ಮನೆ ಶಿಫ್ಟಿಂಗ್ ತಲೆನೋವಿಗೆ ಪ್ಲ್ಯಾನಿಂಗ್ಯೇ ರಾಮಬಾಣ!
ಬಾಡಿಗೆ ಮನೆಯಲ್ಲಿರುವವರಿಗೆ ಮನೆ ಶಿಫ್ಟಿಂಗ್ ತಲೆನೋವು ತಪ್ಪಿದ್ದಲ್ಲ. ನಾನಾ ಕಾರಣಗಳಿಗೆ ಆಗಾಗ ಮನೆ ಬದಲಾಯಿಸುವ ತಲೆನೋವು ಅನುಭವಿಸಿದವರಿಗಷ್ಟೇ ಗೊತ್ತು. ಸೂಕ್ತ ಪ್ಲ್ಯಾನಿಂಗ್ ಮಾಡಿಲ್ಲವೆಂದ್ರೆ ಶಿಫ್ಟಿಂಗ್ ದಿನ ಎಡವಟ್ಟಾಗುವುದು ಗ್ಯಾರಂಟಿ. ಹಾಗಾದ್ರೆ ಖುಷಿ ಖುಷಿಯಿಂದ ಹೊಸ ಮನೆಗೆ ಹಳೆಯ ವಸ್ತುಗಳೊಂದಿಗೆ ಅಡಿಯಿಡುವುದು ಹೇಗೆ? ಎಂದು ಯೋಚಿಸುವವರು ಇದನ್ನೊಮ್ಮೆ ಓದಲೇಬೇಕು.
ಹೊಸ ಫ್ಲ್ಯಾಟ್ ಖರೀದಿಸಿಯಾಯ್ತು. ಸ್ವಂತ ಸೂರು ನಿರ್ಮಿಸಿದ ಸಂಭ್ರಮ ನಿಮ್ಮ ಮನೆ ಮನವನ್ನೆಲ್ಲ ಆವರಿಸಿದೆ. ಆದರೆ, ನಿಮ್ಮದೇ ಗೂಡು ಸೇರುವ ದಿನಗಳು ಹತ್ತಿರ ಬರುತ್ತಿದ್ದಂತೆ ವಸ್ತುಗಳನ್ನೆಲ್ಲ ಶಿಫ್ಟ್ ಮಾಡಬೇಕಲ್ಲ ಎಂಬ ಗುಮ್ಮ ತಲೆಹತ್ತಿ ಕುಳಿತು ಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆ ಶಿಫ್ಟಿಂಗ್ಗೆಂದೇ ಅನೇಕ ಸಂಸ್ಥೆಗಳಿದ್ದು, ನಿಗದಿತ ಹಣ ಪಾವತಿಸಿದರೆ ಸಾಕು, ಉಳಿದೆಲ್ಲ ಕಾರ್ಯವನ್ನು ಅವರೇ ಮಾಡುತ್ತಾರೆ. ಆದರೂ ಮನೆ ಶಿಫ್ಟಿಂಗ್ ಎಂದರೆ ಮನೆಮಂದಿಗೆಲ್ಲ ಒಂದಿಷ್ಟು ಟೆನ್ಷನ್ ಇದ್ದೇ ಇರುತ್ತದೆ. ಆದರೆ, ಸೂಕ್ತ ಪ್ಲ್ಯಾನಿಂಗ್ಯಿದ್ದರೆ ಮನೆ ಶಿಫ್ಟಿಂಗ್ ಖಂಡಿತ ತಲೆನೋವಿನ ಕೆಲಸವಲ್ಲ.
1.ಸಿದ್ಧತೆ ಬೇಗನೆ ಪ್ರಾರಂಭಿಸಿ: ಶಿಫ್ಟಿಂಗ್ ದಿನ ಬೆಳಗ್ಗೆ ಟೆನ್ಷನ್ ತಪ್ಪಿಸಲು ಹಾಗೂ ಎಲ್ಲ ವಸ್ತುಗಳು ವ್ಯವಸ್ಥಿತವಾಗಿ ಹೊಸ ಮನೆ ತಲುಪುವಂತೆ ಮಾಡಲು ತಿಂಗಳ ಮುಂಚೆ ತಯಾರಿ ಪ್ರಾರಂಭಿಸುವುದು ಅಗತ್ಯ. ಶಿಫ್ಟಿಂಗ್ಗೆ ಸಂಬಂಧಿಸಿ ಚೆಕ್ಲಿಸ್ಟ್ ತಯಾರಿಸಿ. ಅದರಲ್ಲಿ ಶಿಫ್ಟಿಂಗ್ಗೆ ಮೊದಲು ಹಾಗೂ ಆ ದಿನ ನೀವು ಮಾಡಿ ಮುಗಿಸಬೇಕಾದ ಎಲ್ಲ ಕಾರ್ಯಗಳನ್ನು ಸೇರಿಸಿ.
ಮನೆ ಹಾಗೂ ಕಚೇರಿಗೆ ಸಂತೋಷ -ಸಮೃದ್ಧಿ ತರೋ ಸಸ್ಯಗಳಿವು!
2.ಅನಗತ್ಯ ವಸ್ತುಗಳಿಗೆ ಗೇಟ್ ಪಾಸ್ ನೀಡಿ: ಮನೆಯಲ್ಲಿ ಎಷ್ಟೊಂದು ಅನಗತ್ಯ ವಸ್ತುಗಳಿವೆ ಎಂಬುದರ ಅರಿವಾಗುವುದು ಶಿಫ್ಟಿಂಗ್ ಸಮಯದಲ್ಲೇ. ದಿನಪತ್ರಿಕೆಗಳು, ಅನಗತ್ಯ ನೋಟ್ಬುಕ್ಗಳು, ಬಾಕ್ಸ್ಗಳು ಸೇರಿದಂತೆ ನೀವು ಬಳಸದ ವಸ್ತುಗಳನ್ನು ರದ್ದಿಗೆ ಹಾಕಿ. ಇದರಿಂದ ಹಳೇ ಮನೆಯಿಂದ ಹೊಸ ಮನೆಗೆ ಅನಗತ್ಯ ಹೊರೆ ವರ್ಗಾವಣೆಯಾಗುವುದು ತಪ್ಪುತ್ತದೆ.
3. ಸೂಕ್ತ ಪ್ಯಾಕರ್ಸ್ ಸಂಸ್ಥೆ ಸಂಪರ್ಕಿಸಿ: ಮನೆ ಶಿಫ್ಟಿಂಗ್ಗೆ ಒಂದು ವಾರವಿರುವಾಗಲೇ ಪ್ಯಾಕರ್ಸ್ ಸಂಸ್ಥೆಯನ್ನು ಸಂಪರ್ಕಿಸಿ. ಅವರಿಗೆ ಶಿಫ್ಟ್ ಮಾಡಬೇಕಾದ ವಸ್ತುಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಿ. ಜತೆಗೆ ಯಾವ ದಿನ ಯಾವ ಸಮಯದಲ್ಲಿ ಶಿಫ್ಟಿಂಗ್ ಪ್ರಾರಂಭಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ಈಗಿರುವ ಮನೆಯಿಂದ ಹೊಸ ಮನೆಗಿರುವ ಅಂತರ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡಲು ಮರೆಯಬೇಡಿ.
4.ಮಕ್ಕಳೊಂದಿಗೆ ಚರ್ಚಿಸಿ: ಮನೆ ಶಿಫ್ಟಿಂಗ್ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು ಅಗತ್ಯ. ಏಕೆಂದರೆ ಅವರು ಈಗಿನ ಮನೆಯ ಹಾಗೂ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಂಡಿರುತ್ತಾರೆ. ಅವರ ಶಾಲೆ ಬದಲಾಗಬಹುದು, ಸ್ನೇಹಿತರಿಂದ ದೂರವಾಗಬೇಕಾಗುತ್ತದೆ, ಇಷ್ಟದ ಪಾರ್ಕ್ ಮಿಸ್ ಆಗುತ್ತದೆ. ಈ ಬಗ್ಗೆ ಅವರಿಗೆ ಮೊದಲೇ ತಿಳಿಸಿ ಹೇಳಬೇಕು. ಹೊಸ ಮನೆಯ ಪರಿಸರದ ಬಗ್ಗೆಯೂ ಮಾಹಿತಿ ನೀಡಿ.ಅಲ್ಲಿರುವ ಪಾರ್ಕ್, ಮೈದಾನ ಸೇರಿದಂತೆ ಅವರಿಗೆ ಖುಷಿ ನೀಡುವ ಸ್ಥಳಗಳ ಮಾಹಿತಿ ನೀಡಿ. ಆಗ ಅವರು ಕೂಡ ನಿಮ್ಮೊಂದಿಗೆ ತಮ್ಮ ಅಗತ್ಯ ಸಾಮಗ್ರಿಗಳನ್ನು ಪ್ಯಾಕ್ ಮಾಡಲಾರಂಭಿಸುತ್ತಾರೆ.
ಹರಿಯೋ ಜಲಪಾತದ ಫೋಟೋ, ಶೋ ಪೀಸ್ ಮನೆಯಲ್ಲಿದ್ದರೆ
5.ಬೆಲೆಬಾಳುವ ವಸ್ತುಗಳನ್ನು ಎತ್ತಿಟ್ಟುಕೊಳ್ಳಿ: ಮೊಬೈಲ್, ವಾಚ್, ಬೆಳ್ಳಿ ಹಾಗೂ ಬಂಗಾರದ ಆಭರಣಗಳು ಅಥವಾ ವಸ್ತುಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ನೀವೇ ಪ್ಯಾಕ್ ಮಾಡಿ ಒಂದು ಬ್ಯಾಗ್ನಲ್ಲಿ ಎತ್ತಿಟ್ಟುಕೊಳ್ಳಿ. ಆ ಬ್ಯಾಗ್ ಅನ್ನು ಇತರ ವಸ್ತುಗಳೊಂದಿಗೆ ಸಾಗಿಸದೆ ನಿಮ್ಮೊಂದಿಗೇ ತೆಗೆದುಕೊಂಡು ಹೋಗಿ.
6.ಬಾಕ್ಸ್ ಮೇಲೆ ಹೆಸರು ನಮೂದಿಸಿ: ಪ್ಯಾಕಿಂಗ್ಗೆ ಅಗತ್ಯವಾದ ಬಾಕ್ಸ್ಗಳನ್ನು ಪ್ಯಾಕರ್ಸ್ ಸಂಸ್ಥೆಯವರೇ ತರುತ್ತಾರೆ. ಹೀಗಾಗಿ ಅವರು ಪ್ಯಾಕಿಂಗ್ ಮಾಡುವ ವಸ್ತುಗಳ ತಲೆಬಿಸಿ ಬಿಡಿ. ಆದರೆ, ಕೆಲವೊಂದು ಚಿಕ್ಕಪುಟ್ಟ ವಸ್ತುಗಳನ್ನು ನೀವೇ ಮೊದಲೇ ಬಾಕ್ಸ್ಗಳಲ್ಲಿ ತುಂಬಿಸಿಡುವುದು ಒಳ್ಳೆಯದು.ಈ ಬಾಕ್ಸ್ಗಳ ಮೇಲೆ ಅದರೊಳಗಿರುವ ವಸ್ತುಗಳ ಹೆಸರನ್ನು ನಮೂದಿಸಿ. ಇದರಿಂದ ಯಾವ ಬಾಕ್ಸ್ನಲ್ಲಿ ಯಾವ ವಸ್ತುವಿದೆ ಎಂಬುದು ಸುಲಭವಾಗಿ ತಿಳಿಯುತ್ತದೆ.
7.ಡೆಲಿವರಿ ಮುಂದೂಡಿ: ಒಂದು ವೇಳೆ ನೀವು ಆನ್ಲೈನ್ನಲ್ಲಿ ಯಾವುದಾದರೂ ವಸ್ತುವನ್ನು ಖರೀದಿಸಿದ್ದರೆ ಅದನ್ನು ಈಗಲೇ ಡೆಲಿವರಿ ಕೊಡುವುದು ಬೇಡ ಎಂದೇಳಿ. ಹೊಸ ಮನೆಗೆ ಹೋದ ಬಳಿಕ ಡೆಲಿವರಿ ಕೊಡಲು ತಿಳಿಸಿ.
8.ಮೂವಿಂಗ್ ಡೇ ಕಿಟ್ ಸಿದ್ಧಪಡಿಸಿ: ಶಿಫ್ಟಿಂಗ್ ದಿನ ನಿಮಗೆ ಅಗತ್ಯವಾಗಿ ಬೇಕಿರುವ ವಸ್ತುಗಳನ್ನು ಒಂದು ಬ್ಯಾಗ್ನಲ್ಲಿ ಹಾಕಿಡಿ. ಇದರಿಂದ ಆ ದಿನ ಯಾವುದೇ ಗೊಂದಲ ಉಂಟಾಗುವುದಿಲ್ಲ. ಹೊಸ ಮನೆಗೆ ಹೋದ ತಕ್ಷಣ ಪ್ರಮುಖ ವಸ್ತುಗಳಿಗಾಗಿ ಎಲ್ಲ ಬಾಕ್ಸ್, ಬ್ಯಾಗ್ಗಳನ್ನು ತೆರೆದು ನೋಡಬೇಕಾದ ಅನಿವಾರ್ಯತೆ ಎದುರಾಗುವುದಿಲ್ಲ.
ಮನೆಮಂದಿಯ ಆರೋಗ್ಯ ಕಾಪಾಡುವ ಅಡುಗೆ ಕೋಣೆಯ ವಾಸ್ತು; ಎಲ್ಲಿ ಏನಿದ್ದರೆ ಮ
9.ಪ್ಯಾಕಿಂಗ್ ಕಡೆಗೆ ಗಮನವಿರಲಿ: ಪ್ಯಾಕಿಂಗ್ ಮತ್ತು ಮೂವಿಂಗ್ ಕಾರ್ಯವನ್ನು ವೃತ್ತಿಪರ ಮೂವರ್ಸ್ ಸಂಸ್ಥೆಗೆ ವಹಿಸಿದ್ದರು ಕೂಡ ನೀವು ಮೇಲುಸ್ತುವರಿ ವಹಿಸುವುದು ಅಗತ್ಯ. ಪ್ಯಾಕ್ ಮಾಡುವ ಸಂದರ್ಭದಲ್ಲಿ ಅವರ ಜೊತೆಗಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿ. ಪ್ರತಿ ವಸ್ತುವನ್ನು ಸಮರ್ಪಕವಾಗಿ ಪ್ಯಾಕ್ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಿ.