Asianet Suvarna News Asianet Suvarna News

ಜೈಪುರದ ಅರಮನೆ ಪ್ರವಾಸಿಗರಿಗೆ ಮುಕ್ತ, ನೀವೂ ಆಗಿ ಏಕ್ ದಿನ್ ಕಾ ಸುಲ್ತಾನ್

ಇದುವರೆಗೂ ಕೇವಲ ತಮ್ಮ ಕೆಲವೇ ಗೆಳೆಯರು ಹಾಗೂ ವಿಶೇಷ ಅತಿಥಿಗಳಿಗೆ ಉಳಿಯಲು ಮಾತ್ರ ಆಹ್ವಾನ, ಅವಕಾಶ ಕಲ್ಪಿಸುತ್ತಿದ್ದ ಜೈಪುರದ ಬೃಹತ್ ಅರಮನೆಯಲ್ಲಿ ಇನ್ನು ಮುಂದೆ ನೀವು ಕೂಡಾ ಉಳಿಯಬಹುದು. ದಿನವಿಡೀ ನೋಡಿದರೂ ಮುಗಿಯದಷ್ಟು ದೊಡ್ಡ ಅರಮನೆಯಲ್ಲಿ ರಾಜಾತಿಥ್ಯ ಸ್ವೀಕರಿಸಿ ಸಂಭ್ರಮಿಸಬಹುದು. 

The Royal Family of Jaipur Just Listed Their Palace on Airbnb for 8000 doller a Night
Author
Bengaluru, First Published Nov 20, 2019, 2:15 PM IST

ದೊಡ್ಡದೊಂದು ರಜಪೂತ ಅರಮನೆ. 300 ವರ್ಷ ಹಳೆಯದಾದರೂ ಆಧುನಿಕ ಕಟ್ಟಡಗಳ್ಯಾವುವೂ ಅದರ ಸೌಂದರ್ಯ ಮೀರಿಸಲಾರವು. ಅಂಥದೊಂದು ಅರಮನೆಯ ಕೋಣೆಯಲ್ಲಿ ನಿಮ್ಮ ವಾಸ, ನಿಮ್ಮ ಸೇವೆಗಾಗಿ ಸದಾ ಸಿದ್ಧವಾಗಿ ನಿಂತ ಆಳುಕಾಳು, ನೀವು ಹೇಳಿದ ಭಕ್ಷ್ಯಭೋಜನ ಸಿದ್ಧಪಡಿಸುವ ಬಾಣಸಿಗ, ಒಳಾಂಗಣ ಈಜುಕೊಳ, ಹೊರಗೆ ಉದ್ಯಾನದ ತುಂಬಾ ನಡೆದಾಡುವ ನವಿಲುಗಳು... ಒಟ್ಟಿನಲ್ಲಿ ಸೌಕರ್ಯಗಳು, ಸೌಂದರ್ಯದಲ್ಲಿ ತೇಲಿಹೋದ ನೀವು!

ಅಬ್ಬಾ, ಕೇಳೋಕೇ ಎಷ್ಟು ಸೊಗಸಾಗಿದೆಯಲ್ಲವೇ? ಇನ್ನೇನಾದರೂ ನಿಜವಾದರೆ? ಖಂಡಿತಾ ನಿಜವಾಗುತ್ತೆ ಸ್ವಾಮಿ, ಆದರೆ ನೀವು ಒಂದು ರಾತ್ರಿಗೆ 8000 ಡಾಲರ್(5, 72,756 ರುಪಾಯಿಗಳು) ಹಣ ಖರ್ಚು ಮಾಡಲು ಸಿದ್ಧರಿರಬೇಕು ಅಷ್ಟೇ. 

ಭಾರತದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಲು ಬೆಸ್ಟ್ ತಾಣಗಳು

ಹೌದು, ರಾಜಸ್ಥಾನದ ರಾಜಧಾನಿ ಜೈಪುರದ ಸಿಟಿ ಪ್ಯಾಲೇಸ್‌ನ ಖಾಸಗಿ ಕೋಣೆಯೊಂದು ಈಗ ಸರ್ವರಿಗೂ ಸ್ವಾಗತ ಕೋರುತ್ತಿದೆ. ಕಳೆದ ಮೂರು ಶತಮಾನಗಳಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಇಂಗ್ಲೆಂಡ್‌ನ ಪ್ರಿನ್ಸ್ ಚಾರ್ಲ್ಸ್, ಪ್ರಿನ್ಸೆಸ್ ಡಯಾನಾ, ಓಪ್ರಾ ವಿನ್‌ಫ್ರೇ, ಜಾಕಿ ಕೆನಡಿ ಮುಂತಾದ ಜಗತ್ತಿನ ಗಣ್ಯಾತಿಗಣ್ಯರಿಗೆ ಆತಿಥ್ಯ ನೀಡಿದ್ದ ಅದ್ಧೂರಿ ಅರಮನೆಯಲ್ಲಿ ಇದೇ ನವೆಂಬರ್ 23ರಿಂದ ಯಾರಿಗೆ ಬೇಕಾದರೂ ಉಳಿಯಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಪ್ಯಾಲೇಸ್‌ನ ಗುಡ್ಲಿಯಾ ಸೂಟ್ ಏರ್‌ಬಿಎನ್‌ಬಿಯಲ್ಲಿ ಬುಕಿಂಗ್‌ಗಾಗಿ ಪಟ್ಟಿ ಮಾಡಲಾಗಿದೆ. ಇದುವರೆಗೂ ಇಲ್ಲಿ ರಾಜರ ಅತಿಥಿಗಳು ಮಾತ್ರ ಉಳಿಯಲು ಅವಕಾಶವಿತ್ತು. 

ಅರಮನೆ ವಿಶೇಷ
ಜೈಪುರದ ಸಿಟಿ ಪ್ಯಾಲೇಸ್ 1727ರಲ್ಲಿ ಮಹಾರಾಜ ಎರಡನೇ ಸವಾಯ್ ಜೈಸಿಂಗ್ ಅವರಿಂದ ಕಟ್ಟಲ್ಪಟ್ಟಿತು. ಅಂದಿನಿಂದಲೂ ರಾಜಮನೆತನ ಇದೇ ಮನೆಯಲ್ಲಿ ವಾಸವಾಗಿದೆ. ಮುಘಲ್ ಹಾಗೂ  ರಾಜಸ್ಥಾನಿ ವಿನ್ಯಾಸದ ಅರಮನೆಯು ನೀವು ಕಲ್ಪಿಸಿಕೊಳ್ಳಬಹುದಾಗಿರುವುದಕ್ಕಿಂತ ಹೆಚ್ಚು ಅದ್ಧೂರಿಯಿಂದಲೂ, ವೈಭೋಗತನದಿಂದಲೂ ಕೂಡಿದೆ. ಎಕರೆಗಟ್ಟಲೆ ಹರಡಿರುವ ಅರಮನೆಯ ಸ್ಥಳದಲ್ಲಿ ಒಂದೊಂದು ಹಾಲ್, ಒಂದೊಂದು ಕೋಣೆಯೂ ಕಣ್ತುಂಬಿಕೊಳ್ಳಲು ಸಾಕಷ್ಟನ್ನು ಒದಗಿಸುತ್ತದೆ. ಇದೀಗ ಅತಿಥಿಗಳಿಗೆ ನೀಡುವ, ಖಾಸಗಿ ಭಾಗದಲ್ಲೇ ಒಂದಾಗಿರುವ ಗುಡ್ಲಿಯಾ ಸೂಟ್ ‌ನಲ್ಲಿ ಲಾಂಜ್, ಅಡುಗೆಮನೆ, ಬಾತ್‌ರೂಂ ಹಾಗೂ ಒಳಾಂಗಣ ಸ್ವಿಮ್ಮಿಂಗ್ ಪೂಲ್ ಇವೆ. ರಾಯಲ್ ಆರ್ಕಿಟೆಕ್ಚರ್‌ನಿಂದ ಕೂಡಿರುವ, ಕಲೆಯಿಂದ ಸಂಪನ್ನವಾಗಿರುವ ಗೋಡೆಗಳನ್ನು ಹೊಂದಿದ ದೊಡ್ಡದಾದ ರಿಸೆಪ್ಶನ್ ಹಾಲ್, ಕ್ರಿಸ್ಟಲ್ ದೀಪಗಳು, ಅಂತಾರಾಷ್ಟ್ರೀಯ ಮಟ್ಟದ ಮ್ಯೂಸಿಯಂ ಮುಂತಾದವನ್ನು ಇಲ್ಲಿ ಕಾಣಬಹುದು. 

ಏನೆಲ್ಲ ಅನುಭವ ಸಿಗುತ್ತದೆ?
ಪ್ರಸ್ತುತ 21 ವರ್ಷದ ಮಹಾರಾಜಾ ಸವಾಯ್ ಪದ್ಮನಾಭ ಸಿಂಗ್ ಈ ಅವಕಾಶ ಕಲ್ಪಿಸಿದ್ದು, ಜಗತ್ತಿನ ಯಾವುದೇ ಭಾಗದ ಯಾರು ಬೇಕಾದರೂ ಇಲ್ಲಿ ಬರಬಹುದು. ಅವರಿಗೆ ರಾಜಸ್ಥಾನದ ವೈಭೋಗ ತೋರಿಸುವುದು ನನ್ನ ಆಸೆ ಎಂದಿದ್ದಾರೆ ಅವರು. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ, ಇಲ್ಲಿನ ರಾಜಮನೆತನ ಸ್ಥಳೀಯವಾದ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. 
ಇಲ್ಲಿ ಅತಿಥಿಗಳಾಗಿ ಹೋದವರನ್ನು ರಾಜಮನೆತನದವರಂತೆಯೇ ನಡೆಸಿಕೊಳ್ಳಲಾಗುತ್ತದೆ. ಏರ್‌ಪೋರ್ಟ್‌ನಿಂದಲೇ ಲಕ್ಷುರಿ ಕಾರಿನಲ್ಲಿ ಕರೆದುಕೊಂಡು ಅರಮನೆಗೆ ಹೋಗಲಾಗುತ್ತದೆ. ಅಲ್ಲಿ ಖಾಸಗಿ ಕೆಲಸದಾಳನ್ನು ನೇಮಿಸಲಾಗುತ್ತದೆ. ಇವರು ಅತಿಥಿಯ ಎಲ್ಲ ಅಗತ್ಯಗಳನ್ನೂ ಪೂರೈಸಬಲ್ಲರು. ನಗರ ನೋಡಬಯಸುವವರಿಗೆ, ಶಾಪಿಂಗ್ ಹೋಗಲಿಚ್ಛಿಸುವವರಿಗೆ ಸರಿಯಾದ ಗೈಡೆನ್ಸ್ ನೀಡುತ್ತಾರೆ. ಜೊತೆಗೆ ಅರಮನೆಯನ್ನು ತೋರಿಸಿ ವಿವರಿಸುತ್ತಾರೆ. ಇಲ್ಲಿ ರಾಜರರಮನೆಯ ಭೂರಿ ಭಕ್ಷ್ಯ ಭೋಜನಗಳನ್ನು ಅತಿಥಿಗಳು ಸೇವಿಸಬಹುದು. ವೈನ್ ಹಾಗೂ ಶಾಂಪೇನ್ ಕೂಡಾ ಇರುತ್ತದೆ. ಇವನ್ನು ಸವಿಯಲು ಖಾಸಗಿ ಟೆರೇಸ್‌ಗೆ ಹೋಗಿ ಅರಾವಳಿ ಘಟ್ಟಗಳ ಸೌಂದರ್ಯ ನೋಡುತ್ತಾ ಕೂರಬಹುದು. ಮಧ್ಯಾಹ್ನದ ಟೀ ಹೀರಲು ಅರಮನೆಯ ಉದ್ಯಾನಕ್ಕೆ ಹೋಗಬಹುದು. ಇಲ್ಲಿ ನವಿಲುಗಳು ಉದ್ಯಾನದ ತುಂಬಾ ವಿಹರಿಸುತ್ತಾ ನಿಮ್ಮ ಸಂಜೆಯನ್ನು ಮತ್ತಷ್ಟು ರಾಯಲ್ ಆಗಿಸುತ್ತವೆ. 

2 ಲಕ್ಷದೊಳಗೆ ಕೈಗೆಟುಕುವ ವಿದೇಶಿ ಹನಿಮೂನ್ ತಾಣಗಳು

ಹಣ ಸಮಾಜ ಸೇವೆಗೆ
ಹೀಗೆ ನೀವು ಉಳಿಯಲು ನೀಡಿದ ಹಣ ರಾಜಕುಮಾರಿ ದಿಯಾ ಕುಮಾರಿ ಫೌಂಡೇಶನ್‌ಗೆ ಹೋಗುತ್ತದೆ. ಈ ದಿಯಾಕುಮಾರಿ ರಾಜಾ ಪದ್ಮನಾಭ್ ಅವರ ತಾಯಿಯಾಗಿದ್ದಾರೆ. ಹೀಗೆ ಆತಿಥ್ಯದಿಂದ ಬಂದ ಹಣ ಹಳ್ಳಿಗಳ ಮಹಿಳೆಯರು ಹಾಗೂ ರಾಜಸ್ಥಾನದ ಕಲಾಕಾರರ ಸಬಲೀಕರಣಕ್ಕೆ ಬಳಕೆಯಾಗುತ್ತದೆ. ಈ ಸೂಟ್‌ಗೆ ರಾತ್ರಿಯೊಂದಕ್ಕೆ 8000 ಡಾಲರ್ ನೀಡಬೇಕು. ಆದರೆ, ಅದೃಷ್ಟವಿದ್ದರೆ ಕೆಲವೊಂದು ರಾತ್ರಿಗಳನ್ನು 1000 ಡಾಲರ್‌ಗೆ(71,532 ರುಪಾಯಿಗಳು) ನೀಡಲು ಏರ್‌ಬಿಎನ್‌ಬಿ  ಅವಕಾಶ ಕಲ್ಪಿಸಿದೆ. 
 

Follow Us:
Download App:
  • android
  • ios