ಬಾಗಲಕೋಟೆ: ಗದ್ದನಕೇರಿ ಕ್ರಾಸ್‌ನಲ್ಲಿ ಬಸ್‌ಬೇ ನಿರ್ಮಾಣ

By Web DeskFirst Published Oct 15, 2019, 12:16 PM IST
Highlights

ಗದ್ದನಕೇರಿ ಕ್ರಾಸ್‌ನಲ್ಲಿ ನಾಲ್ಕು ಕಡೆಗಳಲ್ಲಿ ಶೀಘ್ರವೇ ಬಸ್‌ಬೇ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚನೆ|  ನಾಲ್ಕು ಕಡೆಗಳಲ್ಲಿ ಬಸ್‌ ಬೇ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಒಪ್ಪಿಗೆ| ಹುಬ್ಬಳ್ಳಿ ಮತ್ತು ವಿಜಯಪುರ ಮಾರ್ಗದ ಎರಡು ಕಡೆಗಳಲ್ಲಿ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಗೂ ಬೆಳಗಾವಿ ಮತ್ತು ಬಾಗಲಕೋಟೆ ಎರಡು ಕಡೆಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಶೀಘ್ರದಲ್ಲಿ ಬಸ್‌ ಬೇ ನಿರ್ಮಿಸಲು ಸೂಚಿಸಿದರು|

ಬಾಗಲಕೋಟೆ(ಅ.15): ಗದ್ದನಕೇರಿ ಕ್ರಾಸ್‌ನಲ್ಲಿ ನಾಲ್ಕು ಕಡೆಗಳಲ್ಲಿ ಶೀಘ್ರವೇ ಬಸ್‌ಬೇ ನಿರ್ಮಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಹಿಂದಿನ ಸಭೆಗಳಲ್ಲಿ ಚರ್ಚಿಸಿದಂತೆ ಗದ್ದನಕೇರಿ ಕ್ರಾಸ್‌ನಲ್ಲಿ ಬಸ್‌ ನಿಲ್ದಾಣ ನಿರ್ಮಿಸಲು ಅರಣ್ಯ ಇಲಾಖೆಯಿಂದ ನಿವೇಶನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ದಾಖಲಿಸಿ ಅನುಮತಿ ಕಾಯ್ದಿರಿಸಲಾಗಿದ್ದು, ಈ ಪ್ರಸ್ತಾವನೆಯನ್ನು ಕೈಬಿಡಲು ತಿಳಿಸಲಾಗಿತ್ತು. ಇದರ ಬದಲಾಗಿ ನಾಲ್ಕು ಕಡೆಗಳಲ್ಲಿ ಬಸ್‌ ಬೇ ನಿರ್ಮಿಸಲು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದವರು ಬಸ್‌ ಬೇ ನಿರ್ಮಿಸಲು ಒಪ್ಪಿಗೆ ನೀಡಿದ್ದು, ಬಸ್‌ ಬೇ ನಿರ್ಮಾಣಕ್ಕೆ ಕ್ರಮವಹಿಸಲು ಸೂಚಿಸಿದರು.

ಹುಬ್ಬಳ್ಳಿ ಮತ್ತು ವಿಜಯಪುರ ಮಾರ್ಗದ ಎರಡು ಕಡೆಗಳಲ್ಲಿ ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಗೂ ಬೆಳಗಾವಿ ಮತ್ತು ಬಾಗಲಕೋಟೆ ಎರಡು ಕಡೆಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಶೀಘ್ರದಲ್ಲಿ ಬಸ್‌ ಬೇ ನಿರ್ಮಿಸಲು ಸೂಚಿಸಿದರು. ಮುಧೋಳ ಮತ್ತು ಲೋಕಾಪುರದಲ್ಲಿ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಒನ್‌ವೇ ವ್ಯವಸ್ಥೆ ಪೊಲಿಸ್‌ ಇಲಾಖೆ ಹಾಗೂ ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳ ಸಲಹೆ ಪಡೆದು 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ಸರಕು ಸಾಗಾಣಿಕೆ ವಾಹನಗಳಲ್ಲಿ ಹಾಗೂ ಕನ್ಸ್‌ಸ್ಟ್ರಕ್ಷನ್‌ ಇಕ್ಯೂಪ್‌ಮೆಂಟ್‌ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು, ಟಂಟಂಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಕುರಿತು ಆಯಾ ತಾಲೂಕಿನ ಟಂಟಂ ಅಸೋಸಿಯೇಶನ್‌ಗಳ ಪ್ರತಿನಿಧಿಗಳನ್ನು ಕರೆಸಿ ಸಭೆಗಳನ್ನು ನಡೆಸಿ ಸೂಕ್ತ ನಿರ್ದೇಶನ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಐತಿಹಾಸಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಕ್ರಮ:

ಮುಧೋಳದಲ್ಲಿ ರೋಡ್‌ ವೈಡಿಂಗ್‌ ಮಾಡಲಾಗುತ್ತಿರುವುದಾಗಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಶಾಂತ ಸಭೆಗೆ ತಿಳಿಸಿದರು.

ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲ ಸೇರಿದಂತೆ ಇತರೆ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಲು ತಿಳಿಸಲಾಯಿತು. ಗದ್ದನಕೇರಿ ಕ್ರಾಸ್‌, ಸೀಮಿಕೇರಿ ಕ್ರಾಸ್‌ಗಳಲ್ಲಿ ಲೈಟಿಂಗ್‌ ಸಮಸ್ಯೆ ಇದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಗೆ ಈ ಕುರಿತು ಪತ್ರ ಬರೆಯಲು ತಿಳಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ಪ್ರಸಕ್ತ ವರ್ಷದಲ್ಲಿ ಟ್ರಾಫಿಕ್‌ ಇವ್ಯಾಲ್ಯುವೇಶನ್‌ಗೆ ಸಂಬಂಧಿಸಿದಂತೆ ಸೆಪ್ಟೆಂಬರ ತಿಂಗಳೊಂದರಲ್ಲಿಯೇ 50 ಲಕ್ಷ ಸೇರಿದಂತೆ ಜನೆವರಿಯಿಂದ ಇಲ್ಲಿಯವರೆಗೆ ಒಟ್ಟು 1.65 ಕೋಟಿ ದಂಡ ವಸೂಲಿ ಮಾಡಲಾಗಿದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿ ಹೆಲ್ಮೆಟ್‌ ಕಡ್ಡಾಯವಾಗಿ ಹಾಕಿಕೊಳ್ಳುವ ಕುರಿತು ಶಿಕ್ಷಣ ಸಂಸ್ಥೆಯಗಳೊಂದಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆಯನ್ನು ಕೂಡಾ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ, ಜಿಲ್ಲಾ ಉಪ ಅರಣ್ಯಾಧಿಕಾರಿ ದೇವರಾಜ, ಜಿಲ್ಲಾ ಸಾರಿಗೆ ಅಧಿಕಾರಿ ಪಡಿಯಪ್ಪ ಮೈತ್ರಿ, ನಗರಸಭೆಯ ಪೌರಾಯುಕ್ತ ಗಣಪತಿ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

click me!