Asianet Suvarna News Asianet Suvarna News

ದಕ್ಷಿಣ ಭಾರತ ಪ್ರತ್ಯೇಕ ದೇಶ: ಡಿಕೆ ಸುರೇಶ್ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ -ಉಗ್ರಪ್ಪ

ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಲಿ ಎಂದು ಹೇಳಿಕೆ ನೀಡಿರುವ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಕಾಗಿಲ್ಲ. ದಕ್ಷಿಣ ಭಾರತಕ್ಕೆ ಆಗುತ್ತಿರುವ ಅನ್ಯಾಯದ ಹಿನ್ನೆಲೆಯಲ್ಲಿ ನೋವಿನಿಂದ ಹೀಗೆ ಹೇಳಿರಬಹುದು. ದೇಶ ಇಬ್ಭಾಗ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದನ್ನು ಕಾಂಗ್ರೆಸ್ ಸಹ ಒಪ್ಪುವುದಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.

VS Ugrappa reaction aboug DK Sureshs south India separate nation statement at ballari rav
Author
First Published Feb 3, 2024, 6:27 AM IST

ಬಳ್ಳಾರಿ (ಫೆ.3): ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಲಿ ಎಂದು ಹೇಳಿಕೆ ನೀಡಿರುವ ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಕಾಗಿಲ್ಲ. ದಕ್ಷಿಣ ಭಾರತಕ್ಕೆ ಆಗುತ್ತಿರುವ ಅನ್ಯಾಯದ ಹಿನ್ನೆಲೆಯಲ್ಲಿ ನೋವಿನಿಂದ ಹೀಗೆ ಹೇಳಿರಬಹುದು. ದೇಶ ಇಬ್ಭಾಗ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದನ್ನು ಕಾಂಗ್ರೆಸ್ ಸಹ ಒಪ್ಪುವುದಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಎಸಗುತ್ತಿದೆ. ಅಭಿವೃದ್ಧಿ ನೆಲೆಯಲ್ಲಿ ಈ ರಾಜ್ಯಕ್ಕೆ ಸರಿಯಾದ ಪಾಲು ಸಿಗುತ್ತಿಲ್ಲ ಎಂಬ ನೋವಿನಿಂದ ಹೀಗೆ ಹೇಳಿರಬಹುದು ಎಂದರು.

ಪ್ರತ್ಯೇಕ ರಾಷ್ಟ್ರ ಹೇಳಿಕೆ: ಸಂಸದ ಡಿ ಕೆ ಸುರೇಶ್‌ಗೆ ಕಾನೂನು ಸಂಕಷ್ಟ; ದೂರು ದಾಖಲಿಸಿದ ಬಿಜೆಪಿ ಮುಖಂಡ

ನಾನು ಈ ಹಿಂದೆ ಸಂಸದನಾಗಿದ್ದಾಗ ಹಂಪಿಯಲ್ಲಿ ವಿದೇಶಿ ಪ್ರವಾಸಿಗರಿಂದಲೇ ವಾರ್ಷಿಕ ₹15 ಕೋಟಿ ಹಣ ಸಂಗ್ರಹವಾಗುತ್ತಿತ್ತು. ಆದರೆ, ಅದನ್ನು ಕೇಂದ್ರ ಸರ್ಕಾರ ಒಯ್ಯುತ್ತಿತ್ತೇ ವಿನಾ, ಸ್ಥಳೀಯ ಅಭಿವೃದ್ಧಿಗೆ ಹಣ ನೀಡದೆ ತಾರತಮ್ಯ ಎಸಗುತ್ತಿತ್ತು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ವಿಷಯದಲ್ಲೂ ಕೇಂದ್ರ ಸರ್ಕಾರ ತಾತ್ಸಾರ ಮನೋಭಾವ ಹೊಂದಿರುವುದರಿಂದ ಡಿ.ಕೆ. ಸುರೇಶ್ ಅವರು ಬೇಸರದಿಂದ ಹಾಗೆ ಮಾತನಾಡಿರಬಹುದೇ ವಿನಾ, ಬೇರೆ ಯಾವ ಉದ್ದೇಶ ಇಲ್ಲ. ಬಿಜೆಪಿಯವರಿಂದ ನಾವು ದೇಶಾಭಿಮಾನ, ಐಕ್ಯತೆ, ಸಮಗ್ರತೆಯ ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಪ್ರಜಾಪ್ರಭುತ್ವದ ದೇವಸ್ಥಾನ ಎಂದೇ ನಂಬಿರುವ ಸಂಸತ್‌ನಲ್ಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ವಹಿಸಲಿಲ್ಲ. ಇದೀಗ ಭಾರತ ಐಕ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರದ ಬಜೆಟ್ ಜನವಿರೋಧಿಯಾಗಿದೆ. ಜನಕಲ್ಯಾಣದ ಯಾವ ಯೋಜನೆಗಳು ಅಲ್ಲಿಲ್ಲ. 2014ರಲ್ಲಿ ₹52 ಲಕ್ಷ ಕೋಟಿಗಳಷ್ಟು ಸಾಲವಿತ್ತು. ಈಗ ಅದು ₹192 ಲಕ್ಷ ಕೋಟಿಗಳಷ್ಟಾಗಿದೆ. ಕೃಷಿಗೆ ಆದ್ಯತೆ ಸಿಕ್ಕಿಲ್ಲ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯ ಬಗ್ಗೆ ಪ್ರಸ್ತಾಪವಿಲ್ಲ ಎಂದರು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ; ಫೆ.7 ರಂದು ದೆಹಲಿಯಲ್ಲಿ ಧರಣಿ: ಡಿಸಿಎಂ ಡಿಕೆ ಶಿವಕುಮಾರ

ಈ ಬಾರಿಯ ಲೋಕಸಭಾ ಚುನಾವಣೆ ಶ್ರೀರಾಮಚಂದ್ರ ಹಾಗೂ ಬಾಬರ್ ನಡುವಿನ ಚುನಾವಣೆ ಎಂದಿರುವ ಮಾಜಿ ಸಚಿವ ಸಿ.ಟಿ. ರವಿ ಅವರದು ಆಚಾರವಿಲ್ಲದ ನಾಲಿಗೆ, ಏನೇನೋ ಮಾತನಾಡುತ್ತಿದೆ. ದಾಸರ ವಾಣಿಯಂತೆ ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಅವರಿಗೆ ಹೇಳಬೇಕಾಗಿದೆ ಎಂದರು ಉಗ್ರಪ್ಪ.

ಹಿರಿಯ ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ, ಟಪಾಲ್ ಗಣೇಶ್ ಸುದ್ದಿಗೋಷ್ಠಿಯಲ್ಲಿದ್ದರು.

Follow Us:
Download App:
  • android
  • ios