಡಲು ಆದೇಶಿಸಿದರೆ ಮಾತ್ರ ಪೊಲೀಸರು ಪ್ರಕರಣದ ಅಧಿಕೃತ ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ.ದರ್ಶನ್ ಅವರ ಸಂಕಷ್ಟದ ಸಮಯದಲ್ಲಿ ಅವರ ಕುಟುಂಬದ ಜತೆ ನಿಕಟವಾಗಿದ್ದ ಧನ್ವೀರ್ ಅವರೇ ಈಗ ದರ್ಶನ್ ಪತ್ನಿಯ ಆಪ್ತ ಸಹಾಯಕನೊಂದಿಗೆ ವಿವಾದಕ್ಕೊಳಗಾಗಿರುವುದು ಗಾಂಧಿನಗರದ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.