ಯುಗಾದಿ ಹೀಗೆ ಒಳಗೆ ಬರಬೇಕು. ಸಹಜ ಉಲ್ಲಾಸದಂತೆ. ಬಿಸಿಲುಕೋಲಿನಂತೆ. ಅದೊಂದು ಪ್ರತಿವರುಷದ ಪ್ರಾರಬ್ಧ ಮತ್ತು ಪ್ರೀತಿ. ನಮ್ಮನ್ನು ಹೊಸದಾಗಿಸಿಕೊಳ್ಳಲು ಒಂದು ನೆಪ. ಮರದಂತೆ ಚಿಗುರುವುದಕ್ಕೆ ಚೈತ್ರದಂತೆ ತಳಿರು ಹೊತ್ತು ನಿಲ್ಲುವುದಕ್ಕೆ ಉದುರಿಸಿಕೊಂಡು ಬೋಳಾದ ಮನಸ್ಸನ್ನು ಮತ್ತೆ ಕೊನರುವಂತೆ ಮಾಡುವುದಕ್ಕೆ ಚೈತ್ರ ಬೇಕು, ವೈಶಾಖ ಬೇಕು. ವಸಂತ ಋತು ಬೇಕು. ಅದನ್ನೆಲ್ಲ ತರುವುದು ಯುಗಾದಿಯೇ. ಅಲ್ಲಿಂದಲೇ ಶುರು, ಹೊಸ ಹೆಜ್ಜೆ ಹೊಸ ಹಾದಿ.
--ಜೋಗಿ
ಒಂದು ಪುಟ್ಟ ಮಣ್ಣ ಹಣತೆ ಅವಳ ಕಣ್ಣೊಳಗೆ ಬೆಳಗುತ್ತಿತ್ತು. ಹಾದಿಯುದ್ದಕ್ಕೂ ಬಿದ್ದ ಹಳದಿ ಎಲೆಗಳ ಗಾಢವರ್ಣ. ದೂರದಲ್ಲೆಲ್ಲೋ ಕಾಡು ನವಿಲಿನ ಕೇಕೆ. ಹಾದಿಯನ್ನು ಹಿಮ್ಮೆಟ್ಟಿಸುವ ಸಂಜೆಬಿಸಿಲು. ಸರಕ್ಕನೆ ರಸ್ತೆಗೆ ಜಿಗಿದು ಬಾಲವನ್ನೆತ್ತಿಕೊಂಡು ಸಾಗಿಹೋದ ಅಳಿಲು. ದೇವದಾರು ಮುಡಿ ತುಂಬ ಹೂವು, ಘಮಘಮಿಸುವ ಜೋನಿಬೆಲ್ಲ ಪರಿಮಳದ ಕೋಡು. ಹೊಸಿಲು ದಾಟಿ ಹೊರಗೆ ಹೋಗುತ್ತಿರುವ ಶಾರ್ವರಿ. ಒಳಗೆ ಅಡಿ ಇಡುತ್ತಿರುವ ಪ್ಲವ.
ಯುಗಾದಿ ಹೀಗೆ ಒಳಗೆ ಬರಬೇಕು. ಸಹಜ ಉಲ್ಲಾಸದಂತೆ. ಬಿಸಿಲುಕೋಲಿನಂತೆ. ಅದೊಂದು ಪ್ರತಿವರುಷದ ಪ್ರಾರಬ್ಧ ಮತ್ತು ಪ್ರೀತಿ. ನಮ್ಮನ್ನು ಹೊಸದಾಗಿಸಿಕೊಳ್ಳಲು ಒಂದು ನೆಪ. ಮರದಂತೆ ಚಿಗುರುವುದಕ್ಕೆ ಚೈತ್ರದಂತೆ ತಳಿರು ಹೊತ್ತು ನಿಲ್ಲುವುದಕ್ಕೆ ಉದುರಿಸಿಕೊಂಡು ಬೋಳಾದ ಮನಸ್ಸನ್ನು ಮತ್ತೆ ಕೊನರುವಂತೆ ಮಾಡುವುದಕ್ಕೆ ಚೈತ್ರ ಬೇಕು, ವೈಶಾಖ ಬೇಕು. ವಸಂತ ಋತು ಬೇಕು. ಅದನ್ನೆಲ್ಲ ತರುವುದು ಯುಗಾದಿಯೇ. ಅಲ್ಲಿಂದಲೇ ಶುರು, ಹೊಸ ಹೆಜ್ಜೆ ಹೊಸ ಹಾದಿ.
ಅರಳಿದ
ಎಲೆಗಳ
ಹೂವೆಂದು ಭಾವಿಸಿದೆ.
ಅವು ಹೂವಾದವು.
ಅದು ಪವಾಡವೇ? ಖಂಡಿತಾ ಅಲ್ಲ, ಭಾವಿಸಿದಂತೆ ಭಾವ. ಚಾರ್ಮುಡಿ ಘಾಟಿಯ ತುದಿಯಲ್ಲಿ ನಿಂತುಕೊಂಡು ಹಬ್ಬಿದ ವನರಾಜಿಯನ್ನು ನೋಡುತ್ತಾ ನಿಂತರೆ, ಇಡೀ ಕಾಡಿಗೇ ಅಲ್ಲಲ್ಲಿ ಕಳಸವಿಟ್ಟಂತೆ ಅರಳಿದ ಹೂವುಗಳು. ಹತ್ತಿರ ಹೋಗಿ ನೋಡಿದರೆ ಅವು ಹೂವಲ್ಲ, ಚಿಗುರು. ಇದು ಚಿಗುರಾಗಿದ್ದರೆ, ಅದೂ ಚಿಗುರು ಎಂದುಕೊಂಡು ಮತ್ತೊಂದು ಮರದ ತುದಿ ನೋಡಿದರೆ, ಅಲ್ಲಿರುವುದು ಹೂವು. ಹೀಗೆ ಹೂವು ಮತ್ತು ಚಿಗುರಿನ ನಡುವಿನ ವ್ಯತ್ಯಾಸ ಅರಿಯುವುದಕ್ಕೆ ಹಸಿರು ಗಿಳಿಯೇ ಬೇಕು. ಗಿಳಿ ಕೆಂಪಗಿನ ಚಿಗುರನ್ನೆಲ್ಲ ಕಚ್ಚಿ ಕಚ್ಚಿ ಕತ್ತರಿಸಿ ಎಸೆಯುತ್ತದೆ, ವರುಷ ತಿಂಗಳನ್ನು, ತಿಂಗಳು ದಿನವನ್ನು, ದಿನ ಕ್ಷಣವನ್ನು ಕತ್ತರಿಸಿ ಎಸೆಯುವಂತೆ.
ಈ ವರ್ಷ ಮಳೆ, ಬೆಳೆ ಹೇಗೆ? ಕೊರೋನಾಕ್ಕೆ ಅಂತ್ಯವೆ?... ಸೋಮಯಾಜಿ ಪಂಚಾಂಗ ಶ್ರವಣ
ಮುಂದೇನು ಕತೆ? ಹಳೆ ವರುಷವನ್ನು ಕಾಲದ ಕಾಲುಹಾಸಿನಡಿಗೆ ತಳ್ಳಿ, ಕೈ ಕಟ್ಟಿ ಕೂತ ನಮಗೆ ಹೊಸ ವರುಷ, ಜಾತ್ರೆಯಲ್ಲಿ ಕಳೆದುಹೋದ ಕಂದನಿಗೆ ಎದುರಾದ ಚಿಕ್ಕಮ್ಮನಂತೆ ಕಾಣತೊಡಗಿದೆ. ಮುಂದೆಲ್ಲ ಒಳ್ಳೆಯದಾಗುತ್ತದೆ ಎಂದು ನಂಬದೇ ವಿಧಿಯಿಲ್ಲ. ಪೋಸ್ಟ್ ಥೆರಪಿಟಿಕ್ ನ್ಯೂರಾಲ್ಜಿಯಾದಂತೆ ಕೆಲವೊಮ್ಮೆ ಹಳೆಯ ವರುಷದ ಪ್ರಭಾವ ನಂತರವೂ ಕಾಡುತ್ತದೆ. ಹಳೆಯ ನೋವು ನೆನಪಿದ್ದಾಗಲೇ ಹೊಸ ಸಂತೋಷಕ್ಕೆ ಕಳೆಬರುವುದು. ಒಂದೇ ಫ್ರೇಮಿನೊಳಗೆ ಎರಡು ಚಿತ್ರ. ವರುಷದ ಮೊದಲು, ವರುಷದ ನಂತರ ಎಂಬೆರಡು ಶೀರ್ಷಿಕೆ. ಹೊಸ ಗಾನಕ್ಕೆ ಹಳೆ ಪಲ್ಲವಿ, ಹಳೇ ರಾಗ, ಮಿಶ್ರಛಾಪು ತಾಳ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ.
-2-
ಎಲ್ಲಿಂದ ಎಲ್ಲಿಗೆ ಸಾಗುತ್ತದೆ ಕಾಲ?
ಗೊತ್ತಿಲ್ಲದ ಪ್ರಶ್ನೆಗೆ ಗುರಿಯಿಲ್ಲದ ಉತ್ತರ. ಇದು ಉತ್ತರಾಯಣ ಪುಣ್ಯಕಾಲ. ಕಾಲವೆಂಬುದು ಸುರುಸುರುಳಿಯಾಗಿ ಹೊಗೆಯಂತೆ ಗಾಳಿಯಲ್ಲಿ ತೇಲಿಹೋಗುತ್ತದೆ. ಸುಗಂಧದಂತೆ ಆವಿಯಾಗುತ್ತದೆ. ನಾವು ಕಾಲಕ್ಕೆ ಎದುರಾಗಿ ಈಜುತ್ತಿದ್ದೇವೆ ಅಂದು ಕೊಳ್ಳುತ್ತೇವೆ. ಆದರೆ ಈಜುವುದು ಕಾಲಕ್ಕೆದುರಾಗಿ ಅಲ್ಲ. ಒಂದು ಪುಟ್ಟ ಕತೆ ಕೇಳಿ:
ಕಾಲಪುರುಷನಿಗೆ ಒಮ್ಮೆ ಸಿಕ್ಕಾಪಟ್ಟೆ ಬೇಸರವಾಯಿತು. ಎಷ್ಟೇ ಕಾಲ ಕಳೆದರೂ ಮುಗಿಯದ ಕಾಲವನ್ನು ಮುಂದಿಟ್ಟುಕೊಂಡು, ಅದನ್ನು ವರುಷಗಳಲ್ಲಿ, ತಿಂಗಳುಗಳಲ್ಲಿ, ವಾರಗಳಲ್ಲಿ, ದಿನಗಳಲ್ಲಿ ಅಳತೆ ಮಾಡುತ್ತಾ, ಒಬ್ಬೊಬ್ಬರಿಗೂ ಹಂಚುವುದು. ಕೆಲವರಿಗೆ ತುಂಬು ಕಾಲ, ಕೆಲವರಿಗೆ ಅಲ್ಪ ಕಾಲ- ಹೀಗೆ ತನಗೆ ಬಂದ ಆದೇಶದ ಮೇರೆಗೆ ಅವನು ಕಾಲವನ್ನು ಅಳೆದು ಕೊಡುತ್ತಾ ಕೂತಿದ್ದ. ಒಮ್ಮೆ ಅವನಿಗೆ ಇದೆಲ್ಲ ರೇಜಿಗೆಯ ಕೆಲಸ ಅನ್ನಿಸಿತು. ತನ್ನ ಕಾಲವೆಲ್ಲ ಹೀಗೆ ಮತ್ತೊಬ್ಬರ ಕಾಲವನ್ನು ಕರುಣಿಸುವುದರಲ್ಲೇ ಮುಗಿದು ಹೋಗುತ್ತಿದೆಯಲ್ಲ ಎಂದು ಬೇಸರವಾಗಿ ಅವನು, ಯಾರಿಗೂ ಕಾಲ ಕೊಡುವುದಿಲ್ಲ ಎಂದು ನಿರ್ಧಾರ ಮಾಡಿಯೇಬಿಟ್ಟ.
ಕಾಲಪುರುಷನ ಮನೆಯ ಮುಂದೆ ಬಂದು ನೋಡಿದವರಿಗೆ ನಿರಾಸೆ ಕಾದಿತ್ತು. ಕಾಲ ಬಾಗಿಲಿಗೆ ಬೀಗ ಹಾಕಿಕೊಂಡು ಕಾಲಾಂತರದತ್ತ ನಡೆದುಬಿಟ್ಟಿದ್ದ. ಅವನು ಬರುವ ತನಕ ಎಲ್ಲರೂ ಕಾಯಲೇಬೇಕಿತ್ತು.
ಕಾಲಪುರುಷ ಮರಳಿ ಬರುವ ಹೊತ್ತಿಗೆ, ಆಗಲೇ ಕಾಲ ತೆಗೆದುಕೊಂಡು ಹೋದವರು ಇನ್ನೂ ಕಾಲವಾಗಿರಲಿಲ್ಲ. ಅಕಾಲಿಕ ಎಂಬ ಪದವೇ ಅರ್ಥಕಳಕೊಂಡಿತ್ತು. ಸಕಾಲ ಎಂಬುದು ದಿಕ್ಕುತಪ್ಪಿ ಅಲೆಯು ತ್ತಿತ್ತು. ಕಾಲಕಾಲಕ್ಕೆ ಏನಾಗಬೇಕೋ ಅದು ಆಗುತ್ತಿದೆಯಾ ಎಂದು ಗಮನಿಸಿ ನೋಡಲು ಕಾಲವೇ ಇರಲಿಲ್ಲ. ಎಲ್ಲರೂ ಅನಂತಕಾಲದಲ್ಲಿ ಬದುಕುತ್ತಿದ್ದವರಂತೆ ಬದುಕುತ್ತಿದ್ದರು. ಮಕ್ಕಳು ಮಕ್ಕಳಾಗಿ, ಮುದುಕರು ಮುದುಕರಾಗಿ, ತರುಣರು ತರುಣರಾಗಿಯೇ ಇದ್ದುಬಿಟ್ಟಿದ್ದರು.
ಯುಗಾದಿ ರಾಶಿ ಫಲ? ಮನೆ-ಮದುವೆ, ದೋಷ-ಪರಿಹಾರ...
ಕಾಲಪುರುಷನಿಗೆ ಅದೇ ಸರಿ ಅನ್ನಿಸಿತು. ಕಾಲವನ್ನು ಮಿತಿಗೊಳಿಸಲು, ಕೊಡಲು ನಾವು ಯಾರು. ಅನಂತವಾದ ಸಮುದ್ರದಂತೆ, ಅಗಾಧವಾಗ ಆಕಾಶದಂತೆ ಕಾಲ ಕೂಡ ಅದರ ಪಾಡಿಗೇ ಇದ್ದುಬಿಡಲಿ. ನಕ್ಷತ್ರ ದಿನ ಮಾಸ ಸಂವತ್ಸರಗಳ ಪರಿವೆ ಯಾಕೆ ಬೇಕು. ಋತುಚಕ್ರ ಯಾಕೆ ಬೇಕು ಎಂದು ಅವನು ಬ್ರಹ್ಮನನ್ನೇ ಕೇಳಿದ. ಬ್ರಹ್ಮ ಅವನನ್ನು ಕರೆದೊಯ್ಡು ಭೂಲೋಕವನ್ನು ತೋರಿಸಿದ.
ಅಲ್ಲಿ ಮರಗಳು ಬೋಳಾಗಿ ನಿಂತಿದ್ದವು. ಮತ್ತೆ ಚಿಗುರಿಸಿಕೊಳ್ಳಲು ಅವುಗಳಿಗಿನ್ನೂ ಕಾಲ ಬಂದಿರಲಿಲ್ಲ. ಹಣ್ಣು ಕೊಡುವ ಮರಗಳು ಫಲ ಬಿಡದೇ ಕಾಯುತ್ತಿದ್ದವು. ಅವುಗಳಿಗಿನ್ನೂ ವಸಂತ ಬಂದಿರಲಿಲ್ಲ. ಗ್ರೀಷ್ಮಕ್ಕಾಗಿ ನೆಲ ಕಾಯುತ್ತಿತ್ತು. ಹೀಗೆ ಮರಗಳು ಹೂಹಣ್ಣು ಬಿಡದೇ, ಭೂಮಿ ಚಿಗುರದೇ, ಭತ್ತದ ಸಸಿಗಳು ಸುಮ್ಮಗೇ ಬೆಳೆದು ನಿಂತು, ಇನ್ನೂ ತೆನೆಯೂಡಿಸಿಕೊಳ್ಳದೇ, ಜನ ಸಾವಿಲ್ಲದವರಂತೆ ಓಡಾಡುತ್ತಾ ಎಷ್ಟೋ ವರುಷಗಳ ಕಾಲ ಬದುಕಿದವರಂತೆ ಅಸಂತೋಷಿಗಳಾಗಿದ್ದರು. ಯಾರಿಗೂ ಸಾವಿನ ಭಯ ಇರಲಿಲ್ಲ, ಹೀಗಾಗಿ ಬದುಕುವ ಹುಮ್ಮಸ್ಸೂ ಇರಲಿಲ್ಲ. ರೋಗದ ಭಯವಿತ್ತು, ಆದನ್ನು ಪರಿಹರಿಸಿಕೊಳ್ಳುವ ಮಾರ್ಗ ಗೊತ್ತಿರಲಿಲ್ಲ. ಬ್ರಹ್ಮದೇವ ಅದನ್ನೆಲ್ಲ ನೋಡುತ್ತಾ ಕಾಲಪುರುಷನಿಗೆ ಹೇಳಿದ:
ಇಲ್ಲಿ ಸಮುದ್ರವೂ ಬೇಕು, ಕೆರೆಯೂ ಬೇಕು, ಹೊಳೆಯೂ ಬೇಕು, ಬಾವಿಯೂ ಬೇಕು. ಸರೋವರದಲ್ಲಿ ನೀರಿದ್ದರೂ ಕುಡಿಯುವುದಕ್ಕೆ ತಟ್ಟೆಯೋ ಲೋಟವೋ ಬೇಕು. ಬೊಗಸೆಯಾದರೂ ಕೊನೆಗೆ ಬೇಕೇ ಬೇಕು. ಬೊಗಸೆಯಲ್ಲಿ ನೀರೆತ್ತಿಕೊಳ್ಳುವ ಹಾಗೆ, ಕಾಲವನ್ನೂ ನಾವು ಎತ್ತಿಕೊಂಡು ಅದನ್ನು ಕುಡಿಯುತ್ತಾ ಹೋಗುತ್ತೇವೆ. ಬೆರಳ ಸಂದಿಯಿಂದ ಒಂದಷ್ಟು ಸೋರಿ ಹೋಗುತ್ತದೆ. ಸೋರಿ ಹೋಗುವುದು ಕೂಡ ಕಾಲವೇ.
ಕಾಲಪುರುಷ ಕೇಳಿದ. ನಾವೆಲ್ಲ ಇದನ್ನು ಯಾಕೆ ನಿಯಂತ್ರಿಸಬೇಕು. ಸುಮ್ಮನೆ ಸುತ್ತುತ್ತಲಿರಲಿ ಭೂಮಿ, ತನ್ನ ಸುತ್ತ, ಸೂರ್ಯನ ಸುತ್ತ. ಸುಮ್ಮನೆ ಸುತ್ತುತ್ತಿರಲಿ. ಚಂದ್ರ, ಭೂಮಿಯ ಸುತ್ತ ಸುಮ್ಮನೆ ಸುತ್ತುತ್ತಿರಲಿ. ಪ್ರಾಣಿಪಕ್ಷಿಮಾನವರು ತಮ್ಮ ಜಗತ್ತಿನ ಸುತ್ತ. ಈ ಜಗದಲ್ಲಿ ಎಲ್ಲವೂ ನಿತ್ಯ ಮತ್ತು ಮಿಥ್ಯ. ಕಾಲವೆಂಬುದು ಸತ್ಯವೆಂದವರು ಸಾಯುವರು, ನಿತ್ಯವೆಂದವರು ಸವೆಯುವರು. ಮಿಥ್ಯ ಎಂದವರು ಬಾಳುವರು. ಹಾಗೆಂದಾಗ, ನೀನು ಕೊಟ್ಟದ್ದು, ಅವರು ಪಡೆದದ್ದೆಲ್ಲ ಕೇವಲ ಭ್ರಮೆ. ಆ ಭ್ರಮೆಯ ಬೇಲಿಯೊಳಗಿದ್ದರೆ ಅದು ನೆಮ್ಮದಿ. ಬೇಲಿಯಾಚೆಗೆ ಜಿಗಿದರೆ ತಪ್ಪಿದ್ದಲ್ಲ ಅಪಾಯ.
-3-
ಈ ಕಾಲನ ಕತೆಗಿಂತ ನಮ್ಮ ಕತೆಯೇನೂ ಭಿನ್ನವಾಗಿಲ್ಲ. ನಾವೂ ಕಾಲಾತೀತರಂತೆ ಬದುಕುತ್ತೇವೆ. ನಮ್ಮ ಕಾಲವನ್ನು ಯಾರಿಗೋ ಅಳೆದಳೆದು ಕೊಡುತ್ತೇವೆ. ಬಾ, ಕಾಫಿ ಕುಡಿಯೋಣ ಅಂತ ಯಾರೋ ಕರೆದಾಗ ಸುಮ್ಮನೆ ಎದ್ದು ಹೋಗುತ್ತೇವೆ. ಕಾಫಿಗೆ ಮಾಫಿಯುಂಟು, ಕಾಲಕ್ಕಿಲ್ಲ.
ಅದಕ್ಕೆ ಯುಗಾದಿಯೆಂದರೆ ಸಂಭ್ರಮ. ಮತ್ತೆ ಹೊಸದಾಗಿ ಶುರುಮಾಡುವ ಹುಮ್ಮಸ್ಸು. ಅದೇ ಕಾಲ, ಅದೇ ಘಟ್ಟ, ಸ್ನಾನ ಮಾತ್ರ ಬೇರೆ ಎಂದು ನಂಬುವ ಹುಂಬತನ. ಪಂಚಾಂಗ ಇಲ್ಲದ, ಕ್ಯಾಲೆಂಡರ್ ಇಲ್ಲದ ಕರ್ಮಚಾರಿಗೆ ಕಾಲವಿಲ್ಲ. ಕಾಲಪುರುಷನೂ ಇಲ್ಲ. ಅವನು ಹೊಸ ವರುಷವೆಂದೋ ಯುಗದ ಆದಿಯೆಂದೋ ಭಾವಿಸುವುದು ಏನನ್ನು ಎಂದು ಹುಡುಕುತ್ತಾ ಹೊರಟರೆ, ಎದುರಾಗುವುದು ನಿನ್ನೆಯ ಕಸ. ಅಲ್ಲಿ ಕಾಣಿಸುವುದು ಕೇವಲ ಬತ್ತಿಹೋದ ಹಣತೆ ಮತ್ತು ಕರಟಿಹೋದ ಬತ್ತಿ. ಹೀಗೆ ಉರಿಯದೇ ಇರುವ ದೀಪವನ್ನು ಕಣ್ಣಮುಂದಿಟ್ಟುಕೊಂಡು ಕೂತರೂ ಹಗಲಲ್ಲಿ ಕಣ್ಮುಂದೆ ದೀಪ, ಕಣ್ಣೊಳಗೆ ಬೆಳಕು. ಹೊರಬೆಳಕೋ ಒಳಬೆಳಕೋ ಎಂಬ ಜಿಜ್ಞಾಸೆಗೆ ಉತ್ತರವೇ ಇಲ್ಲ. ಒಳಗಣ್ಣು ಉಳ್ಳವರಿಗೆ ಹೊರಗಿನ ಬೆಳಕು ಬೇಕು. ಹೊರಗಣ್ಣು ತೆರೆದವರಿಗೆ ಒಳಗಿನ ಬೆಳಕು ದಾರೀದೀಪ. ಎರಡೂ ಬೆಳಕಲ್ಲಿ ನಡೆಯುವ ಹಾದಿ ಬೇರೆ ಬೇರೆ. ಅದು ಅರ್ಥವಾದ ದಿನ ಅಲೆಗಳಿಗೂ ತರಂಗಕ್ಕೂ ವ್ಯತ್ಯಾಸ ತಿಳೀದೀತು. ಅಲೆ ದಡದತ್ತ ಏಕಮುಖವಾಗಿ ಸಂಚರಿಸುತ್ತದೆ. ತರಂಗ ಸುತ್ತಲೂ ವೃತ್ತಾಕಾರದಲ್ಲಿ ಹಬ್ಬುತ್ತದೆ. ವೃತ್ತಾಕಾರದಲ್ಲಿ ಹಬ್ಬಿದರೆ ನಡುವೆ ನಿಷ್ಪಂದ, ಸ್ವಚ್ಛಂದ. ಏಕಮುಖ ಹಬ್ಬುವ ಅಲೆಗೆ ಕೊನೆಯಿಲ್ಲ, ಅದು ಹುಟ್ಟುತ್ತಲೇ ಇರುತ್ತದೆ. ದಡವೇ ಕೊನೆಯಲ್ಲ, ದಡವೆಂಬುದು ಬದುಕಿಗೆ ಆರಂಭ. ಅಲೆಗೆ ಕೊನೆಗೆ, ತರಂಗಕ್ಕೆ ತನ್ನೊಳಗಿನ ಪರಿಧಿಯನ್ನು ಕಂಡು ಕೊಳ್ಳುವ ಕ್ಷಣ.
ಹೂವು ಅರಳಿದ್ದು
ವಿನಾಕಾರಣ
ಎಂದು ಭಾವಿಸಿದೆ.
ಹಣ್ಣು ಕಣ್ಣರಳಿಸಿತು.
ಕಾಲದ ಮಹಾಪರಿವರ್ತನೆಗೆ ಅದು ಸಾಕ್ಷಿ. ಮರವೊಂದು ಬೆಳೆದು ನಿಂತು, ಚಿಗುರೊಡೆದು, ಹೂವಾಗಿ, ಹಣ್ಣಾಗಿ ಮೈತುಂಬ ಸಿಹಿಸಿಹಿ ಹಣ್ಣು. ಕಾಲನ ಕೊಪ್ಪರಿಗೆ ಯಲ್ಲಿ ಬೆಂದು ಬಂದ ಜೀವಫಲ. ಪ್ರತಿವರುಷವೂ ಆಯಾ ಕಾಲಕ್ಕೇ ಆ ಫಲ. ಬದುಕು ಸಫಲ. ನಮಗೋ ಹಾಗೇನಿಲ್ಲ. ನಾವು ದೇಹದಿಂದ ಏನನ್ನೂ ಅರಳಿಸಲಾರೆವು. ಅದಕ್ಕೆ ಮತ್ತೊಂದು ದೇಹ ಬೇಕು. ವಿದೇಹಿಯಾದವನಿಗೆ ವೈದೇಹಿಯಿಲ್ಲದೇ ಹೋದರೆ ಸೃಷ್ಟಿಯೇ ಸಂದೇಹ. ಮರಕ್ಕಿಲ್ಲ, ಹೂಗಿಡಕ್ಕಿಲ್ಲ ಆ ಕಟ್ಟುಪಾಡು. ಕಾಲಾಂತರದ ತನಕ ಹೊಂದಿಕೊಂಡು ಹೊಂದಿಸಿಕೊಂಡು ಬದುಕುವುದೇ ಅನಿವಾರ್ಯ ಅಚ್ಚರಿ.
ಮರದಲ್ಲಿ ಕುಳಿತ ಹಕ್ಕಿಯೊಂದು ಕುಟುಕುತ್ತಿರುತ್ತದೆ ಕೋಡೊಂದನ್ನು. ಮತ್ತೊಂದು ಹಕ್ಕಿ ಅದೇ ಕೊಂಬೆಗೆ ಬಂದು ಕೂರುತ್ತದೆ. ಅದರ ಕೈಯಲ್ಲಿ ಕೋಡಿಲ್ಲ. ಅದೂ ಇದೇ ಹಕ್ಕಿಯ ಕೈಯಲ್ಲಿರುವ ಕೋಡಿಗೆ ಕೊಕ್ಕು ಚುಚ್ಚುತ್ತದೆ. ಎರಡೂ ಹಕ್ಕಿಗಳೂ ಸೇರಿ ಒಂದೇ ಕೋಡನ್ನು ಕುಟುಕುತ್ತಲೇ ಹೋಗುತ್ತವೆ. ಆಗ ಒಂದು ಹಕ್ಕಿ ಹೇಳುತ್ತದೆ. ಇದನ್ನು ನೀನು ಒಡೆಯುತ್ತಿರು. ನಾನು ಬೇರೊಂದು ಕೋಡು ಸಿಗುವುದೋ ನೋಡುತ್ತೇನೆ. ಇಬ್ಬರೂ ಸೇರಿ ಇದೇ ಕೋಡನ್ನು ಒಡೆಯೋಣ ಎಂದು ಮತ್ತೊಂದು ಹಕ್ಕಿ ಹೇಳುತ್ತದೆ.
ಪ್ಲವ ಸಂವತ್ಸರ ಆರಂಭ: ದ್ವಾದಶ ರಾಶಿಗಳ ಫಲಾಫಲಗಳು ಹೀಗಿವೆ
ಇದಕ್ಕೆ ಹುಡುಕಾಟದಲ್ಲಿ ಅಪನಂಬಿಕೆ. ಅದಕ್ಕೆ ಕೋಡಿನೊಳಗೆ ಏನೂ ಇಲ್ಲದೇ ಹೋದರೆ ಎಂದು ಗುಮಾನಿ. ಎರಡು ಹಕ್ಕಿಗಳ ಕಾಲವೂ ಕಾಳಿಗೆ ಸೀಮಿತ. ಕಾಲವೆಂಬುದು ಹಾಗೆಯೇ ಅನೇಕರಿಗೆ ಅದು ಕಾಳಿಗೆ, ಕೂಳಿಗೆ, ನಾಳೆಗೆ. ಎಲ್ಲೋ ಕೆಲವರಿಗೆ ಅದು ಜಗಕ್ಕೆ, ಯುಗಕ್ಕೆ.
ಪ್ಲವ ಸಂವತ್ಸರದಲ್ಲಿ ಎಲ್ಲವೂ ದಾಟಿಸುವ ತೆಪ್ಪವೇ ಆಗಿರಲಿ ಎಂಬುದು ಹಾರೈಕೆ. ಪಯಣಕ್ಕೆ ಜಯವಾಗಲಿ. ಯಾರೋ ಒಬ್ಬರಿಗೆ ಜಯವಾದರೆ, ಮತ್ತೊಬ್ಬರಿಗೆ ಅಪಜಯವಾಗಲೇ ಬೇಕು. ಎಲ್ಲರ ಜಯವೂ ಅಡಗಿರುವುದು ಶಾಂತಿಯಲ್ಲಿ. ಎಲ್ಲರ ಅಭಯವೂ ಅಡಗಿರುವುದು ಬೆಳಕಿನಲ್ಲಿ, ಎಲ್ಲರ ವಿಜಯವೂ ಹುಟ್ಟುವುದು ಸಹಬಾಳುವೆಯಲ್ಲಿ. ನಾವು ಮೀರದವರು ಮತ್ತು ದಾಟದವರು, ಮೀರುವುದು ಮತ್ತು ದಾಟುವುದು ಒಂದೇ ಎಂದು ಭಾವಿಸಿಕೊಂಡವರು. ಮತ್ತೆ ನಾವಾಗಿಯೇ ಒಳಬರುತ್ತೇವೆಂದುಕೊಂಡು ಹೊಸಿಲಾಚೆ ಬಂದರೆ ಅದು ದಾಟು. ಮತ್ತೆ ಇದೇ ಅಂತರಂಗದಲ್ಲಿ ಒಳಗೆ ಬರಲಾರೆ ಎಂದು ಹೊಸಿಲಾಚೆ ಬಂದರೆ ಅದು ಮೀರು.
ಕಾಲವನ್ನು ದಾಟುವುದಕ್ಕೆ ಕ್ರಿಯೆಯೇ ಹರಿಗೋಲು. ಕಾಲವನ್ನು ಮೀರುವುದಕ್ಕೆ ಕ್ರಾಂತಿಯೇ ರೆಕ್ಕೆ.
-4-
ಅತ್ಯಂತ ಭಯಾನಕವಾದದ್ದು ಕಡೆಗಾಲ. ಅದಕ್ಕಿಂತ ಭೀಕರವಾದದ್ದು ಕೇಡುಗಾಲ. ಎರಡು ನಮ್ಮದೇ. ಒಂದಕ್ಕೊಂದು ಸೂಜಿದಾರದ ಸಂಬಂಧ. ದಾರಕ್ಕೆ ಸೂಜಿ ಸೇರಿಕೊಂಡರೂ, ಸೂಜಿಗೆ ದಾರ ಸೇರಿಕೊಂಡರೂ ಹೊಲಿಗೆ ಖಂಡಿತ. ಹೊಲಿದ ನಂತರ ದಾರ ನಿರಾಧಾರ ಅಲ್ಲ. ಅದು ಹೊಲಿಸಿಕೊಂಡ ಬಟ್ಟೆಯನ್ನು ಸೇರಿಕೊಂಡು ಸೂಜಿಯ ಸಂಗವನ್ನು ಕಳಕೊಂಡುಬಿಡುತ್ತದೆ. ಮತ್ತೊಂದು ಸಾರಿ ಅದು ಸೂಜಿ ಕಣ್ಣಿಗೆ ಬೀಳುವುದೇ ಇಲ್ಲ. ಹೀಗೆ ಸೂಜಿಯಿಂದ ಬೇರಾದ ದಾರದಂತೆ, ದಾರದಿಂದ ದೂರಾದ ಸೂಜಿಯಂತೆ ನಾವು ಕೂಡ ನಮ್ಮ ಕಾಲದಿಂದ ಕಳಚಿಕೊಳ್ಳುತ್ತಿರುತ್ತೇವೆ. ಸಿಡಿದ ಗುಂಡಿನ ಸಿಪ್ಪೆ ರಿವಾಲ್ವರಿನ ಮ್ಯಾಗಝೀನಿನಿಂದ ಸಿಡಿಯುವ ಹಾಗೆ.
ಕಾಲ ಸುರುಳಿ ಸುರುಳಿಯಾಗಿ ಅಲ್ಲೊಂದು ಇಲ್ಲೊಂದು ಏಣಿ ಇಟ್ಟಿದೆ. ಅದನ್ನು ಏರುವುದು ಸುಲಭ. ಹುಡುಕುವುದು ಕಷ್ಟ. ಕೆಲವರಿಗೆ ಹಾಡಲ್ಲಿ, ಕೆಲವರಿಗೆ ನಟನೆಯಲ್ಲಿ, ಕೆಲವರಿಗೆ ಅಧಿಕಾರದಲ್ಲಿ ಮತ್ತೆ ಕೆಲವರಿಗೆ ಭೋಗದಲ್ಲಿ ಅದು ಕಾಣಿಸುತ್ತದೆ. ಹತ್ತಿಬಿಟ್ಟೆವು ಎಂದು ನಿಟ್ಟುಸಿರಿಟ್ಟರೆ, ಏಣಿಯ ಬುಡದಲ್ಲೇ ನಿಂತಿರುತ್ತೇವೆ. ಹತ್ತಲಾರೆವು ಎಂದು ಕಸಿವಿಸಿಪಟ್ಟರೂ ಅದೇ ಸ್ಥಾನ ಖಚಿತ.
ನನ್ನನ್ನು ನಾನು ಸುಟ್ಟುಕೊಂಡು
ದೀಪವಾದೆ.
ನನ್ನನ್ನು ನಾನು ಕಡಿದುಕೊಂಡು
ದ್ವೀಪವಾದೆ.
ನನ್ನನ್ನು ನಾನು ನೀಗಿಕೊಂಡು
ಕಾಲವಾದೆ.
ನನ್ನನ್ನು ನಾನು ಕಳೆದುಕೊಂಡು
ಮೇಳವಾದೆ.
ನನ್ನನ್ನು ನಾನು ನಿಗ್ರಹಿಸಿಕೊಂಡು
ಹಿಮ್ಮೇಳವಾದೆ.
ನನ್ನನ್ನು ನಾನು ಗ್ರಹಿಸಿಕೊಂಡು
ದೇವರಾದೆ.
ದೇವರಾಗುವುದು ಸುಲಭ. ಈ ಯುಗಾದಿಯ ದಿನ ದೇವರಾಗೋಣ. ನಮಗೇ ನಾವೇ ದೇವರು. ನಮಗೆ ನಾವೇ ಭಕ್ತರು.
ಯಾರು ಉತ್ತಮ ಪುರುಷನೋ ಅವನು ನಾನು. ಯಾರು ಶ್ರೇಷ್ಠ ದೇವನೋ ಅವನು ಭಕ್ತ. ಯಾರು ನಿಜ ಭಕ್ತನೋ ಅವನು ದೇವ.
ವಾಸುದೇವ ಮತ್ತು ಪ್ರತಿವಾಸುದೇವನ ನಡುವೆ ಅನುವಾಸುದೇವನೂ ಇದ್ದಾನೆ.
ಅವನೇ ನಾನು ಎಂದು ಹೇಳಿಕೊಂಡರೆ ವಿರೋಧವೂ ಇಲ್ಲ, ಪ್ರತಿರೋಧವೂ ಇಲ್ಲ ಬರೀ ದಾರಿ ಮತ್ತು ದೀಪ.
ಯುಗಾದಿ!