ಪೌರತ್ವದಿಂದ ಒಬ್ಬ ಮುಸ್ಲಿಂಗೆ ತೊಂದರೆಯಾದ್ರೂ ನಾನೇ ಹೊಣೆ: ಸಿಎಂ ಯಡಿಯೂರಪ್ಪ

ಒಬ್ಬ ಮುಸ್ಲಿಂಗೆ ತೊಂದರೆಯಾದ್ರೂ ನಾನೇ ಹೊಣೆ| ಸಿಎಎ-ಎನ್‌ಆರ್‌ಸಿಯಿಂದ ರಾಜ್ಯದ ಯಾವ ಮುಸ್ಲಿಮರಿಗೂ ಸಮಸ್ಯೆಯಿಲ್ಲ| ಮುಖ್ಯಮಂತ್ರಿ ಯಡಿಯೂರಪ್ಪ ಅಭಯ

Am Responsible If Any Muslim Person Faces Trouble From CAA Says CM BS Yediyurappa

ಬೆಂಗಳೂರು[ಜ.11]: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್‌ಆರ್‌ಸಿಯಿಂದ ರಾಜ್ಯ ಸೇರಿ ದೇಶದ ಯಾವ ಮುಸ್ಲಿಮರಿಗೂ ತೊಂದರೆಯಾಗುವುದಿಲ್ಲ. ರಾಜ್ಯದ ಯಾವುದೇ ಒಬ್ಬ ಮುಸ್ಲಿಂ ವ್ಯಕ್ತಿಗೆ ತೊಂದರೆಯಾದರೂ ನಾನೇ ಜವಾಬ್ದಾರಿ ಹೊರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಭಯ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನ ಹೆಗಡೆನಗರ ಸಮೀಪದಲ್ಲಿರುವ ಹಜ್‌ ಭವನದಲ್ಲಿ 2020ನೇ ಸಾಲಿನ ಹಜ್‌ ಯಾತ್ರೆ ಕೈಗೊಳ್ಳುವ ಯಾತ್ರಿಗಳನ್ನು ಆನ್‌ಲೈನ್‌ ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನು ಎಂದಿಗೂ ಸಹ ಧರ್ಮದ ಆಧಾರದ ಮೇಲೆ ಭೇದಭಾವ ಮಾಡಿಲ್ಲ. ನಿಮ್ಮ ಪ್ರೀತಿ ಹಾಗೂ ವಿಶ್ವಾಸಕ್ಕೆ ಸದಾ ಋುಣಿಯಾಗಿದ್ದೇನೆ. ನಿಮ್ಮ ಸಮಾಜದ ಯಾವುದೇ ಕೆಲಸಗಳಿದ್ದರೂ 24 ಗಂಟೆಯಲ್ಲಿ ಅವುಗಳಿಗೆ ಸ್ಪಂದಿಸುತ್ತೇನೆ. ಬಜೆಟ್‌ನಲ್ಲಿಯೂ ಹೆಚ್ಚಿನ ಅನುದಾನವನ್ನು ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪೌರತ್ವ ಕಾಯ್ದೆ ಜಾರಿ: ಕೇಂದ್ರದಿಂದ ಗೆಜೆಟ್‌ ಅಧಿಸೂಚನೆ!

ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಅನಗತ್ಯವಾಗಿ ಗೊಂದಲ ನಿರ್ಮಿಸಲಾಗುತ್ತಿದೆ. ವದಂತಿಗಳಿಗ ಕಿವಿಗೊಡಬೇಡಿ ಎಂದು ಕೈಜೋಡಿಸಿ ವಿನಂತಿಸುತ್ತೇನೆ. ರಾಜ್ಯದ ಎಲ್ಲ ನಾಗರಿಕರು ಸುಖ, ಶಾಂತಿಯಿಂದ ಬಾಳುವಂತೆ ನಿಮ್ಮ ಪವಿತ್ರ ಹಜ್‌ ಯಾತ್ರೆಯ ಸಂದರ್ಭದಲ್ಲಿ ಅಲ್ಲಾಹುವಿನ ಬಳಿ ಪ್ರಾರ್ಥಿಸಿ. ಸರ್ವಧರ್ಮಗಳ ಐಕ್ಯತೆಗಾಗಿ ಕೇಳಿಕೊಳ್ಳಿ ಎಂದು ಮನವಿ ಮಾಡಿದರು.

ನಾನು ಎಂದೂ ಸಹ ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಭೇದಭಾವ ಮಾಡಿಲ್ಲ. ಬಜೆಟ್‌ ಅನುದಾನ ಮೀಸಲು ಇಡುವ ಸಂಧರ್ಭದಲ್ಲಿಯೂ ಅಲ್ಪಸಂಖ್ಯಾತರಿಗೆ ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇನೆ. ನಾನು ಇಂದು ವಿಶೇಷ ವಿಮಾನದ ಮೂಲಕ ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಆದರೆ, ಹಜ್‌ಯಾತ್ರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಬಂದಿದ್ದೇನೆ ಎಂದರು.

ಕಲಬುರ್ಗಿಯಿಂದ ಹಜ್‌ಯಾತ್ರೆಗೆ ವಿಮಾನ:

ಉತ್ತರ ಕರ್ನಾಟಕ ಭಾಗದ ಮುಸ್ಲಿಮರು ಹಜ್‌ಯಾತ್ರೆಗೆ ತೆರಳಲು ಅನುಕೂಲವಾಗುವಂತೆ ಕಲಬುರಗಿ ವಿಮಾನ ನಿಲ್ದಾಣದಿಂದ ಮಕ್ಕಾ ಹಾಗೂ ಮದೀನಾ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಹಜ್‌ ಭವನದ ಸಮ್ಮೇಳನ ಸಭಾಂಗಣದ ಕಾಮಗಾರಿಯನ್ನು ಪೂರ್ಣಗೊಳಿಸಲು ತುರ್ತಾಗಿ 5 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗುವುದು. ಕಲಬುರಗಿಯಲ್ಲಿ ಹಜ್‌ ಭವನ ನಿರ್ಮಾಣಕ್ಕೆ 1 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದೇನೆ ಎಂದು ಭರವಸೆ ನೀಡಿದರು.

ಸಿಎಎ ಇಸ್ ಗುಡ್ ಎಂದ ಕಾಂಗ್ರೆಸ್ ನಾಯಕ: ಒಪ್ಪಿಕೊಳ್ಳಿ ಎಂದು ಜನತೆಗೆ ಕರೆ!

6,734 ಮಂದಿ ಹಜ್‌ ಯಾತ್ರೆ:

ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ ನಡೆಯಲಿರುವ ಹಜ್‌ಯಾತ್ರೆಗೆ ತೆರಳಲು ರಾಜ್ಯ ಹಜ್‌ ಸಮಿತಿಗೆ 9,823 ಅರ್ಜಿಗಳು ಸಲ್ಲಿಕೆಯಾಗಿದ್ದವು. ಭಾರತೀಯ ಹಜ್‌ ಸಮಿತಿಯು ನಮ್ಮ ರಾಜ್ಯಕ್ಕೆ 6,734 ಮಂದಿಯ ಕೋಟಾವನ್ನು ನಿಗದಿಪಡಿಸಲಾಗಿದೆ. ಈ ಪೈಕಿ 70 ವರ್ಷ ಮೇಲ್ಪಟ್ಟು ವಯಸ್ಸಿನ 459 ಹಾಗೂ 45 ವರ್ಷ ಮೇಲ್ಪಟ್ಟ32 ಮಂದಿ ಸಂಗಾತಿ ಇಲ್ಲದ ಮಹಿಳೆಯರನ್ನು ನೇರವಾಗಿ ಆಯ್ಕೆ ಮಾಡಲಾಗಿದೆ. ಉಳಿದವರನ್ನು ಆನ್‌ಲೈನ್‌ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದರು.

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್‌ ಮಾತನಾಡಿ, ಬಜೆಟ್‌ನಲ್ಲಿಯೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಹಾಗೂ ಹೊಸ ಕಾರ್ಯಕ್ರಮಗಳನ್ನು ಘೋಷಿಸಲು ಪ್ರಯತ್ನಿಸುತ್ತೇನೆ. ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಅಲ್ಪಸಂಖ್ಯಾತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕೃಷಿ ಮಾಡುತ್ತೇನೆ ಎಂದು ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ಆರ್‌.ರೋಷನ್‌ ಬೇಗ್‌, ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಯಾತ್ರಿಗಳು ಹೈದರಾಬಾದ್‌ ಮೂಲಕ ಹಜ್‌ಯಾತ್ರೆಗೆ ತೆರಳುವ ಪರಿಸ್ಥಿತಿ ಇದೆ. ಈಗ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿರುವುದರಿಂದ ಅಲ್ಲಿಂದಲೇ ನೇರವಾಗಿ ಸೌದಿ ಅರೇಬಿಯಾಗೆ ವಿಮಾನ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರದ ಜತೆ ಚರ್ಚಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯದರ್ಶಿ ಇಬ್ರಾಹಿಂ ಅಡೂರ್‌, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಝೀಮ್‌, ರಾಜ್ಯ ಹಜ್‌ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಸರ್ಫರಾಜ್‌ ಖಾನ್‌ ಸೇರಿ ಹಲವರು ಹಾಜರಿದ್ದರು.

ಮೊದ್ಲು ಬಡಿದಾಡೋದು ನಿಲ್ಸಿ: ಸಿಎಎ ವಿಚಾರಣೆ ಆಮೇಲೆ ಎಂದ ಸುಪ್ರೀಂ!

Latest Videos
Follow Us:
Download App:
  • android
  • ios