ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವ ಮುನ್ನ ಈ 5 ವಿಷಯ ಗಮನದಲ್ಲಿರಲಿ

Published : Sep 10, 2024, 12:02 PM ISTUpdated : Sep 10, 2024, 12:22 PM IST
ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಸುವ ಮುನ್ನ ಈ 5 ವಿಷಯ ಗಮನದಲ್ಲಿರಲಿ

ಸಾರಾಂಶ

ಜಗತ್ತು ನಿಧಾನಕ್ಕೆ ಎಲೆಕ್ಟ್ರಿಕ್‌ ವೆಹಿಕಲ್‌ ಕಡೆಗೆ ಬದಲಾಗುತ್ತಿದೆ. ಮುಂದೆ ರಸ್ತೆ ತುಂಬಾ ಎಲೆಕ್ಟ್ರಿಕ್‌ ಸ್ಕೂಟರ್‌, ಕಾರುಗಳ ಸಂಖ್ಯೆ ಜಾಸ್ತಿಯಾಗಲಿವೆ. ಇಂಥಾ ಹೊತ್ತಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಲು ಆಶಿಸುತ್ತಿರುವವರು ಗಮನಿಸಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

ಜಗತ್ತು ನಿಧಾನಕ್ಕೆ ಎಲೆಕ್ಟ್ರಿಕ್‌ ವೆಹಿಕಲ್‌ ಕಡೆಗೆ ಬದಲಾಗುತ್ತಿದೆ. ಮೊದಲು ನಗರದ ರಸ್ತೆಯಲ್ಲಿ ಒಂದೋ ಎರಡೋ ಕಾಣುತ್ತಿದ್ದ ಎಲೆಕ್ಟ್ರಿಕ್‌ ವೆಹಿಕಲ್‌ಗಳು ಈಗ ಹತ್ತಾರು ಸಂಖ್ಯೆಯಲ್ಲಿ ಕಾಣಿಸುತ್ತಿವೆ. ಹಳ್ಳಿಗಳಲ್ಲೂ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಕಾಣಬಹುದಾಗಿದೆ. ಅದಕ್ಕೆ ತಕ್ಕಂತೆ ಹೊಸ ಹೊಸ ವೆಹಿಕಲ್‌ಗಳು ಬರುತ್ತಿವೆ. ಸ್ಕೂಟರ್‌, ಬ್ಯಾಟರಿಗೆ ಸಂಬಂಧಪಟ್ಟ ಹೊಸ ಹೊಸ ಸ್ಟಾರ್ಟಪ್‌ಗಳು ತಲೆ ಎತ್ತಿವೆ. ಮುಂದೆ ಮುಂದೆ ರಸ್ತೆ ತುಂಬಾ ಎಲೆಕ್ಟ್ರಿಕ್‌ ಸ್ಕೂಟರ್‌, ಕಾರುಗಳ ಸಂಖ್ಯೆ ಜಾಸ್ತಿಯಾಗಲಿವೆ. ಇಂಥಾ ಹೊತ್ತಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಲು ಆಶಿಸುತ್ತಿರುವವರು ಗಮನಿಸಬೇಕಾದ ಕೆಲವು ಸಂಗತಿಗಳು ಇಲ್ಲಿವೆ.

1. ಬೆಲೆ: ಪೆಟ್ರೋಲ್‌ ಮತ್ತು ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್‌ ಬೆಲೆ ಜಾಸ್ತಿ ಇರುತ್ತದೆ. ಅದೇ ನೀವು ಐದು ವರ್ಷದ ಪ್ಲಾನಿಂಗ್‌ ಈಗಲೇ ಮಾಡುವವರಾಗಿದ್ದರೆ ಎಲೆಕ್ಟ್ರಿಕ್‌ ಸ್ಕೂಟರ್‌ ಕೊಂಚ ಲಾಭದಾಯಕ ಅನ್ನಿಸಬಹುದು. ಅದು ಕೂಡ ಸ್ಕೂಟರ್‌ ಬ್ಯಾಟರಿ ಮೇಲೆ ಆಧರಿತವಾಗಿರುತ್ತದೆ. ಹಾಗಾಗಿ ಉತ್ತಮ ಕ್ಷಮತೆ, ಸಾಮರ್ಥ್ಯದ ಬ್ಯಾಟರಿ ಕುರಿತು ನೋಡಬೇಕು.

ಎಲೆಕ್ಟ್ರಿಕ್ ಸ್ಕೂಟರ್ ನಮ್ಮ ತಲೆಯನ್ನೂ ಕೆಡಿಸುತ್ತೆ, ಇವಿ ಸಾಕಪ್ಪ ಸಾಕು ಎಂದ ನಟ ಶಂಕರ್!

2. ದೇಹ ರಚನೆ: ಇತ್ತೀಚೆಗೆ ಪರಿಚಿತರೊಬ್ಬರು ಎಲೆಕ್ಟ್ರಿಕ್‌ ಸ್ಕೂಟರ್‌ ರೈಡ್‌ ಮಾಡುತ್ತಿರುವಾಗಲೇ ಅದರ ಹ್ಯಾಂಡಲ್‌ ಲೂಸ್‌ ಆಗಿ ಕೈಗೆ ಬಂದು ಇಡೀ ಸ್ಕೂಟರ್‌ ಅಲುಗಾಡಲು ಶುರುವಾಗಿತ್ತು. ವೇಗದಲ್ಲಿದ್ದರೆ ಅವರು ಅಪಾಯ ಎದುರಿಸುವ ಸಾಧ್ಯತೆ ಇತ್ತು. ಹಾಗಾಗಿ ಸ್ಕೂಟರ್‌ ಫಿಟ್ಟಿಂಗ್‌ ಮತ್ತು ಬಳಸಿರುವ ಸಾಮಾಗ್ರಿಗಳನ್ನು ಗಮನಿಸಿ. ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿರುತ್ತದೆ.

3. ಚಾರ್ಜಿಂಗ್: ಕೆಲವು ಕಂಪನಿಗಳು ನಗರ ಪ್ರದೇಶಗಳಲ್ಲಿ ಅವರದ್ದೇ ಆದ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಸ್ಥಾಪಿಸಿವೆ. ಆದರೆ ಅದರಲ್ಲೂ ಕೆಲವು ಕಂಪನಿಯ ಉಚಿತ ಹೈಪರ್‌ ಚಾರ್ಜರ್‌ಗಳು ಸದಾ ಬ್ಯುಸಿ ಆಗಿರುತ್ತವೆ. ಆದ್ದರಿಂದ ಮನೆಯಲ್ಲಿ ಚಾರ್ಜ್‌ ಮಾಡುವ ವ್ಯವಸ್ಥೆ ಸೂಕ್ತವಾಗಿದೆಯೇ ನೋಡಿಕೊಳ್ಳಿ.

4. ಎತ್ತರದ ರಸ್ತೆ ಹತ್ತಿಳಿಯುವ ಸಾಮರ್ಥ್ಯ: ಸಾಮಾನ್ಯವಾಗಿ ಪೆಟ್ರೋಲ್‌ ಸ್ಕೂಟರ್‌ ಓಡಿಸುವವರಿಗೆ ಎತ್ತರದ ರಸ್ತೆ ಏರುವುದು ಮತ್ತು ಇಳಿಯುವುದು ಸ್ವಲ್ಪ ಕಷ್ಟಕರ. ಆದರೆ ಕೆಲವು ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಆಟೋ ಹೋಲ್ಡ್‌ ಎಂಬ ಫೀಚರ್‌ ಒದಗಿಸುತ್ತವೆ. ಈ ಫೀಚರ್‌ ಎತ್ತರ ಏರುವಾಗ, ಇಳಿಯುವಾಗ ನೀವು ಒಮ್ಮೆ ಬ್ರೇಕ್‌ ಹಿಡಿದು ಬಿಟ್ಟರೆ ಸ್ಕೂಟರ್‌ ಹಿಂದಕ್ಕೆ, ಮುಂದಕ್ಕೂ ಚಲಿಸದಂತೆ ನೋಡಿಕೊಳ್ಳುತ್ತದೆ. ಇದೊಂದು ಒಳ್ಳೆಯ ಫೀಚರ್‌ ಆದರೂ ಈ ಫೀಚರ್‌ ಯಾವ ಕಂಪನಿಯ ಸ್ಕೂಟರ್‌ನಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಿ.

5. ಸರ್ವೀಸ್‌: ಇದಂತೂ ಬಹಳ ಮುಖ್ಯ ವಿಚಾರ. ಇತ್ತೀಚೆಗೆ ಹಿರಿಯ ನಟ ಶಂಕರ್‌ ಅಶ್ವತ್ಥ್ ಅವರು ಎದುರಿಸುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್‌ ಸರ್ವೀಸ್‌ ಸಮಸ್ಯೆಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಈಗೀಗ ಜನಪ್ರಿಯ ಆಗುತ್ತಿರುವುದರಿಂದ ಎಲ್ಲಾ ಮೆಕ್ಯಾನಿಕ್‌ಗಳೂ ಇದನ್ನು ರಿಪೇರಿ ಮಾಡುವುದಿಲ್ಲ. ಆಯಾ ಕಂಪನಿಯ ಸರ್ವೀಸ್‌ ಸೆಂಟರ್‌ಗಳಿಗೇ ಒಯ್ಯಬೇಕು. ಹಾಗಾಗಿ ಸೂಕ್ತ ಸರ್ವೀಸ್‌ ಸಿಗುವ ಕಂಪನಿಗಳನ್ನು ಆಯ್ದುಕೊಳ್ಳುವುದು ಬಹಳ ಮುಖ್ಯ.

ಶೋ ರೂಮ್ ಮುಂದೆಯೇ ಓಲಾ ಇಲೆಕ್ಟ್ರಿಕ್ ಸ್ಕೂಟರ್‌ಗೆ ಅಂತ್ಯ ಸಂಸ್ಕಾರ ಮಾಡಿದ ಯುವಕ

ಇಲೆಕ್ಟ್ರಿಕ್ ವಾಹನಗಳನ್ನು ಗ್ರಾಹಕರು ಕೊಳ್ಳಲು ಆರಂಭಿಸುತ್ತಿದ್ದಂತೆ, ಕಳಪೆ ವಾಹನಗಳು ಮಾರುಕಟ್ಟೆಗೆ ಬರಲಾರಂಭಿಸುತ್ತವೆ. ಮೇಲ್ನೋಟಕ್ಕೆ ವಿನ್ಯಾಸ ಮತ್ತು ಸೊಬಗು ಒಂದೇ ಥರ ಕಾಣಿಸಿದರೂ, ವಾಹನದ ಕ್ಷಮತೆಯಲ್ಲಿ ವ್ಯತ್ಯಾಸ ಇರುತ್ತದೆ. ಈಗಷ್ಟೇ ನಾವು ಇಲೆಕ್ಟ್ರಿಕ್ ವಾಹನಗಳಿಗೆ ತೆರೆದುಕೊಳ್ಳುತ್ತಿರುವ ಕಾರಣ ಅವುಗಳ ಸಮಸ್ಯೆಯ ಪೂರ್ಣ ಅರಿವು ಯಾರಿಗೂ ಇಲ್ಲ.

ಯಾವುದು ಒಳ್ಳೆಯ ಸ್ಕೂಟರ್, ಯಾವುದು ಸಾಧಾರಣ, ಯಾವುದು ಕಳಪೆ ಎಂದು ಹೇಳುವ ತಜ್ಞರೂ ಇಲ್ಲ. ಎಲ್ಲಕ್ಕಿಂತ ಮುಖ್ಯ ವಾಹನದ ಭಾರ, ಚಾರ್ಜಿಂಗ್ ಕೆಪಾಸಿಟಿ, ಬ್ಯಾಟರಿಯ ಆಯಸ್ಸು, ಸರ್ವೀಸ್ ಕೇಂದ್ರಗಳು, ಎಲ್ಲೆಂದರಲ್ಲಿ ಚಾರ್ಜ್ ಮಾಡಬಲ್ಲ ಯೂನಿವರ್ಸಲ್ ಚಾರ್ಜಿಂಗ್ ಕೇಬಲ್, ಕಂಪ್ಲೀಟ್ ಮ್ಯಾನ್ಯುಯಲ್, ಸಣ್ಣಪುಟ್ಟ ರಿಪೇರಿ ಮಾಡಿಕೊಳ್ಳಲು ಟೂಲ್‌-ಕಿಟ್- ಇಷ್ಟಂತೂ ಅತ್ಯಗತ್ಯ. ಅಂದಹಾಗೆ, ಇಲೆಕ್ಟ್ರಿಕ್ ವಾಹನಗಳಿಗೆ ಮರುಮಾರಾಟದ ಮೌಲ್ಯ ತೀರಾ ಕಡಿಮೆ ಅನ್ನುವುದು ನೆನಪಿರಲಿ.

PREV
Read more Articles on
click me!

Recommended Stories

ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ
ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌