ಅಯೋಧ್ಯೆಯ ರಾಮಮಂದಿರಕ್ಕಾಗಿ ಭಾರತದಾದ್ಯಂತ ದೇಶವಾಸಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಾಮಮಂದಿರ ನಿರ್ಮಾಣವಷ್ಟೇ ಅಲ್ಲ, ಅಯೋಧ್ಯಾ ನಗರದ ಚಿತ್ರಣವೇ ಬದಲಾಗುತ್ತಿದೆ. ಅಂದ ಹಾಗೆ ರಾಮನ ಕಾಲದಲ್ಲಿ ಅಯೋಧ್ಯೆ ಹೇಗಿತ್ತು ಗೊತ್ತೇ?
ಅಯೋಧ್ಯೆಯ ರಾಮಮಂದಿರಕ್ಕಾಗಿ ಭಾರತದಾದ್ಯಂತ ದೇಶವಾಸಿಗಳು ಕಾತುರದಿಂದ ಕಾಯುತ್ತಿದ್ದಾರೆ. 22 ಜನವರಿ 2024ರಂದು ರಾಮ ಮಂದಿರದಲ್ಲಿ ರಾಮಲಲ್ಲನ ಪ್ರತಿಷ್ಠಾಪನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಮಮಂದಿರ ನಿರ್ಮಾಣದೊಂದಿಗೆ ಅಯೋಧ್ಯಾ ನಗರ ನಿರ್ಮಾಣವೂ ಜೊತೆಯಾಗಿ ಸಾಗಿದೆ. ಹೆಚ್ಚುವ ಭಕ್ತರ ಭೇಟಿಗೆ ಸರಿಯಾಗಿ ನಗರ ಬದಲಾಗುತ್ತಿದೆ. ಅಂದ ಹಾಗೆ ರಾಮನ ಕಾಲದಲ್ಲಿ ಅಯೋಧ್ಯಾ ನಗರ ಹೇಗಿತ್ತು ಗೊತ್ತಾ?
ಗೋಸ್ವಾಮಿ ತುಳಸಿದಾಸರು ಬರೆದ ರಾಮಚರಿತಮಾನಸ ಮತ್ತು ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದಲ್ಲಿ ಅಯೋಧ್ಯಾ ನಗರವನ್ನು ಹೇಗೆ ವಿವರಿಸಲಾಗಿದೆ ಎಂಬುದನ್ನು ಗಮನಿಸುತ್ತಾ ಹೋದಾಗ ರಾಮನ ಆಡಳಿತದ ನಗರದ ಕಲ್ಪನೆ ನಮ್ಮಲ್ಲಿ ಒಡಮೂಡುತ್ತದೆ.
ವಾಲ್ಮೀಕಿ ರಾಮಾಯಣದಲ್ಲಿ ಅಯೋಧ್ಯೆ
ಮಹರ್ಷಿ ವಾಲ್ಮೀಕಿಯವರು ರಾಮಾಯಣದ ಬಾಲಕಾಂಡದ ಐದನೇ ಖಂಡದಲ್ಲಿ ಅಯೋಧ್ಯೆಯ ಚಿತ್ರಣ ಕಟ್ಟಿಕೊಟ್ಟಿದ್ದಾರೆ. ರಾಮಾಯಣದ ಪ್ರಕಾರ, ಅಯೋಧ್ಯೆ ಮೊದಲು ಕೌಶಲ್(ಕೋಸಲ) ಜಿಲ್ಲೆಯ ರಾಜಧಾನಿಯಾಗಿತ್ತು.
ಕೋಸಲ ಜಿಲ್ಲೆಯ ಸರಯೂ ನದಿಯ ದಡದಲ್ಲಿ ಜನರು ಸಂಪತ್ತು ಮತ್ತು ಸಂತೋಷದ ಜೀವನ ನಡೆಸುತ್ತಿದ್ದರು. ಅಯೋಧ್ಯಾ ನಗರವು 12 ಯೋಜನಗಳಷ್ಟು ಉದ್ದ ಮತ್ತು 3 ಯೋಜನಗಳಷ್ಟು ಅಗಲವಾಗಿತ್ತು. ಅಯೋಧ್ಯೆಯ ಬೀದಿಗಳಲ್ಲಿ ಪ್ರತಿದಿನ ನೀರು ಚಿಮುಕಿಸುವುದು ಮತ್ತು ಹೂವುಗಳನ್ನು ಹಾಸುವ ವ್ಯವಸ್ಥೆ ಇತ್ತು ಎಂದು ವಾಲ್ಮೀಕಿಯು ಅಯೋಧ್ಯಾಪುರಿಯ ವೈಭವವನ್ನು ಕಣ್ಮುಂದೆ ಕಟ್ಟಿ ಕೊಟ್ಟಿದ್ದಾರೆ.
ಅಯೋಧ್ಯಾ ನಗರವು ಮಾರುಕಟ್ಟೆಗಳು, ದೊಡ್ಡ ಕಮಾನು ಮಾರ್ಗಗಳು ಮತ್ತು ನಗರದ ರಕ್ಷಣೆಗಾಗಿ ಉತ್ತಮ ಆಯುಧಗಳು ಮತ್ತು ಸಲಕರಣೆಗಳನ್ನು ಹೊಂದಿತ್ತು. ಈ ನಗರದಲ್ಲಿ ಆಳವಾದ ಹಳ್ಳಗಳು ಮತ್ತು ದುರ್ಗಮ ಕೋಟೆಗಳಿದ್ದವು. ಈ ಕಾರಣಕ್ಕಾಗಿ, ಶತ್ರುಗಳು ಈ ನಗರದ ಹತ್ತಿರ ಸುಳಿಯಲು ಸಾಧ್ಯವಾಗುತ್ತಿರಲಿಲ್ಲ.
ಅಯೋಧ್ಯಾ ನಗರದ ಬಾವಿಗಳಲ್ಲಿ ಕಬ್ಬಿನ ರಸದಂತೆ ನೀರು ತುಂಬಿತ್ತು. ಇಡೀ ನಗರದಲ್ಲಿ ಅನೇಕ ಕಡೆ ಉದ್ಯಾನಗಳಿದ್ದವು. ಈ ನಗರದಲ್ಲಿ ಬಡವರು ಯಾರೂ ಇರಲಿಲ್ಲ. ಅಯೋಧ್ಯೆಯ ನಿವಾಸಿಗಳಿಗೆ ಹಣ, ಧಾನ್ಯಗಳು ಮತ್ತು ಜಾನುವಾರುಗಳ ಕೊರತೆ ಇರಲಿಲ್ಲ. ಮಹರ್ಷಿ ವಾಲ್ಮೀಕಿ ವಿವರಿಸಿದ ಅಯೋಧ್ಯಾ ನಗರವು ಬಹಳ ಸಮೃದ್ಧವಾಗಿತ್ತು.
ತುಳಸಿದಾಸರ ಅಯೋಧ್ಯೆ
ರಾಮಚರಿತಮಾನಸದಲ್ಲಿ ತುಳಸಿದಾಸರು ಅಯೋಧ್ಯಾ ನಗರವನ್ನು ಭವ್ಯವಾಗಿ ವರ್ಣಿಸಿದ್ದಾರೆ. ತುಳಸಿದಾಸರು ಭಗವಾನ್ ರಾಮನ ನಗರವಾದ ಅಯೋಧ್ಯೆಯನ್ನು ಬಹಳ ಭಕ್ತಿಯಿಂದ ವಿವರಿಸಿದ್ದಾರೆ.
ರಾಮಾಯಣದ ಬಾಲಕಾಂಡದಲ್ಲಿ ಗೋಸ್ವಾಮಿ ತುಳಸಿದಾಸರು ಭಗವಾನ್ ರಾಮನ ನಗರವಾದ ಅಯೋಧ್ಯೆಯನ್ನು ಮೋಕ್ಷವನ್ನು ಕರುಣಿಸುವ ಸರ್ವೋಚ್ಚ ವಾಸಸ್ಥಾನ ಎಂದು ಬರೆಯುತ್ತಾರೆ. ಈ ನಗರದಲ್ಲಿ ಮರಣ ಹೊಂದಿದ ವ್ಯಕ್ತಿಯು ಇಹಲೋಕದಿಂದ ದೂರವಾಗುತ್ತಾನೆ ಮತ್ತು ಮತ್ತೆ ಈ ಜಗತ್ತಿನಲ್ಲಿ ಜನ್ಮ ಪಡೆಯಬೇಕಾಗಿಲ್ಲ ಎನ್ನುತ್ತಾರೆ. ಇದರೊಂದಿಗೆ ತುಳಸಿದಾಸರು ಸರಯೂ ನದಿಯ ಬಗ್ಗೆ ಬರೆಯುತ್ತಾರೆ, ಈ ನದಿಯಲ್ಲಿ ಸ್ನಾನ ಮಾಡುವುದರಿಂದ ಮಾತ್ರವಲ್ಲ, ಅದನ್ನು ನೋಡುವುದರಿಂದ ಮತ್ತು ಸ್ಪರ್ಶ ಮಾತ್ರದಿಂದ ಮನುಷ್ಯನ ಎಲ್ಲಾ ಪಾಪಗಳು ನಾಶವಾಗುತ್ತವೆ ಎನ್ನುತ್ತಾರೆ.
ರಾಮನು ವನವಾಸದಿಂದ ಹಿಂದಿರುಗಿದ ನಂತರ ಅಯೋಧ್ಯೆಯ ಜನರ ಮನೆಗಳು ಚಿನ್ನ ಮತ್ತು ರತ್ನಗಳಿಂದ ಹೊದಿಸಲ್ಪಟ್ಟಿದ್ದವು. ಅವರ ಮನೆಗಳ ಸ್ತಂಭಗಳಿಂದ ನೆಲ ಮತ್ತು ಮಾಳಿಗೆಯವರೆಗೆ ಎಲ್ಲವೂ ಬಣ್ಣಬಣ್ಣದ ರತ್ನಗಳಿಂದ ಕೂಡಿತ್ತು. ಋಷಿಗಳು ಸರಯೂ ನದಿಯ ದಡದಲ್ಲಿ ತುಳಸಿಯೊಂದಿಗೆ ಇತರ ಅನೇಕ ಪವಿತ್ರ ವೃಕ್ಷಗಳನ್ನು ನೆಟ್ಟಿದ್ದರು. ಶ್ರೀರಾಮನ ಅಯೋಧ್ಯೆಯ ಪಟ್ಟಣವಾಸಿಗಳು ಎಲ್ಲಾ ಸಂತೋಷದಿಂದ ಬದುಕುತ್ತಿದ್ದರು ಎಂದು ತುಳಸಿದಾಸರು ಹೇಳಿದ್ದಾರೆ.