Asianet Suvarna News Asianet Suvarna News

ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ..! ವಿಡಿಯೋ ವೈರಲ್

ಸಿಂಪ್ಲಿಸಿಟಿಗೆ ಹೆಸರಾಗಿರುವ ಜಂಟಲ್‌ಮನ್ ಕ್ರಿಕೆಟಿಗ ರಾಹುಲ್ ದ್ರಾವಿಡ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾನ್ಯ ಜನರಂತೆ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ ಚಲಾಯಿಸಿದ ಬಳಿಕ ಮತದಾರರು ಮತದಾನ ಮಾಡಲು ಮನವಿ ಮಾಡಿಕೊಂಡಿದ್ದಾರೆ.

Rahul Dravid Anil Kumble Wins Hearts With His Voting Center Act video goes viral kvn
Author
First Published Apr 26, 2024, 12:36 PM IST

ಬೆಂಗಳೂರು(26): ಇಂದು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಭರದಿಂದ ಸಾಗುತ್ತಿದೆ. ಇಂದು ರಾಜ್ಯದ ಸುಮಾರು 2.88 ಕೋಟಿ ಜನ ಮತದಾನ ಮಾಡಲಿದ್ದು, ಡಿಕೆ ಸುರೇಶ್, ಎಚ್‌ ಡಿ ಕುಮಾರಸ್ವಾಮಿ, ವಿ ಸೋಮಣ್ಣ ಸೇರಿದಂತೆ ಕಣದಲ್ಲಿರುವ 247 ಮಂದಿಯ ಭವಿಷ್ಯವಿಂದು ನಿರ್ಧಾರವಾಗಲಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತ ಕ್ರಿಕೆಟ್ ತಂಡದ ಹೆಡ್‌ಕೋಚ್ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ಸಾಮಾನ್ಯ ಮತದಾರನಂತೆ ಮತಗಟ್ಟೆಗೆ ತೆರಳಿ ಮತಚಲಾಯಿಸಿ ಗಮನ ಸೆಳೆದಿದ್ದಾರೆ. 

ಹೌದು, ಸಿಂಪ್ಲಿಸಿಟಿಗೆ ಹೆಸರಾಗಿರುವ ಜಂಟಲ್‌ಮನ್ ಕ್ರಿಕೆಟಿಗ ರಾಹುಲ್ ದ್ರಾವಿಡ್, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾನ್ಯ ಜನರಂತೆ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ ಚಲಾಯಿಸಿದ ಬಳಿಕ ಮತದಾರರು ಮತದಾನ ಮಾಡಲು ಮನವಿ ಮಾಡಿಕೊಂಡಿದ್ದಾರೆ. "ಪ್ರತಿಯೊಬ್ಬರು ತಪ್ಪದೇ ಬಂದು ಮತದಾನ ಮಾಡಿ. ಪ್ರಜಾಪ್ರಭುತ್ವದಿಂದ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಿಕ್ಕ ಸುವರ್ಣಾವಕಾಶ ಇದಾಗಿದೆ" ಎಂದು ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಹೇಳಿದ್ದಾರೆ.

'ಏನ್ರಯ್ಯಾ ಇದು..?': ಆರ್‌ಸಿಬಿ ಎದುರು ಸನ್‌ರೈಸರ್ಸ್ ಆಟ ನೋಡಿದ ಕಾವ್ಯ ಮಾರನ್ ರಿಯಾಕ್ಷನ್ ವೈರಲ್..!

ಇನ್ನು ಭಾರತದ ಮತ್ತೋರ್ವ ದಿಗ್ಗಜ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ತಮ್ಮ ಪತ್ನಿಯ ಜತೆ ಬಂದು ಮತದಾನ ಮಾಡಿದ್ದಾರೆ. ಇದೇ ವೇಳೆ ಕುಂಬ್ಳೆ ಕೂಡಾ ಎಲ್ಲರೂ ಮತದಾನ ಮಾಡಲು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಲೋಕಸಭಾ ಚುನಾವಣೆಯ ವಿಚಾರಕ್ಕೆ ಬಂದರೆ ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ ಕರ್ನಾಟಕದಲ್ಲಿ ಒಟ್ಟು 28 ಸ್ಥಾನಗಳಿವೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಇಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರದಲ್ಲಿಂದು ಮತದಾನ ನಡೆಯುತ್ತಿದೆ.
 

Follow Us:
Download App:
  • android
  • ios