ವಾಹನ ಮಾರಾಟ ಕುಸಿತ: 19 ವರ್ಷಗಳ ದಾಖಲೆ!| ಜುಲೈ ತಿಂಗಳ ಮಾರಾಟದಲ್ಲಿ ಶೇ.18.71ರಷ್ಟು ಇಳಿಕೆ| ಎರಡು ತಿಂಗಳಲ್ಲಿ 15 ಸಾವಿರ ಉದ್ಯೋಗ ಖೋತಾ
ನವದೆಹಲಿ[ಆ.14]: ದೇಶದ ಮೇಲೆ ಆರ್ಥಿಕ ಹಿಂಜರಿತದ ಕರಿಛಾಯೆ ಆವರಿಸಿಕೊಳ್ಳುತ್ತಿದೆ ಎಂಬ ಆತಂಕದ ಬೆನ್ನಲ್ಲೇ, ದೇಶದ ಆಟೋಮೊಬೈಲ್ ಉದ್ಯಮದ ದಯನೀಯ ಸ್ಥಿತಿ ಬೆಳಕಿಗೆ ಬಂದಿದೆ. 2019ರ ಜುಲೈ ತಿಂಗಳಲ್ಲಿ ಪ್ರಯಾಣಿಕ ವಾಹನ ಸೇರಿದಂತೆ ಎಲ್ಲಾ ವಾಹನಗಳ ಮಾರಾಟದಲ್ಲಿ ಶೇ.18.71ರಷ್ಟುಭಾರೀ ಕುಸಿತ ದಾಖಲಾಗಿದೆ. ಇದು ಕಳೆದ 19 ವರ್ಷಗಳಲ್ಲೇ ಭಾರೀ ಕುಸಿತದ ದಾಖಲೆಯಾಗಿದೆ. ಪರಿಣಾಮ 2-3 ತಿಂಗಳ ಅವಧಿಯಲ್ಲಿ 15000ಕ್ಕೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಅಖಿಲ ಭಾರತ ವಾಹನ ಉತ್ಪಾದಕರ ಸಂಘ ಕಳವಳ ವ್ಯಕ್ತಪಡಿಸಿದೆ.
ಸಂಘ ಬಿಡುಗಡೆ ಮಾಡಿರುವ ವರದಿ ಅನ್ವಯ, 2018ರ ಜುಲೈ ತಿಂಗಳಲ್ಲಿ ಒಟ್ಟು 22,45,223 ವಾಹನಗಳು ಮಾರಾಟವಾಗಿದ್ದರೆ, 2019ರ ಜುಲೈನಲ್ಲಿ ಅದು 18,25,148ಕ್ಕೆ ಇಳಿದಿದೆ. ಇದು ಶೇ.18.71ರಷ್ಟುಇಳಿಕೆ. 2000ರ ಡಿಸೆಂಬರ್‌ನಲ್ಲಿ ದಾಖಲಾಗಿದ್ದ ಶೇ.21.81ರಷ್ಟುಭಾರೀ ಇಳಿಕೆ ಹೊರತುಪಡಿಸಿದರೆ ನಂತರ ದಾಖಲಾದ ಅತ್ಯಂತ ಗರಿಷ್ಠ ಕುಸಿತದ ಪ್ರಮಾಣವಿದು ಎಂದು ಸಂಘದ ಪ್ರಧಾನ ನಿರ್ದೇಶಕ ವಿಷ್ಣು ಮಾಥೂರ್ ಹೇಳಿದ್ದಾರೆ.
ಜಿಡಿಪಿಗೆ ಉತ್ಪಾದನಾ ವಲಯವು ನೀಡುವ ಕಾಣಿಕೆ ಪೈಕಿ ಶೇ.50ರಷ್ಟುಪಾಲು ಆಟೋಮೊಬೈಲ್ ಉದ್ಯಮದ್ದು. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 3.7 ಕೋಟಿ ಜನ ಈ ಉದ್ಯಮವನ್ನು ಅವಲಂಬಿಸಿದ್ದಾರೆ. ಆದರೆ ಕಳೆದ 9 ತಿಂಗಳಿನಿಂದ ದೇಶದ ಆಟೋಮೊಬೈಲ್ ಉದ್ಯಮ ಸತತವಾಗಿ ಇಳಿಕೆಯಲ್ಲಿ ಹಾದಿ ಸಾಗಿದೆ. ಹೀಗಾಗಿ ಆಟೋಮೊಬೈಲ್ ಉದ್ಯಮಕ್ಕೆ ಹೊಡೆತ ಬಿದ್ದರೆ, ದೇಶದ ಆರ್ಥಿಕತೆಗೂ ಹೊಡೆತ ಖಚಿತ. ಹೀಗಾಗಿ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ, ಉದ್ಯಮದ ನೆರವಿಗೆ ಧಾವಿಸಬೇಕು ಎಂದು ಮಾಥೂರ್ ಒತ್ತಾಯಿಸಿದ್ದಾರೆ.
ವಾಹನಗಳ ಮಾರಾಟ ಕುಸಿತದ ಕಾರಣ ಕಳೆದ 9 ತಿಂಗಳ ಅವಧಿಯಲ್ಲಿ ದೇಶಾದ್ಯಂತ 300 ಡೀಲರ್‌ಗಳು ಬಾಗಿಲು ಹಾಕಿದ್ದಾರೆ. ಇವುಗಳನ್ನೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅವಲಂಬಿಸಿದ್ದ 2 ಲಕ್ಷ ಜನ ಕೆಲಸ ಕಳೆದುಕೊಂಡಿದ್ದಾರೆ. ಆಟೋಮೊಬೈಲ್ ಉತ್ಪಾದನಾ ವಲಯದಲ್ಲಿ ಕಳೆದ 2-3 ತಿಂಗಳಲ್ಲಿ ಕನಿಷ್ಟ15000 ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಪರಿಸ್ಥಿತಿಯ ಭೀಕರತೆಯನ್ನು ವರ್ಣಿಸುತ್ತದೆ ಎಂದು ಅವರು ಹೇಳಿದ್ದಾರೆ.
ಆಟೋಮೊಬೈಲ್ ಉದ್ಯಮದ ದಿಗ್ಗಜ ಕಂಪನಿಗಳಾದ ಮಾರುತಿ ಸುಝಕಿ ಕಳೆದ ಜುಲೈ ತಿಂಗಳಲ್ಲಿ ಶೆ.36.71ರಷ್ಟು, ಹ್ಯುಂಡೈ ಮೋಟಾರ್ಸ್ ಶೇ.10.28ರಷ್ಟು, ಮಹೀಂದ್ರಾ ಆ್ಯಂಡ ಮಹೀಂದ್ರಾ ಶೇ.14.74, ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳಾದ ಹೀರೋ ಮೋಟಾರ ಕಾಪ್‌ರ್ ಶೇ.22.9, ಹೊಂಡಾ ಮೋಟಾರ್ ಸೈಕಲ್ ಶೇ.10.53, ಟಿವಿಎಸ್ ಮೋಟಾರ್ಸ್ ಶೇ.15.72ರಷ್ಟುಕುಸಿತ ದಾಖಲಿಸಿವೆ.