Asianet Suvarna News Asianet Suvarna News

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಬದ್ಧವೈರಿ ಪಾಕಿಸ್ತಾನ ವಿರುದ್ದ ಅಬ್ಬರಿಸಿದ ಭಾರತ, ಭರ್ಜರಿ ಗೆಲುವು ದಾಖಲಿಸಿದೆ.

Asian Hockey Champions Trophy 2018 India beat Pakistan 3-1
Author
Bengaluru, First Published Oct 22, 2018, 9:34 AM IST

ಮಸ್ಕಟ್(ಅ.22): ಭಾರತ ಪುರುಷರ ತಂಡ, ಇಲ್ಲಿ ನಡೆಯುತ್ತಿರುವ 5ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ 2ನೇ ಗೆಲುವು ದಾಖಲಿಸಿದೆ. ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು.

ಇದರೊಂದಿಗೆ ಭಾರತ, ಪಾಕಿಸ್ತಾನದ ವಿರುದ್ಧ ಸತತ 11ನೇ ಜಯ ದಾಖಲಿಸಿತು. ಭಾರತ ಮೊದಲ ಪಂದ್ಯದಲ್ಲಿ ಓಮನ್ ವಿರುದ್ಧ 11-0 ಗೋಲುಗಳಿಂದ ಗೆದ್ದಿತ್ತು. ಭಾರತದ ಪರ ಮನ್‌ಪ್ರೀತ್ ಸಿಂಗ್, ಮನ್‌ದೀಪ್ ಸಿಂಗ್ ಮತ್ತು ದಿಲ್‌ಪ್ರೀತ್ ಸಿಂಗ್ ತಲಾ ಒಂದು ಗೋಲು ಗಳಿಸಿದರು. ಪಾಕ್ ಪರ ಮೊಹಮದ್ ಇರ್ಫಾನ್(1ನೇ ನಿಮಿಷ) ಏಕೈಕ ಗೋಲು ಬಾರಿಸಿದರು.

ಪಂದ್ಯದ ಆರಂಭಿಕ ನಿಮಿಷದಲ್ಲಿಯೇ ದೊರೆತ ಪೆನಾಲ್ಟಿಯಲ್ಲಿ ಗೋಲು ಬಾರಿಸಿದ ಪಾಕಿಸ್ತಾನ 1-0 ಯಿಂದ ಆರಂಭಿಕ ಮುನ್ನಡೆ ಸಾಧಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತ ಯಾವುದೇ ಗೋಲುಗಳಿಸಲಿಲ್ಲ. 2ನೇ ಕ್ವಾರ್ಟರ್‌ನಲ್ಲಿ ಆಟವನ್ನು ಚುರುಕುಗೊಳಿಸಿದ ಭಾರತ, 24ನೇ ನಿಮಿಷದಲ್ಲಿ ನಾಯಕ ಮನ್‌ಪ್ರೀತ್ ಸಿಂಗ್, ಎದುರಾಳಿ ಗೋಲ್‌ಕೀಪರ್‌ನ್ನು ವಂಚಿಸಿ ಅದ್ಭುತ ಗೋಲುಗಳಿಸಿದರು. ಪರಿಣಾಮ 1-1 ರಿಂದ ಭಾರತ ಸಮಬಲ ಸಾಧಿಸಿತು.

3ನೇ ಕ್ವಾರ್ಟರ್‌ನಲ್ಲಿ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಭಾರತ ತಂಡ, ಪಾಕಿಸ್ತಾನದ ಮೇಲೆ ಸವಾರಿ ಮಾಡಿತು. ಆಟ ಶುರುವಾಗಿ ಸರಿಯಾಗಿ 3ನೇ ನಿಮಿಷಕ್ಕೆ ಆಕಾಶ್‌ದೀಪ್‌ರಿಂದ ಅದ್ಭುತ ಪಾಸ್ ಪಡೆದ ಮನ್‌ದೀಪ್ (33ನೇ ನಿ.), ಪಾಕ್‌ನ ರಕ್ಷಣಾ ಕೋಟೆಯನ್ನು ಬೇಧಿಸಿ ಗೋಲುಗಳಿಸಿ 2-1 ರಿಂದ ಮುನ್ನಡೆ ತಂದುಕೊಟ್ಟರು. ಈ ಕ್ವಾರ್ಟರ್ ನ ಮುಕ್ತಾಯಕ್ಕೆ 3 ನಿಮಿಷಗಳಿದ್ದಾಗ (42ನೇನಿ.) ದಿಲ್‌ಪ್ರೀತ್ ಸಿಂಗ್ ಗೋಲುಗಳಿಸಿದರು. ಅಂತಿಮವಾಗಿ ಇದೇ ಅಂತರ ಕಾಯ್ದುಕೊಂಡ ಭಾರತ ಪಂದ್ಯ ಜಯಿಸಿತು. 

Follow Us:
Download App:
  • android
  • ios