ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಅಂತ ಹೇಳಿದ್ದು ಹುಡುಗಾಟಿಕೆ ಮಾತಲ್ಲ| ಬಹಳ ಸತ್ಯವಾದ ಮಾತನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುತ್ತೇ ಉಪಚುನಾವಣೆಯ ಎಲ್ಲ 17 ಕ್ಷೇತ್ರಗಳಲ್ಲೂ ಗೆದ್ದೆ ಗೆಲ್ತೇವೆ|
ಬಾಗಲಕೋಟೆ[ನ.10]: ಕಾಂಗ್ರೆಸ್ ಸಾಮೂಹಿಕ ನಾಯಕತ್ವಕ್ಕೆ ಯಾವಾಗಲೂ ಬೆಲೆ ಕೊಟ್ಟಿಲ್ಲ. ಒಂದು ಮನೆತನಕ್ಕೆ ಬೆಲೆ ಕೊಟ್ಟು 70 ವರ್ಷ ಕಳೆದಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನೆಹರು ಮನೆತನಕ್ಕೆ ಬೆಲೆ ಕೊಟ್ಟು 70 ವರ್ಷ ಕಳೆದಿವೆ. ಆ ಮನೆತನದ ಹೆಸರು ಬಿಟ್ಟು ಹೇಳೋಕೆ ಯಾರು ತಯಾರಿಲ್ಲ. ಕಾಂಗ್ರೆಸ್ ನಲ್ಲಿ ನಾಯಕತ್ವ ವಹಿಸಿಕೊಳ್ಳುವ ಗುಣ ಯಾರಲ್ಲೂ ಇಲ್ಲ. ಹೀಗಾಗಿ ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಆಗುತ್ತೆ ಅಂತ ಹೇಳಿದ್ದು ಹುಡುಗಾಟಿಕೆ ಮಾತಲ್ಲ. ಬಹಳ ಸತ್ಯವಾದ ಮಾತನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕೆಲವೇ ವರ್ಷಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗುತ್ತೇ, ಖಂಡಿತವಾಗಿಯೂ ಉಪಚುನಾವಣೆಯ ಎಲ್ಲ 17 ಕ್ಷೇತ್ರಗಳಲ್ಲೂ ಗೆದ್ದೆ ಗೆಲ್ತೇವೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಯೋಧ್ಯೆ ತೀರ್ಪು ದೇಶದ ಏಕತೆ, ಸಮಗ್ರತೆಗಾಗಿ ತೀರ್ಪು ಸ್ವಾಗತಾರ್ಹವಾಗಿದೆ. ಬುದ್ದಿಜೀವಿಗಳು, ಧಾರ್ಮಿಕ ಮುಖಂಡರು, ಹೋರಾಟಗಾರರು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಿಸಿದಕ್ಕೆ ಅಭಿನಂದಿಸ್ತೇನೆ. ದೇಶದ 130 ಕೋಟಿ ತೀರ್ಪು ಸ್ವಾಗತಿಸಿದ್ದಾರೆ. ಶಾಂತಿಯಿಂದ ತೀರ್ಪು ಗೌರವಿಸಿದ್ದಾರೆ. ಇದು ಎಂದೋ ಆಗಬೇಕಾಗಿದೆ ಕೆಲ್ಸ ಈಗಾಗಿದೆ. ದೇಶದ ಅಭಿವೃದ್ಧಿಗಾಗಿ, ದೇಶವಾಸಿಗಳು ಒಗ್ಗಟ್ಟಾಗಿ ಅಣ್ಣ ತಮ್ಮಂದಿರಾಗಿ ಬಾಳಲು ತೀರ್ಪು ಸಹಕಾರಿಯಾಗಿದೆ ಎಂದಿದ್ದಾರೆ.
ವಿಜಯನಗರ ನೂತನ ಜಿಲ್ಲೆ ಸಂಬಂಧ ಆನಂದ ಸಿಂಗ್ ಆಡಿಯೋ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ನನಗೆ ಗೊತ್ತಿಲ್ಲ. ನಾನು ಸಚಿವ ಸಂಪುಟದ ಸದಸ್ಯನಿದ್ದೇನೆ. ಯಡಿಯೂರಪ್ಪನವರ ನೇತೃತ್ವದ ಸಚಿವ ಸಂಪುಟದ ಮುಂದೆ ಬಂದಾಗ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ. ಅನರ್ಹ ಶಾಸಕರ ತೀರ್ಪು ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ತೀರ್ಪಿನ ಬಗ್ಗೆ ನಾನು ವ್ಯಾಖ್ಯಾನ ಮಾಡಲು ಬಯಸುವುದಿಲ್ಲ. ಯಾಕಂದ್ರೆ ಸುಪ್ರಿಂ ಕೋರ್ಟ್ ನಲ್ಲಿ ತೀರ್ಪಿದೆ. ತೀರ್ಪುಏನೆ ಬಂದ್ರೂ ನಾವು ಅದನ್ನು ಸ್ವಾಗತಿಸಬೇಕು ಎಂದು ಹೇಳಿದ್ದಾರೆ.
ಅಯೋಧ್ಯೆ ತೀರ್ಪಿಗೆ ಹೈದರಾಬಾದ ಸಂಸದ ಅಸಾದುದ್ದಿನ್ ಓವೈಸಿ ಅಸಮಾಧಾನ ವಿಚಾರ ಸಂಬಂಧ ಮಾತನಾಡಿದ ಅವರು, ಈ ಬಗ್ಗೆ ಏನೂ ಹೇಳೋದಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ನಾವು ಗೌರವಿಸಬೇಕು. ದೇಶದ 130 ಕೋಟಿ ಶಾಂತಿಯಿಂದ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೋರಾಟ ಸಂಬಂಧ ಡಿಸಿ ಮತ್ತು ಕಾರ್ಖಾನೆ ಮಾಲೀಕರು ಸಭೆ ಮಾಡಿದ್ದಾರೆ. ಪರಸ್ಪರ ಕುಳಿತು ಚರ್ಚೆ ಮಾಡಿ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಈಗ ಸಮಸ್ಯೆ ಇಲ್ಲ ಎಂದಿದ್ದಾರೆ.