
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕರ್ನಾಟಕ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಹಮ್ಮಿಕೊಳ್ಳಲಾಗಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.
ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಸಮಯ ನಿಗದಿಪಡಿಸಲಾಗಿದೆ.
ವೆಲ್‌ಕಾಸ್ಟ್ ಉಪಕೇಂದ್ರ ವ್ಯಾಪ್ತಿ: ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ
ಬ್ಯಾಟರಾಯನಪುರ ಉಪಕೇಂದ್ರ ವ್ಯಾಪ್ತಿ: ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೇವಲ ವಸತಿ ಪ್ರದೇಶಗಳಷ್ಟೇ ಅಲ್ಲದೆ, ಕೈಗಾರಿಕಾ ವಲಯಗಳಿಗೂ ವಿದ್ಯುತ್ ಕಡಿತದ ಬಿಸಿ ತಟ್ಟಲಿದೆ. ಪ್ರಮುಖವಾಗಿ ವೋಲ್ವೋ (Volvo), ಐಟಿಸಿ (ITC), ವಿಪ್ರೋ ವೆಲ್‌ಕಾಸ್ಟ್ (Wipro Wellcast) ಸೇರಿದಂತೆ ಹಲವು ಕೈಗಾರಿಕಾ ಘಟಕಗಳಲ್ಲಿ ಉತ್ಪಾದನೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ನಿರ್ವಹಣಾ ಕಾಮಗಾರಿಗಳು ಪೂರ್ಣಗೊಂಡ ತಕ್ಷಣವೇ ವಿದ್ಯುತ್ ಪೂರೈಕೆಯನ್ನು ಪುನಾರಂಭಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಮತ್ತು ಉದ್ದಿಮೆದಾರರು ಸಹಕರಿಸಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.